ವಿಡಿಯೊ ಸಿ.ವಿವರ!
ಪದವಿ, ಉನ್ನತ ಪದವಿ ಗಳಿಸಿದ ಬಹುತೇಕರು ಈಗಾಗಲೇ ಕೆಲಸ ಹುಡುಕುವುದರಲ್ಲೇ ಬ್ಯುಸಿ. ಉತ್ತಮ ಸಂಬಳವಿರುವ ಒಳ್ಳೆಯ ಸಂಸ್ಥೆಯೊಂದರಲ್ಲಿ ನೌಕರಿ ಗಿಟ್ಟಿಸಬೇಕು ಎಂಬುದೇ ಎಲ್ಲರ ಹಂಬಲ. ಒಳ್ಳೆ ಅಂಕಗಳಿಲ್ಲದೆ ಜಸ್ಟ್ ಪಾಸ್ ಆದ ಕೆಲವರು ಒಳ್ಳೆಯ ಹುದ್ದೆಯನ್ನೇ ಅಲಂಕರಿಸಿರುತ್ತಾರೆ. ಅಂತಹವರನ್ನು ನೋಡಿದಾಗ ಅಚ್ಚರಿಯಾಗದೆ ಇರುವುದಿಲ್ಲ. 'ಇಷ್ಟು ಒಳ್ಳೆ ಮಾರ್ಕಿದ್ದರೂ ಒಂದೊಳ್ಳೆ ನೌಕರಿ ಸಿಗುತ್ತಿಲ್ಲ. ಎಲ್ಲಾ ನನ್ನ ಹಣೆಬರಹ!' ಎಂದು ತಲೆ ಚಚ್ಚಿಕೊಳ್ಳುವವರಿದ್ದಾರೆ. 'ಇನ್‌ಫ್ಲುಯನ್ಸ್ ಇದ್ದರಷ್ಟೇ ಸಾಧ್ಯ!' ಎಂದು ಕರುಬುವ ಮಂದಿ ಎಷ್ಟಿಲ್ಲಾ? ಹೆಚ್ಚು ಮಾರ್ಕ್ಸ್ ತೆಗೆಯದವನಿಗೂ ಒಳ್ಳೆಯ ಕಂಪನಿಯಲ್ಲಿ ದೊಡ್ಡ ಹುದ್ದೆ ಸಿಕ್ಕಿದೆ ಎಂದರೆ ಆತನ ಕ್ರಿಯಾಶೀಲತೆ ಹೆಚ್ಚು ಕೆಲಸ ಮಾಡಿರುತ್ತದೆ. ಮೊದಲ ಬಾರಿಗೆ ತನ್ನ ತೋರ್ಪಡಿಕೆಯನ್ನು ಎಕ್ಸಲೆಂಟ್‌ಆಗಿ ಪ್ರದರ್ಶಿಸಿರುತ್ತಾನೆ.
ಕ್ರಿಯಾಶೀಲ ತೋರ್ಪಡಿಕೆ ಹೇಗೆ ಸಾಧ್ಯ? ಎಂಬುದರ ಬಗ್ಗೆ ಕೊಂಚ ಆಲೋಚಿಸಿ. ಸಂದರ್ಶನವನ್ನು ಸುಂದರವಾಗಿಸಿದರೆ ಕೆಲಸ ಸಿಗುವ ಪ್ರಕ್ರಿಯೆ ಸಲೀಸಾಗಿ ಸಾಗುತ್ತದೆ. ಸಂದರ್ಶನದ ಮುಖ್ಯ ಭಾಗವೇ ಸಿ.ವಿ. ಸೃಜನಾತ್ಮಕ ಸಿ.ವಿಯನ್ನು ಸಂದರ್ಶಕರ ಮುಂದಿರಿಸಿದಿರೋ ಶೇ.50 ಜಾಬ್ ಗ್ಯಾರಂಟಿ. ಒಬ್ಬ ವ್ಯಂಗ್ಯಚಿತ್ರಕಾರ ತನ್ನ ಸಿ.ವಿಯನ್ನು ವ್ಯಂಗ್ಯಚಿತ್ರದಲ್ಲೇ ಮಾಡಿದ್ದನು. ರಶ್ ಆದ ಬಸ್ಸಿನ ಚಿತ್ರ. ಅದರಲ್ಲಿ ಪ್ರಯಾಣಿಕರು ನೇತಾಡುತ್ತಿದ್ದಾರೆ. ಹಿಂದಿನಿಂದ ತುಂಬಾ ಜನ ಓಡುತ್ತಿದ್ದಾರೆ. ಅದರಲ್ಲೊಬ್ಬ 'ನಾನೂ ಬರ್ತೀನಿ' ಎಂದು ಅರಚುತ್ತಿದ್ದಾನೆ. ಆ ಚಿತ್ರದ ಟೋಟಲ್ ಸಾರ ಇಂತಿತ್ತು. ನಿಮ್ಮಲ್ಲಿ ಮೊದಲೇ ಕೆಲಸಗಾರರು ತುಂಬಿ ತುಳುಕುತ್ತಿದ್ದಾರೆ. ಜಾಗಕ್ಕಾಗಿ ಹಿಂಬಾಲಿಸುತ್ತಿರುವವರೂ ತುಂಬಾ ಜನರಿದ್ದಾರೆ. ಜಾಗ ಸಿಗುವುದು ಅಷ್ಟು ಸುಲಭವಲ್ಲ. ಆದರೂ ನಾನೂ ಬರ್ತೀನಿ ಎಂಬ ಬೇಡಿಕೆ ಇರಿಸುತ್ತಿದ್ದೇನೆ ಎಂಬುದಾಗಿತ್ತು. ಮತ್ತೆ ಹೆಚ್ಚಿನ ಸಂದರ್ಶನವೇ ನಡೆಯಲಿಲ್ಲ. ಮರುದಿವಸದಿಂದ ಆ ಪತ್ರಿಕೆಯ ವ್ಯಂಗ್ಯ ಚಿತ್ರಕಾರನಾಗಿ ನೌಕರಿ ಗಿಟ್ಟಿಸಿಕೊಂಡ.
ಇರಲಿ, ಹಳೆಯ ಐಡಿಯಾಗಳನ್ನು ಪ್ರೇರಣೆಗಷ್ಟೇ ತೆಗೆದುಕೊಳ್ಳಬೇಕು. ಮತ್ತದೇ ಪುನರಾವರ್ತಿಸಿದರೆ ಕಾಪಿ ಎಂದಾಗುತ್ತದಷ್ಟೇ. ಅದರಲ್ಲಿ ಕ್ರಿಯೇಟಿವಿಟಿನೂ ಇರುವುದಿಲ್ಲ. ಸೃಜನಶೀಲತೆಯೂ ಇರುವುದಿಲ್ಲ.
'ವಿಡಿಯೋ ಸಿವಿ'ಯನ್ನೇಕೆ ಮಾಡಬಾರದು? ಪ್ರಯತ್ನಕ್ಕೆ ಅಡ್ಡಿಯೇನು? ಎರಡು ನಿಮಿಷದ ವಿಡಿಯೋ ಒಂದನ್ನು ಸಿದ್ಧಪಡಿಸಿ ಸಂದರ್ಶಕರ ಮುಂದಿರಿಸಿದರೆ? ಸದ್ಯ ವಿಡಿಯೋ ಸಿವಿ ಬಳಕೆಯಲ್ಲಿರುವ ಅದ್ಭುತ ಪ್ರದರ್ಶನ. ಎರಡು ನಿಮಿಷದ ವಿಡಿಯೋದಲ್ಲಿ ತಾನೇನು? ತನ್ನ ಟ್ಯಾಲೆಂಟ್ ಏನು? ತಾನೇನು ಮಾಡಬಲ್ಲೆ? ಎಂಬುದರ ತುಣುಕು ಅಲ್ಲಿ ಸ್ಪಷ್ಟವಾಗಿದ್ದರೆ ಜಾಬ್ ಸಿಕ್ಕಿತೆಂದೇ ಅರ್ಥ. ವಿಡಿಯೋ ಸಿ.ವಿಯಲ್ಲಿ ದೇಹ ಭಾಷೆ, ಚಿಂತನೆಯ ಸ್ಪಷ್ಟತೆ, ಪ್ಯಾಶನ್, ವಿಶನ್‌ಅನ್ನು ಪರಿಪೂರ್ಣವಾಗಿ ತಿಳಿಸುವಲ್ಲಿ ಪರಿಣಾಮಕಾರಿ. ಅಲ್ಲಿ ಮಾತುಕತೆಗೆ ಅವಕಾಶವೇ ಇರುವುದಿಲ್ಲ. ಒಂದು ಭಾವಚಿತ್ರ ಸಾವಿರ ಪದಗಳಿಗೆ ಸಮ ಎನ್ನುತ್ತಾರೆ. ಭಾವಚಿತ್ರಗಳ ಸರಣಿಯೇ ಆಗಿರುವ ವಿಡಿಯೋ ಎಷ್ಟು ಪದಗಳಿಗೆ ಸಮವಿರಬೇಡ? ಅದನ್ನೂ ಹೊರತು ಪಡಿಸಿ ಸಂದರ್ಶಕ ಪ್ರಶ್ನಿಸುತ್ತಾನೆ ಎಂದರೆ ನೆಪ ಮಾತ್ರಕ್ಕಷ್ಟೇ ಸಂದರ್ಶನಕ್ಕೆ ಕರೆದಿದ್ದಾರೆ ಎಂದರ್ಥ. ಹೇಗೂ ಫೋಟೋ ತೆಗೆಯುವುದು, ವಿಡಿಯೋ ಮಾಡುವುದು ಎಲ್ಲರಿಗೂ ಸಹ್ಯ ಮತ್ತು ಆಸಕ್ತಿದಾಯಕ ಕೆಲಸ. ಹಾಗಾಗಿ ಸಿಂಪಲ್ ಆಗೊಂದು ವಿಡಿಯೋ ಸಿವಿ ಮಾಡುವುದು ಅಷ್ಟು ದೊಡ್ಡ ಕೆಲಸವೇನಲ್ಲ. ವಿಡಿಯೋ ಸಿವಿ ಮಾಡುವುದರಲ್ಲಿ ತಪ್ಪೇನೂ ಇಲ್ಲ. ನಿಮ್ಮನ್ನು ಪ್ರತ್ಯೇಕವಾಗಿ ಪರಿಗಣಿಸುವಂತಾಗಲು ವಿಡಿಯೋ ಸಿವಿ ಅತ್ಯಂತ ಪರಿಣಾಮಕಾರಿಯೂ ಹೌದು. ಎಂದೂ ವೆಲ್‌ಫೈಅನ್ನು ಪ್ರಯತ್ನಿಸಿಲ್ಲವೇ? ಪ್ರಯತ್ನಿಸಿ ನೋಡಿ.
ಇಂಪ್ರೆಸಿವ್ ವೆಲ್‌ಫೈಗಾಗಿ...
ಸರಳವಾಗಿ ಕಡಿಮೆ ಸಮಯದಿಂದ ಕೂಡಿರಲಿ. ಎರಡು ನಿಮಿಷಕ್ಕಿಂತ ಹೆಚ್ಚು ಬೇಡ.
ವಿಡಿಯೋ ಆಕರ್ಷಕವಾಗಿರಲಿ. ಆದರೆ ಝೇಂಕಾರ ಬೇಡ.
ಹಾಸ್ಯ ಪ್ರಜ್ಞೆ ಇದೆಯೇ? ಹಾಗಿದ್ದಲ್ಲಿ ಬಳಸಿ. ಯಾರೂ ಬೋರಾಗುವ ವಿಡಿಯೋ ನೋಡಲು ಬಯಸುವುದಿಲ್ಲ.
ಪ್ರಮುಖ ಅಂಶಗಳನ್ನು ವಿಭಾಗ ಮಾಡಿ ತೋರಿಸಿ.
ಒಳ್ಳೆಯ ಕಥೆ ಇದೆಯಾ? ಬಳಸಿ. ಮರೆಯ ಬೇಡಿ ಇದು ನಿಮ್ಮ ಜೀವನದ ಕಥೆ!
ವಿಡಿಯೋ ನಿಮ್ಮ ವೃತ್ತಿಪರ ಜೀವನದ ಟ್ರೈಲರ್‌ನಂತೆ ಇರಲಿ.
ಇಂದು ವಿಡಿಯೋ ಸಿ.ವಿ ತಯಾರಿಸಲು ಸಾಕಷ್ಟು ಅಪ್ಲಿಕೇಶನ್‌ಗಳು ಲಭ್ಯ. ಆ್ಯಂಡ್ರಾಯ್ಡ್, ಐಟ್ಯೂನ್ಸ್‌ಗಳಲ್ಲಿ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ವೆಬ್‌ಗಳಲ್ಲೂ ಡೌನ್‌ಲೋಡ್ ಮಾಡಬಹುದು.
ನೀವು ಮಾಡಿದ ವಿಡಿಯೋ ಸಿವಿಯನ್ನು ಯುಟ್ಯೂಬ್‌ನಲ್ಲಿ, ಸಾಮಾಜಿಕ ತಾಣಗಳಲ್ಲಿ ಅಪ್‌ಲೋಡ್ ಮಾಡಬಹುದು. ಇದರಿಂದ ಒಳ್ಳೆಯ ಅವಕಾಶಗಳೂ ಹುಡುಕಿ ಬರುವ ಸಾಧ್ಯತೆಗಳು ಸಾಕಷ್ಟಿವೆ. ಉತ್ತಮ ವಿಡಿಯೋ ಸಿ.ವಿಯನ್ನು ಯೂ ಟ್ಯೂಬ್‌ಗೆ ಅಪ್‌ಲೋಡ್ ಮಾಡಿದಂತೆಲ್ಲಾ ಗೂಗಲ್‌ನವರು ಸೇರಿದಂತೆ ಅನೇಕ ಸಂಸ್ಥೆಗಳು ಗಾಳ ಹಾಕುತ್ತಾ ಇರುತ್ತಾರೆ. ಚಿನ್ನದ ಮೀನಿಗಾಗಿ! ಆ ಚಿನ್ನದ ಮೀನು ನೀವೆ ಯಾಕೆ ಆಗಿರಬಾರದು?
-ಮಂಜುನಾಥ್ ಎಲ್. ಕೆ.