ಸುಕೃತಾ ವಾಗ್ಲೆ, ಚಿತ್ರನಟಿ (ಜಟ್ಟ ಖ್ಯಾತಿ)
ಒಂದಷ್ಟು ರಾಜಕೀಯ ಇತಿಹಾಸ ಓದಿ ಬಲ್ಲವಳಾದ್ದರಿಂದ ಹೇಳ್ತಿದ್ದೇನೆ. ಕಳೆದ ಹಲವು ಚುನಾವಣೆಗಳಿಗಿಂತ ಈ ಬಾರಿಯ ..
ಒಂದಷ್ಟು ರಾಜಕೀಯ ಇತಿಹಾಸ ಓದಿ ಬಲ್ಲವಳಾದ್ದರಿಂದ ಹೇಳ್ತಿದ್ದೇನೆ. ಕಳೆದ ಹಲವು ಚುನಾವಣೆಗಳಿಗಿಂತ ಈ ಬಾರಿಯ ಚುನಾವಣೆ ಹೆಚ್ಚು ಮಹತ್ವಪೂರ್ಣ ಅನಿಸ್ತಾ ಇದೆ. ಅದ್ಯಾವುದೋ ಬದಲಾವಣೆಯ ಗಾಳಿ ಸ್ಪಷ್ಟವಾಗಿ ಕಾಣುತ್ತಿದೆ. ಈ ಹೇಳಿಕೆಯಿಂದ ನಾನು ಬದಲಾವಣೆಯ ಪರ ಅಥವಾ ವಿರೋಧ ಎಂದು ಭಾವಿಸೋದು ಬೇಕಿಲ್ಲ. ಆದರೆ ಆ ಅಲೆಯಂತೂ ಕಾಣುತ್ತಿದೆ. ಸಾಮಾಜಿಕ ಜಾಲದಲ್ಲೂ ಯುವಕರು ರಾಜಕೀಯ ಚರ್ಚೆಗಳಲ್ಲಿ ಆಸಕ್ತಿ ತೋರುತ್ತಿದ್ದಾರೆ. ಇದು ನಿಜಕ್ಕೂ ಪೂರಕ ಬೆಳವಣಿಗೆ.
ಈಗ ದೊಡ್ಡ ಜವಾಬ್ದಾರಿ ಇರೋದು ಮತದಾರರ ಕೈಯಲ್ಲಿ. ನಾವೀಗ ನಮ್ಮ ಹೊಣೆ ಅರಿತು ಮತ ಚಲಾಯಿಸಿ ಒಂದು ಪಕ್ಷವನ್ನು ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ತರಬೇಕಿದೆ. ಮತ ಚಲಾವಣೆ ಎಂಬುದು ನಮ್ಮ ಇರುವಿಕೆಯ ಧೃಡೀಕರಣವಿದ್ದಂತೆ. ಆ ದಿನ ರಜೆ ಎಂದು ಮೈಮರೆತಲ್ಲಿ, ಮುಂದಿನ ದಿನಗಳನ್ನು ಸಂಬಳ ಇಲ್ಲದ ರಜೆಯಂತೆ ಬದುಕಬೇಕಾಗುತ್ತೆ. ಪ್ರತಿಯೊಬ್ಬರೂ ಮತ ಮಾರಿಕೊಳ್ಳೊ ಬದಲು ತಮ್ಮ ಅಮೂಲ್ಯ ಮತದಾನದ ಹಕ್ಕನ್ನು ಚಲಾಯಿಸಿ. ಅದರಲ್ಲೊಂದು ಖುಷಿ ಇದೆ. ಅನುಭವಿಸಿ ನೋಡಿ. ಬೆಳ್‌ಬೆಳಗ್ಗೆಯೇ ಮತ ಹಾಕಲು ಹೋಗಿಬಿಡಿ. ಸಂಜೆಯ ಹೊತ್ತಿಗೆ ನಿಮ್ಮ ಓಟನ್ನು ಇನ್ಯಾರಾದರೂ ಒತ್ತಿರೋ ಸಾಧ್ಯತೆಯೂ ಇರುತ್ತದೆ.
ಇದು ಆಗುತ್ತೋ ಹೋಗುತ್ತೋ ಗೊತ್ತಿಲ್ಲ. ಆದರೂ ಒಂದು ಸಲಹೆ. ನಾವು ಬ್ಯಾಂಕ್ ಅಕೌಂಟ್ ಒಂದೆಡೆ ಓಪನ್ ಮಾಡಿ ಎಟಿಎಂ ಮೂಲಕ ದೇಶಾದ್ಯಂತ ಎಲ್ಲಿ ಬೇಕಾದರೂ ಹಣ ಪಡೆಯಲು ಸಾಧ್ಯ ಇರುವಂತೆಯೇ, ವೋಟರ್ ಐಡಿ ಯಾವುದೇ ವಿಳಾಸದಲ್ಲಿ ಇದ್ದರೂ, ದೇಶಾದ್ಯಂತ ಎಲ್ಲಿಂದ ಬೇಕಾದರೂ ನಾವು ನಮ್ಮ ಕ್ಷೇತ್ರದ ಅಭ್ಯರ್ಥಿಗೆ ಮತ ಹಾಕಲು ಸಾಧ್ಯವಾಗುವ ವ್ಯವಸ್ಥೆ ನಮ್ಮ ದೇಶದಲ್ಲಿ ಜಾರಿಗೆ ಬರಬೇಕು. ಆಗ ಪ್ರತಿಶತ ಮತದಾನದ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತ್ತದೆ. ಹೆಚ್ಚು ಮತ ಚಲಾವಣೆ ಆದಷ್ಟೂ ಉತ್ತಮ ಅಭ್ಯರ್ಥಿಯ ಆಯ್ಕೆ ಆಗುತ್ತದೆ. ಇಲ್ಲವಾದಲ್ಲಿ ಹಾಳೂರಿಗೆ ಉಳಿದವನೇ ಗೌಡ ಎಂಬ ಗಾದೆಯಂತಾಗುತ್ತದೆ.