ಸಿಂಗಾಪುರ ಸ್ತ್ರೀಯರನ್ನು ಕಾಪಾಡುತ್ತಿರುವುದು ಏನು?
ಮಲೆನಾಡು, ಕರಾವಳಿಯಲ್ಲಿ ಹಿತ್ತಿಲಿನಲ್ಲಿ ತರಕಾರಿ ಬೆಳೆಯುವ ಪದ್ಧತಿ ಈಗಲೂ ಇದೆ. ಬೇಸಿಗೆಯಲ್ಲಿ ಮೊಗೆಕಾಯಿ (ಮಂಗಳೂರು ಸೌತೆ) ಪ್ರಮುಖ ಬೆಳೆ. ಮಳೆಗಾಲದ ನಾಲ್ಕೈದು ತಿಂಗಳು ಕಾಯಂ ತರಕಾರಿ ಎಂದರೆ ತರಹೇವಾರಿ ಬೀನ್ಸ್‌ಗಳು. ಸೋಡಿಗೆ (ಬೀನ್ಸ್) ಪಲ್ಯ ಅಥವಾ ಹುಳಿ ಇಲ್ಲದ ದಿನಗಳು ತೀರಾ ಅಪರೂಪ. ವಿಷೇಷ ದಿನಗಳಲ್ಲಂತೂ ಬೀನ್ಸ್ ಅಥವಾ ಕ್ಯಾಬೇಜ್ ಪಲ್ಯ ಕಾಯಂ. ನಮ್ಮ ಹೋಟೆಲ್‌ಗಳಲ್ಲೂ ಅಷ್ಟೆ. ಈರುಳ್ಳಿ, ಆಲೂಗಡ್ಡೆಯಷ್ಟೇ ಅಗತ್ಯವಿರುವ ತರಕಾರಿ ಎಂದರೆ ಬೀನ್ಸ್. ಇಂಥ ಬೀನ್ಸ್ ಬಗ್ಗೆ ನಮಗೆ ಗೊತ್ತಿರದ ಸಂಗತಿ ಎಂದರೆ ಅದರಲ್ಲಿ ಸ್ತನ ಕ್ಯಾನ್ಸರ್ ತಡೆಯುವ ಸಾಮರ್ಥ್ಯವಿದೆ ಎನ್ನುವುದು. 'ಅಧಿಕ ಬೀನ್ಸ್ ಸೇವನೆ ಸ್ತನ ಕ್ಯಾನ್ಸರ್‌ನಿಂದ ದೂರ ಇಡಬಲ್ಲದು. ಕ್ಯಾನ್ಸರ್‌ಗೆ ಕಾರಣವಾಗುವ ಈಸ್ಟ್ರೋಜೆನ್ ಅನ್ನು ಪ್ರತಿಬಂಧಿಸುವ ಪೈಥೊಈಸ್ಟ್ರೋಜೆನ್‌ಗಳು ಬೀನ್ಸ್‌ನಲ್ಲಿ ಹೇರಳವಾಗಿವೆ' ಎನ್ನುತ್ತಾರೆ ತಜ್ಞರು. ಬೀನ್ಸ್ ಅನ್ನು ಹೆಚ್ಚಾಗಿ ಬಳಸುವ ಪ್ರದೇಶಗಳಲ್ಲಿ ಸ್ತನ ಕ್ಯಾನ್ಸರ್ ಪ್ರಮಾಣ ಕಡಿಮೆ ಎನ್ನುವುದನ್ನು ಸಂಶೋಧನೆಗಳೂ ಶ್ರುತಪಡಿಸಿವೆ.
ಬೀನ್ಸ್ ವಿಷಯ ಅದಾದರೆ, ಸೋಯಾಬೀನ್ಸ್‌ನದು ಇನ್ನೊಂದು ಕಥೆ. ಸೋಯಾಬೀನ್ಸ್‌ನಲ್ಲಿ ಈಸ್ಟ್ರೊಜೆನ್ ಉತ್ಪಾದನೆಗೆ ಉತ್ತೇಜನ ನೀಡುವ ಹಲವು ನೈಸರ್ಗಿಕ ಅಂಶಗಳಿವೆ. ಆದಾಗ್ಯೂ ಇದನ್ನು ಸ್ತನ ಕ್ಯಾನ್ಸರ್ ವಿರುದ್ಧ ಬಳಸಲಾಗುತ್ತದೆ! ಎಲ್ಲ ವಯೋವಾನದ ಮಹಿಳೆಯಲ್ಲಿ ಸ್ತನ ಕ್ಯಾನ್ಸರ್ ಕೋಶಗಳನ್ನು ನಾಶಪಡಿಸುವ, ಅವುಗಳ ವ್ಯಾಪಿಸುವಿಕೆ ತಡೆಯುವ ಗುಣ ಸೋಯಾಬೀನ್‌ನಲ್ಲಿ ಇದೆ ಎನ್ನುವುದು ಸಂಶೋಧಕರ ಅಭಿಮತ. ಇದು ಎಷ್ಟ ಪರಿಣಾಮಕಾರಿ ಎಂದರೆ ಸ್ತನ ಕ್ಯಾನ್ಸರ್‌ಗೆ ನೀಡುವ ಟೆಮಾಕ್ಸಿಫಿನ್ ಎನ್ನುವ ಔಷಧದ ಪ್ರಭಾವ ಒಂದು ಸೋಯಾಬೀನ್‌ನ ಪ್ರಭಾವಕ್ಕೆ ಸಮ! ಸೋಯಾದಲ್ಲಿ ಪೈಥೊಈಸ್ಟ್ರೊಜೆನ್ ಕೂಡ ಅಧಿಕವಾಗಿರುತ್ತದೆ. ಅದು ಕ್ಯಾನ್ಸರ್‌ಗೆ ಕಾರಣವಾಗುವ ಈಸ್ಟ್ರೊಜೆನ್ ಅನ್ನು ನಿಯಂತ್ರಿಸುತ್ತದೆ. ಸೋಯಾಬೀನ್‌ನ ಬಳಕೆಯೇ ಸಿಂಗಾಪುರದ ಮಹಿಳೆಯರನ್ನು ಸ್ತನ ಕ್ಯಾನ್ಸರ್‌ನಿಂದ ರಕ್ಷಿಸುತ್ತಿದೆ ಎನ್ನುವ ವಾದವೂ ಇದೆ. ಭಾರತದಲ್ಲಿ ಈಗೀಗ ಸೋಯಾಬೀನ್ ಬಳಕೆ ಹೆಚ್ಚುತ್ತಿದೆ.
ಬೀನ್ಸ್ ಅನ್ನು ಹೇಗೆ ಬಾಕಾದರೂ ಸೇವಿಸಬಹುದು. ಅದೇ ಮಾತು ಸೋಯಾಬೀನ್ಸ್‌ಗೆ ಅನ್ವಯ ಆಗುವುದಿಲ್ಲ. ಸೋಯಾಬೀನ್ ಮಿಲ್ಕ್, ಸೋಯಾಬೀನ್ ಕರ್ಡ್, ಸೋಯಾಬೀನ್ ಪೇಸ್ಟ್ ಯಾವುದಾದರೂ ಆದೀತು. ಆದರೆ ಸೋಯಾಬೀನ್ ಎಣ್ಣೆ ಸ್ತನ ಕ್ಯಾನ್ಸರ್‌ಗೆ ಔಷಧವಲ್ಲ. ಏಕೆಂದರೆ ಅದರಲ್ಲಿ ಸೋಯಾಬೀನ್‌ನಲ್ಲಿರುವ ಪ್ರೊಟೀನ್ ಇರುವುದಿಲ್ಲ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com