ರಮ್ಯಾ ರೆಸಾರ್ಟ್‌ನಲ್ಲಿ TEAM CID
ಕಿರುತೆರೆಯಲ್ಲಿ ಕ್ರೈಮ್ ಕಾರ್ಯಕ್ರಮಗಳು, ಫ್ಯಾಮಿಲಿ ಧಾರಾವಾಹಿಗಳಿಗೆ ಹೋಲಿಸಿಕೊಂಡರೆ ಕ್ರೈಮ್ ಧಾರಾವಾಹಿಗಳು ಅಪರೂಪ. ಅಥವಾ ಇಲ್ಲವೇ ಇಲ್ಲ ಎನ್ನಬಹುದು. ಈ ಮಾತಿಗೆ ಅಪವಾದ ಎಂಬಂತೆ ಕಳೆದ ಎರಡ್ಮೂರು ತಿಂಗಳುಗಳಿಂದ ಜೀ ಕನ್ನಡ ವಾಹಿನಿಯಲ್ಲಿ ಕ್ರೈಮ್ ಧಾರಾವಾಹಿ ಯಶಸ್ವಿಯಾಗಿ ಪ್ರಸಾರವಾಗುತ್ತಿದೆ. 'ಕ್ರೈಮ್ ಸ್ಟೋರಿ' ಜೊತೆಗೆ 'ಕ್ರೈಮ್ ಕಥೆ'ಗಳನ್ನೂ ನೋಡುವ ಭಾಗ್ಯವನ್ನು ಕಿರುತೆರೆ ಪ್ರೇಕ್ಷಕರಿಗೆ ದಯಪಾಲಿಸಿರುವುದು 'ಕರ್ನಾಟಕ ಸಿಐಡಿ'. ಆರಂಭದಲ್ಲಿ ಇದರ ನಿರ್ದೇಶಕರಾಗಿ ಕಲಾಗಂಗೋತ್ರಿ ಮಂಜು ಇದ್ದರು. ಈಗ ಅವರ ಬದಲಿಗೆ ರವಿಕಿಶೋರ್ ಬಂದಿದ್ದಾರೆ. ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 10 ಗಂಟೆಗೆ ಪ್ರಸಾರವಾಗುವ ಸಿಐಡಿ ಇಲ್ಲಿವರೆಗೂ 25 ಕಂತುಗಳನ್ನು ಯಶಸ್ವಿಯಾಗಿ ದಾಟಿ ಬಂದಿದ್ದು, ಇದರಲ್ಲಿ 6 ಕಂತುಗಳನ್ನು ಕಲಾಗಗೋಂತ್ರಿ ಮಂಜು ನಿರ್ದೇಶಿಸಿದ್ದಾರೆ.
ಇತ್ತೀಚೆಗೆ ಸಿಐಡಿ ಟೀಮ್ ಬೆಂಗಳೂರಿನ ಹೃದಯ ಭಾಗದಿಂದ ತುಸು ದೂರ ಇರುವ ಮಲ್ಲತ್ತಹಳ್ಳಿ ಬಳಿಯ ರಮ್ಯಾ ರೆಸಾರ್ಟ್‌ನಲ್ಲಿ ಬೀಡು ಬಿಟ್ಟಿತ್ತು. ಅಂದಹಾಗೆ ಇದು ನಟಿ ರಮ್ಯಾ ಅವರಿಗೆ ಸೇರಿದ ರೆಸಾರ್ಟ್ ಅಲ್ಲ ಎಂಬುದು ನಿಮ್ಮ ಗಮನಕ್ಕಿರಲಿ. ಈಗಾಗಲೇ ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ನಟ ಕಿಶೋರ್, ಮುತ್ತಪ್ಪ ರೈ ಸೇರಿದಂತೆ ಹಲವು ಗಣ್ಯರು ಈ ಧಾರಾವಾಹಿಯ ಅತಿಥಿ ಪಾತ್ರಗಳಲ್ಲಿ ಬಣ್ಣಹಚ್ಚಿದ್ದಾರೆ. ಹೀಗಾಗಿ ಪ್ರತಿವಾರ ಧಾರಾವಾಹಿ ಬಗ್ಗೆ ವೀಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ. ನಟಿ ಸಂಜನಾ ಗಾಂಧಿ ಕೂಡ ಇದೇ ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಆ ಕಂತು ಸದ್ಯದಲ್ಲೇ ಪ್ರಸಾರವಾಗಲಿದೆ. ಸಚಿನ್ ಸುವರ್ಣ, ವೀಣಾ ಪೊನ್ನಪ್ಪ, ತೇಜ್ ಪೊನ್ನಪ್ಪ, 'ಭಜರಂಗಿ' ಚಿತ್ರದ ಲೋಕೇಶ್, ಹೇಮಂತ್ ಹಾಗೂ ಅಂಜಲಿ ಅವರು ಧಾರಾವಾಹಿ ಮುಖ್ಯ ಪಾತ್ರಧಾರಿಗಳು. ಧಾರಾವಾಹಿ ಆರಂಭವಾದ ಮೇಲೆ ತೇಜ್ ಪೊನ್ನಪ್ಪ ಸೇರ್ಪಡೆಯಾಗಿದ್ದಾರೆ. 'ನನಗೆ ಇದು ಮೊದಲ ಧಾರಾವಾಹಿ. ತುಂಬಾ ಚೆನ್ನಾಗಿದೆ. ಎಲ್ಲೇ ಹೋದರೂ ಸಿಐಡಿ ಹುಡುಗಿ ಅಂತ ಗುರುತಿಸುತ್ತಾರೆ' ಎನ್ನುವುದು ತೇಜ್ ಮಾತು. ಧಾರಾವಾಹಿಗೆ ದಾವುದ್ ಛಾಯಾಗ್ರಹಣ ಮಾಡುತ್ತಿದ್ದಾರೆ. ಆದರೆ, ಸಿಐಡಿ ತಂಡದ ಮುಖ್ಯಸ್ಥರಾಗಿದ್ದ ಸಚಿನ್ ಸುವರ್ಣ ಸದ್ಯ ಧಾರಾವಾಹಿಯಲ್ಲಿ ಕಾಣುತ್ತಿಲ್ಲ.
'ಪ್ರತಿ ಕಂತಿನಲ್ಲೂ ನೈಜ ಹಾಗೂ ಕಾಲ್ಪನಿಕ ಘಟನೆಗಳನ್ನು ಸೇರಿಸಿಕೊಂಡು ಸಿನಿಮ್ಯಾಟಿಕ್ ಆಗಿ ಕಥೆ ಕಟ್ಟಿಕೊಡುತ್ತಿದ್ದೇವೆ. ಚಂದ್ರ ಬಾರ್ಕೂರ್ ಅವರ ಸ್ಕ್ರಿಪ್ಟ್ ತುಂಬಾ ಚೆನ್ನಾಗಿದೆ. ನೋಡುಗರಲ್ಲಿ ಕುತೂಹಲವನ್ನು ಹುಟ್ಟಿ ಹಾಕುತ್ತಿದೆ' ಎನ್ನುತ್ತಾರೆ ನಿರ್ದೇಶಕ ರವಿಕಿಶೋರ್. 'ಈ ಧಾರಾವಾಹಿಯನ್ನು ಕೇವಲ 30 ಕಂತುಗಳಿಗೆ ಸೀಮಿತ ಮಾಡಲಾಗಿತ್ತು. ಜನಪ್ರಿಯತೆ ಹೆಚ್ಚಾಗಿರುವ ಕಾರಣ ಮತ್ತಷ್ಟು ಕಾಲ ಮುಂದುವರಿಸುವ ಸಾಧ್ಯತೆಗಳಿವೆ' ಎನ್ನುತ್ತಾರೆ ಜೀ ಕನ್ನಡ ವಾಹಿನಿಯ ಸಿದ್ಧಪ್ಪ ಕಾಳೋಜಿ.
= ಆರ್. ಕೇಶವಮೂರ್ತಿ