ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಮರಳಿ ಬಾ...

Mainashree
Updated On : 7 Mar 2014, 11:44 am

ಮಾಯಾಮೃಗವೆ...
ಕೆಲವು ಚಿತ್ರಗಳಿರುತ್ತವೆ. ಅದೆಷ್ಟೇ ಮರುಬಿಡುಗಡೆಯಾದರೂ ಹೌಸ್‌ಫುಲ್ಲಾಗುತ್ತವೆ. ಟಿವಿ ಷೋಸ್ ಕೂಡ ಅಷ್ಟೇ. ಇವುಗಳ ರಿಪೀಟೆಡ್ ಜನಪ್ರಿಯತೆಗೆ ಕಾರಣ ಹುಡುಕುವುದು ಕಷ್ಟ ಏನಲ್ಲ. ಅವುಗಳ ಕ್ಲಾಸಿಕ್ ಅನಿಸುವ ಅಂಶಗಳು ಹಾಗೂ ಎಂದೆಂದಿಗೂ ಸಮಕಾಲೀನ ಅನಿಸುವ ವಸ್ತುಗಳು ಸದಾ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ. ಕನ್ನಡ ಕಿರುತೆರೆಯಲ್ಲಿ ಮೆಗಾ ಧಾರಾವಾಹಿಗಳು ಪೂರ್ತಿಯಾಗಿ ಮರುಪ್ರಸಾರ ಆಗಿರುವ ಉದಾಹರಣೆಗಳು ತೀರ ಕಡಿಮೆ. ಚಾನಲ್‌ನಲ್ಲಿ ಖಾಲಿ ಅವಧಿಯನ್ನು ತುಂಬಿಸುವ ಸಲುವಾಗಿ ಮರುಪ್ರಸಾರ ಆಗುವ ಅಥವಾ ಬೆಳಿಗ್ಗೆ ಪ್ರಸಾರವಾಗುವ ಧಾರಾವಾಹಿ ಸಂಜೆ ಮತ್ತೊಮ್ಮೆ ಮರುಪ್ರಸಾರ ಆಗುವುದು ಬೇರೆ ಮಾತು. ಮೊದಲ ಬಾರಿ ಪ್ರಸಾರವಾಗಿ ಅಪಾರ ಜನಪ್ರಿಯತೆ ಪಡೆದು ಮತ್ತೊಮ್ಮೆ ದಶಕಗಳ ನಂತರ ಇನ್ನೊಂದು ವಾಹಿನಿಯಲ್ಲಿ ಒತ್ತಾಯದ ಮೇರೆಗೆ ಎಂಬಂತೆ ಪ್ರಸಾರವಾಗುವುದು ಮಾತ್ರ ಅಪರೂಪದ ಸಂಗತಿ.
ಇಂಥ ಅಪರೂಪವು ಇದೇ ಮಾರ್ಚ್ ಹತ್ತರಿಂದ ಜೀ ಕನ್ನಡ ವಾಹಿನಿಯಲ್ಲಿ ಸಂಭವಿಸಲು ಸಜ್ಜಾಗಿದೆ. ದೂರದರ್ಶನದ ಜನಪ್ರಿಯ ಮೆಗಾಧಾರಾವಾಹಿ, ಟಿ.ಎನ್ ಸೀತಾರಾಮ್ ನಿರ್ದೇಶನದ  ಮಾಯಾಮೃಗ ಸೋಮವಾರದಿಂದ ಪ್ರತಿಸಂಜೆ ಆರುಗಂಟೆಗೆ ಮತ್ತೊಮ್ಮೆ ಕಾಣಿಸಿಕೊಳ್ಳಲಿದೆ. ಮಾಯಾಮೃಗವನ್ನು ಹಿಡಿಯುವವರು ಸಂಜೆ ಕಾದು ಕೂರಬಹುದು.
ಈ ಸಂತಸವನ್ನು ಹಂಚಿಕೊಳ್ಳಲು ಸೇರಿದ್ದ ಮಾಯಾಮೃಗ ತಂಡ,  ಈ ಸಂದರ್ಭದಲ್ಲಿ ಹಲವು ಮಧುರ ನೆನಪುಗಳನ್ನು ಮೆಲುಕು ಹಾಕಿತು. ಆ ಒಂದಷ್ಟು ವಿಶೇಷ ಅಂಶಗಳ ಪಟ್ಟಿ ನಿಮ್ಮ ಮುಂದೆ.
=  ಸೀತಾರಾಮ್ ಮತ್ತು ಪಿ. ಶೇಷಾದ್ರಿ ಅವರ ಪ್ರೀತಿಯ ಒತ್ತಾಯಕ್ಕೆ ಮಣಿದು ಮೊಟ್ಟಮೊದಲ ಬಾರಿಗೆ ಧಾರಾವಾಹಿಯೊಂದಕ್ಕೆ ಮೈಸೂರು ಮಲ್ಲಿಗೆ ಕವಿ ಕೆ.ಎಸ್.ನ. ಶೀರ್ಷಿಕೆ ಗೀತೆ ಬರೆದರು.
= ಮೆಗಾ ಧಾರಾವಾಹಿಯ ಶೀರ್ಷಿಕಾಗೀತೆಗೆ ಸಂಗೀತ ಕೊಡುವುದು ನನ್ನಿಂದ ಅಸಾಧ್ಯ ಹಾಗೂ ಇಷ್ಟವಿಲ್ಲ ಎಂಬಂತೆ ಕೈಕೊಡವಿ ಎದ್ದಿದ್ದ ಸಿ.ಅಶ್ವಥ್, ಕೆ.ಎಸ್.ನ. ಅವರ ಸಾಲುಗಳನ್ನು ಒಮ್ಮೆ ನೋಡುತ್ತಿದ್ದಂತೆಯೇ, ತಮಗೇ ಅರಿವಿಲ್ಲದಂತೆ ಟ್ಯೂನ್ ತಯಾರಿಸಿಬಿಟ್ಟರಂತೆ. ಈ ಮಾಯಾ ಟ್ಯೂನ್ ಸೃಷ್ಟಿಯಾಗುವುದಕ್ಕೆ ತಗುಲಿದ  ಸಮಯ ಕೇವಲ ಒಂದೂಕಾಲು ನಿಮಿಷ.
= ಮರುಪ್ರಸಾರದ ಈ ಹೊತ್ತಿನಲ್ಲಿ ತಿರುಗಿ ನೋಡಿದರೆ ಅಂದು ಈ ಯಶಸ್ಸಿನ ರೂವಾರಿಗಳಾಗಿದ್ದ ಸಿ.ಅಶ್ವಥ್, ಕೆ.ಎಸ್.ನ., ಪಾತ್ರಗಳಾಗಿದ್ದ ಭರತ್ ಭಾಗವತರ್, ವೈಶಾಲಿ ಕಾಸರವಳ್ಳಿ ಹೀಗೆ ಹಲವರು ಕೇವಲ ನೆನಪುಗಳಲ್ಲಿ ಅಮರರಾಗಿದ್ದಾರೆ.   
= ಮೂರು ಟ್ರ್ಯಾಕ್ ಇದ್ದ ಈ ಧಾರಾವಾಹಿಗೆ  ಪಿ.ಶೇಷಾದ್ರಿ, ನಾಗೇಂದ್ರ ಶಾ ಹಾಗೂ ಟಿ.ಎನ್.ಸೀತಾರಾಮ್ ಮೂವರು ನಿರ್ದೇಶಕರು.
= ಮೊತ್ತಮೊದಲ ಬಾರಿಗೆ ಮೆಗಾ ಸೀರಿಯಲ್ಲಿಗೆ ಕಥೆ ಮಾಡಲು ಒಂದು ವಾರ ಬೇಕೆಂದು ನಂದಿ ಬೆಟ್ಟಕ್ಕೆ ಹೋಗಿದ್ದ ಈ ನಿರ್ದೇಶಕತ್ರಯರು ಕಥೆ ಸಿದ್ದಪಡಿಸಿಕೊಂಡು ಬಂದಿದ್ದು ಕೇವಲ ಮೂರೇ ಗಂಟೆಗಳಲ್ಲಿ.
= ಧಾರಾವಾಹಿಯ ಪಾತ್ರಸೃಷ್ಟಿ ಹಾಗೂ ಸಂಭಾಷಣೆಯ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದು ಜೆ.ಎಂ.ಪ್ರಹ್ಲಾದ್.
= ಸ್ಲಾಟ್ ಸಿಗುವುದೇ ಡೌಟ್ ಎಂಬಂತಿದ್ದಾಗಲೂ ಸೀತಾರಾಮ್‌ರನ್ನು ಹುರಿದುಂಬಿಸಿ , ಚಾನೆಲ್ ಜೊತೆಗೆ ಮತ್ತೆ ಮತ್ತೆ ಮಾತನಾಡಿ ಕೊನೆಗೂ ಸ್ಲಾಟ್ ಗಿಟ್ಟಿಸಿ ಇದನ್ನು ಸಾಧ್ಯವಾಗಿಸಿದ್ದು ಗುರುದಾಸ್ ಶೆಣೈ.
= ಸಂವಾದ ಎಂಬ ಪರಿಕಲ್ಪನೆಯನ್ನು ಹುಟ್ಟುಹಾಕಿದ ಮೊದಲ ಧಾರಾವಾಹಿ ಮಾಯಾಮೃಗ. ಮೈಸೂರಿನಲ್ಲಿ ನಡೆದ ಮೊದಲ ಸಂವಾದಕ್ಕೆ ಸೇರಿದ್ದು ಬರೋಬ್ಬರಿ ಐದೂವರೆ ಸಾವಿರ ಜನ.
= ಮಾಳವಿಕಾ ಮತ್ತು ಅವಿನಾಶ್‌ರ ಪ್ರೀತಿ ಹಾಗೂ ವಿವಾಹವಾಗಿದ್ದೂ ಇದೇ ಧಾರಾವಾಹಿಯ ಮೂಲಕ.
= ನಟಿ ವೀಣಾ ಸುಂದರ್ ಇದೇ ಧಾರಾವಾಹಿಯ ಸಮಯದಲ್ಲಿ ಮದುವೆಯಾಗಿ, ತಾಯಿಯಾಗಿ, ತನ್ನ ಎರಡು ದಿನದ ಶಿಶುವನ್ನೂ ಕ್ಯಾಮರಾಗೆ ಮುಖವೊಡ್ಡಿಸಿದ ದಾಖಲೆಯೂ ಮಾಯಾಮೃಗ ಧಾರಾವಾಹಿಗೆ ಸಲ್ಲುತ್ತದೆ.
= ಸಾಮಾಜಿಕವಾಗಿಯೂ ಹಲವು ಕ್ರಾಂತಿ ಮಾಡಿದ ಈ ಧಾರಾವಾಹಿಯ ಅಭಿಮಾನಿಗಳು ಮಾಯಮೃಗ ಸಂಘ ಅಂತ ಮಾಡಿಕೊಂಡು ಕುರುಬರ ಹಳ್ಳಿಯ ವೈನ್ ಸ್ಟೋರೊಂದನ್ನು ಎತ್ತಂಗಡಿ ಮಾಡಿಸುವಲ್ಲಿ ಯಶಸ್ವಿಯಾಗಿತ್ತು.
= ಹೀಗೆ ಇನ್ನೂ ಹತ್ತು ಹಲವು ವಿಶೇಷ ನೆನಪುಗಳನ್ನು ಹೊತ್ತಿರುವ ಮಾಯಾಮೃಗ ಮತ್ತೊಮ್ಮೆ ವೀಕ್ಷಕರನ್ನು ನಾಸ್ಟಾಲ್ಜಿಕ್ ಮಾಡಲು ಹೊರಟಿದೆ. ಬದಲಾಗಿರುವ ಈ ಕಾಲಘಟ್ಟದಲ್ಲಿ ಆದರ್ಶಗಳೇ ಮೈವೆತ್ತಂತಿದ್ದ ಆ ಕಾಲದ  ಮಾಯಾಮೃಗ ಜನರ ಮೇಲೆ ಪರಿಣಾಮ ಬೀರಬಲ್ಲದೇ ಎಂಬುದನ್ನು ಕಾದು ನೋಡಬೇಕಿದೆ.

= ಎನ್ನೆಸ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments