ಅಡಿಗಡಿಗೆ ಅಡುಗೆಮನೆ
'ಸಪ್ಪೀರಿಗೆ ಸೊಪ್ಪು ತಕಂಡ್ ಉಪ್ಪು ಖಾರ ಉಳಿ ಬುಟ್ಕಂಡ್..ತಿನ್ಬೇಡ ಕಮ್ಮೀ..' ಈ ಹಾಡು ಕೇಳೋವಾಗ್ಲೆಲ್ಲಾ ನಮ್ಮ ಟೀವಿ ಚಾನೆಲ್ಲುಗಳ ...
'ಸಪ್ಪೀರಿಗೆ ಸೊಪ್ಪು ತಕಂಡ್
ಉಪ್ಪು ಖಾರ ಉಳಿ ಬುಟ್ಕಂಡ್..ತಿನ್ಬೇಡ ಕಮ್ಮೀ..'
ಈ ಹಾಡು ಕೇಳೋವಾಗ್ಲೆಲ್ಲಾ ನಮ್ಮ ಟೀವಿ ಚಾನೆಲ್ಲುಗಳ ಕಿಚನ್ಗಳು ಸಾಲಾಗಿ ಕಣ್ಮುಂದೆ ಚಮ್ಕಾಯಿಸ್ತವೆ. ಕೆಲವೊಂದು ಸ್ಪೋರ್ಟ್ಸ್ ಮತ್ತು ನ್ಯೂಸ್ ಚಾನೆಲ್ಗಳನ್ನು ಹೊರತು ಪಡಿಸಿದರೆ, ಬಹುತೇಕ ಮಿಕ್ಕೆಲ್ಲಾ ಚಾನೆಲ್ಗಳಲ್ಲೂ ಅಡುಗೆ ಕಾರ್ಯಕ್ರಮ ಇದ್ದೇ ಇರುತ್ತೆ. ಪೋಗೋ, ಡಿಸ್ಕವರಿ ಚಾನೆಲ್ಗಳು ಕೂಡ ಇದಕ್ಕೆ ಹೊರತಲ್ಲ. ಆಸ್ಥಾ, ಸಂಸ್ಕಾರ್ನಂಥ ರಿಲಿಜಿಯಸ್ ಚಾನೆಲ್ಗಳಲ್ಲೂ 'ಪ್ರಸಾದ್ ಕೈಸೆ ಬನಾನಾ ಹೈ.. ಕೈಸೆ ಖಾನಾ ಹೈ ...' ಅಂತ ತೋರಿಸೋದಿದೆ. ಹಾಗಾಗಿ ಟೀವಿಯೇ ರಿಯಲ್ ಅಡುಗೆಮನೆ.
ಸಿಂಪಲ್ಲಾಗ್ ಮಾಡೋ ಉಪ್ಪಿಟ್ಟಿನಿಂದ ಹಿಡಿದು 7 ಸ್ಟಾರ್ ಹೋಟೆಲ್ನ ಹೆಸರು ಹೇಳೋಕೂ ಬಾರದಂಥ ರೆಸಿಪಿಗಳು ನಮ್ಮ ಕಿರುತೆರೆಯ ಮೇಲೆ ರಾರಾಜಿಸುತ್ತವೆ. ವಿಶ್ವದ ಎಲ್ಲಾ ಥರದ ಅಡುಗೆಗಳನ್ನು ನಾವು ಮನೇಲೆ ಕೂತು ನೋಡಬಹುದು. ಇಷ್ಟವಿದ್ರೆ ಪಾಕ ಪ್ರವೀಣೆ/ಪ್ರವೀಣ ಅಂತ ಅನ್ನಿಸಿಕೊಳ್ಳಲೂಬಹುದು.
ಕನ್ನಡದಲ್ಲಿ ಕಿಚನ್ಷೋಗಳನ್ನ ಹುಟ್ಟುಹಾಕಿದ್ದೇ ಉದಯ ಟಿವಿ. 'ನಮ್ಮೂರ ಪಾಕ', ಕಿರುತೆರೆ-ಹಿರಿತೆರೆ ನಟರು ಬಂದು ನಡೆಸಿಕೊಡುವ 'ಸ್ಟಾರ್ಪಾಕ' ಅಪಾರ ಜನಪ್ರಿಯತೆ ಗಳಿಸಿಕೊಂಡಿದ್ದವು. ಸುವರ್ಣವಾಹಿನಿಯಲ್ಲಿ ಸಿಹಿಕಹಿ ಚಂದ್ರು ಮತ್ತು ಸೃಜನ್ ಲೋಕೇಶ್ ನಿರೂಪಣೆಯ ಕಿಚನ್ ಕಿಲಾಡಿಗಳು ಮಾಸ್ಟರ್ ಚೆಫ್ನಷ್ಟೇ ಸುದ್ದಿ ಮಾಡಿತ್ತು. ಮಿಕ್ಕಂತೆ ಅತ್ತೆ-ಸೊಸೆ, ಒಗ್ಗರಣೆ ಡಬ್ಬಿ ಕಾರ್ಯಕ್ರಮಗಳೂ ಸ್ಪರ್ಧೆಯಲ್ಲಿ ಹಿಂದೆ ಬಿದ್ದಿಲ್ಲ. ಚಂದನದ 'ಅಂಗೈಯಲ್ಲಿ ಅರಮನೆ' ಹೆಂಗಳೆಯರಿಗೆ ಮಾತ್ರ ಸೀಮಿತವಾಗಿದ್ದು ಅಡುಗೆ ಜೊತೆಗೆ ಗೃಹಾಲಂಕಾರ, ಕಸೂತಿ ಕಲಿಸಲಾಗುತ್ತದೆ.
ದಿನಕ್ಕೆ ಮೂರುಥರ ಮನೆಅಡುಗೆಗಳು, ಊರೂರು ತಿರುಗಿ ಅಲ್ಲಿನ ಸ್ಪೆಷಾಲಿಟಿ, ಅಲ್ಲಿರೋ ಕಲೆ ಸಂಸ್ಕೃತಿಗಳ ಪರಿಚಯ ಮಾಡಿಕೊಡುವ ಈ ಟೀವಿಯ ಸ್ಟಾರ್ ಸವಿರುಚಿ ಅಚ್ಚುಕಟ್ಟಾದ ಕಾರ್ಯಕ್ರಮ. ಬಂದಿರುವ ಅತಿಥಿಗಳ ಸಂಬಂಧಿಗಳನ್ನು ಸರ್ಪ್ರೈಸ್ ಆಗಿ ಕರೆಸಿ ಖುಷಿಪಡಿಸುವುದೂ ಚೆಂದ.
ನಮ್ಮ ಕನ್ನಡ ಕಿರುತೆರೆಯ ಅಡುಗೆ ಕಾರ್ಯಕ್ರಮಕ್ಕೆ ಹೊಸ ಗಮ್ಮತ್ತು, ಗೈರತ್ತು ತಂದುಕೊಟ್ಟಿದ್ದು ಸುವರ್ಣ ಚಾನೆಲ್ನ 'ಬೊಂಬಾಟ್ ಭೋಜನ'. ಈ ಕಾರ್ಯಕ್ರಮದ ಮೂಲಕ ಭೀಮ್ಭಾಯ್ ಸಿಹಿಕಹಿ ಚಂದ್ರು ಯದ್ವಾತದ್ವಾ ಫೇಮಸ್ ಆಗೋದ್ರು. ಸಾಮಾನ್ಯ ದಿನನಿತ್ಯದ ತಿಂಡಿ ಅಡುಗೆ ಆದ್ರೂ... ಅವರದ್ದೇ ಸ್ಪೆಷಲ್ ನಿರೂಪಣೆ, ಅವರೇ ನಾಮಕರಣ ಮಾಡುತ್ತಿದ್ದ ರೆಸಿಪಿಗಳು ಪ್ರಖ್ಯಾತವಾಗಿ ಹೋದವು. ಅವರದೇ ಸಾರಥ್ಯದ 'ನಮ್ಮೂರ ಹೋಟೆಲ್' ಬೆಂಗಳೂರಿನ ಗಲ್ಲಿಗಳ ಸಣ್ಣಪುಟ್ಟ ಗಾಡಿ, ಅಂಗಡಿ, ಹೋಟೆಲ್ಗಳನ್ನೂ ಟೀವಿಯಲ್ಲಿ ಬರುವಂತೆ ಮಾಡಿತು. ಅಂತೆಯೇ ಕಸ್ತೂರಿಯ 'ನಳಪಾಕ' ಹಾಗೂ ಶನಿವಾರ ಭಾನುವಾರದ 'ಬಾಡೂಟ' ನಾನ್ವೆಜ್ ಪ್ರಿಯರ ಫೇವರಿಟ್ ಕಾರ್ಯಕ್ರಮ.
ನ್ಯಾಷನಲ್ ಲೆವೆಲ್ನಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದ ಸ್ಟಾರ್ ಪ್ಲಸ್ನ 'ಮಾಸ್ಟರ್ ಚೆಫ್' ಅಕ್ಷಯ್ಕುಮಾರ್ಗೆ ಹೊಸ ಇಮೇಜ್ ಕೊಟ್ಟಿದ್ದೇ ಅಲ್ಲದೇ... ಸಂಜೀವ್ ಕಪೂರ್, ವಿಶಾಲ್ ಖನ್ನರ ಜೊತೆಗೆ ಭಾರತದ ಅನೇಕ ಅದ್ಭುತ ಪಾಕಪ್ರವೀಣರನ್ನ ಪರಿಚಯ ಮಾಡಿಕೊಟ್ಟಿತು. ಗಂಡಸರದ್ದೇ ಮೇಲುಗೈಯಿದ್ದ ಈ ಷೋನಲ್ಲಿ ಗೆದ್ದ ಏಕೈಕ ಹೆಣ್ಣುಮಗಳು ಬೆಂಗಳೂರಿನ ಹುಡುಗಿ.
ಮಕ್ಕಳಿಗೂ ಅಡುಗೆ ನೈಪುಣ್ಯತೆ ಇದೆ ಅಂತ ತೋರಿಸಿಕೊಟ್ಟಿದ್ದು 'ಲಿಟ್ಲ್ ಮಾಸ್ಟರ್ ಚೆಫ್'. ಪುಟ್ಟ ಪುಟ್ಟ ಕೈಗಳು ಕಿಚನ್ನಲ್ಲಿ ಕೈಯಾಡಿಸಿದ್ದೇ ಅಲ್ಲದೆ, ತಮ್ಮಿಷ್ಟದ ಹೆಸರಿಟ್ಟು ದಿಢೀರ್ ರೆಸಿಪಿಗಳನ್ನು ಮಾಡಿದ್ದು ದೊಡ್ಡವ್ರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿತ್ತು.
ಎನ್ ಡಿ ಟಿ ವಿ ಯ ಗುಡ್ ಟೈಮ್, 'ಚಕ್ಲೇ ಇಂಡಿಯಾ ಕಚ್ಚಾ ರಾಸ್ತಾ' ಸಣ್ಣಸಣ್ಣ ಹಳ್ಳಿಯನ್ನೂ ಬಿಡದೇ ಅಲ್ಲಿನ ಗುಡಿಸಲಿನಲ್ಲಿ ತಯಾರಿಸುವ ರೆಸಿಪಿಗಳ ಪರಿಚಯ ಮಾಡಿಕೊಟ್ಟಿತ್ತು.
ಏನೇ ಆದ್ರೂ ಈ ಅಡುಗೆ ಎಲ್ಲಾ ಟೀವೀಲಿ ನೋಡೋಕಷ್ಟೆ ಚೆಂದ. ತಿನ್ನೋಕೇನಿದ್ರೂ ಅಮ್ಮನ ಅಥವಾ ಹೆಂಡತಿಯ ಕೈಯಡುಗೆಯೇ ಬೆಸ್ಟು. ಅಲ್ಲವೇ?
-ಕುಮುದವಲ್ಲಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.