ಭೂತ ಕಾಲವಿದು!
ಕಗ್ಗತ್ತಲನ್ನು ಭೇದಿಸಿಕೊಂಡು ಕಾಣಿಸಿಕೊಳ್ಳುವ ದೊಂದಿ, ಪಂಜುಗಳ ಅಗ್ನಿವೈಭವ. ರಾತ್ರಿಯ ನಿಶ್ಶಬ್ದವನ್ನು ಸೀಳಿಕೊಂಡು ಬರುವ ಚರ್ಮವಾದ್ಯಗಳ ಮೊರೆತ. ಅದು ಮುಖವಲ್ಲ, ಕೆಕ್ಕರಿಸಿ ನೋಡುತ್ತಿರುವ ಮಹಾಕಾಲನ ತುಣುಕು. ಭಕ್ತಿ, ಭಯ, ನಂಬಿಕೆಗಳು ಬೆರೆತ ಭೂತಕೋಲದ ರಾತ್ರಿಯಿದು.
ದೈವಗಳನ್ನು ಆರಾಧಿಸಿಕೊಂಡು ಬರುತ್ತಿರುವ ನೆಲ ದಕ್ಷಿಣ ಕನ್ನಡ, ಕೇರಳ ಮತ್ತು ಕೊಡಗು. ಕೀರ್ತಿಶೇಷರಾದ ಹಿರಿಯರು, ದೈವಾಂಶ ಸಂಭೂತರು ಇಲ್ಲಿ ದೈವ(ಭೂತ)ಗಳಾಗಿದ್ದಾರೆ ಎಂಬ ನಂಬಿಕೆ. ಅನೇಕ ದೈವಗಳು ಕೇರಳದಿಂದ ತುಳುನಾಡಿಗೆ ನಲಸೆ ಬಂದಿವೆ. ಹೀಗೆ ಬಂದ ದೈವಗಳಲ್ಲೊಂದು ಮುತ್ತಪ್ಪ. ಕೊಡಗಿನ ಸೋಮವಾರಪೇಟೆಯಲ್ಲಿರುವ ಮುತ್ತಪ್ಪ ದೇಗುಲಕ್ಕೆ 100 ವರ್ಷದ ಇತಿಹಾಸ. ಇಲ್ಲಿ ಮಾ.16, 17, 18ರಂದು ಮುತ್ತಪ್ಪ-ತಿರುವಪ್ಪ ದೈವ ಸೇರಿದಂತೆ ಸುಮಾರು 9 ದೈವಗಳ ಕೋಲ ಅಹೋರಾತ್ರಿ ವಿಜೃಂಭಿಸಲಿವೆ.
ಭೂತಗಳಿಗೆ ವರ್ಷದಲ್ಲಿ ಒಂದು ನಿಗದಿತ ದಿನ ವಿಶೇಷ ಆರಾಧನೆ. ಕೋಲ ಕುಣಿತ ನಡೆಸುವ ನಿರ್ದಿಷ್ಟ ಜಾತಿಯ ವ್ಯಕ್ತಿ ಆ ದಿನ ದೈವದ ಉಗ್ರರೂಪೀ ಮುಖವರ್ಣಿಕೆ ಬರೆದು, ವೇಷಭೂಷಣ ಕಟ್ಟಿ, ಧಾರ್ಮಿಕ ವಿಧಿವಿಧಾನ ಸಮೇತ ಭಕ್ತರನ್ನು ಆಶೀರ್ವದಿಸುತ್ತಾನೆ. ಕಲ್ಲುರ್ಟಿ, ಕೊರಗ ತನಿಯ, ಪಂಜುರ್ಲಿ, ಮುತ್ತಪ್ಪ, ತಿರುವಪ್ಪ, ಚಾಮುಂಡಿ, ಕೊರತಿ, ವಿಷ್ಣುಮೂರ್ತಿ, ಗುಳಿಗ, ಪಾಷಾಣಮೂರ್ತಿ, ಪೊಟ್ಟನ್ ತಯ್ಯಂ, ಅಗ್ನಿಕಂಡಕರ್ಣ, ರಕ್ತಚಾಮುಂಡಿ, ಭಗವತಿ ಮುಂತಾದವು ಇಂಥ ಕೆಲ ದೈವಗಳು.
ಅಕ್ಕಿಹಿಟ್ಟು, ಅರಶಿನಪುಡಿ, ಕುಂಕುಮಗಳನ್ನು ಬಳಸಿ ಮಾಡಿಕೊಳ್ಳುವ ಮುಖವರ್ಣಿಕೆಯೇ ಭಯಂಕರ, ರುದ್ರರಮಣೀಯ. ತೆಂಗಿನ ಮರದ ಚಿಗುರು ಗರಿಗಳನ್ನು ಸೀಳಿ ಮಾಡಿದ ಉಡುಗೆ. ದೈವ ಉಪಯೋಗಿಸುವ ಆಯುಧವನ್ನು ಕೈಯಲ್ಲಿ. ಕಾಲಿಗೆ ಕಡಗದಂತಹ ಗೆಜ್ಜೆ ಗಗ್ಗರ. ಮೈಮೇಲೆ ಅಕ್ಷತೆ ಎರಚುತ್ತಿದ್ದಂತೆ ದೈವ ಕಟ್ಟಿದವನ ಮೈಮೇಲೆ ಆವಾಹನೆಯಾಗುತ್ತದೆ. ಚಂಡೆವಾದ್ಯದ ಲಯಬದ್ಧ ನುಡಿಗೆ ತಕ್ಕಂತೆ ಭೂತದ ನರ್ತನ, ಭಕ್ತರಿಗೆ ಅದು ಕೊಡುವ ಅಭಯಗಳ ವೈಖರಿ ನೋಡಿಯೇ ತಿಳಿಯಬೇಕು. ವಿಶೇಷವಾಗಿ ವಿಷ್ಣಮೂರ್ತಿ, ಪೊಟ್ಟನ್, ಅಗ್ನಿಕಂಡಕರ್ಣ ಸೇರಿದಂತೆ ಕೆಲವು ದೈವಗಳು ಅಗ್ನಿಕುಂಡಕ್ಕೆ ಹಾರಿ, ಮಲಗಿ, ಏಳುವ ರೋಚಕ ದೃಶ್ಯವನ್ನೂ ಕಾಣಬಹುದು.
ಕೋಲ ಕಟ್ಟುವ ವ್ಯಕ್ತಿ ಕಟ್ಟುನಿಟ್ಟಿನ ವ್ರತ ಆಚರಿಸಿರಬೇಕು. ಕೋಲ ಕಟ್ಟಿದ ವ್ಯಕ್ತಿ ದಿನ ಏಳೆಂಟು ಗಂಟೆಗಳ ನರ್ತನ, ಭಕ್ತಾದಿಗಳಿಗೆ ದರ್ಶನ ಹಾಗೂ ಅವರ ಬೇಕು-ಬೇಡಿಕೆಗಳ ಬಗ್ಗೆ ಆಲಿಸಿ, ಭರವಸೆ ನೀಡುವ ಕಾರ್ಯವನ್ನೂ ಮಾಡಬೇಕಾಗುತ್ತದೆ. ಎಲ್ಲರೂ ಕೋಲ ಕಟ್ಟುವಂತಿಲ್ಲ. ಅದಕ್ಕೆಂದೇ ಮಲಯ, ಪಣಿಕರ್ ಇತ್ಯಾದಿ ಜನಾಂಗಗಳಿವೆ. ಕೇರಳ ಹಾಗೂ ದಕ್ಷಿಣ ಕನ್ನಡದ ಕೆಲವು ಭಾಗಗಳಲ್ಲಿ ಇವರ ವಾಸ. ಕೋಲಕಟ್ಟುವ ಕಲೆ ಇವರ ಪಾರಂಪರಿಕ ಸೊತ್ತು. ಇತ್ತೀಚೆಗೆ ಇದರಲ್ಲೂ ಪಳಗಿದವರು ದುಸ್ತರ. ತಲೆಯಿಂದ ತಲೆಗೆ ಮುಂದುವರಿಯುತ್ತಿಲ್ಲ.
-ಬಿ.ಎ.ಭಾಸ್ಕರ್, ಸೋಮವಾರಪೇಟೆ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.