ಕಾಲಿಫ್ಲವರ್ ಬಾತ್
ಕಾಲಿಫ್ಲವರ್(ಹೂಕೋಸು) ತಿನ್ನುವುದರಿಂದ ಹೃದಯ ಸುಸ್ಥಿತಿಯಲ್ಲಿರುತ್ತದೆ ಹಾಗೂ ಪಾರ್ಶ್ವವಾಯುವಿನಿಂದ ದೂರವಿಡುತ್ತದೆ. ರೋಗನಿರೋಧಕ ಶಕ್ತಿ ವೃದ್ಧಿಗೆ ಹೂಕೋಸು ಸಹಾಯಕ. ವಿಟಮಿನ್ 'ಸಿ' ಹೆಚ್ಚಿರುವ ಹೂಕೋಸು ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣ ಹೊಂದಿದೆ. ಇದರ ಪಲಾವ್ ಅತ್ಯಂತ ರುಚಿ ಹಾಗೂ ತಯಾರಿಸಲು ಬಲು ಸುಲಭ.
ಬೇಕಾಗುವ ಸಾಮಗ್ರಿಗಳು: ಬಾಸ್ಮತಿ ಅಕ್ಕಿ 1 ಕಪ್, ಹೂಕೋಸು 1, ಬಟಾಣಿ 1/2 ಕಪ್, ಈರುಳ್ಳಿ 1, ಟೊಮೆಟೊ 3, ಶುಂಠಿ-ಬೆಳ್ಳುಳ್ಳಿ ಪೇಸ್ಟ್ 2 ಚಮಚ, ಹಸಿಮೆಣಸಿನಕಾಯಿ 6, ಅರಿಸಿನ ಪುಟಿ 1/2 ಚಮಚ, ಅಚ್ಚ ಖಾರದಪುಡಿ 1 ಚಮಚ, ಜೀರಿಗೆಪುಡಿ 1 ಚಮಚ, ಗರಂ ಮಸಾಲ 1 ಚಮಚ, ಮೆಣಸಿನಪುಡಿ 1/2 ಚಮಚ, ಚಕ್ಕೆ ಸ್ವಲ್ಪ, ಏಲಕ್ಕಿ 2, ಸ್ವಲ್ಪ ಎಣ್ಣೆ, ನೀರು 2 ಕಪ್.
ಮಾಡುವ ವಿಧಾನ: ಹೂಕೋಸು, ಈರುಳ್ಳಿಯನ್ನು ಹೆಚ್ಚಿಟ್ಟುಕೊಳ್ಳಿ. ಬಾಣಲೆಯ ಎಣ್ಣೆ ಕಾದ ನಂತರ ಜೀರಿಗೆ, ಬೇ ಲೀಫ್, ಚಕ್ಕೆ, ಏಲಕ್ಕಿಯನ್ನು ಹಾಕಿ ಹುರಿಯಿರಿ. ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ 3-4 ನಿಮಿಷಗಳವರೆಗೆ ಸಣ್ಣ ಉರಿಯಲ್ಲಿ ಹುರಿಯಿರಿ. ನಂತರ ಹೆಚ್ಚಿಟ್ಟ ಹೂಕೋಸು, ಬಟಾಣಿ, ಹಸಿಮೆಣಸಿನಕಾಯಿ ಹಾಕಿ 4 ನಿಮಿಷ ಹುರಿಯಿರಿ. ಇದಕ್ಕೆ ಹೆಚ್ಚಿದ ಟೊಮೆಟೊ, ಅರಿಸಿನಪುಡಿ, ಅಚ್ಚಖಾರದ ಪುಡಿ, ಜೀರಿಗೆಪುಡಿ, ಪೆಪ್ಪರ್ ಪುಡಿ, ಗರಂ ಮಸಾಲ ಪುಡಿ ಹಾಕಿ ಕೆಲವು ನಿಮಿಷಗಳವರೆಗೆ ಬೇಯಿಸಿ. ನಂತರ ತೊಳೆದಿಟ್ಟ ಬಾಸ್ಮತಿ ಅಕ್ಕಿಯನ್ನು ಸೇರಿಸಿ ಮಿಕ್ಸ್ ಮಾಡಿ, ಉಪ್ಪು, ನೀರನ್ನು ಸೇರಿಸಿ ಮುಚ್ಚಳ ಮುಚ್ಚಿ 10-12 ನಿಮಿಷಗಳವರೆಗೆ ಸಣ್ಣ ಉರಿಯಲ್ಲಿ ಬೇಯಿಸಿ. ಈಗ ಪಲಾವ್ ಸವಿಯಲು ಸಿದ್ಧ.