ಐದು ಅಂಗಗಳಲ್ಲಿ ಐದೆ
ನಮ್ಮ ದೇಹದಲ್ಲಿ ಪಂಚೇಂದ್ರಿಯಗಳಿವೆ. ಅವುಗಳಿಗೆ ಒಂದೊಂದಕ್ಕೂ ಒಂದೊಂದು ಉದ್ದೇಶ, ಕಾರ್ಯ. ನಾವು ಆರೋಗ್ಯಪೂರ್ಣವಾಗಿ ಬದುಕಬೇಕಾದರೆ ಚರ್ಮ ಸ್ಪರ್ಶಿಸಬೇಕು, ಕಿವಿ ಕೇಳಬೇಕು, ಕಣ್ಣು ನೋಡಬೇಕು, ನಾಲಿಗೆ ಸವಿಯಬೇಕು, ಮೂಗು ಆಘ್ರಾಣಿಸಬೇಕು. ಪ್ರತಿ ಇಂದ್ರಿಯಕ್ಕೂ ಪೂರಕವಾಗಿ ಬೇರೆಬೇರೆ ದ್ರವ್ಯಗಳಿವೆ. ಆದರೆ ಇಲ್ಲೊಬ್ಬ ಪ್ರೇಮಪೀಡಿತನ ಆಲಾಪ ನೋಡಿ.
ದ್ರಷ್ಟವೇಷ್ಯು ಕಿಮುತ್ತಮಂ? ಮೃಗದೃಶಃ ಪ್ರೇಮಪ್ರಸನ್ನಂ ಮುಖಂ
ಘ್ರಾತವ್ಯೇಷ್ಯಪಿ ಕಿಂ? ತದಾಸ್ಯಪವನಃ ಶ್ರಾವ್ಯೇಷು ಕಿಂ? ತದ್ವಚಃ
ಕಿಂ ಸ್ವಾದ್ಯೇಷು? ತದೋಷ್ಠಪಲ್ಲವರಸಃ ಸ್ಪೃಶ್ಯೇಷು ಕಿಂ? ತದ್ವಪುರ್
ಧೇಯಂ ಕಿಂ? ನವಯೌವನೇ ಸಹೃದಯೈಃ ಸವ್ರತ್ರ ತದ್ವಿಭ್ರಮಾಃ
ಲೋಕದಲ್ಲಿ ಯಾವ ಉತ್ತಮ ವಸ್ತುವನ್ನು ಕಣ್ಣು ನೋಡಬೇಕು? ಪ್ರೇಮದಿಂದ ಪ್ರಫುಲ್ಲವಾದ, ಹರಿಣಿನಯನ ಸದೃಶ ಕಂಗಳಿಂದ ಕಂಗೊಳಿಸುವ ಸುಂದರಿಯ ಮುಖ. ಮೂಗು ಯಾವ ಅತ್ಯುತ್ತಮ ಪರಿಮಳವನ್ನು ಆಘ್ರಾಣಿಸಬೇಕು? ಅವಳ ಬಾಯಿಯಿಂದ ಹೊರಡುವ ಸುಗಂಧಮಯ ಉಸಿರು. ಕಿವಿ ಯಾವ ದೈವಿಕನಾದವನ್ನು ಕೇಳಬೇಕು? ಅದು ಅವಳ ಲಲ್ಲೆವಾತುಗಳಲ್ಲದೆ ಇನ್ನೇನು! ಯಾವುದರ ರುಚಿಯನ್ನು ನಾಲಿಗೆ ಸವಿಯಲೇಬೇಕು? ಇದೊಂದು ಪ್ರಶ್ನೆಯೆ? ಆಕೆಯ ಚಿಗುರು ಚೆಂದುಟಿಗಳ ಸಿಹಿಜೇನನ್ನಲ್ಲವೆ? ಯಾವುದನ್ನು ಮೈ ಸ್ಪರ್ಶಿಸಲೇಬೇಕು? ಅವಳ ಸೌಗಸಾದ ಮೈಯನ್ನೇ. ನವಯುವಕರು ಯಾವುದನ್ನು ನೆನೆಯುತ್ತಿರಬೇಕು? ಅವಳ ವಿಲಾಸವಿಭ್ರಮಗಳು. ಹೀಗೆ ಆತ ಪಂಚೇದ್ರಿಯಗಳಲ್ಲೂ ಆಕೆಯನ್ನೇ ಸವಿಯುತ್ತಿದ್ದಾನೆ!
-ಹರಿಹರ