ಹೇಳುವುದು ಒಂದು ಬರೆಯುವುದು ಇನ್ನೊಂದು
ಬರೀ ಅದೇ ಹಳೆ ಸ್ಟೈಲಲ್ಲೇ ಸಿನಿಮಾ ಮಾಡ್ತೀರಿ, ಏನಾದ್ರೂ ಹೊಸಾದ್ ಮಾಡಿ ಅನ್ನೋರೂ ನೀವು ಪತ್ರಕರ್ತರೇ. ಜನ ಏನೂ ಹಂಗೆಲ್ಲ ಕೇಳಲ್ಲ. ಅವ್ರಿಗೆ ನಾನು ಏನು ಮಾಡೋದಕ್ಕೆ ಫೇಮಸ್ಸೋ ಅದನ್ನೇ ಮಾಡೋದು ಇಷ್ಟ ಆಗುತ್ತೆ. ಆದ್ರೆ ಹೊಸದು ಮಾಡಿ ಅಂತ ಹೇಳೋ ನೀವು, ಹೊಸದನ್ನು ಮಾಡಿದಾಗ ಮಾತ್ರ ಗುರುತಿಸೊಲ್ಲ, ಹೊಗಳೊಲ್ಲ. ಕ್ರೇಜಿಸ್ಟಾರ್ ಸಿನಿಮಾದಲ್ಲಿ ಪ್ರಿಯಾಂಕ ಅವರನ್ನ ರವಿಚಂದ್ರನ್ ಮುಟ್ಟುವುದೇ ಇಲ್ಲ ಅಂತ ಬರೀತಿರಿ. ಇದಕ್ಕೆ ಏನರ್ಥ?
* ವಿಮರ್ಶೆ ಮಾಡುವಾಗ ನಿಜವಾಗಲೂ ಏನನ್ಸುತ್ತೋ ಅದನ್ನೇ ಬರೀರಿ. ಯಾರೋ ವಿಮರ್ಶಕರು ಪ್ರೀಮಿಯರ್ ಶೋಗೆ ಬಂದು ಕ್ರೇಜಿಸ್ಟಾರ್ ಸಿನಿಮಾ ನೋಡಿ ಎದ್ದು ಹೊರಗೆ ಬಂದಾಗ ನನ್ನ ಬಳಿ ಮಾತ್ರ 'ಅಯ್ಯೋ ಕೊನೆಕೊನೆಗೆ ಕಣ್ಣಲ್ಲಿ ನೀರು ಬಂದುಬಿಡ್ತು' ಅಂತಾರೆ. ಆದರೆ ಅದನ್ನೇ ಅವರ ವಿಮರ್ಶೆಯಲ್ಲಿ ಬರೆಯೋಕೆ ಏನ್ ಕಷ್ಟ? ಇನ್ಯಾರೋ ಅಲ್ಲಿಂದಲೇ ಟ್ವೀಟ್ ಮಾಡ್ತಾರೆ 'ಫಸ್ಟ್ ಹಾಫ್ ಬೋರ್, ಸೆಕೆಂಡ್ ಹಾಫ್ನಲ್ಲಿ ಅದನ್ನ ಕಾಂಪೆನ್ಸೇಟ್ ಮಾಡಿದಾರೆ' ಅಂತ. ಆದರೆ ಅವರ ವಿಮರ್ಶೆಯಲ್ಲೂ ಈ ಸಾಲುಗಳು ಯಾಕೆ ಇರೋದಿಲ್ಲ?
* ಕೆಲವೊಮ್ಮೆ ನೀವೆಲ್ಲ, ಸಿನಿಮಾ ನೋಡಿ ಎಲ್ಲರೂ ಚರ್ಚೆ ಮಾಡಿ ವಿಮರ್ಶೆ ಬರಿತೀರಾ ಅನ್ಸುತ್ತೆ. ಇಲ್ಲದಿದ್ದರೆ ಎಲ್ಲರ ದೃಷ್ಠಿ ಒಂದೇ ಥರಾ ಇರೋಕೆ ಹೇಗೆ ಸಾಧ್ಯ. ಒಂದು ಸಿನಿಮಾ ನೋಡಿದ ಒಬ್ಬೊಬ್ಬೊರ ಅನಿಸಿಕೆಗಳು ಕೆಲವು ರೀತಿಯಲ್ಲಾದ್ರೂ ಬೇರೆ ಬೇರೆ ಥರಾ ಇರಬೇಕು ಅಲ್ವಾ?
* ಜನ ಸಿನಿಮಾ ನೋಡೋದು ಬೇರೆ ರೀತಿ. ನೀವು ನೋಡಬೇಕಾದುದು ಬೇರೆ ರೀತಿ. ನೀವು ಪ್ರೇಕ್ಷಕರ ಥರಾನೇ ಮಾತಾಡಿದರೆ ವಿಮರ್ಶೆಗೆ ಏನರ್ಥ?. ನೀವು ವಿಮರ್ಶಕರು ಒಂದು ಸಿನಿಮಾದ ಬ್ಯುಸಿನೆಸ್ ಬಗ್ಗೆ ತಲೆಕೆಡಿಸಿಕೊಳ್ಳದೆ ಸಿನಿಮಾ ಹೇಗಿದೆ ಅಂತ ಬರೀಬೇಕು. ಅದು ಓಡುತ್ತೋ ಬಿಡುತ್ತೋ ಬೇರೆ ಮಾತು. ಹಾಗೆ ನೋಡಿದರೆ ಒಂದು ಸಿನಿಮಾದ ಗೆಲುವು ಸೋಲು ಯಾರಿಗೂ ಗೊತ್ತಿರಲ್ಲ.
* ಹೀಗೆ ಹೇಳ್ತೀನಿ ಅಂತ ಬೇಜಾರು ಮಾಡ್ಕೊಬೇಡಿ. ನಿಮಗೂ ಗೊತ್ತು, ನಾನಿರೋದೆ ಹೀಗೆ. ನಾನೂ ಕೆಲವು ನಟರ ಥರ ಸುಮ್ಮನೆ ಬಂದು ನಿಮ್ಮ ಮುಂದೆ ನಕ್ಕು ಹೋಗಬಹುದು. ಆದರೆ ಅದು ನನಗೆ ಬರೊಲ್ಲ. ಮಾಧ್ಯಮದವರನ್ನ ಹುಡುಕಿಕೊಂಡು ಬಂದು ಮಾತನಾಡಿಸುವ ನಟ ನಾನು. ಖುಷಿಯಾದ್ರೂ ಹೇಳ್ತೀನಿ. ಬೇಜಾರಾದ್ರೂ ಹೇಳ್ತೀನಿ. ಯಾಕಂದ್ರೆ ನಾನು ಕ್ರೇಜಿಸ್ಟಾರ್.
* ಅದೇನೋ ಜನಕ್ಕೆ ನಾನು ಹೇಗಿದ್ದೆನೋ, ಹಾಗಿದ್ರೆನೇ ಇಷ್ಟ. ನಾನು ನಾಯಕಿಯ ಹೊಕ್ಕಳು ಮುಟ್ಟಬಹುದು. ಸೊಂಟದ ಮೇಲೆ ದ್ರಾಕ್ಷಿ, ಸೇಬು ಹಾಕಬಹುದು. ನಮ್ಮ ಪ್ರೇಕ್ಷಕರು ನನಗೊಬ್ಬನಿಗೇ ಅಂಥ ಕಾಪಿರೈಟ್ಸ್ ಕೊಟ್ಟಿರೋದು.
* ಆದರೆ, ನಾನು ಬೇರೆ ದಾರಿ ಹಿಡಿದಿದೀನಿ. ಈಗ ನಾನು ಈ ಥರಾನೇ ಸಿನಿಮಾ ಮಾಡೋದು. ನನಗೆ ಏನೋ ಆಯ್ತು ಅಂತ ಯಾರೋ ಸುದ್ದಿ ಹಬ್ಬಿಸಿದಾಗ ನೀವು ಪತ್ರಕರ್ತರು ನನ್ನ ಮನೆವರೆಗೂ ಹುಡುಕಿಕೊಂಡು ಬಂದಿದ್ರಿ. ಇವತ್ತು ಹೇಳ್ತೀನಿ ಕೇಳಿ. ನನ್ನ ಮಂಜಿನ ಹನಿ ಸಿನಿಮಾ ನೋಡಿದ ಮೇಲೆ ಮತ್ತೆ ನೀವು ನನ್ನ ಹುಡುಕಿಕೊಂಡು ನನ್ನ ಮನೆಗೆ ಬರ್ತೀರಿ.
-ಹರಿ