ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಪಗ್‌ಮಾರ್ಕ್ ಬ್ರೌಸರ್

ಜಗತ್ತನ್ನು ಅಮೆರಿಕದ ಗೂಗಲ್‌ನ ಕಿಟಕಿಯಿಂದಲೇ ನೋಡಬೇಕೆಂಬ ನಿಯಮವೇನಿಲ್ಲ, ಆದರೆ ಇನ್ನಷ್ಟು ಸುಂದರವಾದ, ತಂಪಾದ ಕನ್ನಡಕ...

Rashmi Kasaragodu
Updated On : 10 Mar 2014, 1:06 am

ಜಗತ್ತನ್ನು ಅಮೆರಿಕದ ಗೂಗಲ್‌ನ ಕಿಟಕಿಯಿಂದಲೇ ನೋಡಬೇಕೆಂಬ ನಿಯಮವೇನಿಲ್ಲ, ಆದರೆ ಇನ್ನಷ್ಟು ಸುಂದರವಾದ, ತಂಪಾದ ಕನ್ನಡಕದಿಂದ ಜಗತ್ತನ್ನು ನಮ್ಮ ಕರ್ನಾಟಕದ ಕಿಟಕಿಯಿಂದಲೇ ನೋಡುವ ಅವಕಾಶ ಬಂದಿದೆ.
ಅದೂ ನಮ್ಮ ಕನ್ನಡಿಗರೇ ಇಂತಹ ಇಂಟರ್ನೆಟ್ ಕಿಟಕಿ ಆರಂಭಿಸಿದ್ದಾರೆ. ಅಂತರ್ಜಾಲದಲ್ಲಿ ಓಡಾಡುವರಿಗಾಗಿ ಹೊಸ ಅನುಭವ ನೀಡುವ ಪ್ರಯತ್ನವನ್ನು ಮೂವರು ಕನ್ನಡಿಗರು ಸೇರಿ ಮಾಡಿದ್ದಾರೆ. ಒಂದು ಸಾಮಾಜಿಕ ತಾಣವು ಹೇಗೆ ಹುಚ್ಚು-ಕಿಚ್ಚು ಹಿಡಿಸಬಹುದೊ ಅದೇ ಮಾದರಿಯಲ್ಲಿ ಒಂದು ಬ್ರೌಸರ್ ಕೂಡ ಸ್ಮಾರ್ಟ್‌ಫೋನ್ ಬಳಕೆದಾರನ ಅಚ್ಚುಮೆಚ್ಚಿನ ಅಪ್ಲಿಕೇಷನ್ ಆಗಿ ಪರಿವರ್ತಿಸಬಹುದು. ಅಂತಹುದೇ ಸಾಹಸಕ್ಕೆ ಭರತ್ ಮೋಹನ್, ವೆಂಕಟೇಶ್ ಶರ್ಮಾ ಹಾಗೂ ಆದಿತ್ಯಾನಾಗ್ ನಾಗೇಶ್  ಎಂಬ ಯುವಕರು ಕೈಹಾಕಿದ್ದಾರೆ. ಇವರೆಲ್ಲರೂ ಕರ್ನಾಟಕದ ಎಂಜಿನಿಯರಿಂಗ್ ಕಾಲೇಜಿನಲ್ಲಿಯೇ ಬಿಇ ಪದವಿ ಗಳಿಸಿದವರು.
ಕೆಲ ದಿನಗಳ ಹಿಂದೆ ಜನ್ಮತಾಳಿದ ಈ ಬ್ರೌಸರ್ ಹೆಸರು ಪಗ್‌ಮಾರ್ಕ್. ಸ್ಮಾರ್ಟ್‌ಫೋನ್‌ಗನ್ನು ಗಮನದಲ್ಲಿರಿಸಿಕೊಂಡೇ ಈ ಬ್ರೌಸರ್ ಅಭಿವೃದ್ಧಿಪಡಿಸಲಾಗಿದ್ದು, ಸ್ಮಾರ್ಟ್ ಬಳಕೆದಾರರ ಎಲ್ಲ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ರೂಪಗೊಂಡಿದೆ. ಪ್ರಸ್ತುತ ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ಗೆ ಅಪ್ಪಟ ಸ್ವದೇಶಿ ಬ್ರೌಸರ್ ಆದ ಪಗ್‌ಮಾರ್ಕ್ ಬಿಡುಗಡೆಮಾಡಲಾಗಿದೆ.
ಗೂಗಲ್ ಕ್ರೋಮ್, ಮೋಝಿಲ್ಲಾ ಫೈರ್‌ಫಾಕ್ಸ್, ಓಪೆರಾ ಮೂಲಕ ಅಂತರ್ಜಾಲ ಜಗತ್ತಿನಲ್ಲಿ ವಿಹರಿಸುವುದು ಬಹುತೇಕರಿಗೆ ಅಭ್ಯಾಸವಾಗಿದೆ. ಇವೆಲ್ಲ ಇಂಟರ್ನೆಟ್ ಬ್ರೌಸರ್‌ಗಳ ಹೆಸರು ಹಾಗೂ ವಿನ್ಯಾಸ ಹೊರತುಪಡಿಸಿದರೆ ಮತ್ಯಾವುದೇ ದೊಡ್ಡ ವ್ಯತ್ಯಾಸ ಕಾಣುವುದಿಲ್ಲ. ಇನ್ನು ಬ್ರೌಸಿಂಗ್ ವೇಗದಲ್ಲಿಯೂ ತುಸು ಬದಲಾವಣೆಯಿದೆ. ಆದರೆ ಕಾರ್ಯವೈಖರಿಯಲ್ಲಿ ಯಾವುದೇ ದೊಡ್ಡ ಬದಲಾವಣೆ ಕಾಣುವುದಿಲ್ಲ.
ಇವೆಲ್ಲ ಬ್ರೌಸರ್‌ಗಳಲ್ಲಿ ಒಂದು ವೆಬ್‌ಪುಟವನ್ನು ತೆರೆದಾಗ ಆ ಪುಟವು ಸೀಮಿತವಾಗಿರುತ್ತದೆ ನೀವು ತಡಕಾಡುತ್ತಿರುವ ಮಾಹಿತಿಗೆ ಇದೇ ರೀತಿ ಮತ್ಯಾವ ವೆಬ್‌ಸೈಟ್ ಲಭ್ಯವಿದೆ, ಲೇಖನ ಲಭ್ಯವಿದೆ ಎಂಬ ಮಾಹಿತಿ ದೊರೆಯುವುದಿಲ್ಲ. ಮತ್ತೆ ಹಿಂದೆ ಹೋಗಿ ಗೂಲ್ ಸರ್ಚ್ ಮುಖಾಂತರ ಹುಡುಕಬೇಕು. ಅಲ್ಲಿಯೂ ಹೊಸ ಟ್ಯಾಬ್ ಮೂಲಕ ಒಂದು ಲೇಖನವನ್ನು ಓದುತ್ತಿದ್ದಾಗ, ಪುಟವು ಆ ಲೇಖನಕ್ಕಷ್ಟೇ ಸೀಮಿತವಾಗಿರುತ್ತದೆ. ಪ್ರತಿ ಬಾರಿಯೂ ಮತ್ತೆ ಅದೇ ಗೂಗಲ್ ಸರ್ಚ್ ಪುಟಕ್ಕೆ ಬಂದು ಅಲ್ಲಿರುವ ಲಿಂಕ್‌ಗಳನ್ನು ನೋಡಬೇಕಾದ ಅನಿವಾರ್ಯವಿರುತ್ತದೆ. ಗೂಗಲ್ ಕ್ರೋಮ್ ಅಥವಾ ಮತ್ಯಾವುದೇ ಬ್ರೌಸರ್‌ಗಳಲ್ಲಿ ಬಳಕೆದಾರರಿಗೆ ಸಲಹೆ ನೀಡುವಂತಹ ಯಾವುದೇ ಲಿಂಕ್‌ಗಳು ಅಲ್ಲಿರುವುದಿಲ್ಲ. ನಾವೇ ಕಷ್ಟಪಟ್ಟು ನಮಗೆ ಬೇಕಾದ ಮಾಹಿತಿಯನ್ನು ಹೆಕ್ಕಬೇಕಾಗುತ್ತದೆ.
ಆದರೆ ಪಗ್‌ಮಾರ್ಕ್ ಬ್ರೌಸರ್ ಇಂತಹ ಸಮಸ್ಯೆಗೆ ಅಲ್ಪಮಟ್ಟಿನ ಬ್ರೇಕ್ ನೀಡುತ್ತದೆ. ಈ ಅಪ್ಲಿಕೇಷನ್‌ನ್ನು ಡೌನ್‌ಲೋಡ್ ಮಾಡಿ ಗೂಗಲ್ ಅಥವಾ ಇನ್ಯಾವುದೇ ಅಕೌಂಟ್ ಮೂಲಕ ಸೈನ್ ಅಪ್ ಆಗಬೇಕಾಗುತ್ತದೆ. ಆ ಬಳಿಕ, ಉದಾಹರಣೆಗೆ ಗೂಗಲ್ ಸರ್ಚ್‌ನಲ್ಲಿ 'ನರೇಂದ್ರ ಮೋದಿ, ರಾಹುಲ್ ಗಾಂಧಿ' ಎಂದು ಸರ್ಚ್ ಕೊಟ್ಟರೆ ಸಾವಿರಾರು ಪುಟಗಳು ತೆರೆದುಕೊಳ್ಳುತ್ತವೆ. ಅಲ್ಲಿರುವ ಮೊದಲ ಲಿಂಕ್ ಮೇಲೆ ಕ್ಲಿಕ್ಕಿಸಿ ಸುದ್ದಿಯ ಮೇಲೆ ಕಣ್ಣಾಡಿಸುವಷ್ಟೊತ್ತಿಗೆ ಸ್ಮಾರ್ಟ್‌ಪೋನ್ ಅಥವಾ ಟ್ಯಾಬ್ಲೆಟ್‌ನ ಬಲಬದಿಯಲ್ಲಿ ಒಂದು ಸ್ಲೈಡ್ ತಯಾರಿರುತ್ತದೆ. ಅಲ್ಲಿ 'ನರೇಂದ್ರ ಮೋದಿ, ರಾಹುಲ್ ಗಾಂಧಿ'ಗೆ ಸಂಬಂಧಿಸಿದ ಇತ್ತೀಚಿನ ಹತ್ತಾರು ಪ್ರಮುಖ ಸುದ್ದಿಗಳ ಪಟ್ಟಿ  ಸಿಗುತ್ತದೆ.


ಎಡಬದಿಯಲ್ಲಿ ನಮ್ ಸರ್ಚ್ ಹಿಸ್ಟರಿ ಲಭ್ಯವಾಗುತ್ತದೆ. ಇದರಿಂದ ಹಿಂದಿನ ಪುಟಗಳಿಗೆ ಮರಳದೇ ನಮ್ಮ ಓದು ಅಥವಾ ಹುಡುಕಾಟವನ್ನು ಮುಂದುವರಿಸಬಹುದಾಗಿದೆ. ಇನ್ನು ಇದೇ ಸಂದರ್ಭದಲ್ಲಿ ಅಡ್ರೆಸ್ ಬಾರ್ ಮೇಲೆ ಕ್ಲಿಕ್ ಮಾಡಿದರೆ ನಾವು ತಡಕಾಡುತ್ತಿರುವ ವಿಷಯದ ಸಂಕ್ಷಿಪ್ತ ಮಾಹಿತಿಯ ಕೆಲ ಪುಟಗಳು ದೊರೆಯುತ್ತವೆ. ಸ್ಮಾರ್ಟ್‌ಫೋನ್ ಹಾಗೂ ಟ್ಯಾಬ್ಲೆಟ್‌ನಲ್ಲಿ ಗೆಜೆಟ್ ಸೌಲಭ್ಯವನ್ನು ನೀಡಲಾಗಿದ್ದು, ಸರ್ಚ್ ಹಿಸ್ಟರಿ ಆಧರಿಸಿ ಆ ಪುಟದಲ್ಲಿ ನಮ್ಮಿಷ್ಟದ ವಿಷಯಗಳ ಕುರಿತ ಇತ್ತೀಚಿನ ಬೆಳವಣಿಗೆಯ ಬಗ್ಗೆ ಲೈವ್ ಮಾಹಿತಿ ದೊರೆಯುತ್ತದೆ.
ಗೂಗಲ್ ಕ್ರೋಮ್‌ನಲ್ಲಿಯೂ ಲಭ್ಯ
ಮತ್ತೊಂದು ವಿಶೇಷವೆಂದರೆ ಗೂಗಲ್ ಕ್ರೋಮ್‌ನಲ್ಲಿಯೂ ಪಗ್‌ಮಾರ್ಕ್ ಒಂದು ಅಪ್ಲಿಕೇಷನ್ ಆಗಿ ಲಭ್ಯವಿರುತ್ತದೆ. ಮೊಬೈಲ್‌ನಲ್ಲಿ ಕಾರ್ಯನರ್ವಹಿಸಿದಂತೆ ಇಲ್ಲಿಯೂ ಲಭ್ಯವಿರುತ್ತದೆ. ಆದರೆ ರೆಕಮಂಡೇಷನ್ ಪುಟಗಳು ಬಲ ಬದಿಯ ಬದಲು ಕೆಳ ಅಥವಾ ಮೇಲ್ಭಾಗದಲ್ಲಿ ದೊರೆಯುತ್ತದೆ. ಗೂಗಲ್ ಕ್ರೋಮ್‌ನಲ್ಲಿ ಪೆಗ್‌ಮಾರ್ಕ್‌ನ್ನು ಒಂದು ಗೇಟ್‌ವೇಯಾಗಿಯೂ ಬಳಸಿಕೊಳ್ಳಬಹುದು.
ಭವಿಷ್ಯದಲ್ಲಿ ಬಳಕೆದಾರರು ಇರುವ ಸ್ಥಳವನ್ನು ಆಧರಿಸಿ ಅಲ್ಲಿಯ ಮಾಹಿತಿಯನ್ನು ಇಲ್ಲಿ ಅಪ್‌ಡೇಟ್ ಮಾಡುವುದು ಹಾಗೂ ಕ್ಯಾಲೆಂಡರ್‌ಗಳನ್ನು ಸೇರಿಸುವ ಬಗ್ಗೆಯೂ ಪಗ್‌ಮಾರ್ಕ್‌ನ ಯುವ ಎಂಜಿನಿಯರ್‌ಗಳ ತಂಡ ಕೆಲಸ ಮಡುತ್ತಿದೆ. ಇವರು ಹೇಳುವ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆಗೆ ಮಾ.20ರಂದು ಸಭೆ ನಿಗದಿಯಾಗಿದ್ದರೆ ಆ ದಿನ ಬೆಳಗ್ಗೆ ನಿಮ್ಮ ಪೆಗ್‌ಮಾರ್ಕ್ ಗೆಜೆಟ್‌ನಲ್ಲಿ ಸಭೆಯ ಅಲಾರಾಂ, ಸಿದ್ದರಾಮಯ್ಯ ಹಾಗೂ ಆ ಸಭೆಯ ಕುರಿತಂತೆ ಕೆಲ ಹಿನ್ನೆಲೆಯ ಮಾಹಿತಿಗಳು ಅಲ್ಲಿ ಬರುತ್ತವೆ.
ಇನ್ನು ಕೆಲ ತಿಂಗಳಲ್ಲಿ ಆ್ಯಪಲ್ ಸ್ಟೋರ್‌ನಲ್ಲಿಯೂ ಪಗ್‌ಮಾರ್ಕ್ ಲಭ್ಯವಿರಲಿದ್ದು, ಇತರ ಫೀಚರ್ಸ್‌ಗಳು ಕೂಡ ಬಳಕೆದಾರರಿಗೆ ಶೀಘ್ರವೇ ದೊರೆಯಲಿದೆ.

- ರಾಜೀವ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement