ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಕ್ರೀಸಿಗೆ ಬಂದ ನಾರಿ

ಕ್ರಿಕೆಟ್ ಹಿಂದೆ ಅದೆಂತಾ ಮ್ಯಾಜಿಕ್ ಇದೆಯೋ? ಬಂದ ನಾರಿಯರನ್ನು ಎಂದೂ ಹಾಗೇ ವಾಪಸ್ ಕಳುಹಿಸಿಲ್ಲ. ಪ್ರತಿಯೊಬ್ಬ ...

Rashmi Kasaragodu
Updated On : 5 May 2014, 3:10 am

ಕ್ರಿಕೆಟ್ ಹಿಂದೆ ಅದೆಂತಾ ಮ್ಯಾಜಿಕ್ ಇದೆಯೋ? ಬಂದ ನಾರಿಯರನ್ನು ಎಂದೂ ಹಾಗೇ ವಾಪಸ್ ಕಳುಹಿಸಿಲ್ಲ. ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗೂ ಆಕೆಯ ಪರಿಚಯ ಮಾಡಿಕೊಡುತ್ತದೆ. ನೋಡನೋಡುತ್ತಿದ್ದಂತೆ ದಿಡೀರ್ ಖ್ಯಾತಿಗೆ ಒಳಗಾಗಿಸುತ್ತದೆ.
ಕೇವಲ ಮಾಡೆಲ್ ಆಗಿದ್ದ ಪೂನಂ ಪಾಂಡೆ ಹೆಸರನ್ನು ಇಂದು ಕೇಳದವರಿಲ್ಲ. ಅಶ್ಲೀಲ ಟ್ವೀಟ್ ಮಾಡುತ್ತ, ಅರೆ ಬೆತ್ತಲೆ ಚಿತ್ರಗಳನ್ನು ಸಾಮಾಜಿಕ ತಾಣಗಳಲ್ಲಿ ಹರವುತ್ತ ಹುಡುಗರ ಪಾಲಿಗೆ ವೈರಸ್ ಆಗಿದ್ದ ಪೂನಂ ಪಾಂಡೆಯನ್ನು ಮುಂಬೈ ಪೋಲಿಸರು ಬಂಧಿಸಿ 'ಜಾಗ್ರತೆ!' ಎಂದಿದ್ದೂ ಆಯಿತು. ಪೋಲಿಸರ ಬೆದರಿಕೆಗಾದರೂ ಸೊಪ್ಪು ಹಾಕಿ ಮಾನ ಮುಚ್ಚಿಕೊಳ್ಳುತ್ತಾಳಾ? ಎಂಬುದು ಪ್ರಶ್ನೆ! ಅದೇನೆ ಇರಲಿ ನಟನೆಯೂ ಬಾರದ, ಪ್ರತಿಭಾವಂತೆ ಎಂದು ಹೇಳಲು ಎಳ್ಳಷ್ಟು ಪ್ರತಿಭೆ ಇರದ ಒಬ್ಬಳು ಜನಜನಿತಳಾಗುತ್ತಾಳೆ ಎಂದರೆ? ಅಂತಹ ಅಸಾಮಾನ್ಯ ಮದನಾರಿಯರ ಪಟ್ಟಿಯೂ ದೊಡ್ಡದಿದೆ. ಮೈಮಾಟವೇ ಪ್ರಚಾರ! ಮಾದಕತೆಯೇ ಕ್ರೆಡಿಟ್ಟು!
2008ರ ಐಪಿಎಲ್ ಪಂದ್ಯ ರಾಜಕೀಯ ಕಾರಣಗಳಿಗಾಗಿ ದಕ್ಷಿಣ ಆಫ್ರಿಕದಲ್ಲಿ ನಡೆಸಲಾಯಿತು. ಆ ಸಂದರ್ಭದಲ್ಲಿ ಅದೆಲ್ಲಿದ್ದಳೋ ಮಂದಿರಾ 'ನಾನು ಐಪಿಎಲ್‌ನಲ್ಲಿ ಭಾಗಿಯಾಗಿದ್ದರೆ ಪಂದ್ಯದ ಮೆರುಗೇ ಬದಲಾಗುತ್ತಿತ್ತು' ಎಂದಿದ್ದಳು. ಸಖತ್ತಾಗೇ ಇದ್ದ ಮಂದಿರಾ ಸೋನಿ ಮ್ಯಾಕ್ಸ್ ಸೆಳೆಯುವಲ್ಲಿ ಗೆಲುವಿನ ನಗೆ ಬೀರಿದ್ದಳು. ಕ್ರಿಕೆಟಿಗರ ಸಂದರ್ಶನ, ಐಪಿಎಲ್‌ನ ವಿಶೇಷ ಪಂದ್ಯಗಳ ತುಣುಕುಗಳುಳ್ಳ ಕಾರ್ಯಕ್ರಮ ನೀಡಲು ಪ್ರಾರಂಭಿಸಿದಳು. 2010 ಐಪಿಎಲ್ ವೇಳೆಗೆ ಮಂದಿರಾ ಇಲ್ಲದೆ ಟೂರ್ನಿಯೇ ನಡೆಯುವುದಿಲ್ಲ ಎಂಬಷ್ಟರ ಮಟ್ಟಿಗೆ ಆವರಿಸಿಕೊಂಡಳು. ಬ್ರಿಟಿಷ್ ವಾಹಿನಿಯೊಂದಕ್ಕೆ ಮಂದಿರಾ ಪಂದ್ಯಾವಳಿಯ ಪೂರ್ತಿ ಚಿತ್ರಣವನ್ನು ಒದಗಿಸಿದ್ದಳು. ಆಕೆಗೂ ವಯಸ್ಸಾಯಿತು, ಗರ್ಭವತಿಯಾಗಿ ಯೌವನದ ಕಳೆ ಕಡಿಮೆ ಆಯಿತು. ಅಂತೆಯೇ ಕ್ರಿಕೆಟ್ ಆಭಿಮಾನಿಗಳ ಮನಸ್ಸಲ್ಲಿ ಜಾಗ ಪಡೆದಿದ್ದ ಮಂದಿರಾ 'ಎಲ್ಲಿ ಹೋದಳು?' ಎಂದು ಹುಡುಕುವ ಪ್ರಮಯಕ್ಕೆ ಒಳಗಾದಳು.
ಅದಕ್ಕೂ ಮೊದಲು ಮಂದಿರಾ ಪ್ರಸಿದ್ಧಿಯ ಏಣಿಯಲ್ಲೇನೂ ಇರಲಿಲ್ಲ. 1994ರಲ್ಲಿ ಶಾಂತಿ ಎಂಬ ಧಾರಾವಾಹಿ ಮೂಲಕ ಒಂದಷ್ಟು ಹೆಸರು ಮಾಡಿದ್ದಳಷ್ಟೇ. ಹೇಳಿಕೊಳ್ಳುವುದಕ್ಕೆ 'ದಿಲ್‌ವಾಲೇ ದುಲ್‌ಹಾನಿಯಾ ಲೆ ಜಾಯೇಂಗೆ' ಎಂಬ ಸಿನಿಮಾದಲ್ಲೂ ನಟಿಸಿದ್ದಾಳೆ. ಯಾವಾಗ ಕ್ರಿಕೆಟ್ ಅಂಗಣದಲ್ಲಿ ತುಂಡುಡುಗೆ ತೊಟ್ಟು ಮೈಕ್ ಹಿಡಿದು ನಿಂತಳೋ ಮಂದಿರಾಳ ಖದರ್ರೇ ಬದಲಾಯಿತು. 2003 ಮತ್ತು 2007ರ ವಿಶ್ವಕಪ್ ಪಂದ್ಯಾವಳಿಯಲ್ಲಿ ನಿರೂಪಣೆ ಮಾಡಿ ಮಿಂಚಿದಳು. 2004 ಮತ್ತು 2006 ಚಾಂಪಿಯನ್ ಟ್ರೋಫಿ ಪಂದ್ಯಾಟದಲ್ಲೂ ಮಂದಿರಾ ಕಳೆ ಮೈದಾನದ ತುಂಬೆಲ್ಲಾ ಹರಿದಾಡಿತ್ತು.
ಕ್ರಿಕೆಟ್‌ಗೆ ಮಾದಕತೆಯ ಲೇಪನ ನೂಪುರ್ ಮೆಹ್ತಾ ಮೂಲಕ ಆಗಿದ್ದು ವಿವಾದದ ರೂಪದಲ್ಲಿ. ಭಾರತ- ಪಾಕಿಸ್ತಾನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ಹಿಂದೆ ನೂಪುರ್ 'ಮೈ'ಚಳಕ ಇದೆ ಎಂಬ ಸುದ್ದಿ ಹರಿದಾಡಿತ್ತು. ಗಾಳಿ ಸುದ್ದಿ ಎಂಬುದನ್ನು ಅಷ್ಟು ಸುಲಭದಲ್ಲಿ ತಳ್ಳಿಹಾಕುವಂತಿಲ್ಲ ಎಂಬುದು ಪ್ರೇಕ್ಷಕರ ಅಭಿಮತ.
ಅಷ್ಟರಲ್ಲೇ ಪೂನಂ ಎಂಬ ಸೆಕ್ಸಿ ಬಾಂಬ್ ಕ್ರಿಕೆಟ್ ಅಂಗಣಕ್ಕೆ ಅಪ್ಪಳಿಸಿತ್ತು. 'ಭಾರತ ವಿಶ್ವಕಪ್ ಗೆದ್ದರೆ ಕ್ರೀಡಾಂಗಣದಲ್ಲಿ ಬೆತ್ತಲಾಗುತ್ತೇನೆ' ಎಂಬ ಆಸೆ ತೋರಿಸಿದಳು. ಭಾರತ ವಿಶ್ವಕಪ್ ಗೆದ್ದಿತು! ಗ್ಯಾಲರಿಯ ತುಂಬೆಲ್ಲಾ ಸಂಭ್ರಮಕ್ಕಿಂತ ಕುತೂಹಲ ತುಂಬಿತ್ತು. ಉದ್ದ ಉದ್ದದ ಲೆನ್ಸ್‌ಗಳಿರುವ ಕ್ಯಾಮರಾಗಳು ಎಷ್ಟು ಸಾಧ್ಯವೋ ಅಷ್ಟು ಜೂಂ ಮಾಡುವ ಕಲೆಯನ್ನು ಕರಗತ ಮಾಡಿಕೊಳ್ಳುತ್ತಿದ್ದವು. ಕ್ಯಾಮರಾ ಇಲ್ಲದವರು ಮೋಬೈಲ್‌ನಲ್ಲೇ ಕ್ಯಾಮರಾ ಆನ್ ಮಾಡಿಕೊಂಡಿದ್ದರು. ಪೂನಂ ಬೆತ್ತಲಾಗಿ ಅಲ್ಲಿಂದ ಬರುತ್ತಾಳೆ, ಇಲ್ಲಿಂದ ಬರುತ್ತಾಳೆ ಎಂದೆಲ್ಲಾ ಸುತ್ತಲೂ ಹುಡುಕಿದ್ದೇ ಹುಡುಕಿದ್ದು. ಯಾರೆಂದೇ ಗೊತ್ತಿಲ್ಲದಿದ್ದ ಮಾಡೆಲ್ ಜಗತ್ತಿನೆಲ್ಲೆಡೆ ಸುದ್ದಿಗೆ ಗ್ರಾಸವಾಗಿಬಿಟ್ಟಳು.
'ಡ್ರೆಸಿಂಗ್ ರೂಂನಲ್ಲಿ ತೋರಿಸುತ್ತೇನೆ!' ಎಂದು ಹೇಳಿ ಉರಿಯುವ ಬೆಂಕಿಗೆ ತುಪ್ಪವನ್ನೆರೆದಿದ್ದಳು. ಟ್ವಿಟರ್‌ಗಳಲ್ಲಿ ಸೆಂಕೆಂಡಿಗೆ ಒಬ್ಬರಂತೆ ಪೂನಂ ಪಾಂಡೆಯನ್ನು ಫಾಲೋ ಮಾಡತೊಡಗಿದರು. ಅಂತೂ ಕ್ಯಾಮೆರಾ ಕಣ್ಣಿಗಷ್ಟೇ ಬೆತ್ತಲಾಗಿ ಸಾಮಾಜಿಕ ತಾಣಗಳಲ್ಲಿ ಚಿತ್ರ ಅಪ್‌ಲೋಡ್ ಮಾಡುವ ಮೂಲಕ ಪಡ್ಡೆಗಳ ದಾಹ ತಣಿಸಿದ್ದಳು. ಸಚಿನ್ ಮತ್ತು ವಿರಾಟ್‌ಗಾಗಿ ಬಟ್ಟೆ ಬಿಚ್ಚಿದೆ ಎಂದೆಲ್ಲಾ ಹೇಳಿ ಮತ್ತಷ್ಟು ಸುದ್ದಿಯಲ್ಲಿರಲು ಹವಣಿಸಿದಳು. ಸಾಲದ್ದಕ್ಕೆ 5ನೇ ಐಪಿಎಲ್ ಆವೃತ್ತಿಯಲ್ಲೂ ಕೋಲ್ಕತ್ತಾ ನೈಟ್ ರೈಡರ್ಸ್ ಆಟಗಾರರಿಗಾಗಿ ಮತ್ತೊಮ್ಮೆ ತನ್ನ ವಿರಾಟ ದರ್ಶನ ಮಾಡಿಸಿದಳು!
ಅಡ್ಡದಾರಿಯಲ್ಲಿ ಫೇಮ್ ಆಗುವ ಕಲೆ ಹೇಳಿಕೊಟ್ಟ ಪೂನಂ ಗುರುವಾಗಿದ್ದು ರೋಜ್‌ಲಿನ್ ಖಾನ್‌ಳಿಗೆ. ಎಂ.ಎಸ್.ಧೋನಿ ಮತ್ತು ಸಹ ಫ್ರಾಂಚೈಸಿಗಳಿಗಾಗಿ ಅರೆಬರೆ ಬಟ್ಟೆ ಹಾಕಿ ಫೋಸು ಕೊಟ್ಟಳು. ಪೂನಂನಷ್ಟು ಹೆಸರು ಮಾಡಲಾಗದಿದ್ದರೂ ಒಂದಷ್ಟು ಮಟ್ಟಿಗೆ ನೋಡುಗರ ಮನಸೂರೆಗೊಂಡಳು. ಅಂತು ಧೋನಿಗಾಗಿ ರೋಜ್‌ಲಿನ್ 'ಎದೆ'ಗಾರಿಕೆ ಪ್ರದರ್ಶಿಸಿಯೇಬಿಟ್ಟಳು.
ತೆರೆಗೆ ತೆರೆದು ಬರುವವರ ಸರದಿಯಲ್ಲಿ ಪಾಕಿಸ್ತಾನ ಬೆಡಗಿ ಒಬ್ಬಳಿದ್ದಾಳೆ. ಈಕೆಯೇ ಕನ್ನಡದ ಪ್ರೇಕ್ಷಕರನ್ನು 'ಡರ್ಟಿ ಪಿಕ್ಚರ್‌' ನೋಡುವಂತೆ ಮಾಡಿದ್ದು. ಪಾಕ್‌ನ ವಿವಾದಿತ ಆಟಗಾರ ಮಹಮ್ಮದ್ ಆಸಿಫ್‌ನ ಹಿಂದೆ ಬಂದ ವೀಣಾ ಮಲ್ಲಿಕ್ ಮೆಲ್ಲಗೆ ಭಾರತ ಪ್ರವೇಶಿಸಿಬಿಟ್ಟಳು. ಎಲ್ಲಾ ನೋಡುವವರೆಗೂ ವೀಣಾ ಬಗೆಗೆ ಕುತೂಹಲ ತೋರಿದ್ದ ಪ್ರೇಕ್ಷಕರು ಇತ್ತೀಚೆಗೆ ನಿರಾಸಕ್ತಿ ತೋರಿದ್ದರಿಂದಲೋ ಏನೋ ವೀಣಾ ಮಲ್ಲಿಕ್ ಎಲ್ಲೂ ಕಾಣಿಸುತ್ತಿಲ್ಲ!
2011ರ ಐಪಿಎಲ್ ಪಂದ್ಯದಲ್ಲಿ ಸೋನಿ ಮ್ಯಾಕ್ಸ್‌ಗಾಗಿ ಅರ್ಚನಾ ವಿಜಯ್ ಜೊತೆ ಶಿಬಾನಿ ದಂಡೇಕರ್ ರಂಗ ಪ್ರವೇಶಿಸಿದಳು. ಮಾಡೆಲ್ ಮತ್ತು ಹಾಡುಗಾರ್ತಿಯಾದ ಶಿಬಾನಿ ಕ್ರೀಡಾಂಗಣ ತುಂಬೆಲ್ಲಾ ಬಳುಕಾಡಿ ನಡೆಯುವಾಗ ಪ್ರೇಕ್ಷಕರು ಎಷ್ಟು ಹೊತ್ತೂಂತ ಆಟ ನೋಡುತ್ತಾರೆ? ಶಿಬಾನಿಯತ್ತ ಕಣ್ಣು ಹೊರಳಿಸಿಯೇ ಹೊರಳಿಸುತ್ತಾರೆ. ಅರ್ಚನಾ ವಿಜಯ್ ನಿಯೋ ಕ್ರಿಕೆಟ್ ಚಾನೆಲ್‌ನತ್ತ ಮೈಕ್ ಹಿಡಿದು ಹೊರಟೇಬಿಟ್ಟಳು. ಚಾನೆಲ್ ವಿ, ನಿಯೋ ಸ್ಪೋರ್ಟ್ಸ್ ಅಂತ ಇಬ್ಬರೂ ಅವಕಾಶ ಬಂದತ್ತ ಎಗರಿದರು. 2013ರ ಐಪಿಎಲ್‌ನಲ್ಲಿ ಶಮೀರ್ ಕೊಚ್ಚಾರ್ ಮತ್ತು ಗೌರವ್ ಕಪೂರ್ ಜೊತೆ ರೊಚೆಲ್ ಮಾರಿಯಾ ರಾವ್ ನಿರೂಪಣೆ ಮಾಡಿದಳು. ಕ್ರೀಡಾಂಗಣದ ತುಂಬೆಲ್ಲಾ ತುಂಡುಡುಗೆ ತೊಟ್ಟು ಓಡಾಡಿದಂತೆಲ್ಲಾ ಸಿನಿಮಾ ತಾರೆಯರನ್ನು ಬದಿಗೆ ಸರಿಸುವಷ್ಟರ ಮಟ್ಟಿಗೆ ಫೇಮಸ್ ಗಿಟ್ಟಿಸಿದಳು.


- ಮಂಜು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement