ನಿಮ್ಮ ಮನೆಯಲ್ಲಿರಲಿ ಆಧುನಿಕ ಸಂಜೀವಿನಿ
ಬೆಳ್ಳುಳ್ಳಿಯನ್ನು ಆಧುನಿಕ ಸಂಜೀವಿನಿ ಎಂದು ಕರೆದರೂ ತಪ್ಪಲ್ಲ. ಬೆಳ್ಳುಳ್ಳಿಯಿಂದ ಆಗುವ ಆರೋಗ್ಯದ ಲಾಭಗಳು ಒಂದೆರಡಲ್ಲ. ಆ ಸಲುವಾಗಿಯೇ ಆಗಾಗ ಬೆಳ್ಳುಳ್ಳಿ ಪ್ರಸ್ತಾಪ ಆಗುತ್ತದೆ. ಬಹುತೇಕ ತೊಂದರೆಗಳಿಗೆ ಬೆಳ್ಳುಳ್ಳಿಯೇ ರಾಮಬಾಣ. ಇದು ರಕ್ತದಲ್ಲಿನ ಕೆಟ್ಟ ಕೊಲೆಸ್ಟರಾಲ್ ಅನ್ನು ನಿಯಂತ್ರಿಸುವುದು, ಹೃದಯಕ್ಕೆ ರಕ್ತ ಸರಬರಾಜು ವ್ಯವಸ್ಥಿತವಾಗಿರುವಂತೆ ನೋಡಿಕೊಳ್ಳುವುದು, ಗ್ಯಾಸ್ಟ್ರಿಕ್ ಮತ್ತು ಆ್ಯಸಿಡಿಟಿ ತಡೆಯುವುದು ನಮಗೆ ಗೊತ್ತಿರದ ವಿಷಯವೇನಲ್ಲ. ಆದರೆ ಬೆಳ್ಳುಳ್ಳಿ ನಮ್ಮ ಮೂಡ್ ಅನ್ನು ನಿಯಂತ್ರಿಸಬಲ್ಲದು ಎನ್ನುವುದು ಹೊಸ ಸಂಗತಿ ಅಲ್ಲವೆ?
ನಮಗಷ್ಟೇ ಅಲ್ಲ, ಬೆಳ್ಳುಳ್ಳಿ ಮೂಡ್ ನಿಯಂತ್ರಿಸಬಲ್ಲದು ಎನ್ನುವುದು ಅರಿವಾದಾಗ ವಿಜ್ಞಾನ ಲೋಕವೂ ನಿಬ್ಬೆರಗಾಗಿತ್ತು. ಅನೇಕ ಸಂಶೋಧನೆಗಳು ಇದನ್ನು ದೃಢಪಡಿಸಿವೆ. ಆ ಬಳಿಕ ಗಾರ್ಲಿಕ್ ಮೆಡಿಕೇಶನ್ ಪಾಶ್ಚಾತ್ಯರಲ್ಲಿ ಜನಪ್ರಿಯ ಔಷಧ ವಿಧಾನವೂ ಆಗಿಬಿಟ್ಟಿದೆ. ದಿನಕ್ಕೊಂದು ಬೆಳ್ಳುಳ್ಳಿ ಸೇವನೆ ವ್ಯಕ್ತಿಯಲ್ಲಿ ಆರಾಮದಾಯಕ ಅನುಭವ ನೀಡುತ್ತದೆ. ಒತ್ತಡ, ಆತಂಕ, ಖಿನ್ನತೆ, ಸಿಟ್ಟು, ಕಿರಿಕಿರಿಗಳನ್ನು ನಿಯಂತ್ರಿಸುತ್ತದೆ. ಯಾವುದೇ ಔಷಧಗಳಿಂದ ಆಗುವ ಅಡ್ಡಪರಿಣಾಮಗಳನ್ನು ನಿಯಂತ್ರಿಸುವ ಸಾಮರ್ಥ್ಯವೂ ಬೆಳ್ಳುಳ್ಳಿಗೆ ಇದೆ. ಜರ್ಮನಿಯಲ್ಲಂತೂ ಗಾರ್ಲಿಕ್ ಸಪ್ಲ್ಲಿಮೆಂಟ್ಗಳು ಗರಿಷ್ಠ ಪ್ರಮಾಣದಲ್ಲಿ ಮಾರಾಟವಾಗುತ್ತವೆ. ಹೀಗಾಗಿ ಒಂದು ದಿನ ತರಕಾರಿ ಇಲ್ಲದಿದ್ದರೂ ನಡೆದೀತು, ಬೆಳ್ಳುಳ್ಳಿ ಮಾತ್ರ ಖಾಲಿಯಾಗಬಾರದು ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಬೆಳ್ಳುಳ್ಳಿ ಬೇಗ ಹಾಳಾಗುವಂಥದ್ದಲ್ಲ. ಆದ್ದರಿಂದ ಅಡುಗೆ ಮನೆಯಲ್ಲಿ ಸ್ವಲ್ಪ ಹೆಚ್ಚೇ ದಾಸ್ತಾನಿಟ್ಟುಕೊಂಡರೆ ತೊಂದರೆ ಏನೂ ಇಲ್ಲ.
ಮಾನಸಿಕ ಒತ್ತಡ ಅಥವಾ ಸಮಸ್ಯೆಗಳಿಗೆ ಹಲವು ಕಾರಣಗಳಿರುತ್ತವೆ ಎನ್ನುವುದು ನಿಜ. ಅವೇನೇ ಇದ್ದರೂ ಆಹಾರದ ಮೂಲಕ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಾಧ್ಯವಿದೆ. ಒತ್ತಡದ ಸನ್ನಿವೇಶಗಳನ್ನು ನಿಭಾಯಿಸುವ, ಕ್ಲಿಷ್ಟಕರ ಸಂದರ್ಭಗಳನ್ನು ಪರಿಹರಿಸಿಕೊಳ್ಳುವ ಜಾಣ್ಮೆ ತೋರುವ ಮಾಯಾಗುಣ ಆಹಾರದಲ್ಲಿದೆ ಎನ್ನುವುದು ನಿಜ. ಎಷ್ಟೋ ಸಲ ಒತ್ತಡದ ಸನ್ನಿವೇಶಗಳನ್ನು ನಿರೀಕ್ಷಿಸಿರುತ್ತೇವೆ ತಾನೆ ಅಂತಹ ಪ್ರಸಂಗಗಳಲ್ಲಿ ಆಹಾರದ ಮೂಲಕ ಒತ್ತಡ ಕಡಿಮೆ ಮಾಡಿಕೊಳ್ಳಬಹುದು. ಇನ್ನು ಮಾನಸಿಕ ಸಮಸ್ಯೆಗಳಿಗೆ ವೈದ್ಯೋಪಚಾರ ಪಡೆಯುತ್ತಿರುವವರು ಸಹ ಅದಕ್ಕೆ ಪೂರಕವಾಗಿ ಇಲ್ಲಿ ಹೇಳಲಾಗಿರುವ ಆಹಾರ ಕ್ರಮ ಅನುಸರಿಸಬಹುದು. ಇದರಿಂದ ಔಷಧ ಇನ್ನಷ್ಟು ತೀವ್ರವಾಗಿ ಕೆಲಸ ಮಾಡಲು ಸಹಾಯವಾಗುತ್ತದೆ.
ಆಹಾರದಿಂದ ನಿರ್ದಿಷ್ಟವಾಗಿ ಖಿನ್ನತೆ, ಒತ್ತಡ ಇತ್ಯಾದಿಗಳನ್ನು ಹತ್ತಿಕ್ಕಬಹುದು. ಹೇಗೆ ಅನ್ನುತ್ತೀರಾ? ಅದನ್ನು ಮುಂದಿನ ಸಂಚಿಕೆಗಳಲ್ಲಿ ಚರ್ಚಿಸೋಣ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com