ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಹೃದಯ ಅರಳೋ ಕಾಲ

ಬದಲಾವಣೆ ಜಗದ ನಿಯಮ. ಹ್ಞೂಂ... ಇದು ಬಹಳ ಸಲ ಕೇಳಿರೋ ಮಾತು. ಹೀಗಂದ್ರೆ ಹೇಗೆ? ಆಕರ್ಷಣೆ ಜಗದ ನಿಯಮ. ಬಣ್ಣ...

Rashmi Kasaragodu
Updated On : 10 Mar 2014, 1:47 am

ಬದಲಾವಣೆ ಜಗದ ನಿಯಮ.
ಹ್ಞೂಂ... ಇದು ಬಹಳ ಸಲ ಕೇಳಿರೋ ಮಾತು. ಹೀಗಂದ್ರೆ ಹೇಗೆ? ಆಕರ್ಷಣೆ ಜಗದ ನಿಯಮ. ಬಣ್ಣ ಬದಲಾಯಿಸೋ ಗೋಸುಂಬೆ ನೀನಾದ್ರೆ, ಬದಲಾಗೋ ಆ ಬಣ್ಣಗಳಲ್ಲಿ ಹೊಸ ಅರ್ಥ ಹುಡುಕೋ ಕವಿ ನಾನು. ಕಣ್ಣಿಗೆ ಕಂಡಿದ್ದರಾಚೆ ಇರೋ, ಎಂದೂ ಕಂಡರಿಯದ ಆ ಬಣ್ಣಗಳ ರಂಗುಗಳನ್ನು ಮೈ-ಮನದಲ್ಲಿ ತುಂಬಿಕೊಳ್ಳೋ ಬಯಕೆಯುಳ್ಳ ರಂಗೀಲಿ. ದಾರಿ ತಪ್ತಿದೀನಾ ನಾ ಹೋಗಿದ್ದೇ ದಾರಿ ಅಂತ ಎಷ್ಟು ಸಲ ನಿನಗೆ ಹೇಳಿಲ್ಲ ನಿನಗೆಲ್ಲಿ ನೆನಪಿರಬೇಕು ಬಿಡು. ನಿನ್ನ ಮೇಕಪ್ ಬದಲಾಯಿಸೋಕೇ ನಿನಗೆ ಸಮಯ ಸಾಲಲ್ಲ, ಇನ್ನು ನನ್ನ ಮಾತು ನೆನಪಿಡೋ ಕರ್ಮ ನಿನಗೆಲ್ಲಿ?
ವಿಷಯಕ್ಕೆ ಬರೋಣ. ಬಹಳ ದಿನಗಳಿಂದ ಗಮನಿಸ್ತಾ ಇದೀನಿ. ನೀ ಬರೋ ನಿರೀಕ್ಷೆಯೂ ಇತ್ತು. ಪ್ರತಿ ಸಲದಂತೆ, ಈ ಸಲ ನಾ ನಿನ್ನ ಗಮನಿಸೋಲ್ಲ, ನಿನಗೆ ಮರುಳಾಗೋ ಸಾಧ್ಯತೆಯೇ ಇಲ್ಲ ಅಂದ್ಕೊಂಡುಬಿಟ್ಟಿದ್ದೆ ನಾನು. ನನ್ನ ಪ್ರಪಂಚವೇ ಬದಲಾಗಿರುವಾಗ ನೀ ಯಾವ ಬಣ್ಣ ಹಾಕಿದರೆ ನನಗೇನು ಅನ್ನೋ ಉದಾಸೀನ ಭಾವ. ಊಹೂಂ ಆಕರ್ಷಣೆ ಜಗದ ನಿಯಮ. ಅಥವಾ ಹೀಗನ್ನಲಾ? ಆಕರ್ಷಣೆ ನನ್ನ ಜಗದ ನಿಯಮ ಅಂತ. ನಮಗನಿಸೋದನ್ನ ಸಾರ್ವಕಾಲಿಕ ಅನ್ನುವಂತೆ ತೋರಿಸುವುದು ಅಷ್ಟು ಸರಿ ಇರಲ್ಲ ಅಲ್ವಾ?
ಆದರೆ, ಈಗ ಆಗಿರೋದೇನು? ಅದ್ಯಾವ ಮೇಕಪ್ ಆರ್ಟಿಸ್ಟ್, ಅದೆಷ್ಟು ಶ್ರದ್ಧೆಯಿಂದ ನಿನಗೆ ಅಲಂಕಾರ ಮಾಡ್ತಾನೋ, ಮೊನ್ನೆಮೊನ್ನೆಯಷ್ಟೇ, ಬಿಳಿಚಿಕೊಂಡಿದ್ದ ಬಾವಲಿಯಂತಿದ್ದ ನೀನು, ಇಂದು ಕಲರ್ ಕಲರ್ ಪಾತರಗಿತ್ತಿ. ಬಣ್ಣ ಕಣ್ಣು ಸೆಳೆಯತ್ತೆ, ಕಣ್ಣು ಮನಸ್ಸನ್ನ.
ಇನ್ನೇನು ಮಾಡಲಿ ಮತ್ತೆ ಮರುಳಾದೆ ಕಣೋ ನಿನ್ನಿಂದ. ಕಣ್ಣು ತೆಗೆಯೋಕೇ ಆಗ್ತಿಲ್ಲ. ಜಗತ್ತು ಹೇಗಿದ್ರೇನು ಅಂತ ಬಿಂದಾಸ್ ಆಗಿ ನೀ ಅರಳೋ ಪರಿ ನನಗಿಷ್ಟ. ಅದೇನು ಬಣ್ಣ-ಬಣ್ಣ ಅಂತೀನಿ... ಗುಲಾಬಿ, ಹಳದಿ, ಹಸಿರು, ನೇರಳೆ... ನಾ ಕಣ್ಣರಳಿಸಿದಷ್ಟೂ ನೀ ಒಳಗಿಳೀತೀಯ. ಒಳಗಡೆ ಸ್ಥಾಪಿತವಾಗಿರೋದನ್ನ ಮರೆತುಬಿಡ್ತೀನಿ ಅಂದ್ರೆ ಆಗುತ್ತಾ? ನನಗೂ ಎಂಥ ಮರುಳು ಅಲ್ವಾ? ಕತ್ತು ಬಗ್ಗಿಸಿ ನಾ ನಡೆದು ಹೋಗ್ತಾ ಇದ್ರೆ, ನೀ ನಡೆವ ಹಾದಿಯಲ್ಲಿ, ನಗೆ ಹೂವು ಬಾಡದಿರಲಿ ಅಂತ ನೀ ಹಾಸೋ ಹೂ ಹಾಸನ್ನ ನೋಡಿಯೂ ಒಂದು ಮುಗುಳ್ನಗೆ ಮೂಡದೇ ಇರುತ್ತಾ? ಪ್ರೀತಿ ಮತ್ತೆ ಕುಡಿಯೊಡೆಯದೇ ಇರುತ್ತಾ? ಹೌದು, ನನ್ನ ಮನಸೊಳಗಿನ ಪಸೆ ಇನ್ನೂ ಆರಿಲ್ಲ. ನಿನ್ನ ನೋಡ್ತಾ ಇದ್ರೆ ಮತ್ತೆಲ್ಲ ನೆನಪು, ಮತ್ತೆಲ್ಲಾ ಹಸಿರು, ಆರ್ದ್ರ.ಸೌಂದರ್ಯಕ್ಕೆ ಸೋಲೋದು ತಪ್ಪಾ? ಯಾರಿಗೆ ಬೇಕು ಇಂಥ ವ್ಯರ್ಥ ಪ್ರಶ್ನೆಗಳಿಗೆ ಉತ್ತರ, ಅಲ್ವಾ? ಇಷ್ಟವಾದದ್ದನ್ನ, ಇಷ್ಟ ಪಟ್ಟರಾಯ್ತು, ಅಲ್ವಾ? ಏಯ್ ಕಲರ್ ಕಲರ್ ಪಂಚರಂಗಿ... ಬದುಕಿನ ವೈವಿಧ್ಯವನ್ನ, ಬಣ್ಣ ಬದಲಿಸ್ತಾ ಬದಲಿಸ್ತಾನೇ ತಿಳಿಸಿಬಿಡ್ತೀಯಲ್ಲೋ... ನೀನಲ್ಲದೇ ಇನ್ಯಾರು ನನಗೆ ಸ್ಫೂರ್ತಿ ಆಗೋಕೆ ಸಾಧ್ಯ ಹೇಳು? ನಿನ್ನ ಬಹುರೂಪಿ ವೇಷಗಳಲ್ಲಿ, ಈಗ ಸದ್ಯಕ್ಕಿದೆಯಲ್ಲ, ಈ ವಸಂತ ವೇಷ, ಅದು ಸಖತ್ ಅಟ್ರ್ಯಾಕ್ಟಿವ್...! ಹ್ಞೂಂ, ಹೌದು ಆಕರ್ಷಕ ಅಂದೆ, ಏನಿವಾಗ? ಥ್ಯಾಂಕ್ಯೂ ಕಣೋ, ನನ್ನ ಬದುಕಲ್ಲಿ, ಬದುಕು ತುಂಬೋ ಈ ನಿನ್ನ ಮುದ್ದು ವೇಷಕ್ಕೆ. ಒಂದೇ ಒಂದು ಜನ್ಮದಲ್ಲಿ, ಒಂದೇ ಬಾಲ್ಯ, ಒಂದೇ ಹರೆಯ ಅಂತ ಯಾಕೆ ಅನ್ಸಿತ್ತೋ ಆ ಕವಿಗೆ! ನಿಂಗೆ ವಸಂತ ಬಂದಾಗಲೆಲ್ಲ ನಂಗೂ ವಸಂತ ಕಣೋ. ನಿನ್ನ ನೋಡ್ತಾ, ನೋಡ್ತಾ, ಜೀವನ ಕಳೆದು ಹೋಗುತ್ತೆ ಬಿಡು, ಅದ್ಯಾವ ಮಹಾ ಅಲ್ವಾ?
ಹೀಗೊಂದು ಪ್ರೇಮಪತ್ರ ನನ್ನ ವಸಂತನಿಗೆ... ಸಂಭ್ರಮದ ವಸಂತ ನಿಮ್ಮದಾಗಲಿ.


- ಮಂಜುಳಾ ಬಬಲಾಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments