ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಧ್ರುವ ನಕ್ಷತ್ರ

Vishwanath S
Updated On : 16 Jun 2014, 1:01 am

ಆತ ಪ್ರತಿಷ್ಠಿತ ಆಕ್ಸ್‌ಫರ್ಡ್ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡಿದವ. ಆಕ್ಸ್‌ಫರ್ಡ್ ಎಂದ ಮೇಲೆ ಕೆಲಸ ಕೈ ಬೀಸಿ ಕರೆಯುವುದೇನೂ ಹೊಸದಲ್ಲ. ಅಂತೆಯೇ ಬ್ಯಾಂಕಿನಲ್ಲಿ ವೃತ್ತಿ ಆರಂಭಿಸಿದ. ಆದರೆ ಈತನಿಗೆ ಆರಂಭದಲ್ಲೇ ಕೆಲಸದಲ್ಲಿ ನಿರುತ್ಸಾಹ ಮತ್ತು ಜಡತ್ವ ವಕ್ಕರಿಸಿತ್ತು! ಕೆಲಸಕ್ಕೆ ರಾಜೀನಾಮೆ ನೀಡಿ ಸಮಾಜಸೇವೆಗಾಗಿ ತಮಿಳುನಾಡಿನ ಕಡೆ ಹೆಜ್ಜೆ ಹಾಕಿದ. ಕೆಲ ದಿನಗಳ ನಂತರ ಮತ್ತೆ ಉದ್ಯೋಗ ಅರಸಿ ತನ್ನ ಊರಾದ ಮುಂಬಯಿಗೆ ವಾಪಸ್ಸಾಗುತ್ತಿದ್ದಾಗ ಒಂದು ಘಟನೆ ನಡೆಯಿತು.
ಆತನ ಹೆಸರು ಧ್ರುವ ಲಾಕ್ರಾ. ಅಂದು ಮುಂಬಯಿಯ ಬಸ್ಸಿನಲ್ಲಿ ಧ್ರುವ ಪ್ರಯಾಣಿಸುತ್ತಿದ್ದಾಗ ಪಕ್ಕದಲ್ಲಿ ಸುಸ್ತಾಗಿ ಕುಳಿತವನನ್ನು ಪ್ರಯಾಣದ ವಿವರ ಕೇಳಿದ. ಆತ ಏನೂ ಮಾತನಾಡದಿದ್ದಾಗ ಸಹ ಪ್ರಯಾಣಿಕನ ಕಷ್ಟ ಅರಿವಾಯಿತು. ಆತನಿಗೆ ವಾಕ್ ಮತ್ತು ಶ್ರವಣ ಶಕ್ತಿ ಇರಲಿಲ್ಲ. ಅಂಂಥವರಿಗೆ ಏನಾದರೂ ಮಾಡಲು ಸಾಧ್ಯವೇ ಯೋಚಿಸಿದ. ಮಿರಾಕಲ್ ಕೊರಿಯರ್ ಆರಂಭಿಸಿದ. ಇಂದು ಬೃಹತ್ ಸಂಪರ್ಕ ಜಾಲ  ಹೊಂದಿದ, ತಿಂಗಳಿಗೆ 65 ಸಾವಿರ ಕೊರಿಯರ್ ತಲುಪಿಸುವ ಈ ಸಂಸ್ಥೆಯಲ್ಲಿ ಮುಖ್ಯವಾಗಿ ಇರುವವರು ಮಾತನಾಡದ ಮತ್ತು ಕಿವಿ ಕೇಳಿಸದ 70 ಜನ!
ಈ ರೀತಿ ಸ್ವಂತ ಉದ್ಯಮ ಪ್ರಾರಂಭಿಸಬೇಕು ಎಂಬ ತವಕ ಅದೆಷ್ಟೋ ಯುವಕರಲ್ಲಿ ಇಂದು ಇದೆ. ಸರಿಯಾದ ಮಾರ್ಗದರ್ಶನ, ಸೂಕ್ತ ಮಾಹಿತಿ, ಮಾರುಕಟ್ಟೆ ಏರಿಳಿತ ಜ್ಞಾನ ಅಷ್ಟೇ ಅಲ್ಲದೆ ವ್ಯವಹಾರದ ಕೌಶಲ್ಯ ಸಂಸ್ಥೆ ಏಳಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಸ್ವಂತ ಉದ್ಯಮ ಶುರು ಮಾಡುವವರಿಗೆ ಧ್ರುವ ಲಾಕ್ರಾನಿಂದ ಪಡೆಯಬಹುದಾದ ಒಂದಿಷ್ಟು ಟಿಪ್ಸ್ ಇಲ್ಲಿವೆ.

1 ಕಲ್ಪನೆಗೆ ಇಂಬು
ಉದ್ಯಮ ಪ್ರಾರಂಭಿಸಲು ಕೆಟ್ಟ ಸಮಯ ಎಂದಿಲ್ಲ. ಮಾಡುವ ಕೆಲಸ ಒಳ್ಳೆಯದೇ ಆದಲ್ಲಿ ವಯಸ್ಸಿನ ಬಗ್ಗೆ ಆಲೋಚಿಸದೆ ಗಟ್ಟಿ ನಿರ್ಧಾರ ಮಾಡಿ. ಸಂಶಯದಿಂದ ನೋಡುವ ಅಥವಾ ಮಾತನಾಡುವರಿಗೆ ಕಿವಿಗೊಡಬೇಡಿ. ಒಮ್ಮೆ ನಿರ್ಧಾರ ತೆಗೆದುಕೊಂಡಲ್ಲಿ ವಿದ್ಯಾರ್ಹತೆ, ಹಣಕಾಸು ಇತರೆ ಒತ್ತಡಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ.

2ಸಮಸ್ಯೆಗಳೆದುರು ಧೈರ್ಯ
ಯಾವುದೇ ವೃತ್ತಿಯಲ್ಲಾದರೂ ಸಮಸ್ಯೆ ಎದುರಾಗುವುದು ಸಹಜ. ಸಮಸ್ಯೆ ಎಂದ ಮೇಲೆ ಪರಿಹಾರಗಳು ಇದ್ದೇ ಇರುತ್ತವೆ. ಕೆಲಸ ಪ್ರಾರಂಭಿಸುವ ಮುನ್ನ ಕಾನೂನು ತಜ್ಞರ ಸಲಹೆ ಪಡೆಯಿರಿ. ಸಾಧ್ಯವಾದರೆ ಕಾನೂನು ತಜ್ಞರನ್ನು ನೇಮಿಸಿಕೊಳ್ಳಿ. ಕೆಲಸದ ವೇಳಾಪಟ್ಟಿ ಹಾಕಿಕೊಳ್ಳಿ, ಅದರಂತೆ ಕಾರ್ಯನಿರ್ವಹಿಸಲು ಪ್ರಯತ್ನಿಸಿ. ಖಾಸಗಿ ಜೀವನಕ್ಕೆ ಒಂದಷ್ಟು ಸಮಯ ಮೀಸಲಿಡಿ. ಮೊದಲ ದಿನದಿಂದಲೇ ದಿನಚರಿ ಬರೆಯುವ ಅಭ್ಯಾಸವಿರಲಿ. ಯೋಗ, ಪ್ರಾಣಾಯಾಮ ಹವ್ಯಾಸ ಬೆಳೆಸಿಕೊಳ್ಳಿ. ಕಂಪನಿಯ ಗುಟ್ಟುಗಳನ್ನು ಪತಿ-ಪತ್ನಿ ಪರಸ್ಪರ ಹಂಚಿಕೊಳ್ಳುವುದು ಉತ್ತಮ.

3ಸುತ್ತಮುತ್ತಲಿನ ಆರೋಗ್ಯ
ಕಾಲೆಳೆಯುವರನ್ನು ಬದಿಗಿಟ್ಟು ಆಯ್ದ ಕೆಲವರ ಸ್ನೇಹವೃತ್ತ ಮತ್ತು ಕೆಲವು ಹಿತೈಷಿಗಳನ್ನು ಜತೆಯಲ್ಲಿಟ್ಟುಕೊಳ್ಳಿ. ಇದು ಹೊಸ ಅಭಿರುಚಿ ಮೂಡಿಸುವುದಲ್ಲದೇ ಸಂಸ್ಥೆಯ ಏಳಿಗೆಗೆ ಸಹಕಾರಿ. ನಿಮ್ಮದೇ ಆದ ಒಂದು ಬ್ರ್ಯಾಂಡ್ ಸೃಷ್ಟಿಸಿಕೊಳ್ಳಿ.

4 ಪರಿಣಾಮಕಾರಿ ಯೋಜನೆ
ನೀವು ಪ್ರಾರಂಭಿಸಿದ ಉದ್ಯಮ ಇನ್ನು 3-5 ವರ್ಷಗಳಲ್ಲಿ ಯಾವ ಹಂತ ತಲುಪಬೇಕು ಎಂಬ ಗುರಿ  ಸ್ಪಷ್ಟವಾಗಿರಲಿ. ಪರಿಣಾಮಕಾರಿ ಯೋಜನೆ ರೂಪಿಸಿಕೊಳ್ಳಿ. ಪ್ರತಿಬಾರಿ ಕಂಪನಿ ಪ್ರವೇಶಿಸುವಾಗ ಹೊಸಬರಂತೆ ಪ್ರವೇಶಿಸಿ. ವ್ಯವಹಾರದ ಆಳ, ಅಗಲ ತಿಳಿದುಕೊಳ್ಳಲು ಇದು ಸಹಕಾರಿ.

5 ಉತ್ತಮ ತಂಡ
ನಿಮ್ಮ ಉತ್ಪನ್ನಗಳ ಮೇಲೆ ಹೆಚ್ಚು ಗಮನ ಹರಿಸಿ. ಆಡಳಿತದ ಜವಾಬ್ದಾರಿಯನ್ನು ಹಂಚಿ. ಪ್ರತಿಭೆಯನ್ನು ಗುರುತಿಸುವ ಮೂಲಕ ಸಮರ್ಥರಿಗೆ ಹುದ್ದೆ ನಿಭಾಯಿಸಲು ಅವಕಾಶ ಮಾಡಿಕೊಡಿ. ಈ ಮೂಲಕ ಉತ್ತಮ ತಂಡ ಬೆಳೆಸಿ. ಸಂಸ್ಥೆಯಲ್ಲಿರುವ ಪ್ರತಿಯೊಬ್ಬನಿಗೂ ಕಲಿಕೆ ನಿರಂತರ ಪ್ರಕ್ರಿಯೆ ಎಂಬುದು ಮನದಟ್ಟು ಮಾಡಿ. ಅಗತ್ಯವಿದ್ದರೆ ಸಿಬ್ಬಂದಿಗೆ ತರಬೇತಿ ಕೊಡಿಸಿ.

6 ಕ್ರಿಯಾತ್ಮಕ ಗುಣ
ಪ್ರಾಮಾಣಿಕರಲ್ಲದ ಅನುಭವಸ್ಥರನ್ನು ನೇಮಿಸುವುದಕ್ಕಿಂತ ಪ್ರಾಮಾಣಿಕ ಯುವಕರನ್ನು ನೇಮಿಸಿ ತರಬೇತಿ ನೀಡಿ. ಕ್ರಿಯಾತ್ಮಕ ಗುಣ ಹೊಂದಿರುವರನ್ನು ನೇಮಿಸಿ. ಅವರ ಸೃಜನಶೀಲತೆ ಕಾರ್ಯಗತಗೊಳಿಸಲು ಅಗತ್ಯ ಸಂಪನ್ಮೂಲ ಒದಗಿಸಿ. ಯಶಸ್ವಿಯಾಗದಿದ್ದಲ್ಲಿ ಎಡವಿದ್ದೆಲ್ಲಿ ಎಂದು ಮನದಟ್ಟು ಮಾಡಿಕೊಳ್ಳುವುದು ಉತ್ತಮ.

7 ಬಂಡವಾಳಕ್ಕೆ ಮುನ್ನ
ಉದ್ಯಮಕ್ಕೆ ಅಗತ್ಯವಿರುವ ಬಂಡವಾಳ ಹೂಡಲು ಮುಂದೆ ಬರುವವರ ಹಣಕ್ಕಷ್ಟೇ ಪ್ರಾಮುಖ್ಯತೆ ನೀಡದೆ ಅವರ ಸಂಪರ್ಕ ಜಾಲ ಮತ್ತು ಪ್ರತಿಭೆಗೆ ಹೆಚ್ಚು ಪ್ರಾಶಸ್ತ್ಯ ನೀಡಿ.

8 ಆರಂಭಿಸಿ, ಆಲಿಸಿ
ಪ್ರಾರಂಭದಲ್ಲಿ ಅಗತ್ಯವಿದ್ದಷ್ಟೇ ಉತ್ಪನ್ನ ಹೊರತನ್ನಿ. ಸಾಧ್ಯವಾದಷ್ಟೂ ಸಾಮಾಜಿಕ ಜಾಲತಾಣದ ಮೂಲಕ ಬ್ರಾಂಡ್ ಅನ್ನು ಪರಿಚಯಿಸಿ. ಸಂಸ್ಥೆಗೆ ಸಂಬಂಧಿಸಿದ ಗ್ರಾಹಕರಿಗೆ ಅನುಕೂಲವಾಗುವ ಅಧಿಕೃತ ಮಾಹಿತಿ ನೀಡಿ. ಗ್ರಾಹಕರ ಪ್ರತಿಕ್ರಿಯೆ ಪಡೆದುಕೊಳ್ಳಿ. ನಕಾರಾತ್ಮಕ ಪ್ರತಿಕ್ರಿಯೆ ಕಲಿಕೆ ಮತ್ತು ಏಳಿಗೆಗೆ ಸಹಕಾರಿ.

9 ಬೆಳೆಯುವ ಅವಕಾಶ
ಉತ್ತಮ ಅವಕಾಶ ಹಾದುಹೋಗುವಾಗ ಆಲಕ್ಷ್ಯ ಮಾಡದೆ ಶ್ರಮವಹಿಸಿ. ನಿಮ್ಮ ಬಳಿ ಒಳ್ಳೆಯ ತಂಡ, ಗುಣಮಟ್ಟದ ಉತ್ಪನ್ನ ಇದ್ದಲ್ಲಿ ಹಿಂಜರಿಯಬೇಕಾಗಿಲ್ಲ.

10 ಮಾರುಕಟ್ಟೆ ಏರಿಳಿತ
ಬಿಕ್ಕಟ್ಟು ಅಥವಾ ಮಾರುಕಟ್ಟೆ ಏರಿಳಿತ ಇದ್ದದ್ದೇ. ಇಂತಹ ಸಂದರ್ಭ ಸಿಬ್ಬಂದಿ, ಹಿತೈಷಿಗಳ ಜತೆ ಚರ್ಚಿಸಿ. ಸಮಸ್ಯೆ ಪರಿಹರಿಸಿಕೊಳ್ಳಲು ಪ್ರಯತ್ನಿಸಿ. ಅನಗತ್ಯ ಸಿಬ್ಬಂದಿಯನ್ನು ಕಡಿತಗೊಳಿಸಿ.

11 ಸಂಸ್ಥೆ ಎತ್ತರಕ್ಕೆ ಬೆಳೆದಾಗ ಬೇರೆಯವರಿಗೆ ಬೆಳೆಯಲು ಅವಕಾಶ ನೀಡಿ. ಬೇರೆ ಉದ್ಯಮದಲ್ಲಿ ಬಂಡವಾಳ ಹೂಡಿ. ಉದ್ಯೋಗ ಸೃಷ್ಟಿಸುವ ಮೂಲಕ ಸಮಾಜದಿಂದ ಪಡೆದ ಲಾಭವನ್ನು ಸಮಾಜಕ್ಕೆ ನೀಡಿ.


-ಪವನ್ ವಸಿಷ್ಠ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement