ಏಕಾಗ್ರತೆ ಮೂಡಿಸಿ
ಶಿಕ್ಷಣ ಎಂಬುದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗ. ಅದರಲ್ಲಿ ಪರೀಕ್ಷೆ ಎಂಬುದು ಒಂದು ಮುಖ್ಯವಾದ ಘಟ್ಟ. ಈ ಪರೀಕ್ಷೆ ಸಮಯದಲ್ಲಿ ಪಾಲಕರ ಪಾತ್ರ ಬಹಳ ಮುಖ್ಯವಾಗಿದೆ. ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಕೊಡಬೇಕು. ಟಿವಿ ವೀಕ್ಷಣೆ ಮತ್ತು ಇನ್ನಿತರ ಮನರಂಜನೆಗಳನ್ನು ಕಡಿಮೆ ಮಾಡಿ ಮಕ್ಕಳ ಓದಿನ ಕಡೆ ಲಕ್ಷ್ಯ ಕೊಡಬೇಕು. ಮಕ್ಕಳ ಜೊತೆಗೆ ಬೆಳಗ್ಗೆ ಬೇಗನೆ ಎದ್ದು ಏಕಾಗ್ರತೆಗಾಗಿ ಧ್ಯಾನ, ಪ್ರಾಣಾಯಾಮಮಾಡಿಸಬೇಕು. ಇದರಿಂದ ಓದುವುದರಲ್ಲಿ ಏಕಚಿತ್ತದ ಜೊತೆಗೆ ಆರೋಗ್ಯವೂ ಉತ್ತಮವಾಗುತ್ತದೆ. ಮಕ್ಕಳು ಓದುವಾಗ ಪಾಲಕರು ಜೊತೆಯಲ್ಲಿ ಕುಳಿತುಕೊಳ್ಳಬೇಕು. ಪರೀಕ್ಷಾ ಸಮಯದಲ್ಲಿ ಪಾಲಕರು ಮಕ್ಕಳೊಂದಿಗೆ ಪ್ರೀತಿ-ವಿಶ್ವಾಸದಿಂದ ನಡೆದುಕೊಳ್ಳಬೇಕು. ಜೊತೆಗೆ ಪರೀಕ್ಷೆಯ ಭಯ ಹುಟ್ಟಿಸದೆ, ಧೈರ್ಯ ತುಂಬಬೇಕು.
= ಶ್ಯಾಮಲಾ ರಮೇಶ್, ದಾವಣಗೆರೆ.
ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಬೇಡ
ಮಕ್ಕಳಿಗೆ ಪರೀಕ್ಷೆ ಸಮೀಪಿಸುತ್ತಿದ್ದಂತೆ ಒಂದು ರೀತಿಯ ಪರೀಕ್ಷಾ ಜ್ವರ ಪ್ರಾರಂಭವಾಗುವುದು ಸಹಜ. ಶಾಲೆಯ ಆರಂಭದಿಂದಲೂ ಏಕಾಗ್ರತೆಯಿಂದ ಎಲ್ಲ ಪಾಠ ಪ್ರವಚನದಲ್ಲಿ ಮಾನಸಿಕವಾಗಿ ಹಾಜರಿದ್ದು ಏಕಚಿತ್ತದಿಂದ ಓದಿ ಧೈರ್ಯವಾಗಿ ಪರೀಕ್ಷೆ ಎದುರಿಸುವವರು ಒಂದೆಡೆಯಾದರೆ, ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಎಂಬಂತೆ ಪರೀಕ್ಷೆಯ ಹಿಂದಿನ ದಿನ ನಿದ್ದೆಗೆಟ್ಟು ಓದಿ ತಯಾರಾಗುವವರು ಇನ್ನೊಂದು ಕಡೆ ಇರುತ್ತಾರೆ. ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ಯಾವಾಗಲೂ 'ಕಷ್ಟಪಟ್ಟು ಓದಿ' ಎಂದು ಹೇಳುವ ಬದಲು ಇಷ್ಟಪಟ್ಟು ಓದಿ ಎಂದು ಸಲಹೆ ಕೊಡಬೇಕು. 'ಶ್ರದ್ಧಾವಾನ್ ಲಭತೇ ಜ್ಞಾನಂ' ಎಂಬಂತೆ ಶ್ರದ್ಧೆಯಿಂದ ಓದಿ-ಮನಸ್ಸನ್ನು ಬೇರೆಡೆಗೆ ಹೊಯ್ಯಗೊಡಬೇಡಿ ಎಂದು ಸಲಹೆ ನೀಡಬೇಕು. ಪರೀಕ್ಷಾರ್ಥಿಗಳು ಪರೀಕ್ಷೆಯಲ್ಲಿ ಕೊಟ್ಟ ಪ್ರಶ್ನೆಪತ್ರಿಕೆಯನ್ನು ಎರಡೆರೆಡು ಬಾರಿ ಓದಿ ಸುಲಭ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ ತದನಂತರ ಉಳಿದ ಪ್ರಶ್ನೆಗಳತ್ತ ಗಮನ ಕೊಡಲು ಹೇಳಿ. ಪರೀಕ್ಷೆಯ ಕೊನೆಯ ಗಳಿಗೆಯವರೆಗೂ ಉತ್ತರ ಪತ್ರಿಕೆ ಕೊಡದೇ ಯೋಚಿಸಿ ಉತ್ತರಿಸಲು ತಿಳಿಸಿ.
= ಬಿ.ಕೆ.ಶ್ರೀಕಾಂತ್, ಬೆಟ್ಟದಪುರ.
ಮನಸ್ಸನ್ನು ಸ್ಥಿಮಿತದಲ್ಲಿಡಿ
ಪರೀಕ್ಷೆ ಎಂಬುದು ಶಿಕ್ಷಣದ ಒಂದು ಮುಖ್ಯಭಾಗ. ಆದರೆ ಇದೇನು ದೊಡ್ಡ ಸವಾಲು ಅಲ್ಲ ಎಂಬ ಅರಿವು ಪಾಲಕರಿಗೆ ಇರಬೇಕು. ಮಕ್ಕಳಲ್ಲಿ ಓದಲು ಒತ್ತಡ ಹೇರುವುದಕ್ಕಿಂತ ಅವರಿಗೆ ಓದುವ ವಾತಾವರಣ ಕಲ್ಪಿಸಬೇಕು. ಓದುವ ಸಮಯ ಹೆಚ್ಚಿಸಿ ಟಿವಿ, ಕ್ರಿಕೆಟ್ ಮ್ಯಾಚ್ಗಳನ್ನು ಕಡಿಮೆ ಮಾಡಲು ತಿಳಿಹೇಳಬೇಕು. ಆಟವನ್ನು ಕಡಿಮೆ ಮಾಡಬೇಕು ಆದರೆ, ನಿಲ್ಲಿಸಬಾರದು, ಆಟದಿಂದ ಮನಸ್ಸು ಆಹ್ಲಾದಕರದಿಂದ ಕೂಡಿ ಓದಿದ್ದು ಮನಸ್ಸಲ್ಲಿ ಉಳಿಯಲು ಸಹಕರಿಸುತ್ತದೆ. ಓದಲು ಕುಳಿತುಕೊಳ್ಳುವ ಮೊದಲು ಧ್ಯಾನ ಮಾಡಿ ನಂತರ ಓದಲು ತಿಳಿಸಿ. ಯಾವುದೇ ಕಾರಣಕ್ಕೂ ಓದಿಸುವ ಒತ್ತಡದಲ್ಲಿ ನಿದ್ರಾಹೀನತೆಯಾದರೆ ಮರೆವು ಜಾಸ್ತಿಯಾಗಿ ಓದಿದ್ದೂ ಮರೆತು ಹೋಗುತ್ತದೆ. ಧೈರ್ಯವಾಗಿ ಪರೀಕ್ಷೆ ಎದುರಿಸಲು ಸಹಕರಿಸಬೇಕು.
= ಅಶೋಕ್ ಕಾರೇಕುರ.
'ಜಗುಲಿ'ಯಲ್ಲಿ ಈ ಸಲದ ವಿಷಯ 'ಲೋಕಸಭೆ ಚುನಾವಣೆಯಲ್ಲಿ ಶಾಸಕರ ಸ್ಪರ್ಧೆ ಎಷ್ಟು ಸಮಂಜಸ?'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com