ಬೆಂದಕಾಳು ನೀಡೋ ಊರು
ಸ್ನೇಹಿತನೊಬ್ಬ ಸೀದಾ ಬೆಂಗಳೂರಿಗೆ ಬಂದುಬಿಟ್ಟಿದ್ದ. 'ಮಗಾ ನಾನ್ ಬೆಂಗ್ಳೂರಲ್ಲಿ ಇದೀನೋ!' ಅಂತ ಫೋನಾಯಿಸಿದ. ..
ಸ್ನೇಹಿತನೊಬ್ಬ ಸೀದಾ ಬೆಂಗಳೂರಿಗೆ ಬಂದುಬಿಟ್ಟಿದ್ದ. 'ಮಗಾ ನಾನ್ ಬೆಂಗ್ಳೂರಲ್ಲಿ ಇದೀನೋ!' ಅಂತ ಫೋನಾಯಿಸಿದ. ಎಲ್ಲಿಲ್ಲದ ಗಾಬರಿ. ಅಸಲಿಗೆ ನಿಂಗೆ ಕೆಲ್ಸ ಸಿಕ್ಕಿದೆಯೇನೋ? ಕಂಪನಿಯಲ್ಲಿ ಕನ್ಫರ್ಮ್ ಆಗಿ ಬರೋಕೆ ಹೇಳಿದ್ದಾರೆ ತಾನೆ? ಎಂದೆಲ್ಲಾ ಕೇಳಿದಾಗ ಆತ ಉತ್ತರಿಸಿದ ಪರಿಗೆ ಚಕಿತನಾಗುವಂತಾಯ್ತು. 'ಎಲ್ಲಾದ್ರೂ ಏನೋ ಒಂದು ಕೆಲ್ಸ ಸಿಕ್ಕೇ ಸಿಗತ್ತೆ ಮಗಾ! ಬೆಂಗ್ಳೂರಲ್ಲಿ ಕೆಲ್ಸಕ್ಕೆ ಬರನಾ?' ಯಾವ ಜಾಗ, ಯಾವ ಕಂಪನಿ, ಏನ್ ಕೆಲ್ಸ ಒಂದೂ ಗೊತ್ತಿಲ್ದೆ ಹೀಗೆ ಏಕಾಏಕಿ ಬಂದಿದ್ದಿಯಲ್ಲಾ ಅಂದರೆ, 'ಹುಡುಕ್ಬೇಕು. ಸಿಕ್ಕೇ ಸಿಗತ್ತೆ' ಅಂತ ಆತ್ಮವಿಶ್ವಾಸದಿಂದ ಬೀಗಿದ್ದ. ಅದಾದ ಏಳೇ ದಿನಗಳಲ್ಲಿ ಮತ್ತೆ ಆತನಿಂದ ಕಾಲ್ ಬಂತು. 'ಮಗಾ ಜಾಬ್ ಸಿಕ್ತೋ. ಒಳ್ಳೆ ಸಂಬಳಾನೇ ಇದೆ' ಅಂದ ಆ ಕಡೆಯ ದನಿಗೆ ಫುಲ್ ಜೋಶ್. ಹೌದು, ಆತನಿಗೆ ಪ್ರತಿಷ್ಠಿತ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಸಿಕ್ಕಿತ್ತು. ಪದವಿ ಮುಗಿಸಿ ಬೆಂಗಳೂರಿಗೆ ಬಂದಿದ್ದನಷ್ಟೇ.
ಇಂತಹ ಯುವಕರು ದಿನನಿತ್ಯ ರಾಜ್ಯದ ಗ್ರಾಮಗಳಿಂದ, ಬೇರೆ ರಾಜ್ಯಗಳಿಂದ ಬೆಂಗಳೂರಿನ ಬಸ್ಸು ಹತ್ತುತ್ತಾರೆ. ರಾಜಧಾನಿಗೆ ಬಂದು ಕೆಲಸ ಹುಡುಕುತ್ತಾರೆ. ಒಂದಷ್ಟು ಸಂಬಳ ಗಿಟ್ಟಿಸುತ್ತಾರೆ. ಊರಿಗೆ ಒಂದಷ್ಟು ದುಡ್ಡು ಕಳುಹಿಸುತ್ತಾರೆ. ಬೆಂಗಳೂರೇ ಹಾಗೆ, ಉದ್ಯೋಗಿಗಳ ತವರು. ಪದವಿ ಮುಗಿಸಿದ ಯುವಕ ಯುವತಿಯರನ್ನು ಕೈ ಬೀಸಿ ಕರೆಯುತ್ತದೆ. ಅರ್ಧಕ್ಕೆ ವಿದ್ಯಾಭ್ಯಾಸ ಮುಗಿಸಿದವರೂ ಎಗ್ಗಿಲ್ಲದೆ ಮಹಾನಗರಿಗೆ ಬಂದು ನುಗ್ಗುತ್ತಾರೆ. ಅಂತಹ ಪ್ರತಿ ಉದ್ಯೋಗ ಆಕಾಂಕ್ಷಿಗೂ ನಗರ ಕೆಲಸ ನೀಡದೆ ಕಳುಹಿಸಿಲ್ಲ. ಮಹಾನಗರದಲ್ಲಿ ಏಗಿ ಅಲ್ಲೇ ಠಿಕಾಣಿ ಹೂಡುವವರು ಅಷ್ಟಕಷ್ಟೇ. ಆದರೆ ನಂಬಿದವರ ಕೈಬಿಟ್ಟ ಉದಾಹರಣೆ ಇಲ್ಲ.
ಪರ ರಾಜ್ಯದವರಿಗೆ, ಪರ ದೇಶದವರಿಗೆ ಉದ್ಯೋಗ ನೀಡಿ 'ಉದ್ಯೋಗ ನಗರಿ ಬೆಂಗಳೂರು!' ಎಂದೇ ಪರಿಚಿತವಾಗುತ್ತಿದೆ. ಆ ಕಾರಣದಿಂದಲೇ ಇಂದು ಬೆಂಗಳೂರು ಭಾರತದಲ್ಲೇ ಉದ್ಯೋಗಿಗಳ ಮೊದಲ ನೆಚ್ಚಿನ ತಾಣವಾಗಿ ಪ್ರತಿಬಿಂಬಿಸಿರುವುದು. ವಿಶ್ವವನ್ನೇ ಈ ವಿಚಾರದಲ್ಲಿ ಇತ್ತ ಗಮನ ಸೆಳೆಯುವಂತೆ ಮಾಡಿರುವುದು. ಬೆಂಗಳೂರಿನ ಧೀಶಕ್ತಿಯೇ ಅಂತಹದ್ದು. ದಿನದ 24 ಗಂಟೆಯೂ ಎಚ್ಚರಿಕೆಯಿಂದ ಇರುತ್ತದೆ. ಹಳ್ಳಿಗಳಲ್ಲಿ ಎಷ್ಟೋ ಹಿರಿಯ ಜೀವಿಗಳು ನೆಮ್ಮದಿಯಿಂದ ಇದ್ದಾರೆ ಎಂದರೆ, ವಯಸ್ಸಿಗೆ ಬಂದ ಹೆಣ್ಣು ಮಕ್ಕಳಿಗೆ ಮದುವೆ ಮಾಡಿದ್ದಾರೆ ಎಂದರೆ ಅದು ಬೆಂಗಳೂರು ನೀಡಿದ ಉದ್ಯೋಗವಕಾಶದಿಂದ ಎಂಬುದು ವಾಸ್ತವ.
ಉದ್ಯೋಗಿಗಳ ನೆಚ್ಚಿನ ತಾಣ ಎಂಬ ವಿಚಾರದಲ್ಲಿ ವಿಶ್ವದಲ್ಲೇ 9ನೇ ಸ್ಥಾನ ಪಡೆದುಕೊಂಡಿದೆ. ಭಾರತ ನಂ.1 ನಗರ ಎನ್ನುವುದು ಬೆಂಗಳೂರಿನ ಹೆಗ್ಗಳಿಕೆ. ಫ್ರೊಫೆಷನಲ್ ನೆಟ್ವರ್ಕಿಂಗ್ ತಾಣ ಲಿಂಕ್ಡ್ಇನ್ ನಡೆಸಿರುವ ಸಮೀಕ್ಷೆ ಹೇಳಿರುವಂತೆ ಫ್ರಾನ್ಸ್ನ ಪ್ಯಾರಿಸ್ ಮೊದಲ ಸ್ಥಾನದಲ್ಲಿದೆ. ಕಳೆದ ವರ್ಷ 2.6 ದಶಲಕ್ಷ ಚಂದಾದಾರ ಕಂಪನಿಗಳಲ್ಲಿನ ಉದ್ಯೋಗಿಗಳ ಮೇಲೆ ನಡೆಸಿದ ಸಮೀಕ್ಷೆಯಲ್ಲಿ ಉದ್ಯೋಗಿಗಳ ನೆಚ್ಚಿನ ತಾಣಗಳ ಸ್ಥಾನಮಾನ ನೀಡಲಾಗಿದೆ. ಉತ್ತಮ ಅವಕಾಶಗಳನ್ನು ಹುಡುಕಿಕೊಂಡು ಬೆಂಗಳೂರಿಗೆ ಬರುವವರ ಪ್ರಮಾಣ ಶೇ.34. ಅದೇ ಪ್ಯಾರಿಸ್ಗೆ ತೆರಳುವವರ ಪ್ರಮಾಣ ಶೇ.42. ಉತ್ತಮ ಅವಕಾಶ, ಕಚೇರಿಯಲ್ಲಿ ಒಳ್ಳೆಯ ವಾತಾವರಣ, ಅನಿವಾರ್ಯತೆ ಇತ್ಯಾದಿ ಕಾರಣಗಳು ಬೆಂಗಳೂರಿನಂತಹ ಸಿಮೆಂಟ್ ನಗರಿಯನ್ನೂ ಬಾಚಿ ಅಪ್ಪಿಕೊಳ್ಳಲು ಇರುವ ಮುಖ್ಯ ಕಾರಣಗಳು. ಅಂತೂ ಬೆಂಗಳೂರು ಉದ್ಯೋಗ ಹುಡುಕುವವರ ನೆಚ್ಚಿನ ತಾಣವಾಗಿ ನಿರ್ಮಾಣಗೊಂಡಿದೆ. ಪ್ರತಿದಿನವೂ ನೂರಾರು ಜನ ಉದ್ಯೋಗ ಹುಡುಕಿಕೊಂಡು ಬೆಂಗಳೂರಿಗೆ ಬರುತ್ತಾರೆ. ಕೆಲಸ ಹುಡುಕಿ ಬೆಂಗಳೂರಿಗೇ ಹೆಚ್ಚೆಚ್ಚು ಬರುತ್ತಾರೆ ಎಂದರೆ ಉದ್ಯಾನ ನಗರಿ ಮೇಲಿರುವ ನಂಬಿಕೆ. ಆ ನಂಬಿಕೆಯನ್ನು ಬೆಂಗಳೂರು ಎಷ್ಟು ಕಾಲ ಉಳಿಸಿಕೊಳ್ಳುತ್ತದೆ ಎಂಬುದು ಯಕ್ಷ ಪ್ರಶ್ನೆ.
-ಮಂಜುನಾಥ್ ಎಲ್. ಕೆ.