ದೀರ್ಘಾಯು ಮರಗಳು
ಬ್ಯಾಕ್ಟೀರಿಯಾಗಳ ಆಯುಷ್ಯ ಅರ್ಧಗಂಟೆ ಮಾತ್ರ. ಕೆಲವು ಸಸ್ಯಗಳು ಒಂದು ವರ್ಷ ಬದುಕಿದರೆ, ಇನ್ನು ಕೆಲವು ಹಲವು ವರ್ಷಗಳವರೆಗೆ ಬದುಕುತ್ತವೆ. ಆಲ ಮತ್ತು ಅರಳಿಮರಗಳು ಹಲವು ಶತಮಾನಗಳವರೆಗೆ ಬದುಕಬಲ್ಲವು.
ಕ್ಯಾಲಿಫೋರ್ನಿಯಾದಲ್ಲಿ ಎಲ್ಲೋಸ್ಟೋನ್ ಪಾರ್ಕ್ ನಲ್ಲಿನ ಪೈನ್ ಬಳಗಕ್ಕೆ ಸೇರಿದ ಸಿಕ್ಟೋಯಿ ಮರಗಳು ಆಯುಷ್ಯದ ಮಟ್ಟಿಗೆ ಜೀವಸಾಮ್ರಾಜ್ಯದಲ್ಲಿ ದಾಖಲೆ ಸ್ಥಾಪಿಸಿವೆ. ಕೆಲವು ಸಿಕ್ಟೋಯಿ ಮರಗಳ ಆಯುಷ್ಯ 3500-5000 ವರ್ಷಗಳು ಎಂದು ತಿಳಿದುಬಂದಿದೆ. ಜನರಲ್ ಶೆರ್ಮನ್ ಮರ 3500 ವರ್ಷಗಳಿಂದ ಅಚಲವಾಗಿ ನಿಂತೇ ಇದೆ. ಅಷ್ಟೇ ಅಲ್ಲ ಬ್ರಿಸ್ಲ್ಕೋನ್ ಪೈನ್ ಮರ 4600 ವರ್ಷಗಳಷ್ಟು ಹಳೆಯದೆಂದು ತಿಳಿದುಬಂದಿದೆ. ಇವು ಗಿನ್ನೆಸ್ ಪುಸ್ತಕ ಸೇರಿ ದಾಖಲೆ ಮಾಡಿವೆ.
ಮೆಥುಸೆಲಾ ಎಂಬ ಕಂಟಿಯ ವಯಸ್ಸು 4,900 ವರ್ಷಗಳು. ಮೊಜಾವ್ ಮರುಭೂಮಿಯ ಕ್ರಿಯೊಸೋಟ್ ಪೊದೆಗಳ ಆಯುಷ್ಯ 10,000 ವರ್ಷಗಳೆಂದು ಸಸ್ಯವಿಜ್ಞಾನಿಗಳು ಲೆಕ್ಕಾಚಾರ ಹಾಕಿದ್ದಾರೆ. ಹಕ್ಲ್ಬೆರಿ ಹೆಸರಿನ 13000 ವರ್ಷಗಳಷ್ಟು ಹಿಂದಿನ ಗಿಡಗಂಟಿಗಳು ಪತ್ತೆಯಾಗಿವೆ. ಟಾಸ್ಮೇನಿಯಾದ ಮಳೆಕಾಡುಗಳಲ್ಲಿ ಬೆಳೆಯುವ ಲುಮಾಟಿಯಾ ಟಾಸ್ಮಾನಿಕಾ ಸಸ್ಯ 43000 ವರ್ಷಗಳಷ್ಟು ಹಳೆಯದು!
- ಸುಭಾಷ್ ಎನ್. ನೇಳಗೆ