ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಕೆಫೀನ್ ತೊಂದರೆ ಕೊಡುತ್ತಾ?

ಒತ್ತಡದಲ್ಲಿದ್ದಾಗ ಜಾಸ್ತಿ ಕಾಫಿ ಕುಡಿಯಬಾರದು ಎಂದು ಹೇಳಿದ್ದೆ. ಅದಕ್ಕೆ ಪೂರಕವಾಗಿ ಒಂದು ಉದಾಹರಣೆ...

Rashmi Kasaragodu
Updated On : 29 Jun 2014, 3:50 am

ಒತ್ತಡದಲ್ಲಿದ್ದಾಗ ಜಾಸ್ತಿ ಕಾಫಿ ಕುಡಿಯಬಾರದು ಎಂದು ಹೇಳಿದ್ದೆ. ಅದಕ್ಕೆ ಪೂರಕವಾಗಿ ಒಂದು ಉದಾಹರಣೆ ನೀಡುತ್ತೇನೆ. 37 ವರ್ಷ ಪ್ರಾಯದ ಅಮೆರಿಕದಸೇನಾಧಿಕಾರಿಯೊಬ್ಬರು ತೀವ್ರ ಒತ್ತಡ, ಖಿನ್ನತೆಯಿಂದ ಬಳಲುತ್ತಿದ್ದರು.ಉದ್ಯೋಗದ ಬಗ್ಗೆಯೂ ಇದ್ದಕ್ಕಿದ್ದಂತೆ ಅತೃಪ್ತಿ ಶುರುವಾಗಿತ್ತು. ನಿತ್ಯತಲೆನೋವು, ಹೊಟ್ಟೆ ನೋವು ಸಾಮಾನ್ಯವಾಗಿಬಿಟ್ಟಿತ್ತು. ಒಂದಲ್ಲ, ಎರಡಲ್ಲ...ಮೂರು ಸಲ ವಿವರವಾದ ಆರೋಗ್ಯ ತಪಾಸಣೆಗೆ ಒಳಗಾದರು. ಸ್ಕ್ಯಾನಿಂಗ್ಸೇರಿದಂತೆ ಲಭ್ಯ ಎಲ್ಲ ಆಧುನಿಕ ಪರೀಕ್ಷೆಗಳನ್ನೂ ನಡೆಸಲಾಯಿತು. ಎಲ್ಲವೂ ನಾರ್ಮಲ್. ಖಿನ್ನತೆಗೆ ಸಂಬಂಧಿಸಿದ ಕೆಲವು ಮಾತ್ರೆಗಳನ್ನೂ ಕೊಟ್ಟು ನೋಡಲಾಯಿತು. ಪ್ರಯೋಜನ ಆಗಲಿಲ್ಲ. ಕೊನೆಗೂ ಒಬ್ಬ ವೈದ್ಯರಿಗೆ ಹೊಳೆಯಿತು, 'ನೀವು ನಿತ್ಯ ಎಷ್ಟು ಕಪ್ ಕಾಫಿ ಕುಡಿಯುತ್ತೀರಾ?' ಎಂದು ಕೇಳಿಯೇ ಬಿಟ್ಟರು. ಆ ಸೇನಾಧಿಕಾರಿಗೆ ದಿನವೂ ಕನಿಷ್ಟ 20 ಕಪ್ ಕಾಫಿ ಕುಡಿಯುವ ಅಭ್ಯಾಸವಿತ್ತು. ಹಂತಹಂತವಾಗಿ ಕಾಫಿ ಸೇವನೆ ಕಡಿಮೆ ಮಾಡಲು ಸೂಚಿಸಲಾಯಿತು. ಶುರುವಿನಲ್ಲಿ ವಿಲವಿಲ ಒದ್ದಾಡಿಬಿಟ್ಟರು. ಎರಡು ತಿಂಗಳ ನಂತರ ಒಂದೊಂದೇ ಸಮಸ್ಯೆಗಳು ಮಾಯವಾಗಲಾರಂಭಿಸಿದವು. ಕೆಫೀನ್ ಇಷ್ಟೆಲ್ಲ ಸಮಸ್ಯೆ ಸೃಷ್ಟಿಸಿತ್ತು.
ಕೆಲವರ ಮೆದುಳು ಮತ್ತು ಅದಕ್ಕೆ ಸಂಬಂಧಿಸಿದ ನರವ್ಯೂಹ ಅತ್ಯಂತ ಸೂಕ್ಷ್ಮವಾಗಿರುತ್ತವೆ. ಕೆಫೀನ್ನಂತಹ ಪದಾರ್ಥಗಳಿಗೆ ಬಹುಬೇಗ ದಾಸರಾಗುವಂತೆ ಪ್ರೇರೇಪಿಸುತ್ತವೆ. ಹೀಗಾಗಿ ಕಾಫಿ ಕುಡಿದು ಅರ್ಧ ಗಂಟೆಗೆ ಪುನಃ ಕುಡಿಯೋಣ ಅನ್ನಿಸುತ್ತದೆ. ಒಮ್ಮೆ ಮನಸ್ಸಿನಲ್ಲಿ, 'ಈಗ ಕಾಫಿ ಕುಡಿಯಬೇಕು' ಅಂತ ಅನ್ನಿಸಿಬಿಟ್ಟರೆ ಕಾಫಿ ಕುಡಿಯುವವರೆಗೂ ಸಮಾಧಾನವೇ ಆಗುವುದಿಲ್ಲ. ಒಮ್ಮೊಮ್ಮೆ ತಲೆಯೇ ಓಡದಿರಬಹುದು. ಹೀಗಾಗಿ ಕೆಫೀನ್ಗೆ ದಾಸರಾಗದೇ ಇರುವಂತೆ ಎಚ್ಚರವಹಿಸುವುದು ಅಗತ್ಯ. ಅದು ನಮ್ಮ ಕೈಯ್ಯಲ್ಲಿಯೇ ಇದೆ ಎನ್ನುವುದು ನೆನಪಿನಲ್ಲಿರಲಿ. ರಿಫ್ರೆಶ್ ಆಗಲು ಅಲ್ಪಪ್ರಮಾಣದ ಚಹಾ, ಕಾಫಿ ಕುಡಿಯುವುದೋ, ಚಾಕೊಲೆಟ್ ಟೀಯ ಸೇವಿಸುವದೋ ಪರವಾಗಿಲ್ಲ. ಆದರೆ ಅದು ಮಿತಿ ಮೀರಬಾರದು ಅಷ್ಟೆ. ಒತ್ತಡ, ಖಿನ್ನತೆಗಳಿಗೆ ಜಾಗತಿಕವಾಗಿ ಗುರುತಿಸಿರುವ ಕಾರಣಗಳಲ್ಲಿ ಕೆಫೀನ್ ಸಹ ಒಂದು ಎಂಬ ಸಂಗತಿಯನ್ನು ಮರೆಯಬೇಡಿ.
ಕೆಲವರಿಗೆ ವಾರದಲ್ಲಿ ಒಂದೆರಡು ಸಲ ತೀವ್ರ ತಲೆನೋವು ಕಾಡುತ್ತದೆ. ಮಾನಸಿಕವಾಗಿ ಯಾವುದೇ ಟೆನ್ಶನ್, ಕೆಲಸದ ಒತ್ತಡ ಏನೂ ಇರುವುದಿಲ್ಲ. ಆದರೂ ತಲೆನೋವಿನ ಬಾಧೆ ತಪ್ಪುವುದಿಲ್ಲ. ಇದಕ್ಕೂ ಕೆಫೀನ್ ಕಾರಣ ಆಗಿರಬಹುದು. ಚಹಾದಿಂದ ಪಿತ್ತ ಆಗುತ್ತದೆ, ಅದರಿಂದ ತಲೆನೋವು ಬರುತ್ತದೆ ಎನ್ನುವುದು ಒಂದು ಕಾರಣ. ಆದರೆ ಅದರಲ್ಲಿನ ಕೆಫೀನ್ ಕೂಡ ತೀವ್ರ ಸ್ವರೂಪದ ತಲೆನೋವು ತರಬಲ್ಲದು.

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement