ಬಾಬಾ ಜಾಬ್ಗೆ
ಬೆಂಗಳೂರಿನಲ್ಲೊಂದಿಷ್ಟು ಕೆಲಸಗಳು ಎಷ್ಟು ಸುಲಲಿತವಾಗಿ, ವೇಗವಾಗಿ ನಡೆದು ಹೋಗುತ್ತಿವೆ ಎಂದರೆ ನಾವವರನ್ನು ಗಮನಿಸುವುದೇ ಇಲ್ಲ. ನಮಗೆ ಸುಸ್ತಾಗಿದೆಯೋ ಅಡುಗೆಕೋಣೆಗೆ ಹೋಗುವುದೇ ಬೇಡ, ಮನೆಯಲ್ಲಿ ಬಿದ್ದುಕೊಂಡೇ ಒಂದು ಫೋನ್ ಕಾಲ್ ಮಾಡಿದರೆ ಸಾಕು, ಅರ್ಧಗಂಟೆಯಲ್ಲಿ ಬೇಕಾಗಿದ್ದನ್ನು ಹಿಡಿದು ಅವನು ಬರುತ್ತಾನೆ. ಈ ಟ್ರಾಫಿಕ್ನಲ್ಲಿ ಹೇಗಪ್ಪಾ ಹೊರಗೆ ಹೋಗಿ ಶಾಪಿಂಗ್ ಮಾಡಲಿ ಎಂದು ಮನಸ್ಸು ಪಿರಿಪಿರಿ ಮಾಡುತ್ತಿದ್ದರೆ ಅಂತರ್ಜಾಲದಲ್ಲೇ ಬೇಕಾದ ಉಡುಪು, ಶೂ, ಛತ್ರಿ, ಬ್ಯಾಗು ಇತ್ಯಾದಿಯನ್ನು ಎರಡು ಕ್ಲಿಕ್ನಲ್ಲಿ ಬುಕ್ ಮಾಡಿಬಿಡಬಹುದು. ಮರುದಿನ ಮನೆ ಕಾಲಿಂಗ್ಬೆಲ್ ಸದ್ದಾದರೆ ನೀವು ಕೇಳಿದ್ದನ್ನು ಹಿಡಿದು ಆತ ನಿಂತಿರುತ್ತಾನೆ. ಎಲ್ಲಿಗೋ ಹೋಗಬೇಕು, ನಂಬರ್ ಡಯಲ್ ಮಾಡಿದರೆ ಸಾಕು, ಆತ ತನ್ನ ಕಾರ್ನೊಂದಿಗೆ ನಿಮ್ಮ ಮನೆ ಬಾಗಿಲಲ್ಲಿ ನಿಂತಿರುತ್ತಾನೆ. ಮನೆಕೆಲಸ ಸಿಕ್ಕಾಪಟ್ಟೆ ಬೋರು, ಸಮಯವಿಲ್ಲ; ಆಕೆ ಬಂದು ಎಲ್ಲವನ್ನೂ ಮಾಡಿಕೊಡುತ್ತಾಳೆ. ಮಕ್ಕಳನ್ನು ನೋಡಿಕೊಳ್ಳಲು ಯಾರೂ ಇಲ್ಲ, ಅವಳು ಬಂದು ನಿಮ್ಮ ಹೊರೆ ಇಳಿಸುತ್ತಾಳೆ. ಆದರೆ ಈ ಆತ/ಆಕೆ ಮಾತ್ರ ನಮ್ಮ ಯಾರ ಕಣ್ಣಿಗೂ ಕಾಣಿಸಿಕೊಳ್ಳುವುದೇ ಇಲ್ಲ. ಅವರ ಕೆಲಸದ ಬಗ್ಗೆ ನಾವೆಂದೂ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಅವರ ಕೆಲಸ ನಮ್ಮ ಬದುಕನ್ನು ಸುಲಭವಾಗಿಸಿದ್ದರೆ ಅವರಿಗೆ ಬದುಕನ್ನೇ ನೀಡಿದೆ.
ಬ್ಲೂ ಕಾಲರ್, ಗ್ರೇ ಕಾಲರ್ ಕೆಲಸಗಳು ನಮಗೆ ನಮ್ಮವರೊಂದಿಗೆ ಹೆಚ್ಚಿನ ಸಮಯ ಕಳೆಯಲು ಅನುವು ಮಾಡಿಕೊಟ್ಟಿವೆ. ಹೊಟೇಲ್ ಊಟದ ರುಚಿಯನ್ನು ಮನೆಯಲ್ಲೇ ಸವಿಯಗೊಟ್ಟಿವೆ. ಆದರೆ ಹೀಗೆ ನಮ್ಮ ಒಂದು ಫೋನ್ ಕಾಲ್ನ ಹಿಂದೆ ಕನಿಷ್ಠ 5 ಮಂದಿ 5 ವಿಭಾಗಗಳಲ್ಲಿ ಕೆಲಸ ನಡೆಸಿರುತ್ತಾರೆ ಎಂಬುದು ನಮಗೆ ಗೊತ್ತಾಗುವುದೇ ಇಲ್ಲ. ಹೀಗೆ ಇನ್ಫಾರ್ಮಲ್ ಸೆಕ್ಟರ್ನಲ್ಲಿ (ತೆರಿಗೆ ರಹಿತ ಉದ್ದಿಮೆ- ಮನೆಗೆಲಸ, ಡ್ರೈವರ್, ಡೆಲಿವರಿ ಬಾಯ್ಸ್, ರಿಸೆಪ್ಷನಿಸ್ಟ್ ಇತ್ಯಾದಿ) ಕೆಲಸ ಕಂಡುಕೊಳ್ಳಲು ಇರುವ ಏಕೈಕ ಆನ್ಲೈನ್ ಮತ್ತು ಮೊಬೈಲ್ ಜಾಬ್ ಸೈಟ್ ಬಾಬಾಜಾಬ್.ಕಾಮ್.
ಆತ ಅನಕ್ಷರಸ್ಥ. ಮನೆ ತುಂಬಾ ಜನ, ಬಡತನ, ಕೆಲಸ ಸಿಗದೆ ಹೈರಾಣಾಗಿದ್ದಾನೆ. ಎಲ್ಲಿ ಹುಡುಕಬೇಕೋ ತಿಳಿಯುತ್ತಿಲ್ಲ. ಅಂಥ ಸಮಯದಲ್ಲಿ 10000ದಿಂದ 15000 ಸಂಬಳದ ಕೆಲಸವೆಂದರೆ ಅದೇನು ಚಿಕ್ಕ ಮಾತಲ್ಲ. ಆದರೆ ಕೆಲಸ ಹುಡುಕಿಕೊಳ್ಳುವ ದಾರಿ ಗೊತ್ತಿಲ್ಲ. ಇಂಟರ್ನೆಟ್ನಲ್ಲಿ ಕೆಲಸ ಹುಡುಕುವುದು ತಿಳಿದಿಲ್ಲ. ಆತ ತನ್ನ ಮೊಬೈಲ್ನಿಂದ ಒಂದು ಮೆಸೇಜ್ ಕಳಿಸಿದರೆ ಸಾಕು, (ಎಷ್ಟಾದರೂ ಶೌಚಾಲಯವಿಲ್ಲದ ಮನೆಗಳಲ್ಲೂ ಮೊಬೈಲ್ ಇದ್ದೇ ಇರುತ್ತದೆ) ಬಾಬಾಜಾಬ್ ಸಂಸ್ಥೆಯಿಂದಲೇ ಕರೆ ಮಾಡಿ ಅವರ ಬಗ್ಗೆ ಡಿಟೇಲ್ಸ್ ತೆಗೆದುಕೊಳ್ಳುತ್ತಾರೆ. ಇತ್ತ ಬಾಬಾಜಾಬ್ ಸೈಟ್ನಲ್ಲಿ ಕೆಲಸಕ್ಕೆ ಜನ ಬೇಕಿರುವವರೆಲ್ಲ ರಿಜಿಸ್ಟರ್ ಮಾಡಿಕೊಂಡಿರುತ್ತಾರೆ. ಯಾರಿಗೆ ಯಾವ ರೀತಿಯ ಕೆಲಸ ಬೇಕೋ, ಕೆಲಸ ಮಾಡುವವರು ಬೇಕೋ, ಅವರಿಬ್ಬರನ್ನು ಕನೆಕ್ಟ್ ಮಾಡುವ ಕೆಲಸ ಬಾಬಾಜಾಬ್ನದ್ದು. ನಿರುದ್ಯೋಗಿಗಳಿಗೂ, ಉದ್ಯೋಗದಾತರಿಗೂ ಪರಸ್ಪರರ ಪ್ರೊಫೈಲ್ ಅನ್ನು ಇಬ್ಬರ ಫೋನ್ಗೂ ಮೆಸೇಜ್ ಅಲರ್ಟ್ಸ್, ಮೇಲ್ ಅಲರ್ಟ್ಸ್, ವಾಯ್ಸ್ ಮೆಸೇಜ್ ಕಳಿಸುತ್ತಾರೆ. ಇದರಿಂದ ಮುಂದಿನ ಸಂವಹನ ಕ್ರಿಯೆ ಅವರಿಬ್ಬರ ನಡುವೆ ನಡೆಯುತ್ತದೆ. ಹೀಗೆ ಬಾಬಾಜಾಬ್ನಿಂದ ಕೆಲಸ ಕಂಡುಕೊಂಡವರ ಸಂಖ್ಯೆ 10 ಲಕ್ಷಕ್ಕೂ ಹೆಚ್ಚು! ಅಲ್ಲದೆ ಉದ್ಯೋಗ ಪಡೆದ ವ್ಯಕ್ತಿಗಳು ಬಾಬಾಜಾಬ್ಗೆ ಯಾವುದೇ ಹಣ ನೀಡಬೇಕಾಗಿಲ್ಲ. ಉದ್ಯೋಗ ಕುರಿತ ಹೆಚ್ಚಿನ ಮಾಹಿತಿಗಾಗಿ www.babajob.com/m.babajob.com ಗೆ ಲಾಗ್ ಆನ್ ಆಗಿ ಅಥವಾ 91 888046611ಗೆ ಕರೆ ಮಾಡಿ. ಅಥವಾ ಎಸ್ಎಂಎಸ್ಗೆ 55444 ಬಳಸಿ.
ಬಾಬಾಜಾಬ್ ಶುರುವಾದದ್ದು ಹೀಗೆ
ಮಿ. ಸೀನ್ ಬ್ಲಾಗ್ಸ್ವೆಡ್ 2004ರಲ್ಲಿ ಮೈಕ್ರೋಸಾಫ್ಟ್ನಲ್ಲಿ ಉದ್ಯೋಗಿಯಾಗಿ ಬೆಂಗಳೂರಿಗೆ ಬಂದರು. ಆ ದಿನ ಅವರು ಬೆಂಗಳೂರಿನಲ್ಲೊಬ್ಬ ಮನೆಗೆಲಸದವಳಿಗೆ ಹುಡುಕಾಟ ನಡೆಸಲು ಪಟ್ಟ ಪಾಡು ಅವರಲ್ಲಿ, ಹೀಗೆ ಇಂಥ ಕೆಲಸಗಳಿಗೆ ಬೇಕಾದವರನ್ನು ಹುಡುಕಲೆಂದೇ ಒಂದು ವೆಬ್ಸೈಟ್ ಇದ್ದರೆ ಎಷ್ಟು ಚೆನ್ನ ಎಂದು ಯೋಚಿಸುವಂತೆ ಮಾಡಿತು. ಈ ನಿಟ್ಟಿನಲ್ಲಿ ಕಾರ್ಯನಿರತರಾದ ಸೀನ್ 2007ರಲ್ಲಿ ಬಾಬಾಜಾಬ್ ಡಾಟ್ ಕಾಮ್ ಆರಂಭಿಸಿಯೇ ಬಿಟ್ಟರು. ಇಂದು ಅವರು ತಮ್ಮ ಎಂಜಿನಿಯರ್ ವೃತ್ತಿಗೆ ಟಾಟಾ ಹೇಳಿದ್ದಾರೆ. ಬೆಂಗಳೂರಿನ ರಿಚ್ಮಂಡ್ ಸರ್ಕಲ್ನಲ್ಲಿರುವ ಸಂಸ್ಥೆಯು ಇಡಿ ಭಾರತದಲ್ಲಿಯೇ ಸಣ್ಣ ಉದ್ದಿಮೆಗಳಿಗಾಗಿ ಇರುವ ಏಕೈಕ ಜಾಬ್ಸೈಟ್ ಆಗಿ, ತನ್ನ ಕಾರ್ಯಕ್ಕೆ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
-ರೇಶ್ಮಾ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.