ಒಟ್ಟಾರೆ ಯಾತನೆ
ಭೋಜರಾಜ ಸಭೆ ಕಾಳಿದಾಸನ ಕವಿತ್ವದಿಂದ ರಂಜಿಸುತ್ತಿತ್ತು ಎಂದು ನಮಗೆ ಗೊತ್ತಷ್ಟೆ. ಆದರೆ ಕಾಳಿದಾಸನಿಗೆ ಸ್ವಲ್ಪ ಹೊರಚಾಳಿ. ಹೀಗಾಗಿ ರಾಜನ ಆಸ್ಥಾನಕ್ಕೆ ತಡವಾಗಿ ಹೋಗುವುದು, ಹೊಗದೆ ಇರುವುದು ಅಥವಾ ಬೇಗನೆ ಹೊರಡುವುದು ಮಾಡುತ್ತಿದ್ದ. ಇದರಿಂದ ರೋಸಿಹೋದ ರಾಜ ಒಮ್ಮೆ ತುಂಬಿದ ಆಸ್ಥಾನದಲ್ಲಿ ಹೇಳಿಬಿಟ್ಟ: 'ನಾದೃಷ್ಟೇನ ಚ ದೃಷ್ಟೇನ ಭವತಾ ವಿದ್ಯತೇ ಸುಖಮ್' (ನಿನ್ನನ್ನು ಕಂಡರೂ ಒಂದೇ, ಕಾಣದಿದ್ದರೂ ಒಂದೇ, ಸುಖವಿಲ್ಲ).
ಕಾಳಿದಾಸ ಬಿಡುವವನೆ? ರಾಜ ಹೆಣೆದ ಎರಡು ಸಾಲುಗಳಿಗೆ ತನ್ನದೇ ಎರಡು ಸಾಲು ಸೇರಿಸಿ ಅದಕ್ಕೆ ಬೇರೆಯದೇ ಅರ್ಥ ಕಟ್ಟಿದ.
ಅದೃಷ್ಟೇ ದರ್ಶನೋತ್ಕಂಠಾ
ದೃಷ್ಟೇ ವಿಶ್ಲೇಷಭೀರುತಾ
ನಾದೃಷ್ಟೇನ ಚ ದೃಷ್ಟೇನ
ಭವತಾ ವಿದ್ಯತೇ ಸುಖಮ್
ಬಹುದಿನಗಳ ಬಳಿಕ ಬಂದು ಸೇರಿದ ನಲ್ಲನನ್ನು ಕಂಡು ನಲ್ಲೆ ಆತನಲ್ಲಿ ಹೇಳುತ್ತಾಳೆ: ನೀನು ಕಣ್ಣೆದುರು ಇಲ್ಲದಿದ್ದರೆ ನಿನ್ನನ್ನು ಕಾಣುವ ತವಕ. ನೀನು ಕಣ್ಣೆದುರು ಬಂದರೆ ಎಷ್ಟು ಹೊತ್ತಿಗೆ ಅಗಲುವೆಯೋ ಎಂಬ ಆತಂಕ. ಅಂತೂ ನಿನ್ನನ್ನು ಕಂಡರೂ ಸುಖವಿಲ್ಲ, ಕಾಣದಿದ್ದರೂ ಸುಖವಿಲ್ಲ.
ನಿಜ ತಾನೆ? ಉತ್ಕಂಠ ಪ್ರೀತಿಯ ಸೆರೆಯಲ್ಲಿರುವ ಪ್ರೇಮಿಗಳು ಹತ್ತಿರವೇ ಇದ್ದರೂ ದೂರವಾಗಬೇಕಲ್ಲಾ ಎಂದು ಪೇಚಾಡುತ್ತಿರುತ್ತಾರೆ. ದೂರವಿದ್ದರಂತೂ ಹೇಳುವುದೇ ಬೇಡ. ಇದನ್ನೇ ಮಧುರಯಾತನೆ ಎಂದಿರಬೇಕು ನಮ್ಮ ಕವಿಗಳು. ಈ ಯಾತನೆಗೆ ಕೊನೆಯೇ ಇಲ್ಲ. ಮದುವೆಯಾದರೆ, ಯಾಕಿನ್ನೂ ದೂರವಾಗಲಿಲ್ಲ ಎಂಬ ಯಾತನೆ!ಟಿ
= ಹರಿಹರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.