ನಗೆಗಡಲಿನಲ್ಲಿ ಪ್ರಶ್ನೋತ್ತರದ ಅಲೆಗಳು!
ವಿವೇಕಾನಂದರು ಅಮೆರಿಕದಲ್ಲಿ ಅನೇಕ ಕಡೆ ಉಪನ್ಯಾಸ ನೀಡಿದರು. ಅಲ್ಲಿನ ಜನರು ಕೇಳುವ ಕುತೂಹಲಕಾರಿ ಪ್ರಶ್ನೆಗಳಿಗೆ ಸ್ವಾಮೀಜಿ ಉತ್ತರಿಸುವಾಗ ಉಂಟಾದ ಹಾಸ್ಯ ಪ್ರಸಂಗಗಳು ಇಂದಿಗೂ ನಮ್ಮನ್ನು ನಗೆಗಡಲಿನಲ್ಲಿ ತೇಲಿಸುತ್ತವೆ.
ಒಮ್ಮೆ ಹಿಂದೂ ನರಕದ ಬಗ್ಗೆ ಪ್ರಶ್ನಿಸಿದಾಗ, 'ನೋಡಿ, ಒಬ್ಬ ಹೊಟ್ಟೆಬಾಕ ಸತ್ತ ಎನ್ನಿ. ಅವನು ನರಕಕ್ಕೆ ಹೋದಾಗ ಅಲ್ಲಿ ಅವನ ಸುತ್ತಲೂ ಅತ್ಯುತ್ತಮವಾದ ತಿಂಡಿಗಳ ರಾಶಿಯನ್ನೇ ಒಡ್ಡಲಾಗುತ್ತದೆ. ಅವನ ಹೊಟ್ಟೆ ಸಾವಿರ ಮೈಲಿ ಉದ್ದವಿರುತ್ತದೆ. ಆದರೆ ಬಾಯಿ ಮಾತ್ರ ಸೂಜಿಮೊನೆಯಷ್ಟು ಇರುತ್ತದೆ! ಆಲೋಚಿಸಿ ನೋಡಿ' ಎಂದರು. 'ಸ್ವಾಮೀಜಿ ನೀವು ಭೂತವನ್ನು ನೋಡಿದ್ದೀರಾ?' ಎಂದು ಕೇಳಿದ್ದಕ್ಕೆ 'ಓ ಖಂಡಿತವಾಗಿ! ಭಾರತದಲ್ಲಿ ನಾವು ಬೆಳಗಿನ ತಿಂಡಿಗೆ ಉಪಯೋಗಿಸುವುದು ಅವುಗಳನ್ನೇ!' ಎಂದಿದ್ದರು.
ಸ್ವಾಮೀಜಿಯ ಕಾಲಜ್ಞಾನದ ಬಗ್ಗೆ ಪ್ರಶ್ನಿಸಿದಾಗ 'ನಾನು ಚಿಕ್ಕ ಹುಡುಗನಾಗಿದ್ದಾಗ ಸಾಧುವೊಬ್ಬರು ನನ್ನ ತಲೆಯ ಮೇಲೆ ಕೈಯಿಟ್ಟು, ಮಗು ನೀನು ಒಂದು ದಿನ ಮಹಾಪುರುಷನಾಗುವೆ ಅಂತ ಹೇಳಿದ್ದರು. ಈಗ ನೋಡಿ ನಾನು ಏನಾಗಿದ್ದೇನೆ?' ಎಂದಾಗ ಅಲ್ಲಿ ನಗೆಯಲೆಯೆದ್ದಿತು. 'ತನ್ನ ಹೆಸರನ್ನೇ ಬರೆಯಲು ಬಾರದ ಒಬ್ಬ ಮನುಷ್ಯನ ಶಿಷ್ಯ ನಾನು. ನಾನು ಅವರ ಪಾದರಕ್ಷೆಗಳನ್ನು ಹಿಡಿಯಲೂ ಯೋಗ್ಯನಲ್ಲ. ನನ್ನ ಬುದ್ಧಿವಂತಿಕೆಯನ್ನೆಲ್ಲ ತೆಗೆದುಕೊಂಡು ಹೋಗಿ ಗಂಗೆಗೆ ಎಸೆದುಬಿಡಬೇಕು ಎಂದು ನಾನೆಷ್ಟೋ ಸಲ ಆಶಿಸಿದ್ದೇನೆ' ಎಂದಾಗ, ಒಬ್ಬ ಮಹಿಳೆ 'ಆದರೆ ನಿಮ್ಮ ವ್ಯಕ್ತಿತ್ವದ ಆ ಜ್ಞಾನ, ಬುದ್ಧಿಮತ್ತೆಗಳನ್ನೇ ನಾನು ಹೆಚ್ಚು ಮೆಚ್ಚಿಕೊಂಡಿರುವುದು' ಎಂದಾಗ ಸ್ವಾಮೀಜಿ, 'ಅದೇಕೆಂದರೆ ನೀವೊಬ್ಬರು ಮೂರ್ಖರು, ನನ್ನ ಹಾಗೆ' ಎಂದುಬಿಟ್ಟರು.
-ಆನಂದ ಎಸ್.ಎನ್.
anandsn193@gmail.com