ಬಹಳಷ್ಟು ಉಂಟು ಹಾಲಿನ ಉಪಯೋಗ
ಹಾಲಿನಿಂದ ಇನ್ನೊಂದು ಪ್ರಯೋಜನವೂ ಉಂಟು. ಅದು ಏನೆಂದರೆ ಹಾಲು ವಿಟಮಿನ್ 'ಡಿ'ಯಿಂದ ಶ್ರೀಮಂತವಾಗಿರುತ್ತದೆ....
ಹಾಲಿನಿಂದ ಇನ್ನೊಂದು ಪ್ರಯೋಜನವೂ ಉಂಟು. ಅದು ಏನೆಂದರೆ ಹಾಲು ವಿಟಮಿನ್ 'ಡಿ'ಯಿಂದ ಶ್ರೀಮಂತವಾಗಿರುತ್ತದೆ. ಕ್ಯಾನ್ಸರ್ ಹತ್ತಿಕ್ಕುವ ಸಾಮರ್ಥ್ಯ ಹೊಂದಿರುವ ಸಂಗತಿಗಳಲ್ಲಿ ವಿಟಮಿನ್ ಡಿ ಸಹ ಒಂದು. ಯಾರ ರಕ್ತದಲ್ಲಿ ವಿಟಮಿನ್ ಡಿ ಅಧಿಕ ಪ್ರಮಾಣದಲ್ಲಿರುತ್ತದೆಯೋ ಅವರಲ್ಲಿ ಕರುಳಿನ ಕಾನ್ಸರ್ ಕ್ಯಾನ್ಸರ್ ಸಾಧ್ಯತೆ ಕಡಿಮೆ ಎನ್ನುವುದು ರುಜುವಾತಾಗಿದೆ.
ಅಮೇರಿಕಾದ ಕ್ಯಾನ್ಸರ್ ತಜ್ಞ ಡಾ.ಗಾರ್ಲೆಂಡ್ ಅವರು ಕೆಲವು ವರ್ಷಗಳ ಹಿಂದೆ 25,620 ಜನರ ರಕ್ತ ಮಾದರಿಗಳನ್ನು ತೆಗೆದುಕೊಂಡು ಅದರಲ್ಲಿನ ವಿಟಮಿನ್ ಡಿ ಪ್ರಮಾಣ ದಾಖಲಿಸಿಕೊಂಡರು. ಎಂಟು ವರ್ಷಗಳ ಬಳಿಕ ಅವರೆಲ್ಲರನ್ನೂ ಪುನಃ ಸಂಪರ್ಕಿಸಿ ವೈದ್ಯಕೀಯ ಮಾಹಿತಿ ಪಡೆದುಕೊಂಡರು. ರಕ್ತದಲ್ಲಿ ಅಧಿಕ ವಿಟಮಿನ್ ಡಿ ಹೊಂದಿದ್ದವರು ಕರುಳು ಕ್ಯಾನ್ಸರ್‌ಗೆ ತುತ್ತಾಗಿರಲಿಲ್ಲ- ಅಂತವರು ಶೇ.70ರಷ್ಟಿದ್ದರು. ಅತ್ಯಲ್ಪ ಪ್ರಮಾಣದಲ್ಲಿ ವಿಟಮಿನ್ ಡಿ ಸೇವಿಸುತ್ತಿದ್ದ ಶೇ.30ರಷ್ಟು ಮಂದಿಯಲ್ಲಿ ಕರುಳು ಕ್ಯಾನ್ಸರ್ ಸಾಧ್ಯತೆಗಳು ಕಂಡುಬಂದಿದ್ದವು. ನಿತ್ಯ ಅಧಿಕ ಪ್ರಮಾಣದಲ್ಲಿ ವಿಟಮಿನ್ ಡಿ ಸೇವಿಸಬೇಕು ಅಂತೇನೂ ಇಲ್ಲ. ಕೇವಲ 200 ಐಯುದಷ್ಟು ವಿಟಮಿನ್ ಡಿ ರಕ್ತ ಸೇರಿದರೂ ಸಾಕು. ಪ್ರತಿದಿನವೂ ವಿಟಮಿನ್ ಡಿ ರಕ್ತ ಸೇರುತ್ತಿದ್ದರೆ ಕ್ಯಾನ್ಸರ್ ವಿರುದ್ಧ, ವಿಶೇಷವಾಗಿ ಕರುಳು ಕ್ಯಾನ್ಸರ್ ವಿರುದ್ಧ ಸೆಣೆಸುವ ಶಕ್ತಿ ತಾನಾಗಿಯೇ ಲಭಿಸುತ್ತದೆ. 200ಐಯು ವಿಟಮಿನ್ ಡಿ ಪಡೆಯಲು ನೀವು ಎರಡು ಗ್ಯಾಸ್ ಹಾಲು ಕುಡಿದರೆ ಸಾಕು.
ಈಗ ಮಾರುಕಟ್ಟೆಗಳಲ್ಲಿ 'ಆಸಿಡೋಫಿಲಸ್ ಕಲ್ಚರ್' ಎನ್ನುವ ವಿಶೇಷ ಸಂಸ್ಕರಣೆಗೆ ಒಳಗಾದ ಹಾಲು, ಯೋಗರ್ಟ್‌ಗಳು ಸಿಗುತ್ತಿವೆ. ಇವು ಸಹ ಕರುಳು ಕ್ಯಾನ್ಸರ್ ತಡೆಯಲು ಒಳ್ಳೆಯದು. ಇವುಗಳಲ್ಲಿ ಲ್ಯಾಕ್ಟೋಬ್ಯಾಲಿಕಸ್ ಆಸಿಡೊಫಿಲಸ್ ಎನ್ನುವ ಬ್ಯಾಕ್ಟೀರಿಯಾಗಳು ಇರುತ್ತವೆ. ಇವು ಕಿಣ್ವಗಳು ಅಪಾಯಕಾರಿ ರಾಸಾಯನಿಕಗಳಾಗಿ ಪರಿವರ್ತನೆಯಾಗುವುದನ್ನು ತಡೆಯುತ್ತವೆ. ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂನಷ್ಟೇ ಇವೂ ಪ್ರಭಾವಶಾಲಿ. ನ್ಯೂ ಇಂಗ್ಲೆಂಡ್ ಮೆಡಿಕಲ್ ಸೆಂಟರ್‌ನ ಬಾರ್ರಿ ಆರ್. ಗೋಲ್ಡಮಲ್ ಮತ್ತು ಶೇರ್‌ನುಡ್ ಎಲ್. ಗೊವರ್ಚ್ ಅವರು ನಡೆಸಿದ ಸಂಶೋಧನೆಯಿಂದ ಆಸಿಡೋಫಿಲಸ್ ಕಲ್ಚರ್‌ನ ಮಹತ್ವ ಬೆಳಕಿಗೆ ಬಂದಿದೆ. ಕೆಲವು ಸ್ವಯಂಸೇವಕರನ್ನು ಆರಿಸಿಕೊಂಡು ಸುಮಾರು ಒಂದು ತಿಂಗಳ ಕಾಲ ನಿತ್ಯ ಎರಡು ಗ್ಲಾಸ್ ಸಾದಾ ಹಾಲು ಕುಡಿಯಲು ಸೂಚಿಸಿದರು. ಮುಂದಿನ ಒಂದು ತಿಂಗಳು ಆಸಿಡೋಫಿಲಸ್ ಕಲ್ಚರ್ ಹಾಲು ನೀಡಿದರು. ಆಸಿಡೋಫಿಲಸ್ ಹಾಲು ಕುಡಿದಾಗ ಅವರಲ್ಲಿ ಅಪಾಯಕಾರಿ ಕಿಣ್ವಗಳ ಚಟುವಟಿಕೆ ಶೇ40ರಿಂದ ಶೇ80ರವರೆಗೂ ಕಡಿಮೆಯಾಗಿತ್ತು.
ಹಾಲು, ಯೋಗರ್ಟ್‌ಗಳನ್ನು ಖರೀದಿಸುವಾಗ ಅವುಗಳ ಕವರನ್ನು ಸರಿಯಾಗಿ ಪರಿಶೀಲಿಸಿ, ಲ್ಯಾಕ್ಟೋಬ್ಯಾಲಿಕಸ್ ಆಸಿಡೋಫಿಲಸ್ ಇದೆಯೋ ಇಲ್ಲವೋ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
(ಮುಂದುವರಿಯುವುದು)
ಮೊ.9900113699 (ಎಸ್‌ಎಂಎಸ್‌ಗೆ ಮಾತ್ರ)