ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಪೋರ್ಟೀನೇಜ್

Mainashree
Updated On : 4 Mar 2014, 1:42 am

ಖಾಲಿಪೀಲಿ 55 ಜನ ಎಂಪ್ಲಾಯಿಗಳನ್ನೊಳಗೊಂಡ ವಾಟ್ಯ್‌ಆ್ಯಪ್ ಎಂಬ ಆ್ಯಪ್ ಸಂಸ್ಥೆ ಬಿಲಿಯಗಟ್ಟಲೆ ಡೀಲ್ ಕುದುರಿಸಿಕೊಳ್ಳಲಿದೆ ಎಂದು ಕಳೆದ ವರ್ಷ ಯಾರಾದರೂ ಹೇಳಿದ್ದರೆ ನಗೆಗೀಡಾಗಬೇಕಿತ್ತು. ವಾಲ್ಟ್ ಡಿಸ್ನಿ ಕಂಪನಿಯ ಫಿಲಂಗಳೆಲ್ಲ ಇನ್ನು ಮುಂದೆ ಕ್ಲೌಡ್ ಕಂಪ್ಯೂಟಿಂಗ್‌ನಲ್ಲಿ ಸಿಗಬಹುದು ಅಂತ ಯಾರೂ ಊಹಿಸಿರಲಿಕ್ಕಿಲ್ಲ. ಇಂದು ಮೊಬೈಲ್ ಕೊಳ್ಳಲು 5 ಸಾವಿರಕ್ಕಿಂತ ಹೆಚ್ಚು ಕಾಸು ಕೈಯಲ್ಲಿಟ್ಟುಕೊಂಡವರೆಲ್ಲ ಸ್ಮಾರ್ಟ್ ಫೋನನ್ನೇ ಹುಡುಕುತ್ತಾರೆ. ಕೀಪ್ಯಾಡ್ ಫೋನ್‌ಗಳನ್ನು ಕೇಳುವವರೇ ಇಲ್ಲ.
ಇದು ಕಳೆದೊಂದು ವರ್ಷದ ಟೆಕ್ನಾಲಜಿ ರಿಪೋರ್ಟ್. ಒಂದೇ ಒಂದು ವರ್ಷದಲ್ಲಿ ತಂತ್ರಜ್ಞಾನ ಎಷ್ಟು ಮುಂದುವರಿಯುತ್ತದೆ ಎಂದರೆ, ಗುರುತಿಸಲಾಗದಷ್ಟು. ಇದನ್ನಿಟ್ಟುಕೊಂಡು ಈ ವರ್ಷ, ಅಂದರೆ 2014ರಲ್ಲಿ ಟೆಕ್ನಾಲಜಿಯಲ್ಲಿ ಯಾವ್ಯಾವ ಆವಿಷ್ಕಾರಗಳಾಗಬಹುದು ಎಂಬುದನ್ನು ಗುರುತಿಸಬಹುದು.
ಯಂತ್ರದಿಂದ ಯಂತ್ರಕ್ಕೆ
ನಮ್ಮ ಮನೆಗಳು ಮತ್ತು ಕಚೇರಿಗಳು ಹೆಚ್ಚು ಹೆಚ್ಚು ಸ್ಮಾರ್ಟ್ ಆಗಲಿವೆ. ಈಗಾಗಲೇ ಉದ್ಯಮ, ಆರೋಗ್ಯ ಮುಂತಾದ ಕ್ಷೇತ್ರಗಳಲ್ಲಿ ಎಂಟುಎಂ (ಮಶೀನ್ ಟು ಮಶೀನ್) ಸಾಕಷ್ಟು ಚಾಲ್ತಿಯಲ್ಲಿದೆ. ಮುಂದಿನ ದಿನಗಳಲ್ಲಿ ಅದು ಕೃಷಿ, ಮನೆಮನೆಗಳಿಗೆ ವಿಸ್ತರಿಸಲಿದೆ.
ಎಲ್ನೋಡಿ ಆ್ಯಪ್
ಭಾರತದಲ್ಲಿ ಸ್ಮಾರ್ಟ್‌ಫೋನ್ ಮಾರಾಟ 20 ಶೇ. ವೇಗಗೊಳ್ಳಲಿದೆ. ಇದರ ಜತೆಗೆ ಹೊಸಹೊಸ ಆ್ಯಪ್‌ಗಳನ್ನು ಸಿದ್ಧಪಡಿಸುವ, ಅವುಗಳನ್ನು ಅಭಿವೃದ್ಧಿಪಡಿಸಿ ಮಾರುಕಟ್ಟೆಗೆ ಬಿಡುವ ಉದ್ಯಮ ಚುರುಕಾಗಲಿದೆ. ಆಸಕ್ತ ಯುವಜನ ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶ ನಿರೀಕ್ಷಿಸಬಹುದು.
ಡಾಟಾ ಅನಾಲಿಸಿಸ್
ಜಿಮೇಲ್, ಫೇಸ್‌ಬುಕ್ ಅಕೌಂಟ್ ತೆರೆಯುವಾಗಲೇ ನೀವು ನೀಡುವ ನಿಮ್ಮ ಕುರಿತ ಮಾಹಿತಿಯೆಲ್ಲಾ ಒಂದು ಕಡೆ ರಾಶಿಬಿದ್ದಿರುತ್ತದೆ. ಅದನ್ನೆಲ್ಲಾ ಕಲೆಹಾಕಿ, ಅದರಲ್ಲಿರುವ ಮಾರುಕಟ್ಟೆಗೆ ಪೂರಕವಾದ ಅಂಶಗಳನ್ನು ಪ್ರತ್ಯೇಕೀಕರಿಸಿ, ಅದಕ್ಕನುಗುಣವಾಗಿ ತಮ್ಮ ಉತ್ಪನ್ನಗಳನ್ನು ನಿಮ್ಮತ್ತ ಚಾಚುವ ಕೈಗಳು ಹೆಚ್ಚಲಿವೆ. ಹೀಗೇ ಈ ಮಾಹಿತಿಯ ಸುರಕ್ಷತೆ, ಪ್ರೈವಸಿಯ ಕುರಿತ ಕೂಗು ಕೂಡ ಜೋರಾಗಲಿದೆ.
ಮೂರು ಆಯಾಮ
3-ಡಿ ಪ್ರಿಂಟರ್‌ಗಳ ಬಳಕೆ ಶೇ.75ರಷ್ಟು ಅಧಿಕಗೊಳ್ಳಲಿದೆಯಂತೆ. ಒಮ್ಮೆ ಅಸಾಧ್ಯವೆಂದೇ ಪರಿಗಣಿಸಲಾಗಿದ್ದ ಈ ಸಾಧ್ಯತೆಯ ಆವಿಷ್ಕಾರದ ಬಳಕೆ ರಿಯಲ್ ಎಸ್ಟೇಟ್‌ನಲ್ಲಿ ಅಧಿಕವಾಗಲಿದೆ.
ನಿಮ್ಮಲ್ಲೂ ಸಿರಿ
ಈಗ ಕೆಲವೇ ಉಳ್ಳವರ ಬಳಿ ಮಾತ್ರ ಆಂಡ್ರಾಯ್ಡ್‌ನ ಗೂಗಲ್ ನೌ, ಐಓಎಸ್‌ನ ಸಿರಿ ಮುಂತಾದ ಸ್ಪರ್ಶಸಂವೇದಿ ಆ್ಯಪ್‌ಗಳಿವೆ. ಇನ್ನು ಮುಂದೆ ಇವುಗಳು ಸಾಮಾನ್ಯರಿಗೂ ಸಿಗುತ್ತವೆ. ಆಗ ನೀವು ನಿಮ್ಮ ಫೋನನ್ನು ಮುಟ್ಟಬೇಕಾಗಿಯೂ ಇಲ್ಲ, ಪಿಸುನುಡಿದರೆ ಸಾಕು.
ಸಾಮಾಜಿಕ ಕಚೇರಿ
ಮುಂದಿನ್ನು ಕಚೇರಿ ಸಂವಹನಗಳು ಫೇಸ್‌ಬುಕ್, ಟ್ವಿಟರ್‌ಗಳಲ್ಲೂ ನಡೆಯುತ್ತವೆ. ಈಗ ಅವೆಲ್ಲ ಇಮೇಲ್‌ಗಳಲ್ಲಷ್ಟೇ ಇವೆ. ನಿಮ್ಮ ಬಾಸ್ ಮುಖ್ಯ ಸಂದೇಶವನ್ನು ಫೇಸ್‌ಬುಕ್ ಮೂಲಕವೂ ಕಳಿಸಬಹುದು, ನೋಡಿಕೊಳ್ಳಿ.
ದೇಹದಿಂದ ಆಹ!
ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಶಾಖವನ್ನೇ ಮೊಬೈಲ್ ರಿಚಾರ್ಜ್‌ಗೆ ಬಳಸಿಕೊಳ್ಳಬಹುದೆ? ಸಂಶೋಧನೆ ಜಾರಿಯಲ್ಲಿದೆ. ಯಶಸ್ವಿಯಾದರೆ ವೇರಬಲ್ ಗ್ಯಾಜೆಟ್‌ಗಳ ಸಂಖ್ಯೆ ಹೆಚ್ಚಾಗಲಿದೆ.

ಕ್ಲೌಡ್ ಸೇವೆ
ಇತ್ತೀಚೆಗೆ ವಾಲ್ಟ್ ಡಿಸ್ನಿ ಕಂಪನಿ ತನ್ನ ಚಲನಚಿತ್ರಗಳನ್ನೆಲ್ಲ ಕ್ಲೌಡ್ ಕಂಪ್ಯೂಟಿಂಗ್‌ನಲ್ಲಿ ಸಿಗುವಂತೆ ಮಾಡಿದೆ. ಇದನ್ನು ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಕಂಪನಿಗಳೆಲ್ಲ ಅನುಸರಿಸಲಿವೆ. ಆಗ ನೀವು ಯೂಟ್ಯೂಬ್ ಮುಂದೆ ವಿಡಿಯೋ ನೋಡಲು ಒದ್ದಾಡಬೇಕಿಲ್ಲ, ನಿಮ್ಮ ಡಾಟಾಗಳ ಹೊರೆಯನ್ನು ನಿಮ್ಮ ಪಿಸಿ ಅಥವಾ ಲ್ಯಾಪ್‌ಟಾಪ್‌ನಲ್ಲಿ ಹೊರಬೇಕಿಲ್ಲ.



=  ಹರೀಶ್ ಕೇರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments