ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಒಂದು ನಾರು ಲಾಭ ಹಲವು

ಎಲ್ಲ ಹಣ್ಣು, ಎಲ್ಲ ತರಕಾರಿಗಳು ಎಲ್ಲರಿಗೂ ಇಷ್ಟ ಆಗುವುದಿಲ್ಲ. ಒಬ್ಬೊಬ್ಬರಿಗೆ ಒಂದೊಂದು ಫೇವರಿಟ್ ಅಂತ ಇರುತ್ತದೆ. ಹಾಗಂತ...

Rashmi Kasaragodu
Updated On : 21 Mar 2014, 3:19 am

ಎಲ್ಲ ಹಣ್ಣು, ಎಲ್ಲ ತರಕಾರಿಗಳು ಎಲ್ಲರಿಗೂ ಇಷ್ಟ ಆಗುವುದಿಲ್ಲ. ಒಬ್ಬೊಬ್ಬರಿಗೆ ಒಂದೊಂದು ಫೇವರಿಟ್ ಅಂತ ಇರುತ್ತದೆ. ಹಾಗಂತ ಅದೊಂದನ್ನೇ ಅತಿಯಾಗಿ ಸೇವಿಸುವುದು ಸರಿಯಲ್ಲ. 'ನಾನು ಬಾಳೆಹಣ್ಣು ಜಾಸ್ತಿ ತಿನ್ನುತ್ತೇನೆ, ನನಗೆ ಅಗತ್ಯ ಪೌಷ್ಟಿಕಾಂಶ ಅದೊಂದರಿಂದಲೇ ಸಿಗುತ್ತದೆ' ಎನ್ನುವ ಭಾವನೆಯೂ ಸರಿಯಲ್ಲ. ಎಲ್ಲ ರೀತಿಯ ಹಣ್ಣು, ತರಕಾರಿಗಳನ್ನೂ ಸೇವಿಸಬೇಕು. ಆಗಲೇ ಅದು 'ಸಮತೋಲಿತ' ಅಂತ ಅನ್ನಿಸಿಕೊಳ್ಳುವುದು, ಶರೀರಕ್ಕೆ ಅಗತ್ಯವಿರುವ ವಿವಿಧ ಪೋಷಕಾಂಶಗಳು ಲಭ್ಯವಾಗುವುದು. ಯಾವ ರೀತಿಯ ಅನಾರೋಗ್ಯ ಬಂದರೂ ಅದನ್ನು ಎದುರಿಸುವ ಸಾಮರ್ಥ್ಯವನ್ನು ಶರೀರ ಬೆಳೆಸಿಕೊಳ್ಳುವುದು.
ಕರುಳು ಕ್ಯಾನ್ಸರ್ ಅನ್ನು ತಡೆಯುವ ಶಕ್ತಿ ಹಣ್ಣುಗಳಲ್ಲಿ ಇದೆ. ವಿವಿಧ ರೀತಿಯ ಹಣ್ಣುಗಳಲ್ಲಿ, ತರಕಾರಿಗಳಲ್ಲಿ 'ಪೆಕ್ಟಿನ್‌' ಎನ್ನುವ ನಾರು ಇರುತ್ತದೆ. ಇದು ಸುಲಭವಾಗಿ ಕರಗುವ ನಾರು. ಇವು ತಮ್ಮ ಜೈವಿಕ ಕ್ರಿಯೆಗಳಿಂದ ಕ್ಯಾನ್ಸರ್‌ಕಾರಕ ಕೋಶಗಳ ಮೇಲೆ ಪರಿಣಾಮ ಬೀರಿ ಅವುಗಳನ್ನು ಸತ್ವಹೀನವಾಗಿಸುತ್ತವೆ. ಆಶ್ಚರ್ಯ ಏನು ಗೊತ್ತಾ? ಗೋಧಿಯಲ್ಲಿ ಇರುವುದು ಕರಗದ ನಾರು. ಇವೆರಡೂ ರೀತಿಯ ನಾರುಗಳು ಬೀರುವ ಪರಿಣಾಮ ಮಾತ್ರ ಒಂದೇ. ಪೆಕ್ಟಿನ್‌ನ ಇನ್ನೊಂದು ಮಹತ್ವದ ಸಂಗತಿ ಎಂದರೆ ಅದು ಶರೀರದಲ್ಲಿನ ಕೆಟ್ಟ ಕೊಲೆಸ್ಟರಾಲ್ ಅನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಸೇಬು, ಬಾಳೆಹಣ್ಣು, ಒಣದ್ರಾಕ್ಷಿ, ಕ್ಯಾರೆಟ್, ಒಣಗಿಸಿದ ಬೀನ್ಸ್ ಮತ್ತು ಬಿಳಿ ತಿರುಳು ಹೊಂದಿರುವ ಸಿಟ್ರಸ್ ಜಾತಿಯ ಹಣ್ಣುಗಳಲ್ಲಿ ಪೆಕ್ಟಿನ್ ಹೇರಳವಾಗಿರುತ್ತದೆ.
ಕರಿದ ತಿನಿಸುಗಳನ್ನು ಅತಿಯಾಗಿ ಸೇವಿಸುವವರು, ಕೊಬ್ಬಿನ ಪದಾರ್ಥಗಳನ್ನು ವಿಪರೀತ ಸೇವಿಸುವವರು ಕರುಳು ಕ್ಯಾನ್ಸರ್ ವಿಚಾರದಲ್ಲಿ ಮುಂಜಾಗ್ರತೆ ವಹಿಸುವುದು ಉತ್ತಮ. ಕೊಬ್ಬು ಪಾಲಿಪ್‌ಗಳಿಗೆ ಪ್ರಚೋದನಕಾರಿ. ಕ್ಯಾನ್ಸರ್‌ಕಾರಕ ಕೋಶಗಳು ಶರೀರದ ಒಂದು ಅಂಗದಿಂದ ಮತ್ತೊಂದು ಅಂಗಕ್ಕೆ ವೇಗವಾಗಿ ಹರಡಲು ವಾಹಕ ಎಂದರೆ ಕೊಬ್ಬು. ಕರುಳಿನ ಕ್ಯಾನ್ಸರ್‌ಗಂತೂ ಕೊಬ್ಬು ಅತಿದೊಡ್ಡ ಶತ್ರು. ಕರುಳಿನ ಗೋಡೆಗಳನ್ನು ಗೊತ್ತೇ ಆಗದ ರೀತಿಯಲ್ಲಿ ಕೊಬ್ಬು ಧ್ವಂಸ ಮಾಡುವುದಲ್ಲದೆ ಪಾಲಿಪ್‌ಗಳು ಬಹುಬೇಗ ಗಡ್ಡೆಯಾಗಿ ಬೆಳೆಯಲು ಸಹಕಾರ ನೀಡುತ್ತದೆ. ಕ್ಯಾನ್ಸರ್ ತರಬಲ್ಲ ಬೈಲ್ ಆ್ಯಸಿಡ್‌ಗಳ ಹೆಚ್ಚಿನ ಉತ್ಪಾದನೆಗೂ ಕೊಬ್ಬು ಉತ್ತೇಜನ ನೀಡುತ್ತದೆ. ಹೀಗಾಗಿ ಕೊಬ್ಬಿನ ಪದಾರ್ಥಗಳ ವಿಚಾರದಲ್ಲಿ ತುಸು ಹಿಡಿತ, ನಾಲಿಗೆ ನಿಯಂತ್ರಣ ಇಟ್ಟುಕೊಳ್ಳುವುದು ವಿಹಿತ. ಸಸ್ಯಜನ್ಯ ಕೊಬ್ಬಿಗಿಂತ ಪ್ರಾಣಿಜನ್ಯ ಕೊಬ್ಬು ಅಪಾಯಕಾರಿ. ಹೀಗಾಗಿ ವಂಶವಾಹಿನಿಯಲ್ಲಿ ಯಾರಿಗಾದರೂ ಯಾವುದೇ ಬಗೆಯ ಕ್ಯಾನ್ಸರ್ ಇದ್ದಲ್ಲಿ ಆ ವಂಶಸ್ಥರು ಪ್ರಾಣಿಜನ್ಯ ಆಹಾರ ಪದ್ಧತಿಯನ್ನು ಹಂತಹಂತವಾಗಿ ಕಡಿಮೆ ಮಾಡುತ್ತ ಸಸ್ಯಾಹಾರಿಗಳಾಗುವುದು ತಕ್ಕ ಮುನ್ನೆಚ್ಚರಿಕೆ ಆಗಬಲ್ಲದು.



(ಮುಂದುವರಿಯುವುದು)

ಮೊ.9900113699 (ಎಸ್‌ಎಂಎಸ್‌ಗೆ ಮಾತ್ರ)

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement