ಬಹುಮತ ಅಭಿವೃದ್ಧಿಗೆ ಪೂರಕ
ಪೂರ್ಣ ಬಹುಮತದ ಸರ್ಕಾರ ಒಳ್ಳೆಯದು. ಯಾಕೆಂದರೆ ಪ್ರಧಾನಿ ಹೇಳಿದ ಹಾಗೆ ಮಂತ್ರಿಗಳು ಕೇಳುತ್ತಾರೆ. ಆಗ ಪ್ರಮುಖ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸಗಳಾಗುತ್ತವೆ. ಅದು ದೇಶದ ಅಭಿವೃದ್ಧಿಗೆ ಸಹಾಯಕವಾಗುತ್ತದೆ. ಸಮ್ಮಿಶ್ರ ಸರ್ಕಾರ ಬಂದರೆ ಅವರಲ್ಲಿ ಹೊಂದಾಣಿಕೆ ಇರುವುದಿಲ್ಲ. ಇಲ್ಲಿ ಸ್ವಹಿತಾಸಕ್ತಿಯೇ ಪ್ರಮುಖವಾಗುತ್ತದೆ. ಇದರಿಂದ ಭ್ರಷ್ಟಾಚಾರ ತಾಂಡವವಾಡುತ್ತದೆ. ಹತ್ತು ಹಲವು ಪಕ್ಷಗಳಿರುವುದರಿಂದ ಅವು ತಮ್ಮ ತಮ್ಮಲ್ಲೇ ಕಚ್ಚಾಡುತ್ತಿರುತ್ತವೆ. ಕಾರಣಾಂತರಗಳಿಂದ ಪಕ್ಷಗಳು ಬೆಂಬಲ ವಾಪಸ್ ಪಡೆದರೆ ಸರ್ಕಾರ ಬಿದ್ದು ಹೋಗುತ್ತದೆ. ಆವಾಗ ಮತ್ತೆ ಎಲೆಕ್ಷನ್ ಆಗಬೇಕು. ಇದರ ಹೊರೆ ಕೂಡ ಸಾಮಾನ್ಯ ನಾಗರಿಕರ ಮೇಲೆ ಬೀಳುತ್ತದೆ.
ಟಸುರೇಶ ನಿಂಗಪ್ಪಾ ಶೇಡಬಾಳ, ಹಾರೂಗೇರಿ
ಸರತಿ ಮೇಲೆ ಅಧಿಕಾರವಿರಲಿ
ರಾಷ್ಟ್ರೀಯ ಪಕ್ಷಗಳು ಆಡಳಿತಾತ್ಮಕವಾಗಿ ಹೆಚ್ಚೂಕಡಿಮೆ ಒಂದೇ ಆಗಿರುವಾಗ ಅಲಿಖಿತ ಒಪ್ಪಂದದ ಮೇರೆಗೆ ಆಲ್ಟರ್‌ನೇಟ್ ಆಗಿ ಅಧಿಕಾರಕ್ಕೆ ಬರುವುದು ಒಳ್ಳೆಯದು. ಯೋಜನೆಗಳು ಪ್ರಾರಂಭವಾಗಿ ಇನ್ನೊಂದು ಅವಧಿಯಲ್ಲಿ ಪೂರ್ಣವಾಗುತ್ತವೆ. ಹೀಗಾಗುವುದರಿಂದ ಎರಡೂ ಪಕ್ಷಗಳಿಗೂ ಅದರ ಕ್ರೆಡಿಟ್ ಸಲ್ಲುತ್ತದೆ. ಪ್ರಾದೇಶಿಕ ಪಕ್ಷಗಳ, ಕೌಟುಂಬಿಕ ಹಾಗೂ ವ್ಯಕ್ತಿಗತ ಆಧಾರದ ಮೇಲೆ ರಚಿಸಿರುವ, ಸಮ್ಮಿಶ್ರ ಸರ್ಕಾರ ಅತಂತ್ರವಾಗಿರುತ್ತದೆ, ಕಿಚಡಿ ಸರ್ಕಾರ ಅನಿಸಿಕೊಳ್ಳುತ್ತದೆ. ಸದಾ ಹೊಂದಾಣಿಕೆ, ಸಂಖ್ಯಾಬಲದತ್ತಲೇ ಗಮನ ಕೇಂದ್ರೀಕರಿಸುವುದರಿಂದ ಯೋಜನೆಗಳ ಅನುಷ್ಟಾನ ವಿಳಂಬವಾಗುತ್ತದೆ. ಹಾಗಾಗಿ ಬಹುಮತದ ಸರ್ಕಾರ ಲೇಸು. ಇದರಿಂದ ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ ಪಕ್ಷಗಳು ಉದುರಿ ಹೋಗುತ್ತವೆ.
ಟಬಿ.ಆರ್.ಜಗದೀಶ್ ಬೆಳವಾಡಿ
ಸಮ್ಮಿಶ್ರ ಸರ್ಕಾರವೆಂದರೆ ದೊಂಬರಾಟ
ಪೂರ್ಣ ಬಹುಮತದ ಸರ್ಕಾರವಿರಬೇಕು. ಅದಕ್ಕೆ ಬಲಿಷ್ಠ ವಿರೋಧ ಪಕ್ಷವಿರಬೇಕು. ಆಗ ಆಡಳಿತಕ್ಕೊಂದು ಲಗಾಮೂ ಇರುತ್ತದೆ. ಸಮ್ಮಿಶ್ರ ಸರ್ಕಾರವೆಂದರೆ ದೊಂಬರಾಟವೇ ಸರಿ. ಇಂತಹ ಸರ್ಕಾರದಿಂದ ಒಳ್ಳೆಯ ಆಡಳಿತ ನಿರೀಕ್ಷಿಸುವುದು ಕಷ್ಟವೆ. ಅಲ್ಲಿ ದೇಶದ ಅಭಿವೃದ್ಧಿಗಿಂತ ಕ್ಷೇತ್ರದ, ತಮ್ಮ ರಾಜ್ಯದ ಅಭಿವೃದ್ಧಿ, ಪಕ್ಷ ಹಿತಾಸಕ್ತಿ ಮೇಲುಗೈ ಆಗಿಬಿಡುತ್ತದೆ. ಪ್ರತಿ ವಿಷಯ ಚರ್ಚೆಯಾಗುವಾಗ ಒಟ್ಟಭಿಪ್ರಾಯ ಮೂಡುವುದೇ ಇಲ್ಲ. ಎಲ್ಲ ಪಕ್ಷಗಳು ತಮಗಾಗುವ ಲಾಭ-ನಷ್ಟದ ಲೆಕ್ಕಾಚಾರ ಹಾಕುವುದರಿಂದ ಬಲಿಷ್ಠ ನಿರ್ಧಾರ ಅಸಾಧ್ಯ. ಇದನ್ನೆಲ್ಲ ಗಮನಿಸಿದರೆ ಪೂರ್ಣ ಬಹುಮತದ ಸರ್ಕಾರ ಒಳ್ಳೆಯದು. ಆದರೆ ಆಳುವ ಪಕ್ಷದ ನಿರಂಕುಶತೆಗೆ ಅವಕಾಶ ಇರಬಾರದು ಅಷ್ಟೆ.
ಟಶ್ರೀಕಾಂತರಾವ್ ಎಚ್. ಅಡರಕಟ್ಟಿ
'ಜಗುಲಿ'ಯಲ್ಲಿ ಈ ಸಲದ ವಿಷಯ 'ಮುಂದಿನ ಪ್ರಧಾನಿ ಹೇಗಿರಬೇಕು?' ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com