ಪುತ್ರ ವ್ಯಾಮೋಹಕ್ಕೆ ಬಲಿಯಾಯ್ತೆ ಟ್ರಸ್ಟ್?
ಒಂದು ದಿನ ಬೆಳಿಗ್ಗೆ ದಿವಾಕರರು ನನ್ನನ್ನು ಕರೆದು, 'ಯಶವಂತಪುರದಲ್ಲಿ ಆಚಾರ್ಯರ (ಅವರ ಬೀಗರು) ಒಂದು ನಿವೇಶನ ...
ಒಂದು ದಿನ ಬೆಳಿಗ್ಗೆ ದಿವಾಕರರು ನನ್ನನ್ನು ಕರೆದು, 'ಯಶವಂತಪುರದಲ್ಲಿ ಆಚಾರ್ಯರ (ಅವರ ಬೀಗರು) ಒಂದು ನಿವೇಶನ ಇದೆ. ಅಲ್ಲಿಯೇ ನಮ್ಮ ಆಫೀಸಿನ ಕಟ್ಟಡ ಕಟ್ಟಬೇಕೆಂದಿದ್ದೇನೆ. ಅದರ ಮೇಲ್ವಿಚಾರಣೆಯನ್ನು ನೀನೇ ನೋಡಿಕೊಳ್ಳಬೇಕು' ಎಂದರು. ನನಗೆ ಸಂತೋಷವಾದರೂ ಅದು ಈಗಿನಂತೆ ಬೆಂಗಳೂರಿನ ಭಾಗವಾಗಿರಲಿಲ್ಲ. ಎರಡೂ ಊರುಗಳ ನಡುವೆ ಬಹಳ ಅಂತರವಿತ್ತು. 'ಪತ್ರಿಕೆಯ ಕಚೇರಿಯನ್ನು ಸಿಟಿಯಿಂದ ಬಹುದೂರದಲ್ಲಿ ಸ್ಥಾಪಿಸಿದರೆ ಬಹಳ ತೊಂದರೆಯಾಗುತ್ತದೆ. ಮುಖ್ಯವಾಗಿ ಕೆಲಸಗಾರರು ಸಿಗುವುದಿಲ್ಲ, ಸಿಕ್ಕರೂ ಬರುವುದಿಲ್ಲ' ಎಂದು ಹೇಳಿದೆ. ಅದಕ್ಕೆ ಅವರು 'ಹಾಗಾದರೆ ಸಿಟಿಯಲ್ಲಿ ಜಾಗವನ್ನು ಹುಡುಕು, ಜಾಗ ಸಿಗದಿದ್ದರೂ ಒಂದು ಕಟ್ಟಡವಾದರೂ ನೋಡು' ಎಂದು ಹೇಳಿದರು.
ಆಗಲಿ, ಎಂದು ಹೇಳಿ ಅಲ್ಲಿಂದ ಹೊರಟೆ. ದಾರಿಯಲ್ಲಿ ಸ್ವಸ್ತಿಕ್ ಟಾಕೀಸ್ ಹತ್ತಿರ ಓರ್ವ ಸ್ನೇಹಿತರು ಸಿಕ್ಕಿದರು. ಅವರ ಹೆಸರು ನಾಗೇಶ್ವರನ್ ಎಂದು. ಅವರು ಕಂಟೋನ್ಮೆಂಟ್ನಲ್ಲಿ ಆರ್.ಎಂ.ಡಿ.ಸಿ ಕಟ್ಟಡದಲ್ಲಿ (ಈಗಿರುವ ನಮ್ಮ ಆಫೀಸಿನ ಕಟ್ಟಡ) ಸತ್ಯ ಎಂಬ ಓರ್ವ ಪಾರ್ಸಿ ಉದ್ಯಮಿ ನಡೆಸುತ್ತಿದ್ದ. ಇದರ ಜೊತೆಗೆ ಚಕ್ರಬಂಧಗಳ (ಕ್ರಾಸ್ವರ್ಡ್ಸ್) ಸ್ಪರ್ಧೆಯನ್ನೂ ನಡೆಸುತ್ತಿದ್ದ. ಈ ಸ್ಪರ್ಧೆಯ ಮೇಲೆ ಆತ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ತೆರಿಗೆ ಕೊಡಬೇಕಾಗಿತ್ತು. ಕೊಟ್ಟಿರಲಿಲ್ಲ, ಆದ್ದರಿಂದ ಸರ್ಕಾರದವರು ಒತ್ತಾಯ ಮಾಡುತ್ತಿದ್ದರು. ತೆರಿಗೆ ಅಧಿಕಾರಿಗಳಿಗೆ, ಲಂಚ ಕೊಟ್ಟು ಪಾರಾಗುತ್ತಿದ್ದ. ನಾಗೇಶ್ವರನ್ ಅವರು ನನಗೆ ಕಟ್ಟಡದ ವಿಷಯವನ್ನು ಹೇಳಿ, 'ಈ ಕಟ್ಟಡದ ಮಾಲೀಕ ಇಷ್ಟರಲ್ಲಿಯೇ ಪತ್ರಿಕೆ ಮತ್ತು ಕಟ್ಟಡಗಳನ್ನು ಮಾರಿ ಮುಂಬೈಗೆ ಹೊರಟು ಹೋಗುತ್ತಾನೆ' ಎಂದು ತಿಳಿಸಿದರು. ನಿಮ್ಮ ಪತ್ರಿಕೆಗೆ ಅತ್ಯಂತ ಯೋಗ್ಯವಾದ ಸ್ಥಳ ಎಂದು ಹೇಳಿದರು. ಕೂಡಲೇ ನಾವಿಬ್ಬರೂ ಬಸ್ಸಿನಲ್ಲಿ ಮಲ್ಲೇಶ್ವರಕ್ಕೆ ಹೋಗಿ ದಿವಾಕರರಿಗೆ ಈ ವಿಷಯ ತಿಳಿಸಬೇಕೆಂದಿದ್ದೆವು. ಆದರೆ ಮೊದಲು ಸ್ಥಳವನ್ನು ನೋಡೋಣವೆಂದು ಬಸ್ಸಿನಲ್ಲಿ ರೆಸಿಡೆನ್ಸಿ ರಸ್ತೆಗೆ ಹೋದೆವು. ಆ ಕಾಲದಲ್ಲಿ ಬೆಂಗಳೂರಿನಲ್ಲಿ ಆಟೋಗಳು ಇರಲಿಲ್ಲ. ಆರ್.ಎಂ.ಡಿ.ಸಿ ಕಟ್ಟಡದ ಆವರಣ ಮುಚ್ಚಿತ್ತು. ಭದ್ರತಾ ಪಡೆಯವರು ಕಾವಲಿದ್ದರು. ನಮ್ಮನ್ನು ಗೇಟಿನ ಹತ್ತಿರ ಸಹ ಬಿಡಲಿಲ್ಲ. ನಾವು ಈ ಕಟ್ಟಡ ಖರೀದಿ ಮಾಡಲು ಬಂದಿದ್ದೇವೆ ಎಂದೂ ಹೇಳಿದರೂ ನಂಬಲಿಲ್ಲ. ಅಷ್ಟರಲ್ಲಿ ಈ ಸಂಸ್ಥೆಯ ವ್ಯವಸ್ಥಾಪಕರಾಗಿದ್ದ ಮಿ. ರತನ್ ಎಂಬುವವರು ಗೇಟಿನ ಹೊರಗೆ ಬಂದು ನಾವು ಯಾರು ಎಂದು ವಿಚಾರಿಸಿದರು.
ದಿವಾಕರರ ಹೆಸರನ್ನು ಹೇಳಿದ ಕೂಡಲೇ ನಮ್ಮನ್ನು ಒಳಗೆ ಬಿಟ್ಟರು. 'ಒಂದು ಸಲ ಇಡೀ ಆವರಣವನ್ನು ನೋಡಿ ಬನ್ನಿ. ಆದರೆ ಕಟ್ಟಡದ ಮಾಲೀಕರು ಮುಂಬೈಯಲ್ಲಿದ್ದಾರೆ. ಅಲ್ಲಿಗೆ ಹೋಗಿ ಮಾತುಕತೆ ನಡೆಸಬೇಕು. ನಮಗೆ ಯಾವ ಅಧಿಕಾರವೂ ಇಲ್ಲ' ಎಂದು ಹೇಳಿದರು. ಆಗಲಿ ಎಂದು ಹೇಳಿ ಒಳಗೆ ಹೋಗಿ ಇಡೀ ಆವರಣವನ್ನು ಒಂದು ಸುತ್ತು ಹಾಕಿ ಬಂದೆವು. ಪಕ್ಕದಲ್ಲಿ ಪ್ರತ್ಯೇಕವಾಗಿ ಯಂತ್ರಾಲಯವಿತ್ತು. ಇದರಲ್ಲಿದ್ದ ಯಂತ್ರದಿಂದ ಆರು ಪುಟದ ಪತ್ರಿಕೆಯನ್ನು ಮುದ್ರಣ ಮಾಡಬಹುದಿತ್ತು. ಅದರ ಪಕ್ಕದಲ್ಲಿ ಇನ್ನೂ ಒಂದು ಯಂತ್ರವಿತ್ತು. ಅವೆರಡನ್ನೂ ಸೇರಿಸಿದರೆ ಹನ್ನೆರಡು ಪುಟಗಳ ಪತ್ರಿಕೆಯನ್ನು ತಕ್ಷಣ ಮುದ್ರಿಸಬಹುದಾಗಿತ್ತು. ಇದರ ಜೊತೆಗೆ ಈ ಯಂತ್ರಾಲಯಕ್ಕೆ ಸುಮಾರು 150 ಹೆಚ್.ಪಿ.ಯಷ್ಟು ವಿದ್ಯುಚ್ಛಕ್ತಿ ಸಹ ಲಭ್ಯವಿತ್ತು.
ಮೂಲ ಕಟ್ಟಡದಲ್ಲಿ ಚಕ್ರಬಂಧಗಳ ವ್ಯವಹಾರ ನಡೆಯುತ್ತಿತ್ತು. ಅಲ್ಲಿ ಸುಮಾರು 300-350 ಆಂಗ್ಲೋ ಇಂಡಿಯನ್ ಹುಡುಗಿಯರು ಈ ಚಕ್ರಬಂಧ ಚೀಟಿಗಳನ್ನು ವಿಂಗಡಿಸುತ್ತಿದ್ದರು. ಚಕ್ರಬಂಧ ಸ್ಪರ್ಧೆಯನ್ನು ಸರ್ಕಾರ ನಿಷೇಧಿಸಿದ್ದರಿಂದ ಈ ವ್ಯವಹಾರ ಸ್ಥಗಿತವಾಗಿತ್ತು. ಇಷ್ಟೇ ಅಲ್ಲ, ಕೆಲಸಗಾರರನ್ನು ತೆಗೆದುಹಾಕುವ ವ್ಯವಸ್ಥೆ ನಡೆಯುತ್ತಿತ್ತು. ಮುದ್ರಣಾಲಯವು ಮುಚ್ಚಿದ್ದರಿಂದ ಅದರ ಮಾಲೀಕರಾದ ಚಮರ್ ಬಾಗ್ವಾಲಾರವರು ಇಡೀ ಕಟ್ಟಡವನ್ನು ಮಾರಾಟ ಮಾಡುವ ಆಲೋಚನೆಯಲ್ಲಿದ್ದರು.
ಕೂಡಲೇ ನಾನು ಮಲ್ಲೇಶ್ವರಕ್ಕೆ ಹೋಗಿ ತಮ್ಮ ಬೀಗರ ಅತಿಥಿ ಗೃಹದಲ್ಲಿ ತಂಗಿದ್ದ ದಿವಾಕರರಿಗೆ ಈ ವಿಷಯ ತಿಳಿಸಿದೆ. ಅವರು ತುಂಬಾ ಸಂತೋಷಪಟ್ಟರು. 'ಒಮ್ಮೆ ನೋಡಿ ಬರೋಣ' ಎಂದು ಹೇಳಿ ಕಾರಿನಲ್ಲಿ ಆರ್.ಎಸ್. ಹುಕ್ಕೇರಿಕರ್ರವರನ್ನು ಕರೆದುಕೊಂಡು ನಮ್ಮ ಜೊತೆಗೇ ಬಂದರು. ನಿವೇಶನ, ಕಟ್ಟಡ, ವಿದ್ಯುಚ್ಛಕ್ತಿಯ ಲಭ್ಯತೆ ಮತ್ತು ಸುತ್ತಮುತ್ತಲಿನ ವಾತಾವರಣಗಳನ್ನು ನೋಡಿ ಅವರಿಬ್ಬರೂ ತುಂಬಾ ಸಂತೋಷಪಟ್ಟು ಈ ಸ್ಥಳ, ಈ ಕಟ್ಟಡ, ಮುದ್ರಣಾಲಯ, ಎಲ್ಲ ರೀತಿಯಿಂದಲೂ ಅನುಕೂಲವಾಗಿದ್ದು, ನಮಗಾಗಿಯೇ ಕಟ್ಟಿದಂತಿದೆ ಎಂದು ಹೇಳಿದರು. ಆಗ ದಿವಾಕರರು ನನ್ನನ್ನು ಬಿಗಿದಪ್ಪಿಕೊಂಡು, 'ನೀವು ಟ್ರಸ್ಟಿಗೆ ಮಹದುಪಕಾರ ಮಾಡಿದ್ದೀರಿ. ಟ್ರಸ್ಟ್ ಇದನ್ನು ಖಂಡಿತ ಮರೆಯುವುದಿಲ್ಲ" ಎಂದು ಹೇಳಿದರು. ಮುಂದೆ ಈ ಉಪಕಾರಕ್ಕೂ ತಕ್ಕ ಬೆಲೆಯನ್ನು ಕೊಟ್ಟರು. ನನ್ನನ್ನು ಅಮಾನತುಗೊಳಿಸಿದರು. ವಿಚಾರಣೆ ನಡೆಸಿದರು. ವಜಾ ಮಾಡಿದರು. ಕೊನೆಗೆ ಬೀದಿಗೂ ತಳ್ಳಿದರು. ಆದರೆ ಆ ವಿಚಾರಗಳು ಈಗ ಬೇಡ. ದಿವಾಕರರು ಕೆಲವು ದಿನಗಳಲ್ಲಿಯೇ ಮುಂಬೈಗೆ ಹೋಗಿ ತಮ್ಮ ಸ್ನೇಹಿತರಾದ ಕೆ.ಎಂ.ಮುನ್ಷಿ, ಸಿ.ಎಚ್.ಬಾಬಾ ಮೊದಲಾದ ಮಿತ್ರರ ನೆರವಿನಿಂದ ಚಮರ್ಬಾಗ್ವಾಲಾರನ್ನು ಸಂಪರ್ಕಿಸಿ ಇಡೀ ಕಟ್ಟಡವನ್ನು ಕೇವಲ ಎರಡು ಲಕ್ಷ ಹದಿನೇಳು ಸಾವಿರ ರೂಪಾಯಿಗಳಿಗೆ ಖರೀದಿಸಲು ಒಪ್ಪಂದ ಮಾಡಿಕೊಂಡು ಇಪ್ಪತ್ತೈದು ಸಾವಿರ ರೂ. ಮುಂಗಡವನ್ನು ಸಹ ಕೊಟ್ಟು ಬಂದರು.
ಕಟ್ಟಡದ ಸುತ್ತಲೂ ಪೊಲೀಸರು !
ಆದರೆ ಅಷ್ಟರಲ್ಲಿ ಕಟ್ಟಡ ಮಾರಾಟದ ವಿಷಯ ಸರ್ಕಾರಕ್ಕೆ ಗೊತ್ತಾಗಿತ್ತು. ಬೆಂಗಳೂರು ಜಿಲ್ಲಾಧಿಕಾರಿ ಆರ್.ಚನ್ನರುದ್ರಯ್ಯನವರು ಕಟ್ಟಡವನ್ನು ಮುಟ್ಟುಗೋಲು ಹಾಕಿಕೊಂಡು ಪೊಲೀಸರನ್ನು ಕಟ್ಟಡದ ಸುತ್ತಲೂ ಕಾವಲು ಹಾಕಿದರು. ಈ ಸುದ್ದಿಯನ್ನು ಕೇಳಿ ದಿವಾಕರರು ಗಾಬರಿಯಾದರು. ತಾವು ಕೊಟ್ಟ ಮುಂಗಡ ಹಣ ಮುಳುಗುವುದೇ ಎಂದು ಯೋಚಿಸಲಾರಂಭಿಸಿದರು. ಆಗ ನಾನು ಅವರಿಗೆ ಧೈರ್ಯ ಹೇಳಿ, ಸರ್ಕಾರದ ಮುಟ್ಟುಗೋಲಿನಿಂದ ಪಾರಾಗುವ ಉಪಾಯಗಳಿಗೆ ಯೋಚಿಸಲಾರಂಭಿಸಿದೆ. ಮೊದಲು ಜಿಲ್ಲಾಧಿಕಾರಿಗಳನ್ನು ಕಂಡೆ. ಅವರು ಆತ್ಮೀಯ ಮಿತ್ರರೂ ಡಾ. ಹರ್ಡಿಕರರ ಶಿಷ್ಯರೂ, ಕಲಾವಿದರೂ ಆಗಿದ್ದ ರುಮಾಲೆ ಚೆನ್ನಬಸವಯ್ಯರವರ ಅಣ್ಣನವರ ನೆರವಿನಿಂದ ಜಿಲ್ಲಾಧಿಕಾರಿಗಳನ್ನು ಕಂಡೆ. ಪ್ರಯೋಜನವಾಗಲಿಲ್ಲ. ಸಾಹುಕಾರ ಚನ್ನಯ್ಯ ಮತ್ತು ಚಿತ್ರದುರ್ಗದ ನನ್ನ ಆತ್ಮೀಯರಾಗಿದ್ದ ಎಸ್.ರಂಗರಾಯರ ಮುಖಾಂತರ ಅಂದಿನ ಹಣಕಾಸಿನ ಮಂತ್ರಿ ಟಿ.ಮರಿಯಪ್ಪನವರನ್ನು ಕಂಡೆ. ಅವರೂ ಸಹ ಅಸಹಾಯಕತೆ ವ್ಯಕ್ತಪಡಿಸಿದರು. 'ಮುಖ್ಯಮಂತ್ರಿ ನಿಜಲಿಂಗಪ್ಪನವರು ನಿಮ್ಮ ಸಂಸ್ಥೆಯ ವಿರುದ್ದ ಇದ್ದಾರೆ. ನಿಮ್ಮ ಪತ್ರಿಕೆಯ ಹೆಸರು ಕೇಳಿದರೆ ಅವರು ಉರಿದು ಬೀಳುತ್ತಾರೆ' ಎಂದು ನುಡಿದರು. ಟಿ.ಮರಿಯಪ್ಪನವರಿಗೂ, ನನಗೂ ಸಾಹುಕಾರ್ ಚೆನ್ನಯ್ಯನವರ ಮುಖಾಂತರ ಪರಿಚಯವಾಗಿತ್ತು. ಚಿತ್ರದುರ್ಗದ ಎಸ್.ರಂಗರಾಯರು ನನ್ನನ್ನು ಟಿ.ಮರಿಯಪ್ಪನವರಿಗೆ ಪರಿಚಯ ಮಾಡಿಕೊಟ್ಟಿದ್ದರು. ಕೊನೆಗೆ ನಿಜಲಿಂಗಪ್ಪನವರನ್ನು ನೇರವಾಗಿ ಭೇಟಿಯಾಗಲು ನಿರ್ಧರಿಸಿದೆ. ಅವರು 'ಕುಮಾರಕೃಪ'ದಲ್ಲಿದ್ದರು. ಅಲ್ಲಿಗೇ ಹೋದೆ. ಅವರ ಹೆಂಡತಿ ಮುರಿಗೆಮ್ಮನವರು ದಾವಣಗೆರೆಯಲ್ಲಿ ಸಂಯುಕ್ತ ಕರ್ನಾಟಕದ ಏಜೆಂಟರಾಗಿದ್ದ ಬೆಳ್ಳುಳ್ಳಿ ಮುರಿಗಪ್ಪನವರ ಸಹೋದರಿ. ಅವರ ಪರಿಚಯ ನನಗೆ ಚೆನ್ನಾಗಿತ್ತು. ಅವರಿಗೆ ಎಲ್ಲಾ ವಿಷಯ ಹೇಳಿದೆ. ಅವರು ತಮ್ಮ ಗಂಡನಿಗೆ 'ನಮ್ಮ ಶಾಮಣ್ಣನ ಒಂದು ಸಣ್ಣ ಕೆಲಸ ಮಾಡಬಾರದೆ' ಎಂದು ಮೂದಲಿಸಿದರಂತೆ. ಕೊನೆಗೆ ನಿಜಲಿಂಗಪ್ಪನವರು ಮರುದಿನ ನನ್ನನ್ನು ನೋಡಿ, 'ಏನಪ್ಪಾ ಗಂಡ ಹೆಂಡತಿ ನಡುವೆ ಜಗಳ ತಂದಿಡುತ್ತೀಯಾ' ಎಂದು ತಮಾಷೆ ಮಾಡಿ, ಮರಿಯಪ್ಪನವರಿಗೆ 'ನಾನು ಒಪ್ಪಿದ್ದೇನೆಂದು ತಿಳಿಸು' ಎಂದರು. ಅದರಂತೆ ನಾವು ಕೊಡಬೇಕಾಗಿದ್ದ ಹಣವನ್ನು ಹೈಕೋರ್ಟಿನಲ್ಲಿ ಕಟ್ಟಿ ಸರ್ಕಾರ ಹಾಕಿದ್ದ ಮುಟ್ಟುಗೋಲನ್ನು ರದ್ದಾಗುವಂತೆ ಮಾಡಿದೆ.
ಇದರಿಂದ ಇಡೀ ಕಟ್ಟಡ ನಮ್ಮ ಸ್ವಾಧೀನಕ್ಕೆ ಬಂದಿತು. ತಮ್ಮ ಯಂತ್ರಗಳನ್ನು, ಇನ್ನಿತರ ಸಾಮಗ್ರಿಗಳನ್ನು, ಆರ್.ಎಂ.ಡಿ.ಸಿ.ಯವರು ಕೆಲವೇ ದಿನಗಳಲ್ಲಿ ಮುಂಬಯಿಗೆ ತೆಗೆದುಕೊಂಡು ಹೋದರು. ಖರೀದಿ ಒಪ್ಪಂದದ ಪತ್ರ ಬೆಂಗಳೂರಿನಲ್ಲಿ ನೋಂದಣಿಯಾಗುವ ಮುಂಚೆ ಉಳಿದ ಹಣವನ್ನು ಕೊಡಬೇಕೆಂದು ಗೊತ್ತಾಗಿತ್ತು. ಈ ಪತ್ರ ಮೆಯೋಹಾಲ್ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿಯಾಯಿತು. ಈ ಪತ್ರಕ್ಕೆ ನಾನು ಸಹ ಸಂಯುಕ್ತ ಕರ್ನಾಟಕದ ಪರವಾಗಿ ರುಜು ಹಾಕಿದ್ದೇನೆ. ಅಂದು ಕೇವಲ ಎರಡು ಲಕ್ಷ ರೂಪಾಯಿಗಳಿಗೆ ಖರೀದಿ ಮಾಡಿದ ಕಟ್ಟಡ ಮತ್ತು ಖಾಲಿ ಜಾಗದ ಮೌಲ್ಯ ಇಂದು ಐವತ್ತು ಕೋಟಿ ರೂಪಾಯಿಗೂ ಹೆಚ್ಚಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಕಟ್ಟಡದಲ್ಲಿ ವಿದ್ಯುತ್ ಮುಂತಾದ ಎಲ್ಲ ಸೌಲಭ್ಯಗಳು ಲಭ್ಯವಿದ್ದುದರಿಂದ ಪತ್ರಿಕೆಯನ್ನು ಆದಷ್ಟು ಬೇಗನೇ ಪ್ರಾರಂಭಿಸಬೇಕೆಂದು ದಿವಾಕರರು ಅಭಿಪ್ರಾಯಪಟ್ಟರು. ಆದರೆ ಮೊಹರೆಯವರು ಅದನ್ನು ಒಪ್ಪಲಿಲ್ಲ. ಮೊದಲೇ ಅವರಿಗೆ ದಿವಾಕರರ ಬಗ್ಗೆ ಅಸಮಾಧಾನವಿತ್ತು. ಬೆಂಗಳೂರಿನಲ್ಲಿ ಪತ್ರಿಕೆ ಪ್ರಾರಂಭಿಸುವುದು ಅವರಿಗೆ ಬೇಕಾಗಿರಲಿಲ್ಲ. ಆದರೂ ದಿವಾಕರರು ಹಠ ಹಿಡಿದು ಬೆಂಗಳೂರಿನಲ್ಲಿ ಪತ್ರಿಕೆ ಪ್ರಾರಂಭಿಸಲು ನಿರ್ಧರಿಸಿದ್ದರು, ಆದ್ದರಿಂದ ಈ ಯೋಜನೆ ಪ್ರಾರಂಭವಾಗುವುದು ಆದಷ್ಟು ವಿಳಂಬವಾಗಲಿ ಎಂಬ ಉದ್ದೇಶದಿಂದ, 'ಹಳೇ ಯಂತ್ರದಿಂದ ಪ್ರಾರಂಭಿಸುವುದು ಬೇಡ, ಕಲ್ಕತ್ತಾದಲ್ಲಿ ಹೊಸ ಯಂತ್ರ ಖರೀದಿಸಿದ್ದೇನೆ. ಅದು ಬರಲಿ, ಅದು ಬಂದಮೇಲೆ ಪ್ರಾರಂಭಿಸೋಣ' ಎಂದರು. ಬೇರೆ ಮಾರ್ಗ ಕಾಣದೇ ದಿವಾಕರರು ಸುಮ್ಮನಿರಬೇಕಾಯಿತು. ಮತ್ತೆ ಕೆಲವು ತಿಂಗಳು ಕಳೆಯಿತು.
(ಮುಂದುವರಿಯುವುದು)
-ಕೆ.ಶಾಮರಾವ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.