ಸಿಹಿ ಅಥವಾ ಉಪ್ಪಿನ ಪದಾರ್ಥಗಳನ್ನು ಹೆಚ್ಚು ತಿಂದಾಗ ದಾಹ ಹೆಚ್ಚಾಗಲು ಕಾರಣವೇನು?
ನಾವು ತಿಂದ ಆಹಾರವು ಜೀವಕೋಶಗಳಲ್ಲಿ ಪ್ರವೇಶಿಸಬೇಕಾದರೆ ಅವು ನೀರಿನಲ್ಲಿ ಕರಗಿ ದ್ರಾವಣ ರೂಪದಲ್ಲಿ ಇರಬೇಕು. ಜೀವಕೋಶಗಳಲ್ಲಿ 'ಅಸ್ಮಾಸಿಸ್' ಕ್ರಿಯೆಯಿಂದ ದ್ರಾವಣಗಳ ವಿನಿಮಯ ಕ್ರಿಯೆ ನಡೆಯುತ್ತದೆ. ಜೀವಕೋಶದಲ್ಲಿಯ ದ್ರಾವಣದಲ್ಲಿ ಕರಗಿದ ಲವಣ ಪ್ರಮಾಣಕ್ಕಿಂತ ಆಹಾರದಲ್ಲಿಯ ದ್ರಾವಣ ಲವಣ ಪ್ರಮಾಣ ಕಡಿಮೆ ಇದ್ದಲ್ಲಿ ಮಾತ್ರ ನೀರು ಜೀವಕೋಶದಲ್ಲಿ ಪ್ರವೇಶಿಸುತ್ತದೆ. ಇದನ್ನೇ 'ಅಸ್ಮಾಸಿಸ್' ಕ್ರಿಯೆ ಎನ್ನುತ್ತೇವೆ. ನಾವು ಹೆಚ್ಚು ಸಿಹಿ ಅಥವಾ ಉಪ್ಪನ್ನೊಳಗೊಂಡ ಆಹಾರವನ್ನು ಸೇವಿಸಿದಾಗ, ಜೀವಕೋಶದ ದ್ರಾವಣದಲ್ಲಿಯ ಲವಣ ಪ್ರಮಾಣಕ್ಕಿಂತ ಆಹಾರದ ದ್ರಾವಣದ ಪ್ರಮಾಣ ಹೆಚ್ಚಾಗುತ್ತದೆ. ಆಗ ನೀರು ಜೀವಕೋಶವನ್ನು ಸೇರುವ ಬದಲು, ಅದರಿಂದ ಹೊರಬಂದು ಆಹಾರದ ದ್ರಾವಣವನ್ನು ಸೇರುತ್ತದೆ. ಇದರಿಂದಾಗಿ ಜೀವಕೋಶದಲ್ಲಿ ನೀರಿನ ಪ್ರಮಾಣ ಕಡಿಮೆ ಆಗುವುದು. ಆಗ ನೀರಿನ ಕೊರತೆ ಉಂಟಾಗುವುದು. ಇದನ್ನೇ ನಾವು 'ದಾಹ', 'ನೀರಡಿಕೆ' ಎನ್ನುತ್ತೇವೆ. ಈ ಕಾರಣದಿಂದಾಗಿ ಸಿಹಿ ಅಥವಾ ಉಪ್ಪು ಇರುವ ಪದಾರ್ಥಗಳನ್ನು ಹೆಚ್ಚು ಸೇವಿಸಿದಾಗ ದಾಹ ಉಂಟಾಗಿ, ಹೆಚ್ಚಿನ ನೀರನ್ನು ಕುಡಿಯಬೇಕೆನಿಸುತ್ತದೆ.
-ಎಚ್. ಕೃಷ್ಣಮೂರ್ತಿ