ನಿಶ್ಶಂಕೆಯ ಬದುಕು ಇರಲಿ
ಅಮ್ಮನ ಅಪ್ಪುಗೆಯಲ್ಲಿ ನಿದ್ರಿಸುವ ಮಗುವನ್ನೊಮ್ಮೆ ದಿಟ್ಟಿಸಿ ನೋಡಿ. ಅದರ ಮನದಲ್ಲಿ ಎಂಥಾ ನಿಶ್ಚಿಂತೆ ಮನೆ ಮಾಡಿರುತ್ತದೆ ...
ಅಮ್ಮನ ಅಪ್ಪುಗೆಯಲ್ಲಿ ನಿದ್ರಿಸುವ ಮಗುವನ್ನೊಮ್ಮೆ ದಿಟ್ಟಿಸಿ ನೋಡಿ. ಅದರ ಮನದಲ್ಲಿ ಎಂಥಾ ನಿಶ್ಚಿಂತೆ ಮನೆ ಮಾಡಿರುತ್ತದೆ ಎಂದರೆ ಈ ಕ್ಷಣವೇ ಪ್ರಪಂಚ ಮುಳುಗಿಹೋದರೂ ತನಗೇನೂ ಸಂಬಂಧವೇ ಇಲ್ಲ ಎಂಬ ಭಾವದಲ್ಲಿ ಅದಿರುತ್ತದೆ. ನಿಜ, ಮಗುವಿನಲ್ಲಿನ ಮುಗ್ಧತೆ ಅದಕ್ಕೆ ಅಂಥ ನಿರ್ಭಯತೆಯನ್ನು ತಂದುಕೊಟ್ಟಿರಲೂಬಹುದು. ಹಾಗೆಂದು ಮಗುವಿಗೆ ಭಯವೇ ಇಲ್ಲವೆಂತಲ್ಲ. ಅದೇ ಮಗುವನ್ನು ಅಮ್ಮನ ಮಡಿಲಿನಿಂದ ಬೇರ್ಪಡಿಸಿ ನೋಡಿ, ಅಥವಾ ಯಾವುದೋ ಕೆಲಸದ ನಿಮಿತ್ತ ತಾಯಿ ಮಗುವಿನ ಪಕ್ಕದಿಂದ ಎದ್ದು ಹೋದಾಗಲೊಮ್ಮೆ ಗಮನಿಸಿ. ತಾಯಿಯ ಮಡಿಲಲ್ಲಿ ನಿದ್ರಿಸುತ್ತಿದ್ದಾಗಿನ ನಿರ್ಮಲ, ನಿರ್ಭಯತೆ ಅಲ್ಲಿ ಮರೆಯಾಗಿರುತ್ತದೆ. ಅಷ್ಟೇಕೆ, ಅಮ್ಮನ ಮಡಿಲಲ್ಲಿರದ ಮಗು ಹೆಚ್ಚು ಹೊತ್ತು ನಿದ್ರಿಸಲೂ ಸಾಧ್ಯವಿಲ್ಲ. ಒಂದೆರಡು ಕ್ಷಣಗಳಲ್ಲೇ ಅದಕ್ಕೆ ಎಚ್ಚರಾಗಿ ಹೋಗುತ್ತದೆ. ಅಂದರೆ ಮಗುವಿಗೆ ಆ ರೀತಿಯ ನಿರುಮ್ಮಳತೆಯನ್ನು ತಂದುಕೊಟ್ಟದ್ದು ಅಮ್ಮನೇ ಎಂಬುದು ಖಚಿತ. ಅಮ್ಮನೊಬ್ಬಳು ಜೊತೆಗಿದ್ದರೆ ತನ್ನನ್ನು ಯಾವುದೂ ಬಾಧಿಸಲು ಸಾಧ್ಯವಿಲ್ಲ ಎಂಬ ಅಸೀಮ ನಂಬಿಕೆ ಮಗುವಿನದ್ದು. ಈ ನಂಬಿಕೆ ಎನ್ನುವದೇ ಹಾಗೆ, ನಾವು ಇಡುವ ವಿಶ್ವಾಸದ ಮೇಲೆ ಅದು ನಿಂತಿರುತ್ತದೆ. ಒಂದಿನಿತು ಅಮ್ಮನ ಮೇಲೆ ಮಗುವಿಗೆ ಶಂಕೆ ಇದ್ದಿದ್ದರೂ ಅದಕ್ಕೆ ಹಾಗೆ ನಿರ್ಭಯವಾಗಿರಲು ಸಾಧ್ಯವಿಲ್ಲ. ನಾವು ಸಹ ನಮ್ಮ ನೈತಿಕತೆಯ ಮೇಲೆ ಅಂಥದ್ದೇ ನಂಬಿಕಯೊಂದಿಗೆ ಮುನ್ನಡೆದಾಗ ಮಾತ್ರ ನಮಗೆ ನಿರ್ಭಯವಾಗಿ ಬದುಕಲು ಸಾಧ್ಯ. ನಮ್ಮಲ್ಲೇ ಕಲ್ಮಶಗಳಿದ್ದರೆ, ಕ್ಷಣಕ್ಷಣಕ್ಕೂ ಶಂಕೆಯೊಂದಿಗೆ ಸಾಗುತ್ತಿದ್ದರೆ ನೆಮ್ಮದಿ ನಮ್ಮಿಂದ ದೂರವೇ ಉಳಿದುಬಿಡುತ್ತದೆ. ನಾವು ಮಾಡುವ ಕೆಲಸ, ನಮ್ಮ ಸುತ್ತಲಿನ ವಾತಾವರಣ, ನಮ್ಮ ಜೊತೆಗೆ ಬದುಕುವ ಮಂದಿ, ನಾವು ಒಡನಾಡುವ ಜನ ಇವುಗಳನ್ನು ನಿಷ್ಕಲ್ಮಶವಾಗಿ ನಂಬಿ ನಾವು ಮುಂದಕ್ಕೆ ಸಾಗಬೇಕು. ಆಗ ಖಂಡಿತಾ ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯ. ನಿಷ್ಠ ಸಾಧನೆಯಿಂದ ಅಂತರಂಗದ ಸಂಸ್ಕರಣವಾಗಿ ಹೃತ್ಕಮಲದಲ್ಲಿ ನಂಬಿಕೆ ಮೊಳೆಯಬೇಕು. ಕಾಣದ ಶಕ್ತಿಯೊಂದು ನಮ್ಮನ್ನು ಮುನ್ನಡೆಸಲು ಇದ್ದೇ ಇದೆ. ಅದೆಂದಿಗೂ ನಮ್ಮನ್ನು ತಪ್ಪು ದಾರಿಯಲ್ಲಿ ನಡೆಸುವುದಿಲ್ಲ ಎಂಬ ವಿಶ್ವಾಸವನ್ನು ತಳೆದು ಹೆಜ್ಜೆಯಿಡಬೇಕು. ಇದರೊಂದಿಗೆ ವಿವೇಚನೆಯ ಹೊದಿಕೆ ನಮ್ಮನ್ನು ಸದಾ ಆವರಿಸಿಕೊಂಡಾಗ ಮಾತ್ರವೇ ನಮಗೆ ಭಯದ ಪ್ರಶ್ನೆ ಇರದು. ವ್ಯಾಕುಲವನ್ನು ತೊರೆದು ನೀವು ಮಾಡುವ ಕಾರ್ಯದ ಮೇಲೆ ನಂಬಿಕೆಯಿಟ್ಟು ಮುನ್ನಡೆದುಬಿಡಿ. ಫಲಾಫಲಗಳ ಗೋಜು ನಿಮಗೆ ಬೇಡವೇ ಬೇಡ.
-ಸಹನೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.