ಬ್ಲಡ್ ಕ್ಯಾನ್ಸರ್
ಮಲಯಾಳದ ಖ್ಯಾತ ಸಾಹಿತಿ ಕಮಲಾ ದಾಸ್ ಅವರ ಸಮಗ್ರ ಕತೆಗಳನ್ನು ಕೆ.ಕೆ.ಗಂಗಾಧರನ್ ಅವರು ಕನ್ನಡಕ್ಕೆ ಅನುವಾದಿಸಿದ್ದು,...
ಮಲಯಾಳದ ಖ್ಯಾತ ಸಾಹಿತಿ ಕಮಲಾ ದಾಸ್ ಅವರ ಸಮಗ್ರ ಕತೆಗಳನ್ನು ಕೆ.ಕೆ.ಗಂಗಾಧರನ್ ಅವರು ಕನ್ನಡಕ್ಕೆ ಅನುವಾದಿಸಿದ್ದು, ಕೃತಿ ಮಾ.16ರಂದು ಬಸವನಗುಡಿಯ ನ್ಯಾಷನಲ್ ಕಾಲೇಜು ಸಭಾಂಗಣದಲ್ಲಿ ಬಿಡುಗಡೆಯಾಗುತ್ತಿದೆ. ಜತೆಗೆ ಕಮಲಾದಾಸ್ ಅವರ ಸಮಗ್ರ ಕಾದಂಬರಿಗಳ ಅನುವಾದ(ಡಾ.ಅಶೋಕ್‌ಕುಮಾರ್), ಪ್ರೇಮ್‌ಚಂದ್ ಕತೆಗಳು(ಎಸ್.ಕೆ.ರಾಮಚಂದ್ರ ರಾವ್), ವೈಶಾಲಿಯ ನಗರವಧು (ಆರ್.ಕೆ.ಹೆಗಡೆ) ಕೃತಿಗಳು ಕೂಡ ಅರ್ಪಣೆಯಾಗುತ್ತಿವೆ. ಕಮಲಾ ದಾಸ್ ಕತೆಗಳಲ್ಲೊಂದು ಗಂಗಾಧರನ್ ಅನುವಾದದಲ್ಲಿ ಇಲ್ಲಿದೆ.
ಹನ್ನೊಂದು ವರ್ಷದ ಮಗಳನ್ನು ಬೋರ್ಡಿಂಗಿನಿಂದ ಬಿಡಿಸಿ ಮನೆಗೆ ಕರೆತಂದ ದಿನ ಅಪ್ಪ ಅಮ್ಮನಿಗೆ ಹೇಳಿದ.
'ನೀನು ಅವಳ ಮುಂದೆ ಅಳಬಾರದು. ಕಾಯಿಲೆಯ ಗಂಭೀರತೆ ಅವಳಿಗಿನ್ನೂ ಗೊತ್ತಾಗಿಲ್ಲ. ಅದು ಅವಲಿಗೆ ತಿಳಿಯಲೂ ಬಾರದು.'
'ಓ ದೇವರೆ, ನನಗೇಕೆ ಇಂತಹ ಶಿಕ್ಷೆ' ಅಮ್ಮ ದೇವರನ್ನು ಕೇಳಿದಳು. ಅಪ್ಪ ಕೋಪದಿಂದ ಆಕೆಯನ್ನು ದುರುಗುಟ್ಟಿ ನೋಡಿದ. ಈ ಶಿಕ್ಷೆಗೆ ಇವಳು ಸಂಪೂರ್ಣ ಅರ್ಹಳೆಂದು ಅವನಿಗನ್ನಿಸಿತು.
ಪ್ರತಿವರ್ಷ ಮಗುವನ್ನು ಬೋರ್ಡಿಂಗಿಗೆ ಕಳಿಸಲು ಕೊಂಡೊಯ್ಯುತ್ತಿದ್ದರು, ಅದನ್ನು ನೋಡುವ ಮನೋಬಲ ತನಗಿಲ್ಲವೆಂದು ಮಗುವಿನ ತಾಯಿ ಮನೆಯೊಳಕ್ಕೆ ಹೋಗಿ ಅಡಗಿರುತ್ತಿದ್ದಳು.
'ಅಮ್ಮ ಅಮ್ಮಾ' ಎಂದು ಕರೆಯುವ ಮಗಳನ್ನು ಆತ ನಿಷ್ಕುರುಣೆಯಿಂದ ಹಿಡಿದೆಳೆದು ಕಾರಿನಲ್ಲಿ ಕೂರಿಸಿ ರೈಲ್ವೆ ನಿಲ್ದಾಣಕ್ಕೆ ಕರೆದೊಯ್ಯುತ್ತಿದ್ದ. ನನ್ನನ್ನು ಇನ್ನು ಯಾವಾಗ ಮನೆಗೆ ಕರೆದುಕೊಂಡು ಬರುತ್ತೀಯಾ ಎಂದು ಮಗಳು ಪದೇ ಪದೇ ಕೇಳಿ ತಂದೆಯ ಉಸಿರುಗಟ್ಟಿಸುತ್ತಿದ್ದಳು.
ಅದರ ನಂತರ ಮಗುವಿನ ತಾಯಿ ಮಗುವಿನ ತಂದೆಗೆ ಕೇಳಿದಳು.
'ಮಗುವನ್ನು ಬೋರ್ಡಿಂಗಿಗೆ ಸೇರಿಸಿದ್ದು ಒಳ್ಳೆಯದೇ ಆಯಿತು. ಅವಳು ನಡೆದುಕೊಳ್ಳುವ ರೀತಿಯಲ್ಲಿ ತುಂಬಾ ಸುಧಾರಣೆಯಾಗಿದೆ. ಇಂಗ್ಲಿಷಿನಲ್ಲಿ ಮಾತನಾಡುವುದನ್ನು ಈಗ ಅವಳು ಇಷ್ಟಪಡುತ್ತಿಲ್ಲ. ನೀವು ಹೇಳಿದಂತೆ ನಾವು ಅವಳನ್ನು ಮನೆಯಲ್ಲೇ ಇರಿಸಿದ್ದಿದ್ದರೆ ಈಗ ಅವಳ ಸ್ಥಿತಿ ಏನಾಗುತ್ತಿತ್ತು ಹೇಳಿ.'
ಒಂದು ರಜಾ ದಿನ ಮನೆಗೆ ಬಂದಿದ್ದಾಗ ಮಗಳು ತಂದೆಗೆ ಹೇಳಿದಳು,
'ಅಪ್ಪಾ, ನಾನು ಬೇಗ ದೊಡ್ಡವಳಾಗಬೇಕು'
'ಏಕೆ ದೊಡ್ಡವಳಾಗಬೇಕು? ಏನು ಅಂಥ ಆಸೆ ನಿನಗೆ?'
'ದೊಡ್ಡವಳಾದರೆ ನಾನು ನಿಮ್ಮ ಜತೆ ಇರಬಹುದಲ್ಲ' ಮಗಳು ಹೇಳಿದ್ದಳು. ಆ ನಿಮಿಷಕ್ಕೆ ಆತನಿಗೆ ತನ್ನ ಹೆಂಡತಿಯ ಮೇಲೆ ಬೇಸರ ಉಂಟಾಯಿತು. ಅವಳಿಗೆ ಬ್ಲಡ್ ಕ್ಯಾನ್ಸರ್ ಎಂದು ಮದರ್ ಸುಪೀರಿಯರ್‌ರವರ ಪತ್ರ ಬಂದಾಗ ಅವರಿಗೆ ನಂಬಲಿಕ್ಕೇ ಆಗಲಿಲ್ಲ. ಮಗಳು ತನಗೆ ಹುಷಾರಿಲ್ಲವೆಂದು ಹೇಳಿ ತಾನು ಮನೆಯಲ್ಲೇ ಇರಬೇಕೆಂದಾಗ ಅವಳು ರೋಗಿಯಂತೆ ನಟಿಸುತ್ತಿದ್ದಾಳೆಂದು ಊಹಿಸಿದ್ದ.
ಆದರೆ ಡಾಕ್ಟರುಗಳನ್ನು ಹೇಗೆ ಮಗಳು ತನ್ನವಳನ್ನಾಗಿ ಮಾಡಿಕೊಂಡಳು? ಮಗಳಿಗೆ ಶಾಲು ಹೊದಿಸಿ ಅವಳನ್ನೆತ್ತಿ ಕಾರಿನಲ್ಲಿ ಕೂರಿಸಿದಾಗ ಆತನಿಗೆ ಆಕೆ ನಟಿಸುತ್ತಿಲ್ಲವೆಂದು ಖಾತ್ರಿಯಾಯಿತು. ಕಾರಿನೊಳಕ್ಕೆ ಇಮುಕು ಹಾಕಿದ ಕೆಲವು ಕ್ರೈಸ್ತ ಸನ್ಯಾಸಿನಿಯರು ಹೇಳಿದರು,
'ನಾವು ನಿಮಗಾಗಿ ಪ್ರಾರ್ಥಿಸುತ್ತೇವೆ'
ಮಗು ಕಾರಿನಲ್ಲಿ ಕುಳಿತು ಅವರತ್ತ ನೋಡಿ ಮಂದಹಾಸ ಬೀರಿದಳು. ಮನೆಗೆ ತಲುಪಿದಾಗ ಅವಳು ಸಂತೋಷಗೊಂಡವಳಂತೆ ಕಂಡಳು. ತನ್ನ ಹಳೆಯ ಆಟದ ಸಾಮಾನುಗಳನ್ನು ತರಲು ತಾಯಿಗೆ ಹೇಳಿದಳು. ಅವಳನ್ನು ಹಿಂದೆಂದೂ ಮುಟ್ಟಲು ಬಿಡಲೊಲ್ಲದ ಕೆಲವು ಕೌತುಕದ ವಸ್ತುಗಳನ್ನು ಮಂಚದ ಮೇಲೆ ಸಾಲಾಗಿರಿಸಿದಳು.
'ಅಮ್ಮಾ, ಇವುಗಳೆವನ್ನು ಇನ್ನು ಮುಂದೆ ಷೋಕೇಸಿನಲ್ಲಿಟ್ಟು ಬೀಗ ಹಾಕುವುದಿಲ್ಲ ತಾನೆ?' ಮಗಳು ತಾಯಿಯನ್ನು ಕೇಳಿದಳು.
'ಇಲ್ಲಮ್ಮ ಇಲ್ಲ, ಇವೆಲ್ಲಾ ನಿನಗೆ ಆಟವಾಡ್ಲಿಕ್ಕಿರೋದೇ. ಇದೆಲ್ಲಾ ನಿಂದೇ'
'ನಾನು ಬೋರ್ಡಿಂಗಿಗೆ ಹೋಗುವಾಗ ಇವೆಲ್ಲವನ್ನು ಕೊಂಡೊಯ್ಯಲೆ?'
'ಇನ್ನು ನಿನ್ನ ಬೋರ್ಡಿಂಗಿಗೆ ಕಳುಹಿಸುವುದಿಲ್ಲ ಕಣಮ್ಮ. ಇನ್ನು ನಾನು ಯಾವಾಗ್ಲೂ ನಿಂಜೊತೆಗೇ ಇರ್ತೀನಿ.'
'ಡಿಸೆಂಬರ್ ಪರೀಕ್ಷೆ ಬರೆಯೋದಕ್ಕೂ ಹೋಗೋದು ಬೇಡ್ವಾ, ಅಮ್ಮಾ' ಮಗು ಕೇಳಿತು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.