ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಚಿಕ್ಕವರಿದ್ದಾಗಲೇ ಕಲಿಸಬೇಕು ಉತ್ತಮ ಡಯಟ್ ವಿಧಾನ

Vishwanath S
Updated On : 2 Mar 2014, 3:22 am

ಕ್ಯಾನ್ಸರ್‌ಗೆ ಆಧುನಿಕ ಚಿಕಿತ್ಸಾ ವಿಧಾನಗಳು, ಪರಿಣಾಮಕಾರಿ ಔಷಧಗಳು ಬಂದಿವೆ ನಿಜ. ಆದರೆ ಉತ್ತಮ ಆಹಾರ ಪದ್ಧತಿಗಿಂತ ಮಿಗಿಲಾದ ಪರಿಹಾರ ಬೇರೆ ಇಲ್ಲ. ಅದನ್ನು ಈಗಿನ ವೈದ್ಯಲೋಕವೂ ಪ್ರಾಂಜಲ ಮನಸ್ಸಿನಿಂದಲೇ ಒಪ್ಪಿಕೊಂಡಿದೆ. ಇಲ್ಲೊಂದು ಎಚ್ಚರಿಕೆಯ ಗಂಟೆ ಇದೆ. ಅದು ಈಗಿನ ಮಕ್ಕಳು ಮತ್ತು ಯುವಪೀಳಿಗೆಗೆ ಸಂಬಂಧಿಸಿದ್ದು. ಆಹಾರದ ವಿಚಾರದಲ್ಲಿ ಈಗಿನ ತಲೆಮಾರು ಬಹಳ ನಿರ್ಲಕ್ಷ್ಯವಹಿಸಿದೆ. ಎಷ್ಟೇ ಒತ್ತಡದ ಜೀವನಶೈಲಿ ಇದ್ದರೂ ಆರೋಗ್ಯಕರ ಡಯಟ್ ಅನ್ನು ಕಡೆಗಣಿಸದಂತೆ ಮಕ್ಕಳ ಮೇಲೆ ಪಾಲಕರು ನಿಗಾ ವಹಿಸಬೇಕಿದೆ. ನಿಜ, ಬಹಳಷ್ಟು ಮಕ್ಕಳು ಪಾಲಕರಿಂದ ದೂರ ಇದ್ದಾರೆ. ಆದರೆ ಫೋನ್ ಮೂಲಕವಾದರೂ ನಿಮ್ಮ ಕಾಳಜಿ ತೋರಿಸಬಹುದು. ಅದು ಸ್ವಲ್ಪಮಟ್ಟಿನ ಪರಿಣಾಮ ಬೀರಿದರೂ ಅದರಿಂದ ಮಕ್ಕಳಿಗೆ ಸಿಗುವ ಆರೋಗ್ಯಲಾಭ ದೊಡ್ಡದೇ ಅಲ್ಲವೆ? ಇನ್ನು ಈಗಿನ ಪುಟಾಣಿಗಳಿಗೆ ಪಿಜ್ಜಾ, ಬರ್ಗರ್‌ಗಳು; ಕೋಲಾದಂಥ ಪಾನೀಯಗಳ ಬಗ್ಗೆಯೇ ಆಸಕ್ತಿ ಹೆಚ್ಚು. ಮನೆಯಲ್ಲಿ ಊಟ ಮಾಡಿಸಲು ಚಿಪ್ಸ್ ಇತ್ಯಾದಿ ಕೊಬ್ಬಿನ ತಿಂಡಿಗಳನ್ನು ನೀಡುವ ಪರಿಪಾಠವನ್ನು ಈ ತಲೆಮಾರಿನ ಬಹುತೇಕ ಪಾಲಕರು ರೂಢಿಸಿಕೊಂಡಿದ್ದಾರೆ. ಖಂಡಿತವಾಗಿಯೂ ಅದು ತಪ್ಪು. ಎಳವೆಯಿಂದಲೇ ಹಣ್ಣು, ತರಕಾರಿಗಳನ್ನು ತಿನ್ನಿಸುವ ರೂಢಿ ಮಾಡದಿದ್ದರೆ, ಪಾಶ್ಚಾತ್ಯ ಶೈಲಿಯ ಡಯಟ್ ಅಭ್ಯಾಸ ತಪ್ಪಿಸದೇ ಇದ್ದರೆ ಮುಂದೆ ತೊಂದರೆಯಾಗುವುದು ನಿಶ್ಚಿತ. ಕ್ಯಾನ್ಸರ್ ಅಂತಲೇ ಅಲ್ಲ, ಬೇರಾವುದೇ ಗಂಭೀರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ನಂತರ ಏಕಾಏಕಿ ಡಯಟ್ ಬದಲಿಸಲು ಸಾಧ್ಯವಿಲ್ಲ ಅಲ್ಲವೆ?
ಕ್ಯಾನ್ಸರ್‌ನಿಂದ ದೂರ ಇರಬೇಕು ಅಂತಾದರೆ ಹಣ್ಣು, ತರಕಾರಿ, ಸೊಪ್ಪು, ಗಡ್ಡೆಗೆಣಸುಗಳನ್ನು ಅಧಿಕವಾಗಿ ಸೇವಿಸಬೇಕು. ಅದರಲ್ಲೂ ಹಸಿರು ಸೊಪ್ಪು, ತರಕಾರಿಗಳಿಗೆ ಆದ್ಯತೆ ಇರಲಿ. ನಿತ್ಯದ ನಮ್ಮ ಆಹಾರ ಪದ್ಧತಿಯಲ್ಲಿ ಅವುಗಳಿಗೆ ಸ್ಥಾನ ನೀಡುವುದು ಕಡ್ಡಾಯ ಮಾತ್ರವಲ್ಲ, ಅನಿವಾರ್ಯ ಸಹ. ಅತಿಯಾದ ಕೊಬ್ಬಿನ ಪದಾರ್ಥಗಳ ಸೇವನೆ ಸಲ್ಲದು. ಹಾಲಿನಲ್ಲಿಯೂ ಕಡಿಮೆ ಕೊಬ್ಬು ಇರುವಂತೆ ನೋಡಿಕೊಳ್ಳುವುದು ಒಳ್ಳೆಯದು. ಪದೇಪದೇ ಚಹಾ ಕುಡಿಯವ ಅಭ್ಯಾಸ ಉಳ್ಳವರು ಗ್ರೀನ್ ಅಥವಾ ಬ್ಲ್ಯಾಕ್ ಟೀ ಆರಿಸಿಕೊಳ್ಳುವುದು ಒಳ್ಳೆಯದು. ಇವೆಲ್ಲ ಕ್ಯಾನ್ಸರ್‌ನಿಂದ ನಮ್ಮನ್ನು ಪಾರು ಮಾಡಿಕೊಳ್ಳುವ ಸುಲಭ ಉಪಾಯಗಳು.
ಕ್ಯಾನ್ಸರ್ ಬಂದವರ ಕಥೆ ಏನು? ಅದಕ್ಕೂ ಆಹಾರದಲ್ಲಿ ಮದ್ದು ಇದೆ ಎನ್ನುವುದನ್ನು ಹಿಂದೊಮ್ಮೆ ಹೇಳಿದ್ದೆ. ಯಾವ ಕ್ಯಾನ್ಸರ್‌ಗೆ ಯಾವ ರೀತಿಯ ಆಹಾರ? ಅದನ್ನು ಮುಂದಿನ ಸಂಚಿಕೆಗಳಲ್ಲಿ ಚರ್ಚಿಸೋಣ.


-ಡಾ. ಪಿ. ಸದಾನಂದ ಮೈಯ್ಯ

sadananda.maiya@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement