ಮೇರೆ ಪಾಸ್ ಮಾ ಹೈ
ಅದು ಅವರಿಗೆ ಮಾತ್ರ ನೂರಾರು ಅಮ್ಮ!
ತೆರೆ ಮೇಲೆ ಬಣ್ಣ ಹಚ್ಚಿದ ನಟಿಯರಿಗೆ ಪ್ರತಿ ಚಿತ್ರಕ್ಕೂ ಒಬ್ಬೊಬ್ಬರು ತಾಯಿ. ಆದರೆ, ರಿಯಲ್ ತಾಯಿ ಮಾತ್ರ ಮಗಳ ಶೂಟಿಂಗ್ ನೋಡುತ್ತಾ ಅಲ್ಲೇ ಸೆಟ್ನಲ್ಲಿ ಕೂತಿರುತ್ತಾರೆ. ನಮ್ಮೆಲ್ಲರ ಕಣ್ಣಿಗೆ ಅವಳು ಕನಸಿನ ನಟಿಯಾದರೆ, ಆ ತಾಯಿಯ ಕಣ್ಣಿಗೆ ಕೇವಲ ಮಗಳು. ನಮ್ಮೆಲ್ಲರಿಗೆ ಕೆಲವೊಮ್ಮೆ ಆ ನಟಿಯ ನಟನೆ ಹಿಡಿಸದೆ ಇರಬಹುದು. ಆದರೆ, ಆ ತಾಯಿಗೆ ಆಕೆ ಏನೂ ಮಾಡಿದರೂ ಚೆಂದ. ಹೆತ್ತ ಮಗಳು ಹೀರೋನನ್ನು ಅಪ್ಪುವಾಗ ಕೊಂಚ ಮುಖ ಹಿಂಡುತ್ತಾಳೆ ಬಿಟ್ಟರೆ, ಮಿಕ್ಕೆಲ್ಲ ನಾರ್ಮಲ್.
ಬಹುತೇಕ 'ಪಾರದರ್ಶಕ'ವಾಗುತ್ತಿರುವ ಚಿತ್ರೋದ್ಯಮದಲ್ಲಿ ಹೆಣ್ಣುಮಕ್ಕಳು ದಾರಿ ತಪ್ಪದೇ ಇರುವುದಕ್ಕೂ ಆ ಮಾತೆಯೇ ಕಾರಣ. ಮಗಳೆಲ್ಲೇ ಹೋದರೂ ಆಕೆಗೆ ಸಾಥ್ ಕೊಟ್ಟು, ಆಕೆ ಮೇಲೊಂದು ಕಣ್ಣಿಟ್ಟು, ಅವಳ ಕಷ್ಟಕ್ಕೆ ನೆರವಾಗಿ, ನಗುವಿಗೆ ಸಹಭಾಗಿಯಾಗಿ ಇರುವ ಅಂಥ ತಾಯಂದಿರನ್ನು ನಾವು 'ಮದರ್ಸ್ ಡೇ' ವೇಳೆ ನೆನೆಯಲೇಬೇಕು.
ನನಗಾಗಿ ಅಮ್ಮ ಈಜು ಕಲಿತರು!
ಚಿಕ್ಕವಳಿದ್ದಾಗ ಸ್ವಿಮ್ಮಿಂಗ್ ಕೋರ್ಸ್ಗೆ ಸೇರಿದ್ದೆ. ಆದರೆ, ನೀರನ್ನು ಮುಟ್ಟೋದಿಕ್ಕೂ ಭಯ! ಕೊನೆಗೆ ತಾಯಿಯೇ ಬಂದು ಕಲಿಸಬೇಕಾಯಿತು. ವಿಶೇಷವೆಂದರೆ, ಬ್ಯಾಂಕ್ ಉದ್ಯೋಗಿಯಾಗಿದ್ದ ಅವರು ಮುಂಜಾನೆ ನನಗೆ ಸ್ವಿಮ್ಮಿಂಗ್ ಕಲಿಸಲೆಂದೇ ಮಂಗಳೂರಿನ ಮಂಗಳಾ ಸ್ಟೇಡಿಯಂ ಪಕ್ಕದ ಸ್ವಿಮ್ಮಿಂಗ್ಪೂಲ್ನಲ್ಲಿ ಈಜು ಕಲಿತು ಬಂದಿದ್ದರು! ನಾನಿಂದು ಸ್ವಲ್ಪ ಧೈರ್ಯವಂತೆಯಂತೆ ಕಾಣಿಸಿದರೆ ಅದಕ್ಕೆ ನನ್ನಮ್ಮನೇ ಕಾರಣ.
- ನೀತು
ಅನುಭವಸ್ಥೆಯರಾಗಿ...
ಮಗಳು ಶಾಲೆಯಲ್ಲಿದ್ದಾಗಲೇ ಸಿನಿಮಾಗೆ ಬರಬೇಕೆಂದುಕೊಂಡಿದ್ದಳು. ನೀನು ನಟಿಯಾದರೆ ರಮೇಶ್ಗೆ ನಾಯಕಿಯಾಗಿ ನಿನ್ನನ್ನು ನೋಡ್ಬೇಬೇಕು ಎನ್ನುತ್ತಿದ್ದೆ ನಾನು. ಅಚ್ಚರಿಯೆಂಬಂತೆ ಅವಳ ಮೊದಲ ಚಿತ್ರಕ್ಕೆ (ಜೋಕ್ಫಾಲ್ಸ್) ರಮೇಶ್ ನಾಯಕರಾದಾಗ ನನಗೆ ತುಂಬಾ ಖುಷಿಯಾಗಿತ್ತು. ಶೂಟಿಂಗ್ ವೇಳೆ ಸದಾ ಮಕ್ಕಳೊಂದಿಗೆ ತಾಯಿ ಇರಲೇಬೇಕೆಂದೇನಿಲ್ಲ. ಮುಖ್ಯ ನಿರ್ಧಾರ ತೆಗೆದುಕೊಳ್ಳುವ ವೇಳೆ ಅನುಭವಸ್ಥೆ ಎಂಬ ಕಾರಣಕ್ಕೆ ತಾಯಿ ಜೊತೆಗಿರುವುದು ಉತ್ತಮ ಎಂಬುದು ನನ್ನ ಅಭಿಪ್ರಾಯ.
- ಮೋಹಿನಿ ಮಂಜುನಾಥ್, ನೀತು ತಾಯಿ
ಅವಳೊಂದಿಗೆ ಸಿನಿಮಾ ನೋಡುವೆ...
ನನ್ನ ತಾಯಿಗೆ ನಾನೊಬ್ಬಳೇ ಮಗಳು. ಏಳು ವರ್ಷದಿಂದ ನಾನು ಚಿತ್ರೋದ್ಯಮದಲ್ಲಿದ್ದೇನೆ. ನಾನು ಮತ್ತು ಅಮ್ಮ ಯಾವಾಗಲೂ ಜೊತೆಯಾಗಿಯೇ ಇರುತ್ತೇವೆ. ಪರಸ್ಪರ ದೂರಾಗಿರುವುದೆಂದರೆ ನಮಗಿಬ್ಬರಿಗೂ ಕಷ್ಟ. ಸಿನಿಮಾ ಮೊದಲಾದೆಡೆ ತಾಯಿಗಿಂತ ಫ್ರೆಂಡ್ಸ್ ಜೊತೆಗಿದ್ದರೆ ಹೆಚ್ಚು ಎಂಜಾಯ್ಮೆಂಟ್ ಸಿಗುತ್ತದೆಂದು ಹೇಳುವುದರಲ್ಲಿ ನನಗೆ ನಂಬಿಕೆಯಿಲ್ಲ. ಯಾಕೆಂದರೆ ನಾನು ಅಮ್ಮ ಹೇಳಿದಂತೆ ಕೇಳುವವಳು. ಆಕೆಯೊಂದಿಗೆ ಸಿನಿಮಾ ನೋಡುವುದೆಂದರೆ ನನಗೆ ಖುಷಿಯ ವಿಚಾರ.
- ತೇಜಸ್ವಿನಿ
ಡಯೆಟ್ ಮಾಡುವ ಮಗಳನ್ನು ನೋಡುವುದು ಕಷ್ಟ!
ನಾಯಕಿಯಾಗಿ ಉಳಿಯಲು ಫಿಗರ್ ಮೆಂಟೇನ್ ಮಾಡಲೇಬೇಕು ಎಂದು ಹಠಕ್ಕೆ ಬಿದ್ದಿರುವ ಮಗಳು ಊಟ ಬಿಟ್ಟಿರುವುದನ್ನು ನೋಡಲು ಕಷ್ಟವಾಗುತ್ತದೆ. ಆಕೆ ಟಿವಿ ನೋಡುತ್ತಿದ್ದರೆ ಗೊತ್ತಾಗದ ಹಾಗೆ ಹೋಗಿ ಕೈ ತುತ್ತು ತಿನ್ನಿಸುತ್ತೇನೆ! ಶಾಪಿಂಗ್ ಮಾಡೋದೆಂದರೆ ವಿಪರೀತ ಹುಚ್ಚು ಇರಿಸಿಕೊಂಡಿರುವ ಮಗಳು ಮನೆ ತುಂಬಾ ಬಟ್ಟೆಗಳ ರಾಶಿ ತಂದು ಹಾಕುವುದಕ್ಕೆ ನಾನು ಗದರಿಸುತ್ತೇನೆ. ಅದಕ್ಕೆಂದೇ ಅವಳು ನನಗೂ ಒಂದು ಸೀರೆ ತಂದು ಪೂಸಿ ಹೊಡೆಯಲು ನೋಡುತ್ತಾಳೆ
- ವಿನಯ ಪ್ರಕಾಶ್, ತೇಜಸ್ವಿನಿ ತಾಯಿ
ನೇಹಾ ಹೇಳಿದ ಇಡ್ಲಿ ಕಥೆ
ನಾನು ಚಿಕ್ಕವಳಿದ್ದಾಗ ಇಡ್ಲಿ ಅಂದ್ರೆ ತುಂಬಾನೇ ಇಷ್ಟ. ಒಮ್ಮೆ ಅಮ್ಮ ಅವರ ಫ್ರೆಂಡ್ ಮಗಳ ಬರ್ತ್ಡೇಗೆ ನನ್ನನ್ನ ಕರೆದುಕೊಂಡು ಹೋಗಿದ್ದರು. ಅಲ್ಲಿ ಕೊಡ್ತಿದ್ದ ಇಡ್ಲಿ ಇಷ್ಟವಾಗಿ ಇನ್ನೊಂದು ಬೇಕೆಂದು ಕೇಳಿದ್ದೆ ನಾನು. ಆದರೆ ಅವರ ಫ್ರೆಂಡ್ 'ಇಡ್ಲಿ ಇಲ್ಲ ಮುಗೀತು' ಅಂದ್ಬಿಟ್ರು. ಆದ್ರೆ ನಿಜಕ್ಕೂ ಇಡ್ಲಿ ಮುಗಿದಿರ್ಲಿಲ್ಲ. ಅದು ಗೊತ್ತಾಗಿ ನನ್ನಮ್ಮ ಅವರ ಫ್ರೆಂಡ್ ಜೊತೆ ಹತ್ತು ವರ್ಷ ಮಾತಾಡೋದನ್ನೇ ಬಿಟ್ಬಿಟ್ಟಿದ್ರು! ವಿಷ್ಯ ಒಂದು ರೀತಿ ಫನ್ನಿಯಾಗಿದ್ರೂ ಅಮ್ಮ ನನ್ಮೇಲೆ ಇಟ್ಟಿರೋ ಕಾಳಜಿಗೆ ಇದೇ ಸಾಕ್ಷಿ.
- ನೇಹಾ ಪಾಟೀಲ್
ನನ್ನ ಮಗಳು ತುಂಬಾ ಡಿಫರೆಂಟ್. ಸೂಕ್ಷ್ಮ ಸ್ವಭಾವ. ಅವಳ ಇಷ್ಟ-ಕಷ್ಟವೇನು ಎಂಬುದನ್ನು ಯಾವತ್ತೂ ಇನ್ನೊಬ್ಬರಲ್ಲಿ ಹೇಳಿಕೊಳ್ಳುವವಳಲ್ಲ. ನಾನು ಸೆಟ್ನಲ್ಲಿದ್ದರೆ ತಕ್ಷಣವೇ ಅದನ್ನು ಗುರುತಿಸಿ ವಿಚಾರಿಸುತ್ತೇನೆ. ಏನೋ ಸ್ವಲ್ಪ ಆರೋಗ್ಯ ಕೆಟ್ಟಿದ್ದರೂ ಅವಳ ಮುಖ ನೋಡಿಯೇ ಪತ್ತೆ ಮಾಡುತ್ತೇನೆ. ಶೂಟಿಂಗ್ಸ್ಗೆ ಹೋಗಿ ಅವಳ ಖಾಸಗಿಯೆನಿಸುವ ವಿಚಾರಗಳಲ್ಲಿ ತಲೆ ತೂರಿಸುವ ತಾಯಿ ನಾನಲ್ಲ. ಅವಳು ಖಂಡಿತಾ ಒಂದಿನ ದೊಡ್ಡ ಹೆಸರು ಮಾಡುತ್ತಾಳೆ. ಎಲ್ಲ ಹೊಸ ನಟಿಯರೂ ದೊಡ್ಡ ತಾರೆಯರಾಗಲಿ ಎಂದು ತಾಯಿಯಾಗಿ ಹಾರೈಸುತ್ತೇನೆ.
- ಗೀತಾ ಪಾಟೀಲ್, ನೇಹಾ ತಾಯಿ
ನನ್ನಮ್ಮ 'ಮೂರೂವರೆ ವಜ್ರ'
ನಾನು ನಟಿಯಾದ ಮೇಲೆ ಅಮ್ಮ ಸದಾ ನನ್ನೊಂದಿಗೇ ಇರುತ್ತಾರೆ. ಅವರು ಎಲ್ಲ ಕಡೆಯೂ ಅಡ್ಜೆಸ್ಟ್ ಆಗುತ್ತಾರೆ. ಅವರು ತುಂಬಾನೇ ಸೈಲೆಂಟ್. ಹಿಂದೊಮ್ಮೆ ಅವರೂ ಬಾಲನಟಿಯಾಗಿ ಅಭಿನಯಿಸಿದ್ದರು! 'ಮೂರೂವರೆ ವಜ್ರಗಳು' ಚಿತ್ರದಲ್ಲಿ ಸುಧಾಮನ ಮೂವರು ಮಕ್ಕಳಲ್ಲಿ ಒಬ್ಬಳಾಗಿ ಕಾಣಿಸಿಕೊಂಡಿದ್ದರು.
- ಸಂಗೀತಾ ಭಟ್
ಅವಳ ಸಾಧನೆ ನನ್ನ ಕಂಗಳಲ್ಲಿ...
ನಾನು ಬಾಲನಟಿಯಾಗಿ ಮುಂದುವರಿಯಲು ಮನೆಯಲ್ಲಿ ಅವಕಾಶವಿರಲಿಲ್ಲ. ಆದರೆ ಈಗ ಮಗಳಿಗೆ ಆ ಅವಕಾಶ ಸಿಕ್ಕಿದೆ. ಅದನ್ನು ಆಕೆ ಬಳಸಿಕೊಳ್ಳುವ ಘಳಿಗೆಯನ್ನು ನೇರವಾಗಿ ಕಂಗಳಲ್ಲಿ ತುಂಬಿಕೊಳ್ಳುವುದು ಯಾವುದೇ ತಾಯಿಯ ಆಕಾಂಕ್ಷೆ. ಅದು ಎಲ್ಲ ತಾಯಂದಿರ ಆಸೆಯೂ ಹೌದು. ಸಂಗೀತಾ ನನಗೊಬ್ಬಳೇ ಮಗು. ನನ್ನ ಅದೃಷ್ಟವೆಂಬಂತೆ ಈಕೆಯೂ ನಾನು ಅವಳ ಜೊತೆಗಿರಬೇಕೆಂದು ಬಯಸುತ್ತಾಳೆ.
- ಮಂಜುಳಾ ಗೋವಿಂದ ಭಟ್, ಸಂಗೀತಾ ತಾಯಿ
ಫಸ್ಟ್ ಬರುವಂತೆ ಮಾಡುತ್ತಾರೆ...
ಫ್ಯಾಮಿಲಿಯ ಕಡೆಯಿಂದ 'ಚಿತ್ರೋದ್ಯಮ ಒಳ್ಳೆಯದಲ್ಲ' ಎಂಬ ಮಾತು ಬಂದಾಗ 'ಯಾಕಲ್ಲ? ಅವಳೊಂದಿಗೆ ಸದಾ ನಾನಿರುತ್ತೇನಲ್ಲ' ಎಂದು ಜೊತೆಗೆ ಬಂದವರು ಅಮ್ಮ. ಸ್ಪರ್ಧೆಗಳಿರುವುದೇ ನನಗಾಗಿ, ಪ್ರಥಮ ಸ್ಥಾನ ಗೆಲ್ಲುವುದಕ್ಕಾಗಿ. ದ್ವಿತೀಯ ಸ್ಥಾನ ಬಂದರೆ ಯಾವ ವಿಚಾರದಲ್ಲಿ ತಪ್ಪಾಯಿತೋ ಅದನ್ನು ತಿದ್ದಿಕೊಂಡು ಇನ್ನೊಮ್ಮೆ ಪ್ರಥಮ ಸ್ಥಾನ ಗೆಲ್ಲುವಂತೆ ಮಾಡುತ್ತಾರೆ.
- ರೂಪಿಕಾ
ನನ್ನ ನಿರಾಶೆ ಕರಗಿದೆ...
ನನಗೆ ಡ್ಯಾನ್ಸ್ ಕಲಿಯೋಕ್ಕಾಗಿಲ್ಲ, ನಟನೆ ಮಾಡೋಕ್ಕಾಗಿಲ್ಲ ಎಂಬ ಎಲ್ಲ ನಿರಾಶೆಗಳನ್ನೂ ಮಗಳ ಸಾಧನೆಯಿಂದ ನಿವಾರಿಸಿಕೊಂಡಿದ್ದೇನೆ. ಮಗಳು ಸಿನಿಮಾಗೆ ಬಂದ ಮೇಲೂ ಅವಳ ಜೊತೆಯಲ್ಲೇ ಇರುತ್ತೇನೆ. ಯಾಕೆಂದರೆ ನನ್ನ ಪ್ರಕಾರ ಯಾವುದೇ ಯುವನಟಿಯೂ ತಾಯಿಯೊಂದಿಗೆ ಚಿತ್ರರಂಗಕ್ಕೆ ಬಂದರೇನೇ ಆತ್ಮಸ್ಥೈರ್ಯದೊಂದಿಗೆ ನಟಿಸಲು ಸಾಧ್ಯವಾಗಬಲ್ಲದು.
- ಮಂಜುಳಾ ಭಟ್, ರೂಪಿಕಾ ತಾಯಿ
ಮುನಿಸಿಕೊಂಡರೆ ಓಲೈಸುವೆ...
ಅಮ್ಮ ಅಪರೂಪಕ್ಕೊಮ್ಮೆ ನನ್ನಲ್ಲಿ ಮುನಿಸಿಕೊಂಡರೂ ನಾನೇ ಓಲೈಸಿ ಜೊತೆಗೆ ಕರೆಯುತ್ತೇನೆ. ಎಲ್ಲೋ ಶಾಲಾ ದಿನಗಳಲ್ಲೊಮ್ಮೆ ಪ್ರವಾಸ ಹೋಗುವಾಗ ತಾಯಿಯನ್ನು ಬಿಟ್ಟಿದ್ದೆ ಎಂಬುದನ್ನು ಬಿಟ್ಟರೆ ನನ್ನ ಪ್ರತಿದಿನದಲ್ಲೂ ತಾಯಿ ಜೊತೆಗಿರಲೇಬೇಕು ಮತ್ತು ಇರುತ್ತಾರೆ.
- ಅಮೂಲ್ಯ
ಚಿಕ್ಕವಯಸ್ಸಿನಲ್ಲೇ ಕಷ್ಟಕೊಟ್ಟುಬಿಟ್ಟೆ!
ಒಂಬತ್ತನೇ ತರಗತಿಯಲ್ಲಿದ್ದಾಗಲೇ ಮಗಳು ಸಿನಿಮಾಕ್ಕೆ ನಾಯಕಿಯಾದಾಗ ನನಗೆ ತುಂಬಾನೇ ಖುಷಿಯಾಗಿತ್ತು. ಆದರೆ ಚಿತ್ರೀಕರಣಕ್ಕಾಗಿ ಅವಸರವಸರವಾಗಿ ವಾಹನದೊಳಗೆ ಬಂದು ಬಟ್ಟೆ ಬದಲಿಸಿಕೊಂಡು ಅವಳು ವಾಪಸು ಹೋಗುತ್ತಿದ್ದರೆ ತೀರಾ ಚಿಕ್ಕ ವಯಸ್ಸಿಗೇನೇ ತುಂಬ ಕಷ್ಟ ಕೊಟ್ಟುಬಿಟ್ಟೆನೇನೋ ಅಂತನ್ನಿಸಿದ್ದಿದೆ. ಇವಳ ಮೂರನೇ ಚಿತ್ರ ಮುಗಿಯುವಷ್ಟರೊಳಗೆ ನ್ಯುಮೋನಿಯಾ ಪೀಡಿತರಾಗಿ ನನ್ನ ಪತಿ ತೀರಿಹೋದರು. ನಾನು ಸದಾ ಮಗಳೊಡನೆಯೇ ಇರಬೇಕು ಎಂಬುದು ಅವಳ ತಂದೆಯ ಆಗ್ರಹವೂ ಆಗಿತ್ತು. 'ಮನೆಯಲ್ಲಿ ಏನೇ ಕೆಲಸವಿದ್ದರೂ ಪರವಾಗಿಲ್ಲ, ನೀನು ಮಾತ್ರ ಮಗಳೊಂದಿಗೇನೇ ಇರಬೇಕು ಎಂದು ಅವರು ಯಾವಾಗಲೂ ಹೇಳುತ್ತಿದ್ದರು. ಹಾಗಾಗಿ ಸಿನೆಮಾ ಶೂಟಿಂಗ್ ಮಾತ್ರವಲ್ಲ, ಯಾವುದೇ ಕಾರ್ಯಕ್ರಮವಿದ್ದರೂ ನಾವಿಬ್ಬರು ಸದಾ ಜೊತೆಯಲ್ಲೇ ಇರುತ್ತೇವೆ.
- ಜಯಲಕ್ಷ್ಮೀ, ಅಮೂಲ್ಯ ತಾಯಿ
ಜಗ್ಗೇಶ್ ಭುಜದಲ್ಲಿ ತಾಯಿ ಹಚ್ಚೆ
ನನ್ನ ತಾಯಿಗೆ ಸಿಕ್ಸ್ತ್ ಸೆನ್ಸ್ ವರ್ಕ್ ಆಗುತ್ತಿತ್ತು. 'ಬಲ್ ನನ್ಮಗ' ಚಿತ್ರ ನೋಡಿ ಹೊಟ್ಟೆ ತುಂಬಾ ನಕ್ಕಿದ್ದ ನನ್ನಮ್ಮ 'ಏನ್ ಚೆನ್ನಾಗ್ ಆ್ಯಕ್ಟ್ ಮಾಡಿದ್ದೀಯೋ ಕರೀ ನನ್ ಮಗ್ನೆ...' ಎಂದು ಮುದ್ದಾಡಿದರು. ಕೊನೆಯಲ್ಲಿ 'ನೋಡಪ್ಪ ನಾಡಿದ್ದು ಶನಿವಾರ ನಿನ್ನಮ್ಮ ಇರಲ್ಲ' ಎಂದರು. 'ಯಾವೂರಿಗೆ ಹೋಗ್ತಿದ್ದೀಯಮ್ಮ?' ಕೇಳಿದೆ ನಾನು. 'ಬಾರದೇ ಇರೋ ಊರಿಗೆ ಕಣೋ' ಎಂದರು. ಗುರುವಾರ ಸಿನಿಮಾ ನೋಡಿದ ಬಳಿಕ ಈ ಮಾತು ಹೇಳಿದ್ದ ನಮ್ಮಮ್ಮ ಶನಿವಾರ ತೀರಿಹೋಗಿದ್ದರು! ನನ್ನ ಏಳನೇ ವಯಸ್ಸಿನ ತನಕವೂ ಆಕೆಯ ಹಾಲು ಕುಡಿದಿದ್ದ ನನ್ನೊಳಗೆ ಆಕೆಯ ಪ್ರತಿ ಮಾತೂ ಜೀವಂತ. ಅದರ ಕುರುಹಾಗಿ ಅಮೆರಿಕದ ಶ್ರೇಷ್ಠ ಹಚ್ಚೆಗಾರರಿಂದ ಹಾಕಿಸಿಕೊಂಡ ಈ ಹಚ್ಚೆ ನನ್ನನ್ನು ಸುಡುವವರೆಗೂ ನನ್ನೊಡನಿರುತ್ತದೆ <
- ಜಗ್ಗೇಶ್
= ಶಶಿಕರ ಪಾತೂರು