ಕಷ್ಟಪಡದೆ ಸುಖವಿಲ್ಲ
ನಾಯಕ ಎಷ್ಟು ಪ್ರಯತ್ನಪಟ್ಟರೂ ನಾಯಕಿಯ ಸಂಗ ದೊರೆಯುತ್ತಿಲ್ಲ. ಆಕೆ ಈತನನ್ನು ಕಣ್ಣೆತ್ತಿಯೂ ನೋಡುತ್ತಿಲ್ಲ. ಆತ ಈಕೆಗಾಗಿ ದಾರಿಯಲ್ಲಿ ಕಾಯ್ದು ನಿಂತರೆ, ಈತನನ್ನು ಗಣಿಸದೇ, ಸೊಂಟದ ಮೇಲೆ ತುಂಬಿದ ಕೊಡಪಾನವನ್ನಿಟ್ಟುಕೊಂಡು ನೀರು ತುಳುಕಾಡಿಸುತ್ತ ಹಾಗೇ ಹಾದುಹೋಗುತ್ತಾಳೆ ಈಕೆ. ಇದನ್ನು ನೋಡಿ ನಲ್ಲನಿಗೆ ಉರಿದುಕೊಂಡಿದೆ. ಕೊಡವನ್ನುದ್ದೇಶಿಸಿ ಹೇಗೆ ಹೇಳುತ್ತಾನೆ:
ಶ್ಲಾಘ್ಯಂ ನೀರಸಕಾಷ್ಠತಾಡನಶತಂ ಶ್ಲಾಘ್ಯಃ ಪ್ರಚಂಡಾತಪಃ
ಕ್ಲೇಶಂ ಶ್ಲಾಘ್ಯತರಃ ಸುಪಂಕನಿಚಯಃ ಶ್ಲಾಘ್ಯೋತಿದಾಹೋನಲಃ
ಯತ್ಕಾಂತಕುಚಪಾರ್ಶ್ವ ಬಾಹುಲತಿಕಾಹಿಂದೋಲಲೀಲಾಸುಖಂ
ಲಬ್ಧಂ ಕುಂಭವರ ತ್ವಯಾ ನ ಹಿ ಸುಖಂ ದುಃಖೈರ್ವಿನಾ ಲಭ್ಯತೇ
ಅಯ್ಯಾ ಕೊಡಪಾನವೇ! ನೀನು ಮಣ್ಣಿನ ರೂಪದಲ್ಲಿದ್ದು ಒಣಕಟ್ಟಿಗೆಯಿಂದ ನೂರಾರು ಬಾರಿ ಹೊಡೆಸಿಕೊಂಡುದು ಸಾರ್ಥಕವಾಯ್ತು. ಬೆನ್ನೊಡೆಯುವಂತಹ ಸೂರ್ಯನ ಕೆಂಡ ಬಿಸಿಲಿನಲ್ಲಿ ದಿನಗಟ್ಟಲೆ ಒಣಗಿ ಟಣ್ಣೆನ್ನುವಷ್ಟು ಶಠನಾದುದೂ ಶ್ಲಾಘ್ಯವೇ ಆಯ್ತು. ಕುಂಬಾರನು ಬಡಿದು ತಿದ್ದಿ ಹಿಚುಕಿ ಎಳೆದು ವಿನ್ಯಾಸಪಡಿಸಿದ್ದೂ ಸಾರ್ಥಕವೇ. ಬೆಂಕಿಯಲ್ಲಿ ನೀನು ಬೆಂದದ್ದೂ ಒಳ್ಳೆಯದೇ ಆಯ್ತು. ಇಷ್ಟೆಲ್ಲಾ ಕಷ್ಟಪಟ್ಟದ್ದರಿಂದಲೇ, ಸುಂದರಿಯಾದ ಈಕೆಯ ನಳಿದೋಳ್ಗಳ ಅಪ್ಪುಗೆಯಲ್ಲಿ ಕರಗಿ, ಆಕೆಯ ಸೊಂಟದ ಮೇಲೆ ಕುಳಿತು, ಆಕೆಯ ಸ್ತನಮಂಡಲದ ಸೋಕಿನಿಂದ ಧನ್ಯನಾದೆಯಯ್ಯಾ! ಈಗ ಅದೆಷ್ಟು ಸುಖಪಡುತ್ತಿರುವೆ! ಕಷ್ಟಪಡದೆ ಸುಖ ಸಿಗುವುದಿಲ್ಲ ಎಂಬುದು ರುಜುವಾತಾಯಿತು ನೋಡು!
ಸುಮ್ಮನೆ ದೊರೆಯುವುದೇ ತರುಣಿಯ ಸಂಗ? ಬೈಕಿರಬೇಕು, ಪರ್ಸು ತುಂಬಿರಬೇಕು, ಸುತ್ತಾಡಿಸುವ ಕಸುವಿರಬೇಕು, ಹತ್ತಾರು ಗಂಡುಗಳನ್ನು ಗೆದ್ದು ಬರಬೇಕು, ಚೆಲುವಾಗಿರಬೇಕು, ಒಬ್ಬನೇ ಮಗನಾಗಿರಬೇಕು, ಅಪ್ಪ ಹಣವಂತನಾಗಿರಬೇಕು!
- ಹರಿಹರ