ಬಿಗ್ ಬಾಸ್ ದನಿ ಯಾರ್ದು ಗೊತ್ತಾ?
ಬಿಗ್ಬಾಸ್: ಎಲ್ಲ ಸದಸ್ಯರು ಲಿವಿಂಗ್ ಏರಿಯಾಗೆ ಬರಬೇಕಾಗಿ ಬಿಗ್ಬಾಸ್ ಸೂಚಿಸುತ್ತಿದ್ದಾರೆ. ಸ್ವರ್ಧಿಗಳು: ಯೆಸ್ ಬಾಸ್ ಬಂದಿದ್ದೇವೆ....
ಬೈಟು ಕಾಫಿ Exclusive
ಬಿಗ್ಬಾಸ್: ಎಲ್ಲ ಸದಸ್ಯರು ಲಿವಿಂಗ್ ಏರಿಯಾಗೆ ಬರಬೇಕಾಗಿ ಬಿಗ್ಬಾಸ್ ಸೂಚಿಸುತ್ತಿದ್ದಾರೆ.
ಸ್ವರ್ಧಿಗಳು: ಯೆಸ್ ಬಾಸ್ ಬಂದಿದ್ದೇವೆ. ಹೇಳಿ ಬಾಸ್...
ಬಿಗ್ಬಾಸ್: ಅನುಶ್ರೀ ನೀವೀಗ ರಹಸ್ಯ ಕೊಠಡಿಗೆ ಹೋಗಿ ಅಲ್ಲಿರುವ ಸೂಚನಾ ಪತ್ರ ತೆಗೆದುಕೊಂಡು ಬಂದು ಮನೆಯ ಎಲ್ಲ ಸದಸ್ಯರಿಗೂ ಓದಿ ಹೇಳಬೇಕು.
ಅನುಶ್ರೀ: ಯೆಸ್ ಬಾಸ್
ಬಿಗ್ಬಾಸ್: ಅರುಣ್ ಸಾಗರ್ ನೀವು ನಾಳೆ ನಡೆಯುವ ಟಾಸ್ಕ್ಗಳ ಜವಾಬ್ದಾರಿ ವಹಿಸಿಕೊಳ್ಳಬೇಕು. ಹಾಗೆ ಇಡೀ ದಿನ ಎಲ್ಲ ಸದಸ್ಯರನ್ನು ನೀವೇ ನಿರ್ವಹಿಸಬೇಕು. ಎಲ್ಲರೂ ಟಾಸ್ಕ್ಗಳಲ್ಲಿ ಭಾಗವಹಿಸುವಂತೆ ಮಾಡಬೇಕೆಂದು ಬಿಗ್ಬಾಸ್ ಅಪೇಕ್ಷಿಸುತ್ತಾರೆ.
ಅರುಣ್ ಸಾಗರ್: ಯೆಸ್ ಬಾಸ್.
ಇಂಥ ಸಂಭಾಷಣೆಗಳನ್ನು ನೀವು 'ಬಿಗ್ಬಾಸ್' ರಿಯಾಲಿಟಿ ಶೋನಲ್ಲಿ ಪದೇಪದೆ ಕೇಳಿರುತ್ತೀರಿ. ಆದರೆ, ಹಾಗೆ ಹೇಳುವ ವ್ಯಕ್ತಿ ಮಾತ್ರ ನಿಮಗೆ ಯಾವ ಕಾರಣಕ್ಕೂ ಕಾಣಿಸುವುದಿಲ್ಲ. ಶೋ ನೋಡುವ ಪ್ರತಿಯೊಬ್ಪರಿಗೆ ಆತನ ಧ್ವನಿ ಮಾತ್ರ ನಿಮಗೆ ಚಿರಪರಿಚಿತ. ರಿಯಾಲಿಟಿ ಶೋನಷ್ಟೇ ಈ ಧ್ವನಿಯೂ ಬಿಗ್ಬಾಸ್ ಮನೆಯಲ್ಲಿ ಫೇಮಸ್ಸು. ಹಾಗಾದರೆ ಆ ಧ್ವನಿಯ ಯಾರ ಕೊರಳಿನಿಂದ ಬಂತು? ಕೆಲವರು ನಟ ಸುದೀಪ್ ಅವರೇ ಹಾಗೆ ಕರೆಯುತ್ತಿದ್ದಾರೆ ಅಂದುಕೊಂಡರು. ಇನ್ನು ಕೆಲವರು ವಿನಾಯಕ ಜೋಷಿ ಅಂತಂದುಕೊಂಡರು. ಅಲ್ಲದೆ, 'ಹೌದು, ಸ್ವಾಮಿ' ಎನ್ನುತ್ತಿದ್ದ ಗಾಯಕ ವಿಜಯ್ ಪ್ರಕಾಶ್ ಅವರದ್ದೇ ಈ ಧ್ವನಿ ಎಂದು ಮತ್ತೆ ಕೆಲವರು ಭಾವಿಸಿದರು. ಆದರೆ, 'ಹೌದು, ಸ್ವಾಮಿ' ಎನ್ನುವ ಸಂಭಾಷಣೆಯ ಹೊರತಾಗಿ ಇಡೀ ಶೋನ ಹಿನ್ನೆಲೆ ಧ್ವನಿಯಾಗಿದ್ದವರು ಮಾತ್ರ ಇವರ್ಯಾರೂ ಅಲ್ಲ, ಅಮಿತ್ ಭಾರ್ಗವ. ಹೌದು, ಸ್ವಾಮಿ ಇದು ನಮಗೆ ಸಿಕ್ಕಿರುವ ಫಸ್ಟ್ ಮಾಹಿತಿ. ಇಲ್ಲಿಯವರೆಗೂ ರಹಸ್ಯವಾಗಿಯೇ ಇಟ್ಟಿದ್ದ ಈ ಧ್ವನಿಯ ಹಿಂದಿನ ವ್ಯಕ್ತಿಯೇ ಈ ಅಮಿತ್ ಭಾರ್ಗವ. ಇಷ್ಟಕ್ಕೂ ಯಾರು ಈ ಅಮಿತ್? ಅಪ್ಪಟ ಕನ್ನಡದ ನಟ. ಬೆಂಗಳೂರಿನ ಜಯನಗರದಲ್ಲಿ ವಾಸಿಸುತ್ತಿದ್ದಾರೆ. ಈಗಾಗಲೇ ಎರಡ್ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ನಿರ್ದಿಷ್ಟವಾಗಿ ಹೇಳಬೇಕು ಅಂದರೆ, ನೀವು ಹಿಂದಿಯ '2 ಸ್ಟೇಟ್ಸ್' ಸಿನಿಮಾ ನೋಡಿದ್ದೀರಾ...? ಆ ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ನಟಿ ಅಲಿಯಾ ಭಟ್ಳನ್ನು ಮದುವೆಯಾಗುವ ವ್ಯಕ್ತಿಯೇ ಈ ಅಮಿತ್ ಭಾರ್ಗವ. ಕಂಚಿನ ಕಂಠದ ಈ ನವತಾರೆ ಬಿಗ್ಬಾಸ್ ಮನೆಯ ಹಿಂದಿನ ಧ್ವನಿಪೆಟ್ಟಿಗೆ ಎಂಬುದು ನೂರಕ್ಕೆ ನೂರು ಸತ್ಯ. ಅಮಿತ್ ರಂಗಭೂಮಿ ಹಿನ್ನೆಲೆಯ ಪ್ರತಿಭಾವಂತ ನಟ. ಈ ಹಿಂದೆ ಕನ್ನಡದ 'ರಾಮಾಯಣ' ಧಾರಾವಾಹಿಯಲ್ಲಿ ರಾಮನ ಪಾತ್ರವನ್ನು ನಿರ್ವಹಿಸಿದವರು. ಇದಾದ ನಂತರ ಬೆಳ್ಳಿತೆರೆಗೂ ಬಂದ ಅಮಿತ್ಗೆ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿದ್ದು ಅಭಿಷೇಕ್ ವರ್ಮನ್ ನಿರ್ದೇಶನದ '2 ಸ್ಟೇಟ್ಸ್' ಚಿತ್ರ. ನಟನೆಯ ಕನಸು ಕಟ್ಟಿಕೊಂಡು ಚೆನ್ನೈಗೆ ಹೋದ ಅಮಿತ್, ತಮ್ಮ ಫೋಟೋಗಳನ್ನು ವೆಬ್ಸೈಟ್ ಸೇರಿದಂತೆ ಸೋಷಿಯಲ್ ನೆಟ್ವರ್ಕ್ಗಳಲ್ಲಿ ಹಾಕಿದ ಮೇಲೆ ನಟನೆಯ ಅವಕಾಶಗಳು ಬರತೊಡಗಿದವು. ಹಾಗೆ ಬಂದದ್ದು, '2 ಸ್ಟೇಟ್ಸ್' ಚಿತ್ರ.
ಇದೇ ತಿಂಗಳು 29ರಿಂದ ಬಿಗ್ಬಾಸ್ ರಿಯಾಲಿಟಿ ಶೋ ಆರಂಭವಾಗಲಿದ್ದು, ಇಲ್ಲೂ ಅಮಿತ್ ಭಾರ್ಗವ ಧ್ವನಿ ಕಮಾಲ್ ಮಾಡುತ್ತದೆಯೇ? ಗೊತ್ತಿಲ್ಲ. ಆದರೆ, ಎಲ್ಲವನ್ನೂ ರಹಸ್ಯವಾಗಿಯೇ ಇಟ್ಟಿರುವ ಕಾರಣ ಅಮಿತ್ ಭಾರ್ಗವ ಸೇರಿದಂತೆ ಇಡೀ ಬಿಗ್ಬಾಸ್ ತಂಡ ಇದರ ಬಗ್ಗೆ ಮಾಹಿತಿ ಕೊಡುತ್ತಿಲ್ಲ. ಆದರೂ ಅಮಿತ್ ಭಾರ್ಗವ ಅವರದ್ದೇ ಹಿನ್ನೆಲೆ ಧ್ವನಿ ಎಂಬುದು ಪತ್ರಿಕೆಗೆ ಮಾಹಿತಿ ಸಿಕ್ಕಿದೆ.
-ಆರ್. ಕೇಶವಮೂರ್ತಿ