ಮನಸ್ಸಿನ ಆತಂಕ ದೂರಮಾಡಿಸಿ
ಪರೀಕ್ಷೆಯ ಸಮಯ ಹತ್ತಿರ ಬರುತ್ತಿದೆ ಎಂದರೇ ಮಕ್ಕಳ ಮನಸ್ಸು ಉದ್ವಿಗ್ನಗೊಳ್ಳುತ್ತದೆ. ಮನಸ್ಸಿನಲ್ಲಿ ಆತಂಕ ಭಯದಲ್ಲಿ ಪರೀಕ್ಷೆಯ ತಯಾರಿ ಮಾಡಿಕೊಳ್ಳುತ್ತಾರೆ. ಅದಕ್ಕಾಗಿ ಪಾಲಕರು ಮಕ್ಕಳ ಋಣಾತ್ಮಕ ಭಾವನೆಯನ್ನು ತೆಗೆದು ಹಾಕಿಸಿ, ಧನಾತ್ಮಕ ಭಾವನೆ ಮೂಡಿಸಿ ಅವರಿಗೆ ಯಶಸ್ಸಿನ ಮೂಲ ಮಂತ್ರ ಪರಿಶ್ರಮ ಬಗ್ಗೆ ತಿಳಿ ಹೇಳಿ. ಪರೀಕ್ಷೆ ಸೋಲಿನ ಭಯ ಬಿಡುವಂತೆ ಧೈರ್ಯ ತುಂಬಿ. ಪರೀಕ್ಷೆಗೆ ಬೇಕಾಗುವ ಸಲಕರಣೆಗಳನ್ನು ಸಿದ್ಧ ಮಾಡಿಕೊಳ್ಳಲು ತಿಳಿಸುವುದು. ನಾನು ಸೋತರೆ ಎಂಬ ಭಯ ಮುತ್ತಿಕೊಂಡಾಗ ಆತಂಕ ಹೆಚ್ಚುತ್ತದೆ. ಮುಂದೆ ಏನಾದೀತು ಎಂದು ಯೋಚಿಸದೇ ನಿರಾಂತಕ ಮನಸ್ಸಿನಿಂದ ಪರೀಕ್ಷೆಯನ್ನು ಬರೆಯಿರಿ ಎಂದು ತಿಳಿಸುತ್ತಾ ಅವರಿಗೆ ಎಲ್ಲ ರೀತಿಯ ತಿಳವಳಿಕೆನೀಡಿ.
= ರೂಪಾ ಗಣಪತರಾವ, ಪತ್ರಿಕೋದ್ಯಮ ವಿದ್ಯಾರ್ಥಿನಿ, ಬನಶೆಟ್ಟಿ.
ಅದ್ಭುತ ಕನಸುಗಳನ್ನ ಭಿತ್ತಿ
ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಮಾನಸಿಕವಾಗಿ ಒತ್ತಡ ಹೇರದೆ ಮಕ್ಕಳು ಸಾಧಿಸಬೇಕಾದ ಸಾಧನೆಯ ಬಗ್ಗೆ ಸ್ಪಷ್ಟವಾಗಿ ತಿಳಿಸಬೇಕಿದೆ. ಪದೇ ಪದೆ ಓದುವಂತೆ ಬಲವಂತ ಪಡಿಸದೆ ಸರ್. ಎಂ. ವಿಶ್ವೇಶ್ವರಯ್ಯ, ಡಾ. ಬಿ.ಆರ್.ಅಂಬೇಡ್ಕರ್ ಅವರಂತಹ ಮಹಾನುಭಾವರ ಶ್ರಮ ಮತ್ತು ಸಾಧನೆಯನ್ನು ತಿಳಿ ಹೇಳಿ ಉತ್ತಮ ಅಂಕಗಳನ್ನ ಪಡೆಯುವ ಛಲ ಮತ್ತು ಆತ್ಮವಿಶ್ವಾಸ ತುಂಬುವ ಕಾರ್ಯ ಪೋಷಕರದ್ದಾಗಿದೆ. ಸದಾ ಟೀಕೆ ಮಾಡಿ ಹಿಂಜರಿಕೆಯ ಭಾವನೆಯನ್ನುಂಟು ಮಾಡುವ ಬದಲು ಮಕ್ಕಳಲ್ಲಿ ಅದ್ಭುತ ಕನಸುಗಳನ್ನ ಭಿತ್ತಿ ಕನಸುಗಳನ್ನು ನನಸಾಗಿಸಲು ಉತ್ತಮ ಮಾರ್ಗದರ್ಶಕರಾಗಿ ಸಲಹೆ ನೀಡಿ. ಪರೀಕ್ಷೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಆದರೆ, ಪ್ರಯತ್ನ ಮುಖ್ಯ. ಹೆಚ್ಚಿನ ಪರಿಶ್ರಮ ಹಾಕಿ ಕಟ್ಟುನಿಟ್ಟಿನ ಅಭ್ಯಾಸ ಮಾಡಿದರೆ ಗೆಲುವು ಖಚಿತ ಎಂಬುದನ್ನು ಮನವರಿಕೆ ಮಾಡಿಕೊಡಿ. ಪೋಷಕರು ಕೇವಲ ಪೋಷಕರಾಗಿರದೆ ಗೆಳೆಯರಂತಿದ್ದು 'ವಿದ್ಯಾರ್ಥಿ ಜೀವನ ಸುವರ್ಣಕಾಲ' ಸದುಪಯೋಗ ಪಡಿಸಿಕೊಳ್ಳಿ ಎಂಬುದನ್ನ ಮನದಟ್ಟು ಮಾಡಿಸಿ. ಮಕ್ಕಳಲ್ಲಿರುವ ನಾನಾ ಬಗೆಯ ಗೊಂದಲಗಳಿಗೆ ತೆರೆ ಎಳೆಯಬೇಕಿದೆ.
= ರಾಮಮೂರ್ತಿ. ಪಿ, ಪತ್ರಿಕೋದ್ಯಮ ವಿದ್ಯಾರ್ಥಿ, ಬಳ್ಳಾರಿ
ಅಂಕಗಳು ಪ್ರತಿಷ್ಠೆಯಾಗಬಾರದು
ಪರೀಕ್ಷಾ ಸಮಯದಲ್ಲಿ ಪಾಲಕರು ಮೊದಲು ಮನರಂಜನೆಗಾಗಿ ಟಿ.ವಿ ಸೀರಿಯಲ್ಗಳನ್ನು ಬಿಡಿ. ಮಕ್ಕಳು ಓದುವ ಸಮಯದಲ್ಲಿ ಅವರ ಬಳಿಯಲ್ಲಿಯೇ ಇದ್ದು ಅವರನ್ನು ಪ್ರೋತ್ಸಾಹಿಸುವುದು ಪ್ರಮುಖವಾದದ್ದು. ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪರೀಕ್ಷೆಯನ್ನು ಎದುರಿಸುವ ಧೈರ್ಯ ತುಂಬಬೇಕು ಹಾಗೂ ಓದುವುದು, ಪರೀಕ್ಷೆಯಲ್ಲಿ ಅಂಕ ತೆಗೆಯುವುದಷ್ಟೇ ಅಲ್ಲ ಜ್ಞಾನಾರ್ಜನೆಗೆ ದಾರಿಯಾಗಬೇಕೆಂದು ತಿಳಿಸಬೇಕು. ಮಕ್ಕಳಿಗೆ ಓದುವುದರ ಜೊತೆಗೆ ಸ್ವಲ್ಪ ಕಾಲ ಆಟ ಆಡಲು ಸಮಯ ನೀಡಬೇಕು. ಪರೀಕ್ಷೆಯ ಫಲಿತಾಂಶವು ಪಾಲಕರಿಗೆ ಪ್ರತಿಷ್ಠೆಯಾಗಬಾರದು. ಮಕ್ಕಳು ಅವರ ಶಕ್ತ್ಯಾನುಸಾರ ಅಂಕ ಪಡೆಯುವರು. ಅದನ್ನು ಇನ್ನಷ್ಟು ಉತ್ತಮಗೊಳಿಸುವುದರ ಬಗ್ಗೆ ಯೋಚಿಸಬೇಕೇ ಹೊರತು ತಮ್ಮ ಪ್ರತಿಷ್ಠೆಗಾಗಿ ಹೆಚ್ಚು ಅಂಕ ತೆಗೆಯಬೇಕೆಂದು ಪೀಡಿಸುವುದು ತಪ್ಪು.
-ಅಂಜನಾ, ಮಂಗಳೂರು
'ಜಗುಲಿ'ಯಲ್ಲಿ ಈ ಸಲದ ವಿಷಯ 'ಲೋಕಸಭೆ ಚುನಾವಣೆಯಲ್ಲಿ ಶಾಸಕರ ಸ್ಪರ್ಧೆ ಎಷ್ಟು ಸಮಂಜಸ?'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com