ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ದಿವಾಕರರ ಆಟಕ್ಕೆ ದಂಗಾದರು ಧರ್ಮದರ್ಶಿಗಳು!

Lingaraj Badiger
Updated On : 11 Mar 2014, 4:08 am

ಅಧಿಕಾರ ಬಂದ ಕೂಡಲೇ ಅನಂತ ದಿವಾಕರ ಮತ್ತೆ ಸ್ವೇಚ್ಛೆಯಾಗಿ ವರ್ತಿಸಲಾರಂಭಿಸಿದ. ಟ್ರಸ್ಟಿನ ಹಣವನ್ನು ತನ್ನ ಸ್ವಂತಕ್ಕೆ ನೀರಿನಂತೆ ಖರ್ಚು ಮಾಡುತ್ತಿದ್ದ. ಕಚೇರಿಯಲ್ಲಿ ಮತ್ತೆ ಅವ್ಯವಸ್ಥೆ ಉಂಟಾಯಿತು. ದುರಾಡಳಿತ ಪ್ರಾರಂಭವಾಯಿತು. ಸಂಬಳ ಕೊಡಲು, ಮುದ್ರಣ ಕಾಗದ ಖರೀದಿ ಮಾಡಲು ಹಣವಿರುತ್ತಿರಲಿಲ್ಲ. ಬ್ಯಾಂಕಿನಲ್ಲಿ ಸಾಲ ಏರುತ್ತಿತ್ತು. ಸಿಬ್ಬಂದಿಯ ಕೆಲವು ಹಿರಿಯರು ಈ ವಿಷಯವನ್ನು ಪಾಂಡಿಚೇರಿಯಲ್ಲಿದ್ದ ನವಜಾತರಿಗೆ ಮತ್ತು ಬೆಂಗಳೂರಿನಲ್ಲಿದ್ದ ಭಂಡಾರಿಯವರಿಗೆ ತಿಳಿಸಿದರು. ಭಂಡಾರಿಯವರೂ ನವಜಾತರಿಗೆ ಪತ್ರ ಬರೆದು ಅನಂತ ದಿವಾಕರರ ದುರಾಡಳಿತವನ್ನು ವರ್ಣಿಸಿ, ಈ ಬಗ್ಗೆ ಏನಾದರೂ ಮಾಡಲೇಬೇಕೆಂದು ತಿಳಿಸಿದರು. ಕೂಡಲೇ ಮಂಡಳಿಯ ಸಭೆಯನ್ನು ಕರೆದು, ಈ ವಿಷಯ ಚರ್ಚಿಸಬೇಕೆಂದು ಅವರಿಬ್ಬರಲ್ಲಿ ತೀರ್ಮಾನವಾಯಿತು. ಅದರಂತೆ ಧರ್ಮದರ್ಶಿಗಳ ಮಂಡಳಿಯ ಸಭೆಯನ್ನು ಅಕ್ಟೋಬರ್ ಕೊನೆ ವಾರದಲ್ಲಿ ಬೆಂಗಳೂರಿನಲ್ಲಿ ಕರೆಯಬೇಕೆಂದು ಗೊತ್ತಾಯಿತು ಮತ್ತು ಸಂಸ್ಥೆಯ ಎಲ್ಲಾ ಲೆಕ್ಕಪತ್ರಗಳು, ಆಡಿಟ್ ವರದಿಗಳನ್ನು ಅಂದಿನ ಸಭೆಯಲ್ಲಿ ಮಂಡಿಸಬೇಕೆಂದು ಅನಂತ ದಿವಾಕರರಿಗೆ ತಿಳಿಸಲಾಯಿತು. ಆದರೆ ಅವರು ಸಭೆಯನ್ನು ಕರೆಯಲಿಲ್ಲ. ಇನ್ನೂ ಸ್ವಲ್ಪ ಸಮಯಬೇಕೆಂದು ಕೇಳಿದರು. ಕೊನೆಗೆ ಅಕ್ಟೋಬರ್ 19ನೇ ತಾರೀಖು ಮಂಡಳಿಯ ಸಭೆಯನ್ನು ಅಶೋಕ ಹೋಟೆಲಿನಲ್ಲಿ ಕರೆಯಲು ಗೊತ್ತಾಯಿತು. ಆ ಸಭೆಗೆ ಅನಂತ ದಿವಾಕರರು ಬಂದಿದ್ದರೂ, ಹಿಂದಿನ ಸಭೆಯ ಕಾರ್ಯಕಲಾಪಗಳ ವಿವರಗಳನ್ನೊಳಗೊಂಡ ಪುಸ್ತಕವನ್ನು ಹಾಗೂ ಲೆಕ್ಕಪತ್ರವನ್ನು ಹಾಜರುಪಡಿಸಲಿಲ್ಲ.ಮತ್ತೊಂದು ದಿನ ಕಾಲಾವಕಾಶ ಕೇಳಿದರು. ಅದಕ್ಕಾಗಿ ಸಭೆಯನ್ನು ಮತ್ತೆ ಮರುದಿನಕ್ಕೆ ಮುಂದುವರಿಸಲಾಯಿತು. ಆದರೆ ಆ ದಿನವೂ ಅನಂತ ದಿವಾಕರರು ಲೆಕ್ಕಪತ್ರಗಳನ್ನು ಹಾಜರು ಮಾಡಲಿಲ್ಲ. ಮರುದಿನವೂ ಕೊಡಲಿಲ್ಲ. ಇದರಿಂದ ಬೇಸತ್ತ ಇಬ್ಬರು ಧರ್ಮದರ್ಶಿಗಳು 22ನೇ ತಾರೀಖು ಪುನಃ ಸಭೆ ಸೇರಿ ಈ ಬಗ್ಗೆ ಅಖೈರು ತೀರ್ಮಾನ ತೆಗೆದುಕೊಳ್ಳಬೇಕೆಂದು ನಿರ್ಧರಿಸಿದರು. ಸಭೆ ಪ್ರಾರಂಭವಾದ ಸ್ವಲ್ಪ ಹೊತ್ತಿನ ಮೇಲೆ ಅನಂತ ದಿವಾಕರ ಬಂದು ಮತ್ತೆ ಕಾಲಾವಕಾಶ ಕೇಳಿದ. ಆಶ್ಚರ್ಯದ ಸಂಗತಿ ಎಂದರೆ ಈ ಸಭೆಯಲ್ಲಿ ಭಾಗವಹಿಸಲು ಆರ್.ಆರ್.ದಿವಾಕರರು ಸಹ ಅಶೋಕ ಹೋಟೆಲಿಗೆ ಬಂದಿದ್ದರು. ಸ್ವಲ್ಪ ಹೊತ್ತಿನ ನಂತರ ಅವರೇ ಸಭೆಯೊಳಗೆ ಬಂದು, ತಮ್ಮನ್ನು ಪುನಃ ಧರ್ಮದರ್ಶಿಯನ್ನಾಗಿ ಮಾಡಬೇಕೆಂದೂ, ಅನಂತ ದಿವಾಕರರು ಮಾಡಿರಬಹುದಾದ ಎಲ್ಲ ನಷ್ಟಗಳಿಗೆ ತಾವು ಜವಾಬ್ದಾರರಾಗುವುದಾಗಿಯೂ ಹೇಳಿದರು. ಧರ್ಮದರ್ಶಿಗಳಿಗೆ ಇದು ಒಪ್ಪಿಗೆಯಾಗಲಿಲ್ಲ. ದಿವಾಕರರನ್ನು ಕೂಡಲೇ ಸಭೆಯಿಂದ ಹೊರಗೆ ಹೋಗುವಂತೆ ತಿಳಿಸಿದರು. ಅವರ ಹಿಂದೆ ಅನಂತ ದಿವಾಕರರೂ ಹೋದರು. ಅನಂತರ ಇಬ್ಬರೇ ಧರ್ಮದರ್ಶಿಗಳು ಸಭೆ ನಡೆಸಿ, ವ್ಯವಸ್ಥಾಪಕ ಧರ್ಮದರ್ಶಿ ಸ್ಥಾನದಿಂದ ಅನಂತ ದಿವಾಕರರನ್ನು ಕಿತ್ತು ಹಾಕುವ ಹಾಗೂ ಅವರ ಸ್ಥಾನದಲ್ಲಿ ಬಿ.ವಿ. ಭಂಡಾರಿಯವರನ್ನು ವ್ಯವಸ್ಥಾಪಕ ಧರ್ಮದರ್ಶಿಯಾಗಿ ನೇಮಕ ಮಾಡುವ ನಿರ್ಣಯಗಳನ್ನು ಅಂಗೀಕರಿಸಿದರು.
ಕೋರ್ಟಿನ ಕಟ್ಟೆ ಹತ್ತಿದ ಧರ್ಮದರ್ಶಿಗಳು!
ಅದೇ ದಿನ ಮಧ್ಯರಾತ್ರಿಯಲ್ಲಿ ದಿವಾಕರರು ಇನ್ನೊಂದು ಅಸ್ತ್ರ ಪ್ರಯೋಗಿಸಿದರು. ಟ್ರಸ್ಟಿನ ಧರ್ಮದರ್ಶಿಗಳಾದ ನವಜಾತ ಹಾಗೂ ಭಂಡಾರಿ ಅವರಿಗೆ ತಮ್ಮ ಹೆಸರಿನಲ್ಲಿ ಒಂದು ನೋಟಿಸ್ ಕಳಿಸಿ, ಧರ್ಮದರ್ಶಿ ಸ್ಥಾನದಿಂದ ಅವರನ್ನು ಕಿತ್ತು ಹಾಕಲಾಗಿದೆಯೆಂದೂ, ಮಂಡಳಿಯನ್ನು ವಿಸರ್ಜಿಸಲಾಗಿದೆಯೆಂದೂ, ಇನ್ನು ಮುಂದೆ ಟ್ರಸ್ಟಿನ ಎಲ್ಲ ವ್ಯವಹಾರ, ಜವಾಬ್ದಾರಿಗಳನ್ನು ತಾವೇ ವಹಿಸಿಕೊಂಡಿರುವುದಾಗಿಯೂ ತಿಳಿಸಿದರು. ಈ ಸಂಬಂಧದಲ್ಲಿ ಅವರು ನೋಟರಿ ಮುಂದೆ ಸಹಿ ಮಾಡಿದ್ದ ಘೋಷಣೆಯ ಪ್ರತಿಯೊಂದನ್ನು ಕಳಿಸಿಕೊಟ್ಟಿದ್ದರು. ಆದರೆ ದಿವಾಕರರ ಈ ನಡವಳಿಕೆ ಇಬ್ಬರು ಧರ್ಮದರ್ಶಿಗಳಿಗೆ ಸರಿ ಬರಲಿಲ್ಲ. ಅವರಿಗೆ ತುಂಬಾ ಆಘಾತವಾಯಿತು. ದಿವಾಕರರ ನಿರ್ಧಾರವನ್ನೂ, ಅವರ ವಿಶ್ವಾಸದ್ರೋಹವನ್ನು ತೀವ್ರವಾಗಿ ಖಂಡಿಸಿ ಅವರು ಪತ್ರ ಬರೆದರು. ಇದೇ ಸಮಯದಲ್ಲಿ ದಿವಾಕರರು ಮತ್ತೊಂದು ಪ್ರಕಟಣೆ ಹೊರಡಿಸಿ ಅನಂತ ದಿವಾಕರರನ್ನು ಏಕೈಕ ಧರ್ಮದರ್ಶಿಯನ್ನಾಗಿ ನೇಮಕ ಮಾಡಲಾಗಿದೆಯೆಂದು ತಿಳಿಸಿದರು. ಧರ್ಮದರ್ಶಿಗಳ ದೃಷ್ಟಿಯಲ್ಲಿ ಇದು ಅವರ ಮೂರ್ಖತನದ ಪರಮಾವಧಿಯಾಗಿತ್ತು. ಅಷ್ಟರಲ್ಲಿ ಅನಂತ ದಿವಾಕರನೇ ಬೆಂಗಳೂರಿನ ಎರಡನೇ ಮುನ್ಸಿಫ್ ಕೋರ್ಟಿನಲ್ಲಿ ಒಂದು ದಾವಾ ಹಾಕಿ (ದಾವಾ ನಂ. 1115/76),  ಉಳಿದ ಇಬ್ಬರು ಧರ್ಮದರ್ಶಿಗಳು ತಮ್ಮ ಆಡಳಿತದಲ್ಲಿ ಕೈ ಹಾಕದಂತೆ ತಡೆಯಾಜ್ಞೆ ಪಡೆದುಕೊಂಡರು. ಈ ಪ್ರಕರಣ ಹೈಕೋರ್ಟಿನವರೆಗೂ ಹೋಗಿ, ಅಲ್ಲಿ  ಅನಂತ ದಿವಾಕರರು ಏಕೈಕ ಧರ್ಮದರ್ಶಿಯಲ್ಲ, ಅವರು ಕೇವಲ ವ್ಯವಸ್ಥಾಪಕ ಧರ್ಮದರ್ಶಿ ಮತ್ತು ಪ್ರತಿ ತಿಂಗಳು ಅವರು ಎಲ್ಲಾ ಲೆಕ್ಕಪತ್ರಗಳನ್ನು ಕೋರ್ಟಿನ ಮುಂದೆ ಹಾಜರು ಮಾಡಬೇಕೆಂದು ತೀರ್ಮಾನವಾಯಿತು. ಆದರೆ ಅನಂತ ದಿವಾಕರರು ಇದರಂತೆ ನಡೆದುಕೊಳ್ಳಲಿಲ್ಲ. ಅವರ ವಿರುದ್ಧ ಕೋರ್ಟಿನ ನಿಂದನೆ ಅರ್ಜಿಯನ್ನು ಹಾಕಲಾಯಿತು. ಮುಂದೆ ಕೆಲವು ತಿಂಗಳುಗಳ ನಂತರ ನವಜಾತರು ನಿಧನರಾದರು. ಮತ್ತೆ ಕೆಲವು ದಿನಗಳ ನಂತರ ಭಂಡಾರಿಯವರೂ ನಿಧನರಾದರು. ಇದರಿಂದ ಈ ಕೋರ್ಟ್ ವ್ಯಾಜ್ಯಗಳನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ.
ಧರ್ಮದರ್ಶಿಗಳಲ್ಲಿ ಈ ರೀತಿ ಜಗಳ ಮತ್ತು ಕೋರ್ಟಿನ ವ್ಯಾಜ್ಯಗಳು ನಡೆಯುತ್ತಿರುವಾಗ ದಿವಾಕರರು ಎಂ.ವೈ. ಘೋರ್ಪಡೆಯವರ ಕೆ.ಪಿ.ಪಿ. ಲಿಮಿಟೆಡ್ ಎಂಬ ಕಂಪೆನಿಯ ಜೊತೆಗೆ ಮಾಡಿಕೊಂಡಿದ್ದ ರಹಸ್ಯ ಒಪ್ಪಂದದ ವಿವರಗಳು ಬಯಲಾದವು. ಟ್ರಸ್ಟಿನ ಸ್ಥಿರಾಸ್ತಿ ಮತ್ತು ಚರಾಸ್ತಿಗಳನ್ನು ಕಂಪನಿಗೆ ಬಿಟ್ಟುಕೊಡುವ ಮೊದಲು, ಸಂಡೂರ್ ಮ್ಯಾಂಗನೀಸ್ ಕಂಪನಿಯ ಆಡಿಟರುಗಳು ಕಟ್ಟಿದ್ದ ಬೆಲೆಯನ್ನೇ ಒಪ್ಪಿಕೊಳ್ಳಲಾಯಿತು. ಈ ಆಸ್ತಿಗಳ ಬೆಲೆ ಎಷ್ಟೆಂಬುದನ್ನು ಟ್ರಸ್ತಿನ ಪರವಾಗಿ ಯಾರೂ ಹೇಳಿರಲಿಲ್ಲ. ಬಹಿರಂಗವಾಗಿ ಮಾರಾಟ ಮಾಡುವ ಉದ್ದೇಶವೂ ದಿವಾಕರರಿಗೆ ಇರಲಿಲ್ಲ. ಎಲ್ಲವೂ ಗುಪ್ತವಾಗಿ ನಡೆಯಬೇಕಾಗಿತ್ತು. ಮಾರಾಟದ ದಾಖಲೆ ಪತ್ರಗಳನ್ನು ನೋಂದಾಯಿಸುವವರೆಗೆ ಮಾತುಕತೆಯ ಮತ್ತು ಒಪ್ಪಂದದ ಷರತ್ತುಗಳನ್ನು ರಹಸ್ಯವಾಗಿಡಬೇಕೆಂದು ಗೊತ್ತಾಗಿತ್ತು. ಅನಂತ ದಿವಾಕರರ ಹೊರತಾಗಿ ಉಳಿದ ಇಬ್ಬರು ಧರ್ಮದರ್ಶಿಗಳಿಗೂ ಈ ವಿಷಯ ಗೊತ್ತಿರಲಿಲ್ಲ. ಆ ಧರ್ಮದರ್ಶಿಗಳಿಂದ ತಮ್ಮ ಹೆಸರಿನಲ್ಲಿ ಅಧಿಕಾರ ಪತ್ರಗಳನ್ನು (ಪವರ್ ಆಫ್ ಅಟಾರ್ನಿ) ತೆಗೆದುಕೊಂಡು ಬಂದಿದ್ದರಿಂದ ಒಪ್ಪಂದದ ವಿವರಗಳನ್ನು ಅವರಿಗೆ ತಿಳಿಸುವುದು ಅನಾವಶ್ಯಕವೆಂಬುದು ದಿವಾಕರರ ಭಾವನೆಯಾಗಿತ್ತು.
ದಿವಾಕರರು ಮಾಡಿಕೊಂಡ ರಹಸ್ಯ ಒಪ್ಪಂದಗಳ ವಿವರಗಳನ್ನು ಕೇಳಿದರೆ ಸಾರ್ವಜನಿಕರು ನಿಜವಾಗಿಯೂ ಆಶ್ಚರ್ಯಪಡುತ್ತಾರೆ. ಸಾಲ, ಬಾಕಿ ಮೊತ್ತ ಪಾವತಿಸುವ ಒಪ್ಪಂದದ ಬಗ್ಗೆ ಹಿಂದೆ ಹೇಳಿದ್ದೆ. ಇದರ ಜೊತೆಗೆ ಬೆಂಗಳೂರು ಮತ್ತು ಹುಬ್ಬಳ್ಳಿಗಳಲ್ಲಿದ್ದ ಟ್ರಸ್ಟಿನ ಕಟ್ಟಡಗಳನ್ನು ತಿಂಗಳಿಗೆ ಕೇವಲ 29,000 ರುಪಾಯಿ ಬಾಡಿಗೆ ಆಧಾರದ ಮೇಲೆ ಹತ್ತು ವರ್ಷಗಳವರೆಗೆ ಗುತ್ತಿಗೆಗೆ ತೆಗೆದುಕೊಳ್ಳಲಾಗಿತ್ತು. ಈ ಒಪ್ಪಂದಗಳ ಪ್ರಕಾರ ಹುಬ್ಬಳ್ಳಿ ಮತ್ತು ಬೆಂಗಳೂರು ಶಾಖೆಗಳಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ಕೆಲಸಗಾರರ ಸೇವೆಯನ್ನು ಟ್ರಸ್ಟಿನಿಂದ ಕೆ.ಪಿ.ಪಿ. ಕಂಪನಿಗೆ ವರ್ಗಾಯಿಸಲಾಯಿತು. ಅವರಿಗೆ ಕೊಡಬೇಕಾಗಿದ್ದು ಪ್ರಾವಿಡೆಂಟ್ ಫಂಡ್, ಗ್ರಾಚ್ಯುಯಿಟಿ, ಇ.ಎಸ್.ಐ. ಇತ್ಯಾದಿ ಸೌಲಭ್ಯಗಳ ಬಾಕಿಯನ್ನು ತಾವು ಕೊಡುವುದಾಗಿ ಕಂಪನಿ ಒಪ್ಪಿಕೊಂಡಿತ್ತು. ಆದರೆ ಅದರಂತೆ ಕೊಡಲಿಲ್ಲ.
(ಮುಂದುವರಿಯುವುದು)
-ಕೆ.ಶಾಮರಾವ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement