ಶತಾವರಿಯಲ್ಲಿದೆ ಮೂಡ್ ಉದ್ದೀಪಿಸುವ ಮ್ಯಾಜಿಕ್
ವಿಟಮಿನ್ 'ಬಿ' ಕೊರತೆಯಾದರೆ ಮೂಡ್ ಕೆಡುತ್ತದೆ. ಈ ವಿಟಮಿನ್ ಸಿಗಬೇಕು ಅಂತಾದರೆ ಹಸಿರು ಸೊಪ್ಪು...
ವಿಟಮಿನ್ 'ಬಿ' ಕೊರತೆಯಾದರೆ ಮೂಡ್ ಕೆಡುತ್ತದೆ. ಈ ವಿಟಮಿನ್ ಸಿಗಬೇಕು ಅಂತಾದರೆ ಹಸಿರು ಸೊಪ್ಪು, ತರಕಾರಿಗಳನ್ನು ಜಾಸ್ತಿ ಸೇವಿಸಬೇಕು. ಪಾಲಕ್, ಶತಾವರಿ, ಕ್ಯಾಬೇಜ್ಗಳಲ್ಲಿ ವಿಟಮಿನ್ 'ಬಿ' ಜತೆಗೆ ಫೋಲೇಟ್ ಎನ್ನುವ ರಾಸಾಯನಿಕವೂ ಹೇರಳವಾಗಿರುತ್ತದೆ. ಇವೆರಡರ ಸಂಯೋಜನೆ ಅತ್ಯುತ್ತಮ. ಫೋಲೇಟ್ ನೊಫ್ರಿನೆಫ್ರೀನ್, ಸೆರೊಟೊನಿನ್, ಡೊಪಾಮೈನ್ ಮೊದಲಾದ ಮೂಡ್ ಉದ್ದೀಪನಾ ರಾಸಾಯನಿಕಗಳ ಸಂಯೋಜನೆಯಾಗಿರುತ್ತದೆ. ಆದ್ದರಿಂದ ವಿಟಮಿನ್ 'ಬಿ' ಮತ್ತು ಫೋಲೇಟ್ಗಳ ಸಂಯೋಜನೆಯ ಸೊಪ್ಪು, ತರಕಾರಿಗಳು ಖಿನ್ನತೆ, ಆತಂಕ ಮೊದಲಾದ ಸಮಸ್ಯೆಗಳಿಂದಲೂ ಕಾಪಾಡಬಲ್ಲವು. ಇವು ಆಹಾರ ಪದ್ಧತಿಯ ಭಾಗವಾಗಿದ್ದರೆ ಮೂಡ್ ಯಾವತ್ತೂ ಚೆನ್ನಾಗಿರುತ್ತದೆ.
ಶತಾವರಿ ಬಗ್ಗೆ ಸ್ವಲ್ಪ ಹೇಳಲೇಬೇಕು. ಹಲವು ಪೌಷ್ಟಿಕಾಂಶಗಳ ಜತೆಗೆ ಫೋಲಿಕ್ ಆ್ಯಸಿಡ್ ಕೂಡ ಇದರಲ್ಲಿ ಅಧಿಕ ಪ್ರಮಾಣದಲ್ಲಿರುತ್ತದೆ. ಒಂದು ಕಪ್ ಶತಾವರಿ ರಸ ಅಗತ್ಯವಿರುವ ಶೇ 66ರಷ್ಟು ಫೋಲಿಕ್ ಆ್ಯಸಿಡ್ ಅನ್ನು ಒದಗಿಸಬಲ್ಲದು. ಜ್ಯೂಸ್ ಜತೆಗೆ ಸಾಲಾಡ್ಗಳಲ್ಲಿ ಇದನ್ನು ಬಳಸಬಹುದು ಅಥವಾ ಚಟ್ನಿ ಕೂಡ ಮಾಡಬಹುದು. ವಾರದಲ್ಲಿ ಎರಡು ಸಲ ಶತಾವರಿ ಬಳಕೆ ಬಹಳ ಒಳ್ಳೆಯ ಪರಿಣಾಮ ನೀಡುತ್ತದೆ.
ಮಹತ್ವದ ಮೀಟಿಂಗ್ಗಳಲ್ಲಿ ಭಾಗವಹಿಸುವ ಮುನ್ನ ಸಿಹಿ ತಿನಿಸುಗಳನ್ನು ಜಾಸ್ತಿ ಸೇವಿಸಬೇಡಿ. ಸಂಸ್ಕರಿತ ಆಹಾರಗಳಿಂದಲೂ ದೂರ ಇರುವುದು ಒಳ್ಳೆಯದು. ಇವು ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿಸುವುದರಿಂದ ಮಾನಸಿಕ ಸ್ಥಿತಿ ಮೇಲೂ ಪರಿಣಾಮ ಬೀರಬಲ್ಲವು. ಸಭೆಯಲ್ಲಿ ಎಂತಹುದೇ ಸಂದರ್ಭ ಎದುರಾದರೂ ಮೂಡ್ ಕೆಡಿಸಿಕೊಳ್ಳದೆ ಸಮರ್ಥವಾಗಿ ನಿಭಾಯಿಸಬೇಕು ಅಂತಾದರೆ ಆಹಾರ ವಿಚಾರದಲ್ಲಿ ನಿಗಾ ವಹಿಸುವುದು ಅಗತ್ಯ.
ಕಿತ್ತಳೆ ಕೂಡ ಮೂಡ್ ಅನ್ನು ಚೆನ್ನಾಗಿಡಬಲ್ಲದು. ಇದರಲ್ಲಿನ ವಿಟಮಿನ್ 'ಸಿ' ಮಾನಸಿಕ ಒತ್ತಡಕ್ಕೆ ಕಾರಣವಾಗುವ ಹಾರ್ಮೋನುಗಳ ಮಟ್ಟವನ್ನು ನಿಯಂತ್ರಿಸುತ್ತದೆ. ರಕ್ತದೊತ್ತಡ ಏರಿದಾಗ ಮಾನಸಿಕ ಒತ್ತಡಕ್ಕೆ ನೂಕುವ ಹಾರ್ಮೋನುಗಳೂ ಅಧಿಕ ಪ್ರಮಾಣದಲ್ಲಿ ಬಿಡುಗಡೆಯಾಗುತ್ತವೆ. ಅಂತಹ ಸನ್ನಿವೇಶದಲ್ಲಿ ಒಂದು ಕಿತ್ತಳೆ ಹಣ್ಣು ತಿಂದರೆ ಒತ್ತಡದ ಹಾರ್ಮೋನುಗಳು ನಿಯಂತ್ರಣಕ್ಕೆ ಬರುತ್ತವೆ, ಒತ್ತಡ ಸ್ವಾಭಾವಿಕವಾಗಿ ಕಡಿಮೆಯಾಗುತ್ತದೆ. ಮನೆ ಅಥವಾ ಕಚೇರಿಯಲ್ಲಿ ಕೆಲಸದ ಒತ್ತಡದ ನಿರೀಕ್ಷೆ ಇದ್ದಾಗ ಕಿತ್ತಳೆ ಹಣ್ಣು ತಿನ್ನುವುದು ಒಳ್ಳೆಯ ಉಪಾಯ. ಒತ್ತಡ ಸನ್ನಿವೇಶದ ನಿರೀಕ್ಷೆಗಿಂತ ಒಂದು ಗಂಟೆ ಮೊದಲು ಈ ಉಪಾಯ ಪಾಲಿಸಿದರೆ ಅತ್ಯುತ್ತಮ ಪರಿಹಾರ ಪಡೆಯಬಹುದು. ಲಿಂಬು ಶರಬತ್ತು ಕೂಡ ನಿಮ್ಮ ನೆರವಿಗೆ ಬರಬಲ್ಲದು.
ಒಮ್ಮೊಮ್ಮೆ ಬೆಳಗ್ಗೆ ಏಳುವಾಗಲೇ ಮೂಡ್ ಕೆಡಬಹುದು. ಅಂಥ ಸಂದರ್ಭಗಳಲ್ಲಿಯೂ ಈ ಆಹಾರ ವಿಧಾನ ಪ್ರಯೋಗಿಸಿ ನೋಡಬಹುದು.
(ಮುಂದುವರಿಯುವುದು)
ಮೊ.9900113699 (ಎಸ್ಎಂಎಸ್ಗೆ ಮಾತ್ರ)
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com