ಚಕ್ಕುಲಿ ಚಮತ್ಕಾರ
'ಮೈಯ್ಯಾಸ್ ಅವರ ಹೊಸ ಉತ್ಪನ್ನವಾದ ಚಕ್ಕುಲಿ ಇಂದು ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ' ಇಷ್ಟೇ ಹೇಳಿದರೆ ನೀವು ನಕ್ಕುಬಿಡಬಹುದು ಅಥವಾ ಇದರಲ್ಲೇನು ವಿಶೇಷ ಎಂದು ಮೂಗು ಮುರಿಯಬಹುದು. ಎಲ್ಲರಂತೆ ತಾವೂ ಮಾಡುವುದು ಡಾ. ಪಿ.ಸದಾನಂದ ಮೈಯ್ಯ ಅವರ ಗುಣವೂ ಅಲ್ಲ, ವಿಶಿಷ್ಟತೆ ಇಲ್ಲದೆ ಅವರು ಏನನ್ನೂ ಮಾಡುವವರೂ ಅಲ್ಲ. ಜಗತ್ತಿನ ಆಹಾರೋದ್ಯಮದಲ್ಲೇ ಮೊದಲ ಸಲ 'ಯಾಂತ್ರಿಕವಾಗಿ ಸಿದ್ಧಪಡಿಸಿದ ಚಕ್ಕುಲಿ'ಯನ್ನು ಬೆಂಗಳೂರಿನ ಮೈಯ್ಯಾಸ್ ಬೆವರೇಜಸ್ ಅಂಡ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಬುಧವಾರ (ಮಾರ್ಚ್ 5) ಗ್ರಾಹಕರಿಗೆ ಪರಿಚಯಿಸುತ್ತಿದೆ. ಚಕ್ಕುಲಿ ಕಮರ್ಷಿಯಲ್ ಉತ್ಪನ್ನವಾಗಿ ಬಿಡುಗಡೆಯಾಗುತ್ತಿರುವುದೂ ಇದೇ ಮೊದಲು.
ಚಕ್ಕುಲಿಯನ್ನು ಯಾಂತ್ರಿಕವಾಗಿ ಮಾಡುವುದು? ಅದನ್ನು ಊಹಿಸಿಕೊಳ್ಳುವುದೂ ಸಾಧ್ಯವಿಲ್ಲ. ಚಕ್ಕುಲಿ, ಕೋಡುಬಳೆಗಳು ಗೃಹೋದ್ಯಮಗಳ ಉತ್ಪನ್ನಗಳಾಗಿಯೇ ಬ್ರಾಂಡ್ ಆಗಿವೆ. ಅವನ್ನು ಯಾಂತ್ರಿಕವಾಗಿ ಸಿದ್ಧಪಡಿಸುವುದು ಸುಲಭದ ಮಾತೂ ಅಲ್ಲ. ಕೆಲವರ್ಷಗಳ ಹಿಂದೆ ಕೋಡುಬಳೆಯನ್ನು ಯಂತ್ರದ ಮೂಲಕ ತಯಾರಿಸಿ ಯಶ ಕಂಡಿದ್ದರು ಮೈಯ್ಯ. ಅಂದೇ ಮನಸ್ಸಿನಲ್ಲಿ ನಿರ್ಧಾರವೂ ಮೊಳೆತಿತ್ತು, ಇದೇ ರೀತಿ ಚಕ್ಕುಲಿಯನ್ನೂ ತಯಾರಿಸಬೇಕು ಎಂದು. ಅದು ಈಗ ಫಲ ನೀಡಿದೆ. ಗಂಟೆಗೆ 4,500 ಚಕ್ಕುಲಿ ತಯಾರಿಸುವ ಯಂತ್ರವೂ ಖುದ್ದು ಮೈಯ್ಯ ಅವರದೇ ಸಂಶೋಧನೆ. ಯಾಂತ್ರಿಕವಾಗಿ ಸಿದ್ಧಪಡಿಸುವುದರಿಂದ ಪ್ರತಿ ಚಕ್ಕುಲಿಯದೂ ಒಂದೇ ಗಾತ್ರ.
ಸದ್ಯ ಬೆಣ್ಣೆ ಚಕ್ಕುಲಿ ಹಾಗೂ ರೆಗ್ಯೂಲರ್ ಚಕ್ಕುಲಿಗಳು ಸಿಗಲಿವೆ. 50, 100, 150 ಗ್ರಾಂ ಪೊಟ್ಟಣಗಳಲ್ಲಿ ಇವು ಲಭ್ಯ. ಮೈಯ್ಯಾಸ್ ಕೌಂಟರ್ಗಳಲ್ಲಿ ಮಾತ್ರ 400 ಗ್ರಾಂ ಪೊಟ್ಟಣಗಳು ಸಿಗಲಿವೆ. ಮೈಯ್ಯಾಸ್ ಉತ್ಪನ್ನ ಎಂದಮೇಲೆ ಈ ಚಕ್ಕುಲಿಗಳಲ್ಲಿ ಎಣ್ಣೆ ಅಂಶ ಬಹಳ ಕಡಿಮೆ ಇರುತ್ತದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.
ಚಕ್ಕುಲಿ ಎಂದರೆ ಅದರದ್ದೇ ಆದ ರುಚಿ, ಸ್ವಾದ ಇರುತ್ತದೆ. ಪ್ರಮಾಣದಲ್ಲಿ ಏರಿಳಿತವಾದರೂ ಎಲ್ಲೆಡೆಯೂ ಸಿಗುವ ಫ್ಲೇವರ್ ಅದೇ ತಾನೆ? ಆದರೆ ಮೈಯ್ಯ ಚಕ್ಕುಲಿಯ ಸ್ವಾದವನ್ನೂ ಬದಲಿಸಲಿದ್ದಾರೆ! ಬೇರೆಬೇರೆ ಫ್ಲೇವರ್ಗಳ ಚಕ್ಕುಲಿ ನೀಡುವ ನಿಟ್ಟಿನಲ್ಲಿ ಈಗಾಗಲೇ ಸಿದ್ಧತೆ ಆರಂಭಿಸಿದ್ದಾರೆ. ಬೇರೆ ಕುರುಕಲು ತಿಂಡಿಗಳಂತೆ ಚಕ್ಕುಲಿಯೂ ಮಸ್ತಿ ಮಸಾಲಾ, ಟೊಮೆಟೊ, ಪೆಪ್ಪರ್ ಮಸಾಲಾ ಫ್ಲೇವರ್ಗಳಲ್ಲಿ ಸಿಗಲಿದೆ. ಹಾಗೆಯೇ ಪಾಲಕ್ ಚಕ್ಕುಲಿ ಕೂಡ. ಇನ್ನೊಂದು ವಿಶೇಷ ಎಂದರೆ ಮೈಯ್ಯಾಸ್ ಚಕ್ಕುಲಿಗೆ ವಿದೇಶಗಳಲ್ಲಿ ಈಗಲೇ ಭಾರಿ ಬೇಡಿಕೆ ಬಂದಿದೆ. ಮಾಹಿತಿಗೆ: (080) 42068697/8. ವೆಬ್ಸೈಟ್: www.maiyas.in
= ರಾಗರಶ್ಮಿ