62 ವರ್ಷಗಳಲ್ಲಿ ಸ್ಪರ್ಧಿಸಿದ್ದು ಏಕೈಕ ಮಹಿಳೆ!
ಹಾವೇರಿ ಸಂಸದ ಕ್ಷೇತ್ರದಲ್ಲಿ ಮಹಿಳಾ ಅಭ್ಯರ್ಥಿಗಳೇ ಕಾಣಸಿಗುವುದಿಲ್ಲ!
ಅದೇನು ಸಂಪ್ರದಾಯವೋ ಗೊತ್ತಿಲ್ಲ. 1952ರಿಂದ ಆರಂಭವಾದ ಲೋಕಸಭಾ ಚುನಾವಣಾ ಇತಿಹಾಸದಲ್ಲಿ ಹಿಂದಿನ ಧಾರವಾಡ ದಕ್ಷಿಣ ಹಾಗೂ ಈಗಿನ ಹಾವೇರಿ ಕ್ಷೇತ್ರದಿಂದ ಸ್ಪರ್ಧಿಸಿದವರಲ್ಲಿ ಪುರುಷರದ್ದೇ ಮೇಲುಗೈ. 2004ರಲ್ಲಿ ಜೆಡಿಎಸ್ನಿಂದ ಕಣಕ್ಕಿಳಿದಿದ್ದ ಪ್ರೇಮಾ ಪಾಟೀಲ್ ಅವರೊಬ್ಬರೇ ಇದುವರೆಗೆ ಕ್ಷೇತ್ರದಿಂದ ಸ್ಪರ್ಧಿಸಿರುವ ಮಹಿಳಾ ಅಭ್ಯರ್ಥಿ!
ಕ್ಷೇತ್ರದ ಮತದಾರರ ಪೈಕಿ ಅರ್ಧದಷ್ಟು ಮಹಿಳೆಯರಿದ್ದರೂ ಯಾವ ಪಕ್ಷಗಳೂ ಮಹಿಳೆಯರಿಗೆ ಅವಕಾಶ ನೀಡಿಲ್ಲ. ಇದುವರೆಗೆ 15 ಸಾರ್ವತ್ರಿಕ ಚುನಾವಣೆ ಕಂಡರೂ ಮಹಿಳೆಗೆ ಪ್ರಾತಿನಿಧ್ಯ ಸಿಗಲು 2004ರವರೆಗೆ ಕಾಯಬೇಕಾಯಿತು. 2004ರಲ್ಲಿ ಪ್ರೇಮಾ ಸಂಗನಬಸನಗೌಡ ಪಾಟೀಲ್ ಸ್ಪರ್ಧೆ ಇತಿಹಾಸ ಬರೆಯಿತು. ಅದಕ್ಕಿಂತ ಮೊದಲು ಯಾವ ಪಕ್ಷವೂ ಮಹಿಳೆಯರಿಗೆ ಟಿಕೆಟ್ ನೀಡಿಲ್ಲ. ಮಹಿಳೆಯರ ಬಗ್ಗೆ ಉದ್ದುದ್ದ ಭಾಷಣ ಮಾಡುವ, ಸಮಾನತೆ ಬಗ್ಗೆ ಮಾತನಾಡುವ ಪಕ್ಷಗಳು ಚುನಾವಣೆ ವಿಷಯ ಬಂದಾಗ ಆದ್ಯತೆ ಕೊಡುವುದಿಲ್ಲ ಎನ್ನುವುದಕ್ಕೆ ಇದು ಜ್ವಲಂತ ನಿದರ್ಶನ. ಸ್ಪರ್ಧೆಗೆ ಒಮ್ಮೆ ಮಹಿಳೆಗೆ ಅವಕಾಶ ಸಿಕ್ಕರೂ ಗೆಲ್ಲಲಾಗಲಿಲ್ಲ. ರಾಜಕೀಯ ಪಕ್ಷಗಳಲ್ಲಿ ಮಹಿಳಾ ಪದಾಧಿಕಾರಿಗಳಿದ್ದರೂ ಅವರೇನು ಸ್ಪರ್ಧಿಸಲು ಮನಸ್ಸು ಮಾಡುವುದಿಲ್ಲ.
ಮೂರನೆಯವ ಮೂಲೆಗುಂಪು!
ಹಾವೇರಿ ಕ್ಷೇತ್ರದಲ್ಲಿ ಕೇವಲ ಇಬ್ಬರು ವ್ಯಕ್ತಿ ಅಥವಾ ರಾಜಕೀಯ ಪಕ್ಷಗಳ ನಡುವೆ ನೇರ ಪೈಪೋಟಿ ನಡೆಯುತ್ತದೆ. ಹೀಗಾಗಿ ಇಲ್ಲಿ ಮೂರನೆಯವರು ಯಾವತ್ತಿದ್ದರೂ ಮೂಲೆಗುಂಪಾಗಿ ಠೇವಣಿ ಕಳೆದುಕೊಳ್ಳುವುದು ನಿಶ್ಚಿತ. 1991ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಿ.ಜಿ. ಬಣಕಾರ ಹಾಗೂ ಜನತಾದಳದಿಂದ ಸ್ಪರ್ಧಿಸಿದ ಬಸವರಾಜ ಶಿವಣ್ಣವರ- ಹೀಗೆ ಒಂದೆರಡು ಉದಾಹರಣೆ ಹೊರತುಪಡಿಸಿದರೆ ಉಳಿದೆಲ್ಲ ಸಂದರ್ಭದಲ್ಲಿ ಇಬ್ಬರ ನಡುವೆ ನೇರ ಹಣಾಹಣಿ ನಡೆದು, ಕಣದಲ್ಲಿ ಉಳಿದವರೆಲ್ಲ ಠೇವಣಿ ಕಳೆದುಕೊಳ್ಳುವ ಇತಿಹಾಸವನ್ನು ಹಾವೇರಿ ಲೋಕಸಭೆ ಕ್ಷೇತ್ರ ಹೊಂದಿದೆ.
ಮೈಸೂರಿಗೊಂದೇ ಚಂದ್ರ
-ಅಂಶಿ
ಮೈಸೂರಲ್ಲೂ ಮಹಿಳೆ ಹಿನ್ನಡೆ ಅನುಭವಿಸಿದ್ದಾಳೆ. ಇಲ್ಲಾದ ಒಟ್ಟು ಚುನಾವಣೆ 15. ಆದರೆ ಮಹಿಳಾ ಸಂಸದರಾಗಿ ಆರಿಸಿಬಂದಿದ್ದು ಚಂದ್ರಪ್ರಭಾ ಮಾತ್ರ. ಅದೂ ಇವರು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಪುತ್ರಿ. 1983ರಲ್ಲಿ ಜನತಾ ರಂಗದಿಂದ ಚಂದ್ರಪ್ರಭಾ ವಿಧಾನಸಭೆಗೆ ಪ್ರಥಮ ಬಾರಿ ಪ್ರವೇಶಿಸಿದರು. ರಾಮಕೃಷ್ಣ ಹೆಗಡೆ ಅವರ ಸಂಪುಟದಲ್ಲಿ ರೇಷ್ಮೆ ಖಾತೆಗೆ ಸಚಿವೆಯಾದರು. ನಂತರ ಚಂದ್ರಪ್ರಭಾ ಕಾಂಗ್ರೆಸ್ನತ್ತ ಮುಖಮಾಡಿದರು. 1991ರಲ್ಲಿ ಚಂದ್ರಪ್ರಭಾ ಮೈಸೂರು ಲೋಕಸಭೆಯಲ್ಲಿ ಶ್ರೀಕಂಠದತ್ತ ಒಡೆಯರ್ ವಿರುದ್ಧ ಕಣಕ್ಕಿಳಿದರು. 16,882 ಮತಗಳ ಅಂತರದಿಂದ ಒಡೆಯರ್ ವಿರುದ್ಧ ಗೆಲುವು. 1994, 1999ರ ವಿಧಾನಸಭೆ ಚುನಾವಣೆಯಲ್ಲಿ ಸೋತು ಸಕ್ರಿಯ ರಾಜಕಾರಣದಿಂದಲೇ ದೂರ ಸರಿದರು ಇವರು.
ಊರಿಗೊಬ್ಳೆ ಮಾರ್ಗರೆಟ್
- ಕತಗಾಲ
ಉತ್ತರ ಕನ್ನಡ ಕ್ಷೇತ್ರದಲ್ಲಿ ಗೆದ್ದ ಏಕೈಕ ಮಹಿಳೆ ಮಾರ್ಗರೇಟ್ ಆಳ್ವ. 1998ರಲ್ಲಿ ಮಾರ್ಗರೆಟ್ ಮೊದಲ ಬಾರಿ ಸ್ಪರ್ಧಿಸಿ ಕಹಿ ಅನುಭವಿಸಿದ್ದರು. ಆದರೆ ಮರುವರ್ಷ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಕಣಕ್ಕಿಳಿದರು. ಬಿಜೆಪಿಯ ಅನಂತಕುಮಾರ ಹೆಗಡೆ ವಿರುದ್ಧ 10,591 ಮತಗಳ ಅಂತರದಿಂದ ಗೆದ್ದು ಅಚ್ಚರಿ ಮೂಡಿಸಿದ್ದರು. ಈ ಕ್ಷೇತ್ರದಲ್ಲಿ ಮಾರ್ಗರೆಟ್ ಅವರ ಮಾವ ಜೋಕಿಮ್ ಆಳ್ವ 3 ಬಾರಿ ಸ್ಪರ್ಧಿಸಿದ್ದರು. 1951, 1957 ಹಾಗೂ 1962ರ ಲೋಕಸಭೆಯಲ್ಲಿ ಸ್ಪರ್ಧಿಸಿ ಠೇವಣಿ ಕಳೆದುಕೊಂಡರು ಒಂದಷ್ಟು ಮತಗಳನ್ನು ಪಕ್ಷಕ್ಕೆ ಸೀಮಿತಗೊಳಿಸುವಲ್ಲಿ ಸಫಲರಾಗಿದ್ದರು. ಇದುವೇ ಮಾರ್ಗರೆಟ್ ಆಳ್ವರ ಗೆಲುವಿಗೆ ಸಹಾಯವಾಗಿತ್ತು.
ಇನ್ನೊಬ್ಬರು ಮಹಿಳೆ ಇಲ್ಲಿ ನೆಲೆ ಕಾಣಲು ಬಂದು ಹಿನ್ನಡೆ ಅನುಭವಿಸಿದರು. ಸಮಾಜವಾದಿ ಪಕ್ಷದಿಂದ ಲಲಿತಾ ಹೆಗಡೆ ಸ್ಪರ್ಧಿಸಿ ಕೇವಲ 3623 ಮತ ಪಡೆಯುವಲ್ಲಿ ಸುಸ್ತಾಗಿದ್ದರು. ಈ ಹಿಂದೆ ಅನಸೂಯಾ ಶರ್ಮ ಶಾಸಕರಾಗಿದ್ದರು. ಸದ್ಯ ಶಾರದಾ ಶೆಟ್ಟಿ ಶಾಸಕರು.
ಈ ಬಾರಿ ಚುನಾವಣಾ ಕಣದಲ್ಲಿ ಪುರುಷ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ. ಈ ಕ್ಷೇತ್ರದಲ್ಲಿ ಚುರುಕಾಗಿ ಸಂಚರಿಸಿ ಪ್ರಚಾರ ನಡೆಸುವುದು ಕಷ್ಟಕರವಾಗಿದ್ದರಿಂದ ಪುರುಷರಿಗೆ ಟಿಕೆಟ್ ನೀಡಲಾಗುತ್ತದೆ ಎಂಬ ವಾದವಿದೆ.
-ನಾರಾಯಣ ಹೆಗಡೆ