ಅತಿ ಕೊಬ್ಬು ತರುವುದೇ ಸ್ತನ ಕ್ಯಾನ್ಸರ್?
ಕೆಲವು ಮಹಿಳೆಯರಿರುತ್ತಾರೆ. ಅವರಿಗೆ ಕರಿದ ತಿನಿಸುಗಳು, ಕುರುಕುರೆಯಂಥ ತಿಂಡಿಗಳು ಎಂದರೆ ಪಂಚಪ್ರಾಣ. ಕೆಲವರಿಗಂತೂ ಮುಂಜಾನೆ ತಿಂಡಿಯಿಂದ ರಾತ್ರಿ ಊಟದವರೆಗೆ ಅವರ ತಟ್ಟೆಯಲ್ಲಿ ಎಣ್ಣೆ ಪದಾರ್ಥ ಏನಾದರೂ ಇರಲೇಬೇಕು. ಋತುಬಂಧ ನಿಂತ ಬಳಿಕ ಇಂಥ ಚಪಲ ಜಾಸ್ತಿ. ಕೊಬ್ಬಿನಿಂದ ಸ್ತನ ಕ್ಯಾನ್ಸರ್ ಬರುತ್ತದೆಯೆ? ಋತುಬಂಧ ನಿಂತ ಮಹಿಳೆಯರಲ್ಲೆ ಸ್ತನ ಕ್ಯಾನ್ಸರ್ ಹೆಚ್ಚಾಗಿ ಕಾಣಿಸಿಕೊಳ್ಳುವುದಕ್ಕೂ, ಅವರು ಕೊಬ್ಬನ್ನು ಅತಿಯಾಗಿ ಸೇವಿಸುವುದಕ್ಕೂ ಸಂಬಂಧ ಇದೆಯೆ? ಸಂಶೋಧಕರಲ್ಲೂ ಈ ಬಗ್ಗೆ ಅಭಿಪ್ರಾಯ ಭೇದವಿದೆ. ಕೆಲವು ಸಂಶೋಧನೆಗಳು ಕೊಬ್ಬಿನ ಡಯಟ್ ಮತ್ತು ಸ್ತನ ಕ್ಯಾನ್ಸರ್‌ಗೆ ಸಂಬಂಧ ಇದೆ ಎಂದು ನಿರೂಪಿಸಿದರೆ, ಕೆಲವು ಇಲ್ಲ ಎಂದು ಸಾಧಿಸಿವೆ. ಹೀಗಾಗಿ ಸ್ಪಷ್ಟ ತೀರ್ಮಾನ ಸಾಧ್ಯವಾಗಿಲ್ಲ.
ಅಧಿಕ ಕೊಬ್ಬು ಸ್ತನ ಕ್ಯಾನ್ಸರ್ ತರುತ್ತದೆಯೊ, ಇಲ್ಲವೊ. ಆದರೆ ಸ್ತನ ಕ್ಯಾನ್ಸರ್‌ಗೆ ತುತ್ತಾದವರು ಕೊಬ್ಬಿನ ಪದಾರ್ಥಗಳ ಸೇವನೆ ಕಡಿಮೆ ಮಾಡದಿದ್ದರೆ ಕಾಯಿಲೆ ಬಹುಬೇಗ ತೀವ್ರ ಸ್ವರೂಪಕ್ಕೆ ತಿರುಗುತ್ತದೆ ಎನ್ನುವುದಂತೂ ಋಜುವಾತಾಗಿದೆ. ಆ ವಿಚಾರವಾಗಿ ಯಾರದ್ದೂ ಭಿನ್ನಾಭಿಪ್ರಾಯವಿಲ್ಲ. ಕೆಲವು ಸಂಶೋಧಕರಂತೂ ಸ್ತನ ಕ್ಯಾನ್ಸರ್‌ಗೆ ಒಳಗಾದವರು ಕೊಬ್ಬನ್ನು ಜಾಸ್ತಿ ಸೇವಿಸುತ್ತಿದ್ದರೆ ಅದು ಮಾರಣಾಂತಿಕವಾಗಿ ಪರಿಣಮಿಸಬಹುದು ಎಂದು ಎಚ್ಚರಿಸಿದ್ದಾರೆ. ಕೊಬ್ಬು ಕ್ಯಾನ್ಸರ್ ಕೋಶಗಳ ವೇಗದ ಚಲನೆಗೆ ಸಹಾಯ ಮಾಡುತ್ತದೆ. ಅದರಲ್ಲೂ ಸ್ತನ ಕ್ಯಾನ್ಸರ್ನಲ್ಲಿ ಚಿಕಿತ್ಸೆಗಳಿಗೆ ಸ್ಪಂದಿಸದ ಮಟ್ಟಕ್ಕೆ ಒಯ್ಯುವ ಅಪಾಯವಿದೆ. ಹೀಗಾಗಿ ಸ್ತನ ಕ್ಯಾನ್ಸರ್‌ನಿಂದ ಬಳಲುವವರು ಅಧಿಕ ಕೊಬ್ಬು ತಿಂದರೆ ಮರಣವನ್ನಪ್ಪುವ ಸಂಭವ ಹೆಚ್ಚು ಎನ್ನುವುದು ಅವರ ಸಮರ್ಥನೆ. ಭಾರತ, ಜಪಾನ್ ಸೇರಿದಂತೆ ಏಷ್ಯದಲ್ಲಿ ಕೊಬ್ಬಿನ ಪದಾರ್ಥಗಳ ಬಳಕೆ ತುಸು ಕಡಿಮೆ. ಹೀಗಾಗಿ ಪಾಶ್ಚಾತ್ಯರಿಗೆ ಹೋಲಿಸಿದರೆ ಏಷ್ಯನ್ ಮಹಿಳೆಯರು ಸ್ತನ ಕ್ಯಾನ್ಸರ್‌ನಿಂದ ಗುಣಮುಖರಾಗುವ ಪ್ರಮಾಣ ಹೆಚ್ಚು ಎನ್ನುವುದನ್ನು ಪಾಶ್ಚಾತ್ಯ ಸಂಶೋಧಕರು ಕಂಡುಕೊಂಡಿದ್ದಾರೆ.
ಇನ್ನು ಕೆಲವರು, ಕೊಬ್ಬಿನ ಸ್ವರೂಪದ ಮೇಲೆ ಸಮಸ್ಯೆಯ ತೀವ್ರತೆ ಆಧರಿಸಿದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಸ್ಯಮೂಲದಿಂದ ಸಿಗುವ ಒಮೆಗಾ-6, ಪ್ರಾಣಿಜನ್ಯ ಕೊಬ್ಬುಗಳು ಕ್ಯಾನ್ಸರ್‌ಗೆ ಅಪಾಯಕಾರಿ. ಇವು ಕ್ಯಾನ್ಸರ್ ಕೋಶಗಳು ವೇಗವಾಗಿ ಬೆಳೆಯಲು ಮತ್ತು ಗಡ್ಡೆಕಟ್ಟಲು ನೆರವಾಗುತ್ತವೆ. ಇದಕ್ಕೆ ವಿರುದ್ಧವಾಗಿ ಒಮೆಗಾ-3 ಕೊಬ್ಬು (ಮೀನೆಣ್ಣೆಯಲ್ಲಿ ಇರುವುದು ಇದೇ ಕೊಬ್ಬು), ಆಲಿವ್ ಎಣ್ಣೆಯಲ್ಲಿನ ಕೊಬ್ಬುಗಳಲ್ಲಿ ಕ್ಯಾನ್ಸರ್ ಹತ್ತಿಕ್ಕುವ ಗುಣವಿದೆ. ಮೆಡಿಟರೇನಿಯನ್ ಪ್ರದೇಶದಲ್ಲಿ ಆಲಿವ್ ಎಣ್ಣೆ ಬಳಕೆ ಹೆಚ್ಚಾಗಿರುವುದರಿಂದ ಅಲ್ಲಿನ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಕಡಿಮೆ ಜಪಾನ್‌ನಲ್ಲಿ ಮೀನೆಣ್ಣೆ ಉಪಯೋಗ ಹೆಚ್ಚು. ಹೀಗಾಗಿ ಅಲ್ಲಿಯೂ ಸ್ತನ ಕ್ಯಾನ್ಸರ್ ಬಾಧೆ ಕಡಿಮೆ. ಪಾಶ್ಚಾತ್ಯ ದೇಶಗಳಲ್ಲಿ ಮೀನು ಹೊರತುಪಡಿಸಿ ಇತರ ಜಲಚರಗಳು, ಪ್ರಾಣಿಜನ್ಯ ಕೊಬ್ಬು ಹಾಗೂ ಪ್ರೋಟಿನ್ ಬಳಕೆ ಜಾಸ್ತಿ ಇರುವುದರಿಂದ ಅಲ್ಲಿನ ಮಹಿಳೆಯರು ಸ್ತನ ಕ್ಯಾನ್ಸರ್‌ಗೆ ತುತ್ತಾಗುವ ಪ್ರಮಾಣ ಹೆಚ್ಚು ಎನ್ನುವುದು ಈ ವರ್ಗದವರ ಸಮರ್ಥನೆ. ಏನೇ ಇರಲಿ. ಅತಿಯಾದ ಕೊಬ್ಬು ಒಳ್ಳೆಯದಲ್ಲ. ಕರಿದ ಅಥವಾ ಎಣ್ಣೆ ಪದಾರ್ಥಗಳ ಸೇವನೆ ಒಂದು ಮಿತಿಯಲ್ಲಿದ್ದರೆ ತೊಂದರೆ ಇಲ್ಲ. (ಮುಂದುವರಿಯುವುದು)
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
ಮೊ.9900113699 (ಎಸ್‌ಎಂಎಸ್‌ಗೆ ಮಾತ್ರ)