ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಖೋಟಾ ವ್ಯವಹಾರದ ವಿರುದ್ಧ ಕೋರ್ಟಿಗೆ ಹೋದೆ

Lingaraj Badiger
Updated On : 9 Mar 2014, 3:49 am

ಈ ಮಧ್ಯೆ ಇನ್ನೊಂದು ಮಹತ್ವದ ಘಟನೆ ನಡೆಯಿತು. 1973ನೇ ಡಿಸೆಂಬರ್ ತಿಂಗಳಲ್ಲಿ ಮೂರು ಜನ ಧರ್ಮದರ್ಶಿಗಳನ್ನು ನೇಮಿಸಿ ತಾವು ಟ್ರಸ್ಟಿನಿಂದ ನಿವೃತ್ತರಾಗಿರುವುದಾಗಿ ದಿವಾಕರರು ತಿಳಿಸಿದ್ದರಷ್ಟೆ. ಆದರೆ ಅವರಿಗೆ ತಮ್ಮ ಮಗನಿಂದ ಪತ್ರಿಕೆಗಳನ್ನು ಹಾಗೂ ಸಂಸ್ಥೆಯ ಆಡಳಿತವನ್ನು ನಡೆಸುವುದು ಸಾಧ್ಯವಿಲ್ಲವೆಂಬ ಮಾತು ಮನವರಿಕೆಯಾಗಿತ್ತು. ಕೇವಲ ಸ್ಥಿರಾಸ್ತಿ ಮಾತ್ರ ತಮ್ಮ ಮತ್ತು ಮಗನ ಕೈಯಲ್ಲಿ ಉಳಿಸಿಕೊಳ್ಳಲು, ಪತ್ರಿಕೆಗಳ ಪ್ರಕಟಣೆಯ ಜವಾಬ್ದಾರಿಯನ್ನು ಬೇರೆಯವರಿಗೆ ಒಪ್ಪಿಸಲು ಯೋಚಿಸುತ್ತಿದ್ದರು. ಇದೇ ಸಮಯದಲ್ಲಿ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರದ ಮಾಜಿ ಹಣಕಾಸು ಮಂತ್ರಿ ಎಂ.ವೈ. ಘೋರ್ಪಡೆಯವರ ಪರಿಚಯವಾಯಿತು. ಘೋರ್ಪಡೆಯವರ ತಂದೆ ಸಂಡೂರಿನ ರಾಜರಾಗಿದ್ದರು. ಅವರು ದಿವಾಕರನನ್ನು ಚೆನ್ನಾಗಿ ಬಲ್ಲವರು. ದಿವಾಕರರು ಮತ್ತು ಅವರ ಮಗ ಅನಂತ ಅವರ ಬಳಿಗೆ ಹೋಗಿ ಸಂಯುಕ್ತ ಕರ್ನಾಟಕ, ಕರ್ಮವೀರ ಮತ್ತು ಕಸ್ತೂರಿ ಪತ್ರಿಕೆಗಳನ್ನು ಮಾರಾಟ ಮಾಡುವುದಾಗಿ ತಿಳಿಸಿದರು.
 ಅದೇ ತಾನೆ ರಾಜಕೀಯದಲ್ಲಿ ಮುಂದೆ ಬರುತ್ತಿದ್ದ ಘೋರ್ಪಡೆಗೂ ಒಂದು ಪತ್ರಿಕೆ ಬೇಕಾಗಿತ್ತು. ಆ ಸಮಯದಲ್ಲಿ ಅವರು ದೇವರಾಜ ಅರಸರ ಕೈ ಬಿಟ್ಟು ಜನತಾ ಪಕ್ಷದ ಕಡೆಗೆ ಹೋಗಲು ಪ್ರಯತ್ನಿಸುತ್ತಿದ್ದರು. ಮುಖ್ಯಮಂತ್ರಿಯಾಗಬೇಕೆಂಬ ಅಪೇಕ್ಷೆಯೂ ಅವರಿಗಿತ್ತು. ಇದಕ್ಕಾಗಿ ಪತ್ರಿಕೆಯೊಂದರ ಸಹಾಯ ಬೇಕಾಗಿತ್ತು. ದಿವಾಕರರು ತಮ್ಮ ಪತ್ರಿಕೆಗಳನ್ನು ಮಾರಾಟ ಮಾಡುವುದಾಗಿ ತಿಳಿಸಿದ ತಕ್ಷಣ ಒಪ್ಪಿಕೊಂಡರು. ಅನಂತರ ದಿವಾಕರರು ಪಾಂಡಿಚೇರಿಗೆ ಹೋಗಿ ಧರ್ಮದರ್ಶಿಗಳ ಮಂಡಲಿಯ ಅಧ್ಯಕ್ಷ ನವಜಾತರಿಗೂ, ಇನ್ನೊಬ್ಬ ಧರ್ಮದರ್ಶಿ ಬಿ.ವಿ. ಭಂಡಾರಿಯವರಿಗೂ ಈ ವಿಷಯವನ್ನು ತಿಳಿಸಿ, ಇಂದಿನ ಪರಿಸ್ಥಿತಿಯಲ್ಲಿ ಪತ್ರಿಕೆಗಳನ್ನು ಮಾರುವುದೊಂದೇ ಮಾರ್ಗ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಟ್ಟರು. ಅವರಿಂದ ತಮ್ಮ ಮತ್ತು ತಮ್ಮ ಮಗನ ಹೆಸರಿನಲ್ಲಿ ಅಧಿಕಾರ ಪತ್ರಗಳನ್ನು (ಪವರ್ ಆಫ್ ಅಟಾರ್ನಿ) ತೆಗೆದುಕೊಂಡು ಬಂದರು.

ಖೋಟಾ ಕಂಪನಿ, ಖೋಟಾ ವ್ಯವಹಾರ
 ಸಂಯುಕ್ತ ಕರ್ನಾಟಕವನ್ನು ಖರೀದಿ ಮಾಡಿ ಅದನ್ನು ನಡೆಸಿಕೊಂಡು ಹೋಗಲು ಘೋರ್ಪಡೆಯವರು ತಕ್ಷಣ ಒಪ್ಪಿದ್ದಕ್ಕೆ ರಾಜಕೀಯವಲ್ಲದೆ ಇನ್ನೂ ಕೆಲವು ಕಾರಣಗಳು ಇದ್ದವು. ಇಡೀ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯವಾಗಿದ್ದ ಸಂಯುಕ್ತ ಕರ್ನಾಟಕ ಮತ್ತು ಅದರ ಚರಾಸ್ತಿ ಸ್ಥಿರಾಸ್ತಿಗಳು ಬಹಳ ಸುಲಭ ಬೆಲೆಯಲ್ಲಿ ದೊರೆಯುವುದೆಂದು ಅವರಿಗೆ ಮನವರಿಕೆಯಾಯಿತು. ಈ ಸುಸಂಧಿಯನ್ನು ಅವರು ಕಳೆದುಕೊಳ್ಳಲಿಲ್ಲ. ನಿಮ್ಮ ಆಸ್ತಿಗೆ ಎಷ್ಟು ಹಣ ಕೊಡಬೇಕೆಂದು ಘೋರ್ಪಡೆಯವರು ಕೇಳಿದಾಗ ದಿವಾಕರರು, 'ನೀವೇ ನಿಮ್ಮ ಆಡಿಟರುಗಳನ್ನು ಕಳಿಸಿ, ಬೆಲೆ ಕಟ್ಟಿ ಹಣ ಕೊಡಿ' ಎಂದರಂತೆ. ಆದರೆ ಟ್ರಸ್ಟಿನ ಸ್ಥಿರಾಸ್ತಿಗಳನ್ನು ಕೊಳ್ಳುವುದರಿಂದ ಕೆಲವು ಕಾನೂನು ತೊಡಕುಗಳು ಉದ್ಭವಿಸುವವೆಂದು ಗೊತ್ತಾದ ನಂತರ ಘೋರ್ಪಡೆಯವರು ಅವನ್ನು ಕೇವಲ ಗುತ್ತಿಗೆಗೆ ತೆಗೆದುಕೊಳ್ಳಲು ಒಪ್ಪಿದರು. ದೀರ್ಘ ಚರ್ಚೆಯ ನಂತರ ಚರಾಸ್ತಿ ಮಾರಾಟಕ್ಕಾಗಿ ಒಂದು ಒಪ್ಪಂದ ಮತ್ತು ಸ್ಥಿರಾಸ್ತಿ ಗುತ್ತಿಗೆಗೆ ಇನ್ನೊಂದು ಒಪ್ಪಂದ, ಹೀಗೆ ಎರಡು ಒಪ್ಪಂದಗಳಾದವು. ಆದರೆ ಈ ಒಪ್ಪಂದದ ಷರತ್ತುಗಳನ್ನು ಬಹಳ ಗೌಪ್ಯವಾಗಿಡಲಾಗಿತ್ತು. ಮುಂದೆ ಈ ಪ್ರಕರಣ ಕೋರ್ಟಿಗೆ ಹೋಗುವವರೆಗೂ ಜನರಿಗೆ ವಿಷಯ ಗೊತ್ತಾಗಲಿಲ್ಲ. ಸುಮಾರು ಒಂದು ಕೋಟಿ ರುಪಾಯಿಗಿಂತಲೂ ಹೆಚ್ಚು ಬೆಲೆಯ ಚರಾಸ್ತಿ ಮತ್ತು ಹತ್ತು ಕೋಟಿ ರುಪಾಯಿಗೂ ಹೆಚ್ಚಿನ ಸ್ಥಿರಾಸ್ತಿಯನ್ನು ಬಂಡವಾಳವಿಲ್ಲದ ಒಂದು ಕಂಪೆನಿಗೆ ದಿವಾಕರರು ಮಾರಾಟ ಮಾಡಿದಾಗ ಟ್ರಸ್ಟಿನ ಲೆಕ್ಕಕ್ಕೆ ಒಂದು ಪೈಸೆಯೂ ಜಮಾ ಆಗಲಿಲ್ಲ. ಇದರ ಚಿದಂಬರ ರಹಸ್ಯವೇನು ಎಂಬುದು ಗುಟ್ಟಾಗಿದೆ.

 ಮತ್ತೊಂದು ಮಾತು. ಲೋಕಶಿಕ್ಷಣ ಟ್ರಸ್ಟಿನ ಎಲ್ಲ ಆಸ್ತಿಗಳನ್ನು ಮಾರಾಟ ಮಾಡಲು ಹಾಗೂ ಸ್ಥಿರಾಸ್ತಿಗಳನ್ನು ಗುತ್ತಿಗೆಗೆ ಕೊಡಲು ದಿವಾಕರರು ಒಪ್ಪಿದ ಕೂಡಲೇ ಘೋರ್ಪಡೆ ಇದಕ್ಕಾಗಿ ಒಂದು ಹೊಸ ಕಂಪೆನಿಯನ್ನೇ ಸ್ಥಾಪಿಸಿದರು. ಅದರ ಅಧಿಕೃತ ಬಂಡವಾಳ ಕೇವಲ ಎರಡು ಲಕ್ಷ ರೂಪಾಯಿ. ಸಂಗ್ರಹವಾದ ಬಂಡವಾಳ ಕೇವಲ 40,000 ರುಪಾಯಿ. ಷೇರುದಾರರು ಇಬ್ಬರು ಮಾತ್ರ. ಅವರು ಕೊಡಬೇಕಾಗಿದ್ದ ಸುಮಾರು 40,000 ರುಪಾಯಿಯಷ್ಟು ಷೇರು ಹಣವನ್ನು ಘೋರ್ಪಡೆಯವರೇ ಕೊಟ್ಟಿದ್ದರು. ಮತ್ತು ಆ ಇಬ್ಬರು ಷೇರುದಾರರನ್ನು ಕಂಪೆನಿಯ ಡೈರೆಕ್ಟರುಗಳನ್ನಾಗಿ ಮಾಡಿದ್ದರು. ಈ ಕಂಪೆನಿಗೆ ಬೇರೆ ಯಾವ ಆಸ್ತಿಗಳೂ ಇರಲಿಲ್ಲ. ವಿಳಾಸ ಸಹ ಇರಲಿಲ್ಲ. ಸಂಯುಕ್ತ ಕರ್ನಾಟಕ ಪತ್ರಿಕೆಯ ಬೆಂಗಳೂರು ಕಚೇರಿಯನ್ನೇ ತನ್ನ ವಿಳಾಸವಾಗಿ ಕೊಟ್ಟಿತ್ತು. ಅಂತೂ ಬಂಡವಾಳವಿಲ್ಲದ ಇಂಥ ಕಂಪೆನಿ ಕೋಟ್ಯಂತರ ರುಪಾಯಿ ಬೆಲೆಬಾಳುವ ಆಸ್ತಿಗಳನ್ನು ಅದರಲ್ಲಿಯೂ ಟ್ರಸ್ಟಿನ ಆಸ್ತಿಗಳನ್ನು ಕೊಳ್ಳಲು ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆ ಅನೇಕರನ್ನು ಕಾಡಿಸುತ್ತಿದೆ. ಇದರ ಜೊತೆಗೆ ಈ ವ್ಯವಹಾರದಿಂದ ಟ್ರಸ್ಟಿಗೆ ಏನು ಲಾಭವಾಯಿತೆಂಬುದು ಬಿಡಿಸಲಾರದ ಸಮಸ್ಯೆಯಾಗಿದೆ.
  ರಹಸ್ಯವಾಗಿ ಮಾಡಿಕೊಂಡಿದ್ದ ಒಪ್ಪಂದಗಳನ್ನು ಕಾರ್ಯಗತಗೊಳಿಸಲು ದಿವಾಕರರು ಇನ್ನೊಂದು ತಂತ್ರ ಹೂಡಿದರು. ಮಾರಾಟ ಮಾಡುವುದಕ್ಕೆ ಟ್ರಸ್ಟಿನ ಅಧ್ಯಕ್ಷರಾದ ನವಜಾತ ಮತ್ತು ಧರ್ಮದರ್ಶಿ ಬಿ.ವಿ. ಭಂಡಾರಿಯವರ ಅಧಿಕಾರ ಪತ್ರಗಳು ಅವರಿಗೆ ಈ ಮೊದಲೇ ಸಿಕ್ಕಿದ್ದವು. ಆದರೂ ಅವರಿಗೆ ಧೈರ್ಯವಿರಲಿಲ್ಲ. ಮಾರಾಟದ ವಿಷಯ ಗೊತ್ತಾದರೆ ಸಿಬ್ಬಂದಿಯ ಪೈಕಿ ಯಾರಾಗಲಿ ಅಥವಾ ಹೊರಗಿನವರಾಗಲಿ ಅಡ್ಡಿಯನ್ನುಂಟು ಮಾಡಬಹುದೆಂಬ ಹೆದರಿಕೆ ಅವರಿಗಿತ್ತು. ಆದ್ದರಿಂದ ವ್ಯವಹಾರವನ್ನು ಗುಟ್ಟಾಗಿಟ್ಟಿದ್ದರು. ಇಷ್ಟೇ ಅಲ್ಲ, ಈ ಮಾರಾಟ ವ್ಯವಹಾರಕ್ಕೆ ಒಂದು ವಾರ ಮೊದಲು ಘೋರ್ಪಡೆಯವರಿಗೆ ಬೇಕಾಗಿದ್ದ ನಾಲ್ಕು ಜನರನ್ನು ಟ್ರಸ್ಟಿನ ಪರವಾಗಿ ನೇಮಕ ಮಾಡಿಕೊಂಡು ಅವರಿಂದಲೇ ಎಲ್ಲ ಆಡಳಿತ ನಡೆಯುವಂತೆ ನೋಡಿಕೊಂಡರು. ಅವರುಗಳೆಂದರೆ ಖಾದ್ರಿ ಶಾಮಣ್ಣ, ಎಸ್.ಕೆ. ಶೇಷಾದ್ರಿ, ಬಿ.ಡಿ. ಕೊಹಿಲಿ ಮತ್ತು ಎಸ್.ಆರ್.ಎಸ್. ಐಯ್ಯಂಗಾರ್. ಈ ನಾಲ್ಕೂ ಜನ ಹುಬ್ಬಳ್ಳಿ ಹಾಗೂ ಬೆಂಗಳೂರು ಶಾಖೆಗಳ ಎಲ್ಲ ಆಡಳಿತವನ್ನು ನೋಡಿಕೊಳ್ಳುತ್ತಿದ್ದರು. ಇವರು ಟ್ರಸ್ಟಿನ ಪರವಾಗಿ ನೇಮಕವಾಗಿದ್ದರಿಂದ ಸಿಬ್ಬಂದಿಗೆ ಸಂದೇಹ ಬರಲಿಲ್ಲ. ಅದೇ ರೀತಿ ಸೊಂಡೂರ್ ಕಂಪೆನಿಯ ಆಡಿಟರುಗಳು ಆಸ್ತಿಗಳ ಬೆಲೆಯನ್ನು ಕಟ್ಟುತ್ತಿರುವಾಗಲೂ ಪತ್ರಿಕೆ ಮಾರಾಟವಾಗುವುದೆಂಬ ಸಂದೇಹ ಸಿಬ್ಬಂದಿಗೆ ಬರಲಿಲ್ಲ. ಬಂದರೂ ಸುಮ್ಮನಿದ್ದರು.

  ಆದರೆ ನನಗೆ ಇದರ ಸುಳಿವು ಗೊತ್ತಾಗಿ ನಾನು ನನ್ನ ಮಿತ್ರರೊಡನೆ ಹಾಗೂ ವಕೀಲರೊಡನೆ ಈ ಬಗ್ಗೆ ಸಮಾಲೋಚನೆ ನಡೆಸಿದೆ. ಇದು ಅಂದಿನ ಆಡಳಿತ ವರ್ಗಕ್ಕೆ ಗೊತ್ತಾಗಿ, ನನಗೆ ಬಲಾತ್ಕಾರದ ರಜೆಯನ್ನು ಕೊಟ್ಟು ನಿವೃತ್ತನನ್ನಾಗಿ ಮಾಡಿತು. ಇಷ್ಟೇ ಇಲ್ಲ, ನನ್ನನ್ನು ಅದೇ ಕ್ಷಣದಿಂದ ಸಂಯುಕ್ತ ಕರ್ನಾಟಕ ಕಚೇರಿಯ ಆವರಣದಿಂದಲೇ ಹೊರಗೆ ಕಳುಹಿಸಲಾಯಿತು. ನಿವೃತ್ತಿಯಾದ ಮೇಲೆ ನಾನು ಘೋರ್ಪಡೆಯವರೊಡನೆ  ದಿವಾಕರರು ಮಾಡಿಕೊಂಡ ರಹಸ್ಯ ಒಪ್ಪಂದಗಳ ವಿವರಗಳನ್ನು ಪಡೆದು ಈ ಬಗ್ಗೆ ಮುಂದೇನು ಮಾಡಬೇಕೆಂಬುದರ ಬಗ್ಗೆ ನಮ್ಮ ವಕೀಲರಾದ ಕೆ.ಐ. ಭಟ್ಟರೊಡನೆ ಸಮಾಲೋಚನೆ ನಡೆಸಿದೆ.

  ಮೊದಲು ಮಾರಾಟವನ್ನು ತಡೆಯಬೇಕೆಂಬ ಉದ್ದೇಶದಿಂದ ನನ್ನ ಸ್ನೇಹಿತರ ಹೆಸರಿನಲ್ಲಿ ಚಾರಿಟಿ ಕಮಿಷನರಿಗೆ ಅರ್ಜಿ ಕೊಡಿಸಿದೆ. ಇದರ ಮೇಲೆ ಬೆಳಗಾವಿಯ ಚಾರಿಟಿ ಕಮಿಷನರರು ಟ್ರಸ್ಟಿನ ಧರ್ಮದರ್ಶಿಗಳಿಗೆ ಮಾರಾಟ ಮಾಡದಂತೆ ತಡೆಯಾಜ್ಞೆ ಇತ್ತರು. ಇದರ ವಿರುದ್ಧ ದಿವಾಕರರು ಹೈಕೋರ್ಟಿಗೆ ಒಂದು ರಿಟ್ ಅರ್ಜಿಯನ್ನು ಸಲ್ಲಿಸಿ, ಚಾರಿಟಿ ಕಮಿಷನರ್‌ಗೆ ಇಂತಹ ಅಧಿಕಾರವಿಲ್ಲವೆಂದು ವಾದಿಸಿದರು. ಹೈಕೋರ್ಟ್ ಸಹ ಅವರ ವಾದವನ್ನು ಎತ್ತಿ ಹಿಡಿದು, ಚಾರಿಟಿ ಕಮಿಷನರ್‌ರು ಇಂತಹ ತಡೆಯಾಜ್ಞೆಗಳನ್ನು ಕೊಡಲು ಬರುವುದಿಲ್ಲವೆಂದು ತೀರ್ಪಿತ್ತಿತು. ಇದರ ಮೇಲೆ ಇಬ್ಬರು ನ್ಯಾಯಾಧೀಶರುಗಳ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದಾಗ ಆ ಪೀಠ, ಸಂಸ್ಥೆಯ ಹಿತದೃಷ್ಟಿಯಿಂದ ಇಂತಹ ತಡೆಯಾಜ್ಞೆ ಕೊಡಲು ಚಾರಿಟಿ ಕಮಿಷನರ್‌ಗೆ ಅಧಿಕಾರವಿದೆಯೆಂದು ಅಭಿಪ್ರಾಯಪಟ್ಟಿತು. ಆದರೆ ಅಷ್ಟು ಹೊತ್ತಿಗೆ ಆಗಬಾರದಿದ್ದ ಅನಾಹುತ ಆಗಿಹೋಗಿತ್ತು.
(ಮುಂದುವರಿಯುವುದು)
-ಕೆ.ಶಾಮರಾವ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement