ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಪ್ರಸಾರ ಹೆಚ್ಚಿಸುವ ದೃಷ್ಟಿಯಿಂದಾದ ತಪ್ಪುಗಳು

ನಾನು ಸಂಯುಕ್ತ ಕರ್ನಾಟಕ ಪತ್ರಿಕೆಯ ಮುಖ್ಯ ವರದಿಗಾರನಾಗಿದ್ದೆ. ಈ ಕಾರಣದಿಂದ ಅನೇಕ ಜನ ಮಂತ್ರಿಗಳ, ಅಧಿಕಾರಿಗಳ...

Rashmi Kasaragodu
Updated On : 21 Mar 2014, 3:16 am

ನಾನು ಸಂಯುಕ್ತ ಕರ್ನಾಟಕ ಪತ್ರಿಕೆಯ ಮುಖ್ಯ ವರದಿಗಾರನಾಗಿದ್ದೆ. ಈ ಕಾರಣದಿಂದ ಅನೇಕ ಜನ ಮಂತ್ರಿಗಳ, ಅಧಿಕಾರಿಗಳ ಮತ್ತು ರಾಜಕಾರಣಿಗಳ ಪರಿಚಯವಿತ್ತು. ಆಗಾಗ್ಗೆ ಅವರ ಬಳಿಗೆ ಸುದ್ದಿಗಾಗಿ ಹೋಗುತ್ತಿದ್ದೆ. ಈ ಸಮಯದಲ್ಲಿ ಸ್ವಾಭಾವಿಕವಾಗಿ ಸಂಯುಕ್ತ ಕರ್ನಾಟಕದ ಪರಿಸ್ಥಿತಿಯನ್ನು, ಒಳಜಗಳ, ಕಿತ್ತಾಟಗಳನ್ನು ಹೇಳುತ್ತಿದ್ದೆ. ಉತ್ತರ ಕರ್ನಾಟಕದ ಮಂತ್ರಿಗಳು ಮತ್ತು ಶಾಸಕರು ವಿಶೇಷವಾಗಿ ಸಂಯುಕ್ತ ಕರ್ನಾಟಕದ ಯಾದವೀ ಕಲಹವನ್ನು ಬಹಳ ಆಸಕ್ತಿಯಿಂದ ಕೇಳುತ್ತಿದ್ದರು ಹಾಗೂ ಈ ಬಗ್ಗೆ ಸಹಾಯ ಮಾಡುವುದಾಗಿಯೂ ಹೇಳುತ್ತಿದ್ದರು. ನಾನೂ ಸಹ ಅವರನ್ನು ಕಂಡು ಅವ್ಯವಸ್ಥೆಯನ್ನು ಸರಿಪಡಿಸುವಂತೆ ಕೇಳುತ್ತಿದ್ದೆ. ಇದರಿಂದ ದಿವಾಕರರಿಗೆ ಹಾಗೂ ಅನಂತನಿಗೆ ನನ್ನ ಮೇಲೆ ಅಸಮಾಧಾನವಾಯಿತು. ನನಗೆ                                                    ಹಲವು ಬಗೆಯಲ್ಲಿ ತೊಂದರೆ ಕೊಡಲಾರಂಭಿಸಿದರು. ಸಂಬಳವನ್ನೇ ಕೊಡುತ್ತಿರಲಿಲ್ಲ. ನನ್ನ ಸಹೋದ್ಯೋಗಿಗಳು ನನ್ನೊಡನೆ ಮಾತಾಡದಂತೆ ಮಾಡಿದರು. ಒಮ್ಮೆ ದೆಹಲಿಗೆ ವರ್ಗ ಮಾಡಿದರು. ಆದರೆ ಖರ್ಚಿಗೆ ಹಣ ಕೊಡಲಿಲ್ಲ. ಮತ್ತೊಮ್ಮೆ ನನ್ನ ಮೇಲೆ ನಿರಾಧಾರ ಆಪಾದನೆಗಳನ್ನು ಮಾಡಿ ಅಮಾನತಿನಲ್ಲಿಟ್ಟು, ವಿಚಾರಣೆಗೆ ಗುರಿಪಡಿಸಿದರು. ಈ ವಿಚಾರಣೆಯ ಕಾಲದಲ್ಲಿ ನಾನು ಅನುಭವಿಸಿದ ಯಾತನೆ ಅವರ್ಣನೀಯ, ಸಹೋದ್ಯೋಗಿಗಳನ್ನು ನನ್ನ ಮೇಲೆ ಎತ್ತಿಕಟ್ಟಿದರು. ಸುಳ್ಳು ಸಾಕ್ಷ್ಯ ಹೇಳಿಸಿದರು. ಖೋಟಾ ದಾಖಲೆಗಳನ್ನು ಸೃಷ್ಟಿಸಿದರು. ಆದರೂ ನಾನು ಎದೆ ಗುಂದಲಿಲ್ಲ. ಧೈರ್ಯದಿಂದ ವಿಚಾರಣೆಯನ್ನು ಎದುರಿಸಿದೆ. ನಾನು ಆಫೀಸಿಗೆ ಹೋಗುತ್ತಿಲ್ಲ ಅಮಾನತಿನಲ್ಲಿದ್ದೇನೆ ಎಂಬ ಸಂಗತಿಯನ್ನು ಮನೆಯಲ್ಲಿ ಸಹ ಯಾರಿಗೂ ಹೇಳಿರಲಿಲ್ಲ. ಪ್ರತಿ ದಿನ ಹತ್ತು ಗಂಟೆಗೆ ಮಾಮೂಲಿನಂತೆ ಹೊರಗೆ ಹೋಗಿ, ಸಾಯಂಕಾಲ ಬರುತ್ತಿದ್ದೆ. ಒಮ್ಮೊಮ್ಮೆ ರಾತ್ರಿಯೂ ಕೆಲಸವಿದೆಯೆಂದು ಸುಳ್ಳು ಹೇಳಿ ಹೊರಗೆ ಹೋಗಿ ರಾತ್ರಿ ಹತ್ತು - ಹನ್ನೊಂದು ಗಂಟೆಗೆ ವಾಪಾಸು ಬರುತ್ತಿದ್ದೆ. ಆದರೆ, ಹಣದ ಪ್ರಶ್ನೆ ಬಂದಾಗ, ನನ್ನ ಚಿಂತೆ ನೂರ್ಮಡಿಯಾಗುತ್ತಿತ್ತು. ಎಷ್ಟೋ ರಾತ್ರಿಗಳನ್ನು ಕಣ್ಣು ಮುಚ್ಚದೆ ಕಳೆದಿದ್ದೇನೆ. ಇಡೀ ರಾತ್ರಿ ಕಣ್ಣೀರು ಸುರಿಸಿದ್ದೇನೆ. ಮಕ್ಕಳ ಸ್ಥಿತಿಯನ್ನು ನೋಡಿ ಅತ್ತಿದ್ದೇನೆ. ಅವರ ಮುಂದೆ ನಿಂತು ಅವರೊಡನೆ ಮಾತನಾಡುವಷ್ಟು ಧೈರ್ಯವಿಲ್ಲದೆ, ಏನೋ ನೆಪಹೇಳಿ ಅವರಿಂದ ತಪ್ಪಿಸಿಕೊಳ್ಳುತ್ತಿದ್ದೆ. ನನ್ನ ಈ ನಡವಳಿಕೆ ನನ್ನ ಹೆಂಡತಿಗೂ ಸಂದೇಹ ತಂದಿತ್ತು. ಆದರೆ ಅವಳು ತುಂಬಾ ಜಾಣೆ, ಒಂದು ಮಾತನ್ನೂ ಆಡುತ್ತಿರಲಿಲ್ಲ. ನನ್ನ ಮನಸ್ಸನ್ನು, ನೋವನ್ನು ಅರ್ಥ ಮಾಡಿಕೊಂಡಿದ್ದಳು. ಜಾಣತನದಿಂದ ಸಂಸಾರ ಸಾಗಿಸಿ, ನನ್ನ ಭಾರವನ್ನು ಬಹು ಮಟ್ಟಿಗೆ ಕಡಿಮೆ ಮಾಡಿದ್ದಳು ಎಂದು ಹೇಳಿದರೆ ಅತಿಶಯೋಕ್ತಿಯಲ್ಲ.
ನನ್ನ ಮೇಲಿನ ಆಪಾದನೆಗಳ ಬಗ್ಗೆ ವಿಚಾರಣೆಯನ್ನು ನಂಜುಂಡಯ್ಯ ಎಂಬುವವರು ನಡೆಸುತ್ತಿದ್ದರು. ನನ್ನ ಸಹೋದ್ಯೋಗಿ ಸುರೇಂದ್ರ ದಾನಿ ಆಪಾದನೆಗಳನ್ನು ರುಜುವಾತು ಮಾಡಲು ಪ್ರಯತ್ನಿಸುತ್ತಿದ್ದರು. ಸುಳ್ಳು ಸಾಕ್ಷಿಗಳನ್ನು ಕರೆಸಿದ್ದರು. ಈ ಕಾರಣಗಳಿಂದ ನಾನು ಒಂದೆರಡು ಪ್ರಸಂಗಗಳಲ್ಲಿ ಕಾನೂನಿನ ದೃಷ್ಟಿಯಲ್ಲಿ ತಪ್ಪು ಎಂದೆನಿಸಿದರೂ ಅವು ಸಂಸ್ಥೆಯ ಹಿತದೃಷ್ಟಿಯಿಂದ, ಪತ್ರಿಕೆಯ ಪ್ರಸಾರ ಹೆಚ್ಚಿಸುವ ಉದ್ದೇಶದಿಂದ ಮಾಡಿದ ತಪ್ಪುಗಳೆಂದು ವಾದಿಸಿದೆ. ಕೊನೆಯಲ್ಲಿ ನಾನು ನಿರಪರಾಧಿಯೆಂದು ವಿಚಾರಣಾಧಿಕಾರಿ ಅಭಿಪ್ರಾಯಪಟ್ಟು ಆಪಾದನೆಗಳನ್ನು ತಳ್ಳಿಹಾಕಿದರು. ಈ ಮಧ್ಯೆ ನಾನು ಸಹ ಒಂದು ಉಪಾಯ ಮಾಡಿದ್ದೆ. ಪತ್ರಿಕೆಯ ಮಾರಾಟಕ್ಕೆ ಬೆಂಬಲ ಕೊಡುವುದಾಗಿ ಅನಂತನಿಗೆ ಸುಳ್ಳು ಭರವಸೆ ಕೊಟ್ಟಿದ್ದೆ. ಇದು ತುಂಬಾ ಪರಿಣಾಮವನ್ನುಂಟು ಮಾಡಿತು. ಅನಂತನಿಗೆ ಸಂತೋಷವಾಗಿ ನನ್ನನ್ನು ಪುನಃ ಕೆಲಸಕ್ಕೆ ನೇಮಿಸಿಕೊಂಡನಲ್ಲದೆ, ನನ್ನ ಹಿಂದಿನ ಸಂಬಳವನ್ನು ಪೂರ್ತಿಯಾಗಿ ಕೊಟ್ಟು ಬಡ್ತಿಯನ್ನೂ ಕೊಟ್ಟ. ಇದರಿಂದ ನನ್ನ ಆರ್ಥಿಕ ಪರಿಸ್ಥಿತಿ ಬಹುಮಟ್ಟಿಗೆ ಸುಧಾರಿಸಿತು.
ಆದರೆ, ನನ್ನ ಮನಸ್ಸಿನ ಅಳಲು ಮಾತ್ರ ಹೋಗಲಿಲ್ಲ. ಪತ್ರಿಕೆಯ ಮಾರಾಟವನ್ನು ನಿಲ್ಲಿಸಲೇಬೇಕೆಂದು ಸಂಕಲ್ಪಮಾಡಿದ್ದೆ. ದಿವಾಕರರು ಮಾರಾಟದ ಬಗ್ಗೆ ಈಗಾಗಲೇ ನಿರ್ಧರಿಸಿದ್ದರು. ಮತ್ತು ಸಂಡೂರಿನ ಶಾಸಕ ಹಾಗೂ ರಾಜ್ಯದ ಆಗಿನ ಹಣಕಾಸಿನ ಮಂತ್ರಿ ಎಂ.ವೈ. ಘೋರ್ಪಡೆಯವರನ್ನು ಕಂಡು ಮಾತನಾಡಿ ಟ್ರಸ್ಟಿನ ಆಸ್ತಿ, ಯಂತ್ರೋಪಕರಣ ಮತ್ತು ಪತ್ರಿಕೆಗಳ ಹಸ್ತಾಂತರದ ಬಗ್ಗೆ ಮಾತುಕತೆಯನ್ನು ಸಹ ನಡೆಸಿದ್ದರು. ವ್ಯವಹಾರ ಅಂತಿಮ ಘಟ್ಟದಲ್ಲಿತ್ತು. ಸಂಡೂರು ಕಂಪನಿಯ ಆಡಿಟರ್‌ಗಳು ಸಂಯುಕ್ತ ಕರ್ನಾಟಕ ಪತ್ರಿಕೆಯ ಕಚೇರಿಗೆ ಬಂದು ಟ್ರಸ್ಟ್‌ನ ಮತ್ತು ಪತ್ರಿಕೆಯ ಸ್ಥಿರಾಸ್ತಿಗಳನ್ನು ಮತ್ತು ಅವುಗಳ ಮೌಲ್ಯವನ್ನು ಲೆಕ್ಕ ಹಾಕುತ್ತಿದ್ದರು. ಕೊಳ್ಳುವವರೇ ಚರ ಸ್ಥಿರ ಆಸ್ತಿಗಳ ಮತ್ತು ಯಂತ್ರೋಪಕರಣಗಳ ಮೌಲ್ಯಮಾಪನ ಮಾಡುತ್ತಿದ್ದರಿಂದ ಟ್ರಸ್ಟಿಗೆ 'ಭಾರಿ ಮೋಸ'ವಾಯಿತೆಂದು ನಿಸ್ಸಂದೇಹವಾಗಿ ಹೇಳಬಹುದು. ಟ್ರಸ್ಟ್ ಪರವಾಗಿ ಆಡಿಟರುಗಳೇ ಇರಲಿಲ್ಲ. ಸಂಯುಕ್ತ ಕರ್ನಾಟಕದಲ್ಲಿರುವ ಯಂತ್ರೋಪಕರಣಗಳ ಬೆಲೆ ಎಷ್ಟೆಂಬುದನ್ನು ಸಂಡೂರಿನ ಆಡಿಟರ್‌ಗಳು ನಿರ್ಧರಿಸಿದ್ದರು. ಈ ಬಗೆಯ ಆಡಿಟ್ ವ್ಯವಹಾರ ಸುಮಾರು ಮೂರು ತಿಂಗಳಿಂದ ನಡೆಯುತ್ತಿದ್ದರೂ ದಿವಾಕರರಾಗಲಿ, ಸಂಸ್ಥೆಯ ಹಿರಿಯ ನೌಕರರರಾಗಲಿ, ಹಿತೈಷಿಗಳಾಗಲಿ ಒಂದು ಚಕಾರ ಶಬ್ದ ಆಡಲಿಲ್ಲ. ಅಂತೂ ಆಸ್ತಿಗಳ ಮೌಲ್ಯ ಮಾಪನ ಮುಗಿಯಿತು. ಚರ ಆಸ್ತಿಗಳ ಬೆಲೆ 67 ಲಕ್ಷ ರೂ. ಮತ್ತು ಸಾಲದ ಹೊರೆ 55 ಲಕ್ಷ ರೂ. ಎಂದು ಆಡಿಟರರು ತಿಳಿಸಿದ್ದರು. ಇದನ್ನು ದಿವಾಕರರು ಒಪ್ಪಿಕೊಂಡರು. ಹಿರಿಯ ದಿವಾಕರರು ಯಾವಾಗಲೂ ಅಧ್ಯಾತ್ಮ ಲೋಕದಲ್ಲಿರುತ್ತಿದ್ದರು. ಇಲ್ಲವೇ ರಾಜಕೀಯದಲ್ಲಿ ಒಂದು ಸ್ಥಾನದಿಂದ ಮತ್ತೊಂದು ಸ್ಥಾನಕ್ಕೆ ಹಾರುತ್ತಿದ್ದರು. ಟ್ರಸ್ಟಿನ ಭವಿಷ್ಯದ ಬಗ್ಗೆ, ಬೆಳವಣಿಗೆ ಬಗ್ಗೆ ಚಿಂತಿಸಲು ಅವರಿಗೆ ಸಮಯವೇ ಇರುತ್ತಿರಲಿಲ್ಲ. ಇಂದು ಮುಂಬೈ, ನಾಳೆ ದೆಹಲಿ, ನಾಳಿದ್ದು ವರ್ಧಾ ಹೀಗೆ ಊರಿಂದೂರಿಗೆ ಅಲೆಯುತ್ತಿದ್ದರು.
ಈ ಸಮಯದಲ್ಲಿ ದಿವಾಕರರ ಬಗ್ಗೆ ಒಂದು ಮಾತನ್ನು ಹೇಳಲೇ ಬೇಕು. ನಾನು ಅವರನ್ನು ತೀರ ಹತ್ತಿರದಿಂದ ನೋಡಿದ್ದೆ. ಪ್ರತಿದಿನ ಅಂದರೆ ಹುಬ್ಬಳ್ಳಿ ಅಥವಾ ಬೆಂಗಳೂರಿನಲ್ಲಿದ್ದಾಗ ಒಂದೆರಡು ಗಂಟೆಗಳ ಕಾಲವಾದರೂ ಅವರೊಡನೆ ಮಾತನಾಡುತ್ತಿದ್ದೆ. ಪತ್ರಿಕೆ ಬಗ್ಗೆ, ಆಫೀಸಿನ ಬಗ್ಗೆ ಚರ್ಚಿಸುತ್ತಿದ್ದೆ. ಆ ಸಮಯದಲ್ಲಿ ಅವರ ಒಂದು 'ರಹಸ್ಯ' ನನಗೆ ಸ್ಪಷ್ಟವಾಗಿ ಗೋಚರವಾಯಿತು. ಅದೆಂದರೆ ಅಧಿಕಾರದ ಆಸೆ ಅವರಲ್ಲಿ ತುಂಬಿ ತುಳುಕುತ್ತಿತ್ತು. ಕಾಂಗ್ರೆಸ್ಸಿಗಾಗಿ ಜೀವಮಾನ ಪರ್ಯಂತ ದುಡಿದ ತಮಗೆ ಹೊಸ ಕರ್ನಾಟಕ ರಾಜ್ಯದಲ್ಲಿಯೂ ಯೋಗ್ಯ ಸ್ಥಾನಮಾನಗಳು ದೊರೆಯಬೇಕೆಂದು ಅವರು ಅಪೇಕ್ಷಿಸುತ್ತಿದ್ದರು. ಆದರೆ ಹಳೆಯ ಮೈಸೂರು ಕಾಂಗ್ರೆಸ್ ಮುಖಂಡರು ಅವರನ್ನು ಸಾಕಷ್ಟು ದೂರ ಇಟ್ಟಿದ್ದರು. ಯಾವ ಪದವಿಯನ್ನೂ ಅವರಿಗೆ ಕೊಡಲಿಲ್ಲ. ಇದರಿಂದ ನಿರಾಶರಾದ ದಿವಾಕರರು ಹೆಚ್ಚಾಗಿ ರಾಜ್ಯದ ಹೊರಗೆ ಮುಂಬೈ, ದೆಹಲಿಗಳಲ್ಲಿ ಇರುತ್ತಿದ್ದರು. ಬೆಂಗಳೂರು ಮುದ್ರಣದ ಸಂಪೂರ್ಣ ಜವಾಬ್ದಾರಿಯನ್ನು ತಮ್ಮ ಮಗ ಅನಂತನಿಗೆ ವಹಿಸಿಕೊಟ್ಟಿದ್ದರು.
ತಾ.28-02-1986 ರಂದು ಲೋಕ ಶಿಕ್ಷಣ ಟ್ರಸ್ಟ್ ಸಾರ್ವಜನಿಕ ಟ್ರಸ್ಟ್ ಎಂದು ರಾಜ್ಯ ಹೈಕೋರ್ಟಿನವರು ಪುನಃ ಘೋಷಿಸಿ ಅಂದಿನ ಧರ್ಮದರ್ಶಿಗಳನ್ನು ಕಿತ್ತುಹಾಕಿ ಧರ್ಮದರ್ಶಿಗಳ ಹೊಸ ಮಂಡಲಿಯನ್ನು ರಚಿಸುವ ಮೊದಲು ಕೆಲವು ನಾಟಕೀಯ ಘಟನೆಗಳು ನಡೆದಿದ್ದವು. ಈ ಪ್ರಕರಣ ನ್ಯಾಯಮೂರ್ತಿ ಆರ್.ಜಿ. ದೇಸಾಯಿ ಮತ್ತು ನ್ಯಾ. ರಾಮಕೃಷ್ಣ ಅವರ ಮುಂದೆ ನಡೆಯುತ್ತಿತ್ತು. ನ್ಯಾ. ದೇಸಾಯಿಯವರಿಗೆ 'ಸಂಯುಕ್ತ ಕರ್ನಾಟಕ ಹಾಗೂ ಲೋಕ ಶಿಕ್ಷಣ ಟ್ರಸ್ಟಿ'ನ ಇತಿಹಾಸ ಸಂಪೂರ್ಣವಾಗಿ ಗೊತ್ತಿತ್ತು. ಅವರು ವಿಜಾಪುರದವರು. ಅವರಿಗೆ ಮೊಹರೆಯವರ ಪರಿಚಯವೂ ಇತ್ತು. ಆದ್ದರಿಂದ ಅವರು ಒಂದು ದಿನ ಕೋರ್ಟಿನಲ್ಲಿ ದಿವಾಕರರ ವಕೀಲರಾಗಿದ್ದ ಶಾಮಣ್ಣನವರನ್ನು ಕರೆದು ದಿವಾಕರರು ಈ ಪ್ರಕರಣ ಬೆಳೆಸುವುದು ಬೇಡ. ಇದು ಸಾರ್ವಜನಿಕ ಸಂಸ್ಥೆಯೆಂದು ಕೋರ್ಟಿಗೆ ಹೇಳಿಕೆ ಕೊಟ್ಟರೆ ಅವರನ್ನೇ ಮತ್ತೆ ಟ್ರಸ್ಟಿನ ಅಧ್ಯಕ್ಷರನ್ನಾಗಿ ಮಾಡುತ್ತೇವೆ ಎಂದು ಹೇಳಿದರು. ಇದರಿಂದ ನನಗಂತೂ ತುಂಬಾ ಗಾಬರಿಯಾಯಿತು. ಒಂದು ವೇಳೆ ದಿವಾಕರರು ಆ ರೀತಿ ಹೇಳಿಕೆ ಕೊಟ್ಟರೆ ಮತ್ತೆ ಅವರನ್ನೇ ಟ್ರಸ್ಟಿನ ಅಧ್ಯಕ್ಷರನ್ನಾಗಿ ಮಾಡಿದರೆ ಇಷ್ಟು ದಿನದ ನಮ್ಮ ಹೋರಾಟ ವ್ಯರ್ಥವಾಗುವುದೆಂದು ನನ್ನ ಚಿಂತೆ. ಮರುದಿನ ಇನ್ನೊಬ್ಬ ವಕೀಲ ಹೆಗಡೆಯವರು ದಿವಾಕರರ ಹೇಳಿಕೆಯನ್ನು ಕೋರ್ಟಿನಲ್ಲಿ ದೂರದಿಂದ ತೋರಿಸಿದಾಗ, ನಾನು ಕುಸಿದು ಬೀಳುವುದರಲ್ಲಿದ್ದೆ ಅಷ್ಟೊಂದು ಹೆದರಿಕೆಯಾಗಿತ್ತು. ಆದರೆ ಹೆಗಡೆಯವರು ದೂರ ಕರೆದುಕೊಂಡು ಹೋಗಿ ದಿವಾಕರರ ಹೇಳಿಕೆಯನ್ನು ಓದಿ ಹೇಳಿದರು. ಲೋಕ ಶಿಕ್ಷಣ ಟ್ರಸ್ಟಿನ ಎಲ್ಲಾ ಆಸ್ತಿಗಳಿಗೆ ಮತ್ತೆ ಪತ್ರಿಕೆಗಳಿಗೆ ತಾವೇ ಮಾಲೀಕರೆಂದೂ ಅವು ತಮ್ಮ ಖಾಸಗಿ ಆಸ್ತಿ ಎಂದೂ ಸಾರ್ವಜನಿಕರಿಗೆ ಇವು ಸಂಬಂಧವಿಲ್ಲವೆಂದೂ ತಾವು ಮತ್ತು ತಮ್ಮ ತರುವಾಯ ತಮ್ಮ ವಾರಸುದಾರರು ಮಾತ್ರ ಈ ಆಸ್ತಿಗಳನ್ನು ಅನುಭವಿಸಲು ಅರ್ಹರೆಂದೂ ಈ ಹೇಳಿಕೆಯಲ್ಲಿ ದಿವಾಕರರು ಸ್ಪಷ್ಟವಾಗಿ ಹೇಳಿದ್ದರು. ಅದನ್ನು ಓದಿದ ನಂತರ ನನಗೆ ಮತ್ತೆ ಜೀವ ಬಂದಂತಾಯಿತು. ನ್ಯಾಯಾಧೀಶರು ಈ ಹೇಳಿಕೆ ನೋಡಿ, ತೀವ್ರ ಅಸಮಾಧಾನಗೊಂಡರು. ಈ ಕಾರಣಕ್ಕಾಗಿ ಅಂದಿನ ಎಲ್ಲಾ ಧರ್ಮದರ್ಶಿಗಳನ್ನು ವಜಾ ಮಾಡಲು ತೀರ್ಮಾನಿಸಿದರೆಂದು ನನ್ನ ಭಾವನೆಯಾಯಿತು. 28-02-1986ರಂದು ಅದೇ ತೀರ್ಪನ್ನೂ ಕೊಟ್ಟರು.
ಮತ್ತೊಂದು ನಾಟಕೀಯ ಪ್ರಸಂಗವೆಂದರೆ, ಸುಮಾರು ಹನ್ನೆರಡು ವರ್ಷಗಳ ತನಕ ಸಂಯುಕ್ತ ಕರ್ನಾಟಕ ಪತ್ರಿಕೆಯನ್ನು ನಡೆಸುತ್ತಿದ್ದ ಹಿಂದಿನ ಆಡಳಿತ ವರ್ಗಗಳು - ಅಂದರೆ ಕರ್ನಾಟಕ ಪತ್ರಿಕಾ ಪ್ರಿಂಟರ್ಸ್ ಲಿ. (ಘೋರ್ಪಡೆ ಕಂಪನಿ), ಜಯ ಕರ್ನಾಟಕ ನ್ಯೂಸ್ ಪ್ರಿಂಟರ್ಸ್ (ಬಸವರಾಜ ಕಂಪನಿ) ಕರ್ನಾಟಕ ಸರ್ಕಾರ ಹಾಗೂ ನಾಲ್ಕು ಜನ ಕೋರ್ಟ್ ರಿಸೀವರ್‌ಗಳು ಲೋಕ ಶಿಕ್ಷಣ ಟ್ರಸ್ಟ್‌ನ ಎಲ್ಲಾ ಸಾಲಗಳನ್ನು ತೀರಿಸುವುದಾಗಿ ಒಪ್ಪಂದ ಮಾಡಿಕೊಂಡಿದ್ದವು. ಪತ್ರಿಕೆಯನ್ನು ಮಾರಿದಾಗ ಅಂದರೆ 1974 ನೇ ನವೆಂಬರ್ ತಿಂಗಳಲ್ಲಿ ಟ್ರಸ್ಟಿನ ಸಾಲ ಸುಮಾರು 67 ಕೋಟಿ ರೂಪಾಯಿ ಇತ್ತೆಂದು ಕರ್ನಾಟಕ ಪತ್ರಿಕಾ ಪ್ರೈ (ಘೋರ್ಪಡೆ ಕಂಪನಿ)ಯ ಆಡಿಟರುಗಳೇ ಅಂದಾಜು ಮಾಡಿದ್ದರು. ಆದರೆ, ಆ ಕಂಪನಿಯವರು ಈ ಸಾಲದಲ್ಲಿ ಒಂದು ಪೈಸೆಯನ್ನೂ ತೀರಿಸಲಿಲ್ಲ. ಕಾರ್ಮಿಕರಿಗೆ ಕೊಡಬೇಕಾಗಿದ್ದ ಪ್ರಾವಿಡೆಂಟ್ ಫಂಡ್ ಮತ್ತು ಗ್ರಾಚ್ಯುಯಿಟಿ ಮೊದಲಾದ ಸೌಲಭ್ಯಗಳ ಹಣವನ್ನೂ ಕೊಡಲಿಲ್ಲ. ಬ್ಯಾಂಕುಗಳಲ್ಲಿದ್ದ ಟ್ರಸ್ಟ್ ಸಾಲಗಳನ್ನು ತೀರಿಸಲಿಲ್ಲ. ಇದಕ್ಕೆ ಪ್ರತಿಯಾಗಿ ತಾವೂ ಕೆನರಾ ಬ್ಯಾಂಕಿನಲ್ಲಿ ಸುಮಾರು 30 ಲಕ್ಷ ರೂ. ನಷ್ಟು ಸಾಲ ಮಾಡಿ ಅದನ್ನೂ ಬಡ್ಡಿ ಸಮೇತ ಟ್ರಸ್ಟ್‌ನವರೇ ಕೊಡಬೇಕೆಂದು ಹೇಳಿ, 1979ರಲ್ಲಿ ತಮ್ಮ ಎಲ್ಲಾ ಸಾಲಗಳ ಜವಾಬ್ದಾರಿಯನ್ನು ಜಯ ಕರ್ನಾಟಕ ನ್ಯೂಸ್ ಪ್ರಿಂಟರ್ಸ್ ಪ್ರೈ. ಲಿ. ಎಂಬ ಕಂಪನಿಯ ತಲೆಯ ಮೇಲೆ ಹಾಕಿ ಕೈ ತೊಳೆದುಕೊಂಡರು. ಆದರೆ, ಜಯ ಕರ್ನಾಟಕ ಕಂಪನಿಯವರೂ ಸಾಲವನ್ನು ತೀರಿಸಲಿಲ್ಲ. ತಮ್ಮ ಸಲುವಾಗಿಯೂ 30-35 ಲಕ್ಷರೂಗಳನ್ನು ಕೆನರಾ ಬ್ಯಾಂಕಿನಲ್ಲಿ ಸಾಲ ಮಾಡಿ ಅದನ್ನು ಸಹ ಟ್ರಸ್ಟ್‌ನ ಹೆಸರಿಗೆ ವರ್ಗಾಯಿಸಿದ್ದರು. ಕೊನೆಗೆ ಬ್ಯಾಂಕಿನವರು ಈ ಸಾಲ ವಸೂಲಿಗೆ ಹುಬ್ಬಳ್ಳಿ ಸಿವಿಲ್ ಜಡ್ಜ್ ಕೋರ್ಟಿನಲ್ಲಿ ದಾವೆ ಹಾಕಿ ಡಿಕ್ರಿಯನ್ನು ಸಹ ಪಡೆದುಕೊಂಡಿದ್ದರು. ಈ ಸಾಲದ ಹಣ ಸುಮಾರು ಒಂದು ಕೋಟಿ ರೂ. ನಷ್ಟು ಇತ್ತು. ಇದರ ವಸೂಲಿಗಾಗಿ ಬ್ಯಾಂಕಿನವರು ಇತ್ತೀಚೆಗೆ ಸಾಲ ವಸೂಲಾತಿ ನ್ಯಾಯಾಲಯದಲ್ಲಿ ಅರ್ಜಿ ಕೊಟ್ಟು ಕರ್ನಾಟಕ ಬ್ಯಾಂಕಿನಲ್ಲಿ ಲೋಕ ಶಿಕ್ಷಣ ಟ್ರಸ್ಟ್ ಮತ್ತು ಸಂಯುಕ್ತ ಕರ್ನಾಟಕ ಪತ್ರಿಕೆಗಳ ಹೆಸರಿನಲ್ಲಿದ್ದ ಹಣವನ್ನು ಉಪಯೋಗಿಸದಂತೆ ತಡೆಯಾಜ್ಞೆ ಪಡೆದಿದ್ದರು. ಇದರ ಪರಿಣಾಮವಾಗಿ ಸಂಯುಕ್ತ ಕರ್ನಾಟಕ ಮತ್ತು ಲೋಕ ಶಿಕ್ಷಣ ಟ್ರಸ್ಟ್ ಹೆಸರಿನಲ್ಲಿ ಕರ್ನಾಟಕ ಬ್ಯಾಂಕಿನಲ್ಲಿ ವ್ಯವಹಾರ ಮಾಡುವಂತಿರಲಿಲ್ಲ. ಈ ಬಗ್ಗೆ ಏನಾಯಿತೆಂಬುದನ್ನು ಮತ್ತು ಕರ್ನಾಟಕ ಬ್ಯಾಂಕಿನವರು ಯಾವ ರೀತಿಯ ಸಹಾಯ ಮಾಡಿದರೆಂಬುದನ್ನು ಇಲ್ಲಿ ಹೇಳಬೇಕಾಗಿಲ್ಲ.
(ಮುಂದುವರಿಯುವುದು)

-ಕೆ.ಶಾಮರಾವ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement