lol...omg!
ಮೂರು ಹೊತ್ತೂ ಮೊಬೈಲ್. ಪ್ರಪಂಚದ ಪರಿವೆಯೇ ಇಲ್ಲ. ಕ್ಲಾಸ್‌ಗಳ ಗೊಡವೆಯಿಲ್ಲ. ಯಾವಾಗಲೂ ಕಾಲ್...
ಮೂರು ಹೊತ್ತೂ ಮೊಬೈಲ್. ಪ್ರಪಂಚದ ಪರಿವೆಯೇ ಇಲ್ಲ. ಕ್ಲಾಸ್‌ಗಳ ಗೊಡವೆಯಿಲ್ಲ. ಯಾವಾಗಲೂ ಕಾಲ್, ಮೆಸೇಜು, ಟೆಕ್ಸ್‌ಟಿಂಗು. ಇವರು ಬಳಸುವ ಭಾಷೆಯೋ, ಅದರ ಅರ್ಥವೋ, ದೇವರಿಗೇ ಪ್ರೀತಿ.
ಹಿರಿಯರು ಹೀಗೆ ಗೊಣಗಿಕೊಳ್ಳುತ್ತಾರೆ. ನಿಜ, ಅವರಿಗೆ ಅರ್ಥವಾಗದ ಯುವಜನರ ವೇಗದ ಲೈಫು, ಅವರ ಮಾತುಕತೆಯ ರೀತಿ, ಬಿಡಿಸಿ ಓದಿದರೂ ಅರ್ಥವಾಗದ ಮೆಸೇಜುಗಳ ಭಾಷೆ... ಇದನ್ನೆಲ್ಲ ಅವರು ಹೀಗೆಯೇ ತೀರ್ಮಾನಿಸಿಬಿಡುವುದು. ಈ ಮಕ್ಕಳು ಬಳಸುವ ಭಾಷೆಗೆ ಶಾಸ್ತ್ರೀಯ ಚೌಕಟ್ಟು, ವ್ಯಾಕರಣದ ನಿಯಮಾವಳಿ, ಕಾಗುಣಿತದ ಶಿಸ್ತು ಏನೂ ಇಲ್ಲ. ಮಕ್ಕಳ ಭಾಷಾ ಜ್ಞಾನಕ್ಕೆ ಇದರಿಂದ ಗಂಭೀರ ಪೆಟ್ಟು ಬೀಳುತ್ತೆ ಎಂಬ ಕಂಪ್ಲೇಂಟು. ಇದು ನಿಜಕ್ಕೂ ಚಿಂತೆಯ ವಿಷಯವಾ? ಗಂಭೀರ ಸಮಸ್ಯೆಯಾ?
ಕೊವೆಂಟ್ರಿ ವಿಶ್ವವಿದ್ಯಾಲಯ ಮತ್ತು ಟಾಸ್ಮೇನಿಯಾ ವಿಶ್ವವಿದ್ಯಾಲಯಗಳು ಈ ಬಗ್ಗೆ ಅಧ್ಯಯನಕ್ಕೆ ಮುಂದಾದವು. ಬಂದ ಫಲಿತಾಂಶ ಆಶ್ಚರ್ಯ ತರಿಸುವಂತಿದೆ. ಮಕ್ಕಳು ಮೊಬೈಲ್‌ನಲ್ಲಿ ಶಾಸ್ತ್ರೀಯವಲ್ಲದ ಭಾಷೆ ಬಳಸುವುದರಿಂದ, ವ್ಯಾಕರಣದ ನಿಯಮಗಳನ್ನು ಲೆಕ್ಕಿಸದಿರುವುದರಿಂದ ಹಾನಿಯೇನೂ ಇಲ್ಲ. ಬದಲಿಗೆ ಇದರಿಂದ ಲಾಭವೇ ಹೆಚ್ಚು ಎಂಬುದನ್ನು ಅಧ್ಯಯನ ಸಾರಿ ಹೇಳಿದೆ.
ಮಕ್ಕಳ ಈ ಅಭ್ಯಾಸ ಕಾಗುಣಿತ ಮತ್ತು ಸ್ವರ ವಿರಾಮಕ್ಕೆ ಮರಣಶಾಸನವಿದ್ದಂತೆ ಎಂದು ಕೂಗಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಮಕ್ಕಳು ಕಳುಹಿಸುವ ಸಂದೇಶಗಳಲ್ಲಿನ (ಟೆಕ್ಸ್ಟ್ ಮೆಸೇಜ್) ಆಡುಭಾಷೆ ಅವರ ವ್ಯಾಕರಣ ಮತ್ತು ಕಾಗುಣಿತದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಬದಲಿಗೆ ಈ ಬಗೆಯ ಕಿರುಸಂದೇಶಗಳನ್ನು ಕಳುಹಿಸುವ ಮೂಲಕ ಮಕ್ಕಳ ಇಂಗ್ಲಿಷ್ ಉತ್ತಮಗೊಳ್ಳುತ್ತದೆ ಎಂದು ಅಧ್ಯಯನಕಾರರು ಹೇಳಿದ್ದಾರೆ.
ಮಕ್ಕಳು ಪರಸ್ಪರ ಸಾಮಾಜಿಕ ಮಾಧ್ಯಮ ಮತ್ತು ಮೊಬೈಲ್ ಮೂಲಕ ಸಂದೇಶ ರವಾನೆಯಲ್ಲಿ ತೊಡಗಿರುವುದು, ಶಿಕ್ಷಕರಿಗೆ ಎದುರಾಗಿರುವ ದೊಡ್ಡ ಸವಾಲುಗಳ ಪೈಕಿ ಒಂದು ಎಂಬುದು ದೊಡ್ಡ ಪ್ರಾಧ್ಯಾಪಕರ ತಕರಾರಾಗಿತ್ತು. ಈ ಹಿನ್ನೆಲೆಯಲ್ಲಿ ತಜ್ಞರು ಅಧ್ಯಯನಕ್ಕೆ ಕೈಹಾಕಿದ್ದರು. ಪ್ರಾಥಮಿಕ, ಪ್ರೌಢ ಮತ್ತು ಕಾಲೇಜು ಮಟ್ಟದ 234 ವಿದ್ಯಾರ್ಥಿಗಳನ್ನು ಅಧ್ಯಯನಕ್ಕೆ ಆರಿಸಿಕೊಳ್ಳಲಾಯಿತು. ಎರಡು ದಿನಗಳ ಕಾಲ ಇವರು ಕಳುಹಿಸಿದ ಸಂದೇಶಗಳ ವಿಶ್ಲೇಷಣೆ ನಡೆಸಲಾಯಿತು. ನಂತರ ಐದು ಬಗೆಯ ಔಪಚಾರಿಕ ಪರೀಕ್ಷೆಗಳ ಮೂಲಕ ಈ ವಿದ್ಯಾರ್ಥಿಗಳ ಗ್ರಹಣ ಸಾಮರ್ಥ್ಯ, ವ್ಯಾಕರಣ ಮತ್ತು ಕಾಗುಣಿತದ ಸಾಮರ್ಥ್ಯವನ್ನು ಅಳೆದರು.
ಒಂದು ವರ್ಷದ ನಂತರ ಈ ಪ್ರಕ್ರಿಯೆಯನ್ನು ಪುನರಾವರ್ತಿಸಲಾಯಿತು. ಈ ಬಾರಿ, ಸಂದೇಶ ಕಳುಹಿಸುವ ಪ್ರಕ್ರಿಯೆಯಿಂದ ಕಾಲ ಕಳೆದಂತೆ ಭಾಷೆ ಕಲಿಯುವಿಕೆಯ ಅವರ ನೈಪುಣ್ಯಕ್ಕೆ ಅಡಚಣೆ ಒಡ್ಡಿದೆಯೇ ಎಂಬುದನ್ನು ಪರೀಕ್ಷಿಸಲಾಯಿತು.
ಪ್ರಾಥಮಿಕ ಶಾಲಾ ಮಕ್ಕಳು ಆರಂಭದಲ್ಲಿ ವ್ಯಾಕರಣ ದೋಷದಿಂದ ಕೂಡಿದ 'ದೆ ಈಸ್' ಎಂದು ಬಳಸುತ್ತಿದ್ದವರು, ಕ್ರಮೇಣ ಈ ಅವಧಿಯಲ್ಲಿ ಕಾಗುಣಿತಕ್ಕೆ ಸಂಬಂಧಿಸಿ ಸಕಾರಾತ್ಮಕವಾಗಿ ಬದಲಾಗಿದ್ದರು. ಅಂತೆಯೇ ವ್ಯಾಕರಣ ದೋಷದ ವಾಕ್ಯ ಬಳಸುತ್ತಿದ್ದ ಮತ್ತು ವಿರಾಮ ಚಿಹ್ನೆ ಇತ್ಯಾದಿಗಳನ್ನು ಬಿಡುತ್ತಿದ್ದ ಪ್ರೌಢಶಾಲಾ ಮಕ್ಕಳು ಈ ಅವಧಿಯಲ್ಲಿ ಸುಧಾರಿಸಿಕೊಂಡಿದ್ದರು.
ಸಂದೇಶ ಬಳಸುವ ಆಡುಭಾಷೆ, ಮೊಟಕು ಅಥವಾ ಚುಟುಕು ಸಂದೇಶಗಳು ಧ್ವನಿವಿಜ್ಞಾನವನ್ನು ಆಧರಿಸಿವೆ. ಹಾಗಾಗಿ ಸಂದೇಶಗಳಲ್ಲಿನ ಆಡುಭಾಷೆ ಮತ್ತು ಕಾಗುಣಿತಕ್ಕೆ ಸಂಬಂಧಿಸಿ ಮಕ್ಕಳು ಸಕಾರಾತ್ಮಕ ದಿಸೆಯಲ್ಲಿ ಸಾಗುತ್ತಿರುವುದಾಗಿ ತೀರ್ಮಾನಿಸಲಾಯಿತು ಎಂದು ಕೊವೆಂಟ್ರಿ ವಿವಿಯ, ಶಿಕ್ಷಣದಲ್ಲಿ ಮನಃಶಾಸ್ತ್ರ ವಿಭಾಗದ ಪ್ರೊಫೆಸರ್ ಕ್ಲೇರ್‌ವುಡ್ ಹೇಳುತ್ತಾರೆ.
'ಮಕ್ಕಳು ಭಾಷೆಯ ಈ ಕ್ರಿಯಾತ್ಮಕ ಪ್ರತಿನಿಧಿಗಳ ಜತೆ ಆಡುವಾಗ ಅವರ ಪದ-ಶಬ್ದ ಸಂಬಂಧಗಳನ್ನು ಪುನರಾವರ್ತಿಸುತ್ತಿರುತ್ತಾರೆ. ಇದು ಪ್ರಾಥಮಿಕ ಶಾಲಾ ಸ್ತರದಲ್ಲಿ ನಾವು ಕಲಿಸಿಕೊಡುವ ಕೌಶಲವೂ ಹೌದು' ಎಂದು ಅವರು ವಿವರಿಸುತ್ತಾರೆ. ಹೀಗಾಗಿ ಸಂದೇಶ ರವಾನೆಯು, ಮಕ್ಕಳಿಗೆ ಪರಸ್ಪರ ಶಬ್ದ ಮತ್ತು ಪದಗಳ ನಡುವಿನ ಸಂಬಂಧವನ್ನು ಅರ್ಥ ಮಾಡಿಕೊಳ್ಳುವ ಅವಕಾಶವನ್ನು ಒದಗಿಸುತ್ತದೆ ಎಂದು ಪ್ರೊ. ವುಡ್ ಹೇಳುತ್ತಾರೆ.
ಈ ಟೆಕ್ಸ್‌ಟಿಂಗ್ ಪ್ರಕ್ರಿಯೆ ಕಾರಣ ಈ ಕಾಲದ ಮಕ್ಕಳು ಕಾಗುಣಿತ ಮತ್ತು ವ್ಯಾಕರಣದ ಸೂಕ್ತ ಗ್ರಹಿಕೆಯಿಲ್ಲದೆಯೇ ಓದು ಮುಗಿಸುತ್ತಾರೆ ಎಂಬ ವಾದಕ್ಕೆ ಈ ಅಧ್ಯಯನ ಸವಾಲು ಹಾಕಿದಂತಾಗಿದೆ.
ಮಕ್ಕಳು ಓದುವ ಬದಲಿಗೆ, ತಮ್ಮ ಬಿಡುವಿನ ವೇಳೆಯ ಬಹಳ ಸಮಯವನ್ನು ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಕಳೆಯುತ್ತಾರೆ. ಹಾಗಾಗಿ ಇವರ ಪದಸಂಪತ್ತು ಸೀಮಿತಗೊಳ್ಳುವ ಅಪಾಯವಿದೆ ಎಂದು ಆಕ್ಸ್ ಫರ್ಡ್‌ನ ಪ್ರಮುಖ ಬಾಲಕಿಯರ ಶಾಲೆಯ ಮುಖ್ಯ ಶಿಕ್ಷಕಿ ಕ್ಯಾರೊಲಿನ್ ಜೋರ್ಡಾನ್ ಎಚ್ಚರಿಸಿದ್ದರು. ನಮ್ಮ ಇಂಗ್ಲಿಷ್ ನೈಪುಣ್ಯ ಎಂಬುದು, ಕೆಲಸ ಪಡೆಯುವ ಯತ್ನದಲ್ಲಿ ಕಾಗುಣಿತ ದೋಷದ ಅವರ ಅರ್ಜಿಗಳು ಕಸದ ಬುಟ್ಟಿ ಸೇರುವ ಮೂಲಕ ಸತತವಾಗಿ ಬಟಾಬಯಲಾಗುತ್ತಿದೆ ಎಂದು ಅವರು ಹೇಳಿದ್ದರು.
ತಾಂತ್ರಿಕತೆಯ ಮೇಲೆ ಅವಲಂಬನೆ ಸತತವಾಗಿ ಮುಂದುವರಿದಿದ್ದು, ನಾವು ಕಠಿಣ ಪರಿಶ್ರಮದಿಂದ ಕಲಿತ ಕಾಗುಣಿತ ಮತ್ತು ವ್ಯಾಕರಣದ ಮೂಲ ಸಿದ್ಧಾಂತಗಳು ಮೂಲೆಗುಂಪಾಗುತ್ತಿವೆ ಎಂಬುದು ಅನೇಕ ಭಾಷಾವಿಜ್ಞಾನಿಗಳ ಅಭಿಪ್ರಾಯವೂ ಆಗಿದೆ. ಇದಕ್ಕೆ ಆಧಾರವಿಲ್ಲ ಎಂಬುದು ಸಮೀಕ್ಷೆಯಿಂದ ರುಜುವಾದಂತಾಗಿದೆ.
ಮಕ್ಕಳ ಲ್ಯಾಂಗ್ವೇಜ್ ಹೀಗಲ್ವೇ?
lol - ಲಾಫ್ ಔಟ್ ಲೌಡ್
omg - ಓ ಮೈ ಗಾಡ್
rofl - ರೋಲಿಂಗ್ ಆನ್ ದಿ ಫ್ಲೋರ್ ಲಾಫಿಂಗ್
yolo - ಯೂ ಓನ್ಲಿ ಲಿವ್ ಟ್ವೈಸ್
smh - ಶೇಕ್ ಮೈ ಹ್ಯಾಂಡ್
ikr - ಐ ನೋ, ರೈಟ್
f2f - ಫೇಸ್ ಟು ಫೇಸ್
w8 - ವೇಟ್
2nt - ಟುನೈಟ್
gr8 - ಗ್ರೇಟ್
b4 - ಬಿಫೋರ್
2moro - ಟುಮಾರೊ
kwl - ಕೂಲ್
m8 - ಮೇಟ್
bcuz, bcos- ಬಿಕಾಝ್
- ಪ್ರೇಮರಾಜ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.