ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಇದೆಂಥ ಸಂಸಾರ!

ರಾಜರಿಗೆ ಹತ್ತಾರು ಪತ್ನಿಯರು. ಆದ್ದರಿಂದ ಅವರೆಲ್ಲ ತಲೆಕೆಟ್ಟು ಓಲಗದಲ್ಲೇ ಇರುವುದು ಹೆಚ್ಚು. ಹಾಗೆ ಇರುವಾಗ..

Rashmi Kasaragodu
Updated On : 4 May 2014, 4:04 am

ರಾಜರಿಗೆ ಹತ್ತಾರು ಪತ್ನಿಯರು. ಆದ್ದರಿಂದ ಅವರೆಲ್ಲ ತಲೆಕೆಟ್ಟು ಓಲಗದಲ್ಲೇ ಇರುವುದು ಹೆಚ್ಚು. ಹಾಗೆ ಇರುವಾಗ ಅಲ್ಲಿ ಕವಿಗಳಿದ್ದರೆ, ತಮ್ಮ ಕಾವ್ಯಗಳಿಂದ ಮಹಾರಾಜರನ್ನು ಖುಷಿಪಡಿಸಬೇಕಾದ ಹೊಣೆಗಾರಿಕೆ ಅವರದು. ಹಾಗೆ ಒಮ್ಮೆ ರಾಜನೊಬ್ಬ ಓಲಗ ಕೊಟ್ಟಾಗ, ಇದ್ದಕ್ಕಿದ್ದಂತೆ 'ಅಸಾರೇ ದಗ್ಧಸಂಸಾರೇ' ಅಂದ. ಹಾಗೆಂದರೆ 'ಈ ಸಂಸಾರದಲ್ಲಿ ಸಾರವಿಲ್ಲ, ಇದನ್ನು ಸುಡಲಿ' ಎಂದರ್ಥ. ಈಗ ಈ ಸಾಲನ್ನು ತೆಗೆದುಕೊಂಡು ಕಾವ್ಯ ರಚಿಸುವ ಹೊಣೆ ಕವಿಗಳಿಗೆ ಬಂತು. ಒಬ್ಬೊಬ್ಬರು ಒಂದೊಂದು ಸಾಲು ಹೇಳಿದರು. ಒಬ್ಬ ಹೀಗೆ ಪೂರ್ತಿ ಮಾಡಿದ:

ಅಕೃತ್ರಿಮಪ್ರೇಮರಸಾ ವಿಲಾಸಾಸಗಾಮಿನೀ
ಅಸಾರೇ ದಗ್ಧಸಂಸಾರೇ ಸಾರಂ ಸಾರಂಗಲೋಚನಾ

ಸಂಸಾರ ಅಸಾರ, ಸುಡುತಾಪದ ಸಾರ ಎನ್ನುವುದು ನಿಜ. ಇಂಥ ಸಂಸಾರದಲ್ಲೂ, ಅಕೃತ್ರಿಮ ಪ್ರೇಮರಸವನ್ನು ಸೂಸುವ, ವಿಲಾಸಮಯ ದೃಷ್ಟಿಯನ್ನು ಬೀರಿ ಮಂದಮಂದವಾಗಿ ನಡೆದು ಮನದನ್ನನನ್ನು ಖುಷಿಪಡಿಸುವ ಹರಿಣಲೋಚನೆಯು ಹೆಂಡತಿಯಾಗಿದ್ದರೆ ಅದರಲ್ಲಿ ಸಾರವಿದೆ.
ಕವಿ ಬುದ್ಧಿವಂತ. ಆತ ಬರೀ ಸಾರಂಗಲೋಚನೆ, ವಿಲಾಸಗಾಮಿನಿ ಎಂದಿಲ್ಲ. ಆಕೆ ಕೃತ್ರಿಮವಿಲ್ಲದ ಪ್ರೇಮರಸವನ್ನು ಮೊಗೆಮೊಗೆದು ಕೊಡುವವಳೂ ಆಗಿರಬೇಕು. ಪ್ರಣಯವನ್ನು ನೀಡುವಲ್ಲಿ ಲೆಕ್ಕಾಚಾರ, ಪ್ರಣಯದ ವೇಳೆ ಅನ್ಯಮನಸ್ಕತೆ, ಅನ್ಯನಿಷ್ಠೆಗಳು ಕೃತ್ರಿಮವೆಂದೇ ಪರಿಗಣಿಸಲ್ಪಡುತ್ತವೆ. ರಾಜ ಸವಾಲು ಪೂರ್ತಿಯಾಯಿತು ನಿಜ. ಆದರೆ ಮನಸ್ಸಿನ ತಾಪಕ್ಕೆ ಸಮಾಧಾನ ಸಿಕ್ಕಿತೋ ಇಲ್ಲವೋ ಗೊತ್ತಾಗಲಿಲ್ಲ.

-ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments