ಷರೀಫರ ಸಾಲು
ಪ್ರತಿರಾತ್ರಿ ಹತ್ತುಗಂಟೆ. ಅದು ಉದಯಟೀವಿಯಲ್ಲಿ ಮಳೆ ಬರುವ ಸಮಯ. ಮೊದಲು ಹತ್ತುಗಂಟೆಗೆ ಮುಂಗಾರುಮಳೆ ಸುರಿಯುತ್ತಿತ್ತು. ಅದರ ಎಫೆಕ್ಟೋ ಏನೋ ಎಂಬಂತೆ ಇದೀಗ ಅಲ್ಲಿ ಮನೆಯ ಮಾಳಿಗಿಯು ಸೋರುತಿಹುದು! ಸಂತ ಶಿಶುನಾಳ ಷರೀಫರ ಗೀತೆಯ ಸಾಲನ್ನೇ ಶೀರ್ಷಿಕೆಯಾಗಿಸಿಕೊಂಡು ಜನಪ್ರಿಯತೆಯತ್ತ ದೌಡಾಯಿಸುತ್ತಿರುವ 'ಸೋರುತಿಹುದು ಮನೆಯ ಮಾಳಿಗಿ' ಮೆಗಾಧಾರಾವಾಹಿ ಈಗಷ್ಟೇ ಶತಕ ಬಾರಿಸಿದೆ. ಈ ಧಾರಾವಾಹಿಯ ಲೇಡಿಪಿಲ್ಲರ್ಗಳೂ ಲೇಡಿಕಿಲ್ಲರ್ಗಳೂ ಆಗಿರುವ ಮೂವರು ಕಲಾವಿದೆಯರು ಕಿರುಕ್ಷೇತ್ರದೊಂದಿಗೆ ಧಾರಾವಾಹಿ ಬಗ್ಗೆ ಹಾಗೂ ತಮ್ಮ ವೃತ್ತಿಬದುಕಿನ ಬಗ್ಗೆ ಮಾತನಾಡಿದ್ದಾರೆ.
ಸ್ನೇಹಾ ನಂಬಿಯಾರ್
ಸೋರುವ ಮನೆಯೊಳಗೆ
ನಾನು ಈ ಧಾರಾವಾಹಿಗೆ ಹೊಸದಾಗಿ ಎಂಟ್ರಿಕೊಟ್ಟಿ ದ್ದೇನೆ. ಇದರಲ್ಲಿ ನನ್ನ ಹೆಸರು ನೀಲಾಂಬರಿ. ನಾಯಕನ ಹಳೆಯ ಪ್ರೇಯಸಿಯ ಪಾತ್ರ ನನ್ನದು. ಹದಿಮೂರು ವರ್ಷಗಳ ಕಾಲ ಆತನಿಗಾಗಿ ಕಾದವಳು ನಾನು. ಆದರೆ ಆತ ಈಗ ಬೇರೆ ಮದುವೆಯಾಗಿರುತ್ತಾನೆ. ಅದಕ್ಕಾಗಿ ಆತನ ಮೇಲೆ ಹಗೆ ಸಾಧಿಸಲು ಪ್ರಯತ್ನಿಸುವ ಪಾತ್ರ ನನ್ನದು. ನನಗೊಬ್ಬರು ಬೋಸ್ ಎಂಬ ಅಸಿಸ್ಟೆಂಟ್ ಹೊರತಾಗಿ ಬೇರೆ ಯಾರೂ ಇಲ್ಲ! ಏಕಾಂಗಿ ಶ್ರೀಮಂತೆ ನಾನು.
ಒಮ್ಮೆ ಖಳನಾಯಕಿಯ ಪಾತ್ರ ನಿರ್ವಹಿಸಿದರೆ ಮತ್ತೆ ಯಾವಾಗಲೂ ಅದೇ ಪಾತ್ರಕ್ಕೆ ಬ್ರಾಂಡ್ ಮಾಡಿಬಿಡುತ್ತಾರೆ. ನಾನು ಮೊದಲು ಕನ್ನಡ ಕಿರುತೆರೆಯಲ್ಲಿ ನಾಯಕಿಯಾಗಿಯೇ ನಟಿಸಿದ್ದವಳು. ತೆಲುಗಲ್ಲಿಯೂ ನಾಯಕಿಯಾಗಿದ್ದೆ. ಆದರೆ ಒಮ್ಮೆ ಖಳನಾಯಕಿಯಾದ ಮೇಲೆ ಅದೇ ತರಹದ ಪಾತ್ರಗಳು ದೊರೆಯ ತೊಡಗಿದವು. ಹಾಗಾಗಿ ನಾನಾಗಿಯೇ ನಟನೆಯಿಂದ ದೂರವಾಗಿ ನಿಂತೆ. ಸದ್ಯಕ್ಕೆ ಇದು ವಿಭಿನ್ನ ಪಾತ್ರ. ಹಾಗಾಗಿಯೇ ಒಪ್ಪಿಕೊಂಡಿದ್ದೇನೆ. ನಾಯಕನಾಗಿ ನಟಿಸುತ್ತಿರುವ ವಿಶ್ವಾಸ್ ನನಗೆ ಹಳೆಯ ಪರಿಚಯ. ಹಾಗಾಗಿ ಹೊಸದಾಗಿ ತಂಡದೊಳಗೆ ಸೇರಿದ್ದರೂ ವಾತಾವರಣ ಆತ್ಮೀಯವಾಗಿದೆ.
ದಶಕದ ಹಿಂದೆ ಹೊಂಗಿರಣ ಧಾರಾವಾಹಿಯ ಮೂಲಕ ಸೀರಿಯಲ್ ರಂಗಕ್ಕೆ ಅಡಿಯಿಟ್ಟ ನಾನು ಸಪ್ತಪದಿ, ಜೀವನ್ಮುಖಿ, ತುಳಸಿ, ಬಳಿಕ ತೆಲುಗು ಕಿರುತೆರೆಯಲ್ಲಿ ಸುಂದರಕಾಂಡಂ, ಕಾಳರಾತ್ರಿ ಮತ್ತು ತಮಿಳಲ್ಲಿ ಅಹಲ್ಯ, ಕೋಲಂಗಳ್, ಮನೈವಿ ಹಾಗೂ ಒಂದಷ್ಟು ಮಲಯಾಳಂ ಸೇರಿದಂತೆ ಒಟ್ಟು 55ರಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದೇನೆ.
ಸ್ವಂತ ಮನೆಯೊಳಗೆ
ನನ್ನ ಹೆಸರೇ ಸೂಚಿಸುವಂತೆ ನನ್ನ ತಂದೆತಾಯಿ ಮೂಲತಃ ಕೇರಳದವರು. ಆದರೆ ನಾನು ಹುಟ್ಟಿದ್ದು ಬೆಳೆದಿದ್ದು ಎಲ್ಲ ಬೆಂಗಳೂರಿನಲ್ಲೇ. ನಾನು ವಿವಾಹಿತೆ. ನನ್ನ ಗಂಡನ ಹೆಸರು ಈಶ್ವರ್. ನಮಗೆ ತರುಣ್ ಮತ್ತು ವರುಣ್ ಎಂಬ ಇಬ್ಬರು ಮಕ್ಕಳು ಇದ್ದಾರೆ.
ಶೋಭಿತಾ
ಸೋರುವ ಮನೆ ಒಳಗೆ
ಕುಟುಂಬ ಎಷ್ಟು ಒಗ್ಗಟ್ಟಿನಲ್ಲಿರಬೇಕು ಎಂಬುದನ್ನು ತೋರಿಸುವ ಧಾರಾವಾಹಿ ಇದು. ಇದರಲ್ಲಿ ನನ್ನ ಗಂಡನ ಅಣ್ಣ ಮತ್ತು ಅವರ ಪತ್ನಿಯನ್ನು ಸ್ವಂತ ಅಕ್ಕ ಬಾವನಂತೆ ಪ್ರೀತಿಸುವ ನಾದಿನಿಯ ಪಾತ್ರ ನನ್ನದು. ಸದಾ ಅವರ ಒಳಿತಿಗಾಗಿ ಪ್ರಯತ್ನಿಸುವ ನಾನು ಅದಕ್ಕಾಗಿ ನನ್ನ ತಂದೆಯನ್ನೇ ಎದುರು ಹಾಕಿಕೊಳ್ಳೋಕೂ ರೆಡಿ. ಇದು ನನಗೆ ಏಳನೇ ಧಾರವಾಹಿ. ನನಗೆ ಒಳ್ಳೆಯ ಪಾತ್ರ ಸಿಗಲು ಆರಂಭವಾಗಿದ್ದು ಸುವರ್ಣ ವಾಹಿನಿಯ ಕೃಷ್ಣರುಕ್ಮಿಣಿ ಧಾರಾವಾಹಿಯ ಮೂಲಕ. ನಾಯಕಿಯ ತಂಗಿ ಭಾವನಾ ಎಂಬ ಪಾತ್ರದಲ್ಲಿ ಧಾರಾವಾಹಿ ಲೋಕಕ್ಕೆ ಎಂಟ್ರಿಕೊಟ್ಟೆ. ಕಲ್ಯಾಣಿ, ಚಕ್ರವಾಕ, ಮಡದಿ, ಎರಡು ಕನಸು, ದೀಪವು ನಿನ್ನದೆ ಗಾಳಿಯು ನಿನ್ನದೆ, ಗಾಳಿಪಟ ಮೊದಲಾದ ಧಾರಾವಾಹಿಗಳಲ್ಲಿ ನಟಿಸಿದ್ದೇನೆ. ಪ್ರಸ್ತುತ ಎರಡೊಂದ್ಲ ಮೂರು ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದೇನೆ.
ಸ್ವಂತ ಮನೆಯೊಳಗೆ:
ಟಿ.ವಿ ನಿರೂಪಕಿಯಾಗುವುದು ನನ್ನ ಕನಸಾಗಿತ್ತು. ಒಂದು ವರ್ಷ ಖಾಸಗಿ ವಾಹಿನಿಯಲ್ಲಿ ನಿರೂಪಕಿಯಾದ ಮೇಲೆ ಧಾರಾವಾಹಿಗಳೆಡೆಗೆ ಮುಖಮಾಡಿದೆ. ನನ್ನ ಎಲ್ಲಾ ಆಸಕ್ತಿಗಳಿಗೆ ಮನೆಯ ಬೆಂಬಲ ಸಿಕ್ಕಿರುವುದು ನನ್ನ ಅದೃಷ್ಟ. ತಂದೆ ಶಿವಣ್ಣ ಕೃಷಿಕ. ತಾಯಿ ದೇವಕಿ. ಅವರ ಐವರು ಮಕ್ಕಳಲ್ಲಿ ನಾನೂ ಒಬ್ಬಳು.
ಲಕ್ಷ್ಮೀಗೌಡ
ಸೋರುವ ಮನೆ ಒಳಗೆ
ನಿರ್ಮಲಾ ಎಂಬುದು ನಾನು ನಿರ್ವಹಿಸುವ ಪಾತ್ರದ ಹೆಸರು. ನಾಯಕನಿಗೆ ತಂದೆ ತಾಯಿ ಇರುವುದಿಲ್ಲ. ಮೂರು ಜನ ತಮ್ಮಂದಿರು ಮತ್ತು ಒಬ್ಬಳು ತಂಗಿ ಇರುವ ಆ ಮನೆಗೆ ನಾನು ಆತನಿಗೆ ಪತ್ನಿಯಾಗಿ ಬರುತ್ತೇನೆ. ಆದರೆ ಪತ್ನಿಗಿಂತ ಹೆಚ್ಚಾಗಿ ತಾಯಿಯಾಗಿರುತ್ತೇನೆ. ಅದಕ್ಕೆ ತುಂಬಾ ಅರ್ಥವಿದೆ. ನನ್ನ ಮತ್ತು ನಾಯಕನ ನಡುವಿನ ಸಂಬಂಧವೇ ಧಾರಾವಾಹಿಯ ಪ್ರಮುಖ ಆಕರ್ಷಣೆ ಎನ್ನಬಹುದು. ಕಳೆದ ಐದು ವರ್ಷದಿಂದ ನಾಯಕಿ ಮೊದಲಾದ ಪಾತ್ರಗಳಿಂದ ಧಾರಾವಾಹಿ ರಂಗದಲ್ಲಿ ಸಕ್ರಿಯಳಾಗಿದ್ದೇನೆ. ಒಟ್ಟು ಸುಮಾರು 20ರಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದೇನೆ. ಮುಂದೆ ಖಳನಾಯಕಿಯ ಪಾತ್ರ ನಿರ್ವಹಿಸಬೇಕು ಎಂಬ ಆಕಾಂಕ್ಷೆಯಿದೆ.
ಸ್ವಂತ ಮನೆಯ ಒಳಗೆ
ನಾನು ವಿವಾಹಿತೆ. ನನ್ನ ಪತಿ ವಿಜಯ್ ಖಾಸಗಿ ಕೆಲಸದಲ್ಲಿದ್ದಾರೆ. ನನಗೆ ದೊರಕುವ ಪಾತ್ರಗಳಷ್ಟು ವಯಸ್ಕ ಮಹಿಳೆ ನಾನಲ್ಲ. ಅದ್ಯಾಕೋ 35 ದಾಟಿದ ವಯಸ್ಸಿನ ಪಾತ್ರಗಳೇ ನನಗೆ ದೊರೆಯುತ್ತ್ತಿವೆ. ಹೊಸ ಬಾಳಿಗೆ ನೀ ಜೊತೆಯಾದೆ ಎಂಬ ಈಟೀವಿಯ ಧಾರಾವಾಹಿಯಲ್ಲಿಯೂ ನಲವತ್ತರ ಮಹಿಳೆಯಾಗಿ ನಟಿಸಿದ್ದೆ. ಒಂದು ರೀತಿಯಲ್ಲಿ ಛಾಲೆಂಜಿಂಗ್ ಅನಿಸಿದರೂ ಬ್ರಾಂಡ್ ಆಗಲು ಇಷ್ಟವಿಲ್ಲ!
= ಶಶಿಕರ ಪಾತೂರು
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.