ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಚೈಲ್ಡ್ ಫೇಸ್

Mainashree
Updated On : 12 May 2014, 11:41 am

ಫೇಸ್‌ಬುಕ್‌ನಲ್ಲಿ ಚೈಲ್ಡ್ ಫೇಸ್‌ಗಳು ಹೆಚ್ಚಾಗುತ್ತಿವೆ!
ಹೌದು. ಕೇಂದ್ರ ಸರ್ಕಾರ ಹಾಗೂ ಫೇಸ್‌ಬುಕ್‌ನ ನಿಯಂತ್ರಣದ ಹೊರತಾಗಿಯೂ ಭಾರತದ ಮಹಾನಗರಗಳಲ್ಲಿರುವ ಶೇ.73ರಷ್ಟು ಮಕ್ಕಳು ಫೇಸ್‌ಬುಕ್‌ನಲ್ಲಿದ್ದಾರೆ. ಕೆಲವು ಮಕ್ಕಳಿಗೆ ಅಪ್ಪ-ಅಮ್ಮಂದಿರೇ ಅಕೌಂಟ್ ಮಾಡಿಕೊಟ್ಟರೆ, ಇನ್ನು ಕೆಲ ಮಕ್ಕಳು ತಮ್ಮ ಅಪ್ಪ-ಅಮ್ಮಂದಿರಿಗೆ ಫೇಸ್‌ಬುಕ್ ಅಕೌಂಟ್ ಮಾಡಿಕೊಡುತ್ತಿದ್ದಾರೆ. ಆದರೆ ಇದರಿಂದ ಸಣ್ಣ ಮಕ್ಕಳು ತಮ್ಮ ವಯಸ್ಸಿನ ಮಿತಿ ಮೀರಿದ ಪ್ರಪಂಚದ ಅಮಲಿನಲ್ಲಿ ತೇಲಾಡುತ್ತಿದ್ದಾರೆ ಎನ್ನುವ ಅಂಶ ಬಹಿರಂಗವಾಗಿದೆ.
ಭಾರತದಲ್ಲಿ ಮಾತ್ರವಲ್ಲದೆ ವಿಶ್ವದೆಲ್ಲೆಡೆ ಯಾವುದೇ ಸಾಮಾಜಿಕ ತಾಣಗಳಲ್ಲಿ 13 ವರ್ಷದೊಳಗಿನ ಮಕ್ಕಳು ಈ ಅಂತರ್ಜಾಲ ಜಗತ್ತಿಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಅಮೆರಿಕದಂತಹ ಮುಂದುವರಿದ ದೇಶಗಳಲ್ಲಿಯೂ ಇದರ ಮೇಲೆ ಬ್ಯಾನ್ ಇದೆ. ಆದರೆ ಜಗತ್ತಿನೆಲ್ಲೆಡೆ 56 ಲಕ್ಷಕ್ಕೂ ಅಧಿಕ ಮಕ್ಕಳು ಆನ್‌ಲೈನ್‌ಲ್ಲಿ ವಿಹರಿಸುತ್ತಿದ್ದಾರೆ.
ಕೆಲ ದಿನಗಳ ಹಿಂದೆ ಫೇಸ್‌ಬುಕ್ ಸಹವಾಸ ಬೇಡ ಎಂದು ಮಗುವಿಗೆ ಬುದ್ಧಿವಾದ ಹೇಳಿದ್ದಕ್ಕೆ ನೇಣಿಗೆ ಶರಣಾದ ಆಘಾತಕಾರಿ ವಿಚಾರ ಗಮನಕ್ಕೆ ಬಂದಾಗ ಇಂತಹದೊಂದು ಅಂಶವನ್ನು ಪಾಲಕರಿಗೆ ತಿಳಿಸಬೇಕಾಗಿದ್ದು ಅನಿವಾರ್ಯ ಎನಿಸುತ್ತಿದೆ. ಫೇಸ್‌ಬುಕ್ ಎಂಬ ಫೇಕ್ ಪ್ರಪಂಚದತ್ತ ವಾಲಿರುವ ನಿಮ್ಮ ಮಕ್ಕಳ ಬಗ್ಗೆ ಒಂದು ಕಣ್ಣಿಡಿ, ಇಲ್ಲವಾದಲ್ಲಿ ಬುದ್ಧಿ ಹೇಳಿ ಅಲ್ಲಿಂದ ದೂರ ಮಾಡುವುದು ಒಳಿತು.
ಭಾರತದ ದೆಹಲಿ, ಮುಂಬಯಿ, ಚೆನ್ನೈ, ಬೆಂಗಳೂರು ಸೇರಿದಂತೆ ಟೈಯರ್-1 ಮತ್ತು ಟೈಯರ್-2 ನಗರಗಳಲ್ಲಿ ಅಶೋಮ್ ಎಂಬ ಸಂಸ್ಥೆ ಸಮೀಕ್ಷೆ ನಡೆಸಿದೆ. ಅವರ ಪ್ರಕಾರ 8ರಿಂದ 13 ವಯೋವಾನದ ಶೇ.73ರಷ್ಟು ಮಕ್ಕಳು ಫೇಸ್‌ಬುಕ್ ಅಕೌಂಟ್ ಹೊಂದಿದ್ದಾರೆ. ಇದೇ ಸಮೀಕ್ಷೆ ಹೇಳಿದ ಪ್ರಕಾರ ಇವರ ಅಕೌಂಟ್‌ಗಳ ನಿರ್ವಹಣೆಗೆ ಪಾಲಕರೇ ಸಹಾಯ ಮಾಡುತ್ತಿದ್ದಾರೆ. ಇಂತಹ ಮೂರ್ಖತನವನ್ನು ಅಪ್ಪ ಅಮ್ಮಂದಿರೇ ಮಾಡುತ್ತಿರುವುದು ಆಶ್ಚರ್ಯ ಮೂಡಿಸುತ್ತಿದೆ.
ಫೇಸ್‌ಬುಕ್‌ನ್ನು ಮಕ್ಕಳಿಂದ ದೂರವಿಡಬೇಕು ಎಂದು ಕಾರಣವಿಲ್ಲದೆ ಹೇಳುತ್ತಿಲ್ಲ. 8ರಿಂದ 13ರ ವಯಸ್ಸಿನಲ್ಲಿ ಮಗುವಿನ ಮನಸ್ಸನ್ನು ಕೆಡಿಸುವ ಸಾಕಷ್ಟು ಅಂಶಗಳು ಪೇಸ್‌ಬುಕ್‌ನಲ್ಲಿರುತ್ತವೆ. ಸಣ್ಣ ಮಕ್ಕಳನ್ನು ಸೆಕ್ಸ್‌ಟಿಂಗ್ ಹಾಗೂ ಇತರ ಕಾಮ ಪ್ರಚೋದಕ ವಿಚಾರಗಳಿಗೆ ಕೆಲವರು ಬಳಸಿಕೊಳ್ಳುತ್ತಿದ್ದಾರೆ ಎನ್ನುವುದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಅಂತಹ ವಿಚಾರದಲ್ಲಿ ಮಕ್ಕಳನ್ನು ಪ್ರಚೋದಿಸುವುದು ಹಾಗೂ ಮನಃಪರಿವರ್ತನೆ ಮಾಡುವುದು ತುಂಬ ಸುಲಭ ಎನ್ನುವುದು ಮನಃಶಾಸ್ತ್ರಜ್ಞರ ಅಭಿಮತ ಕೂಡ.
ಈ ವಯಸ್ಸಿನಲ್ಲಿ ಅಂತರ್ಜಾಲ ಹಾಗೂ ಸಾಮಾಜಿಕ ತಾಣಗಳ ಬಗ್ಗೆ ಒಂದಿಷ್ಟು ಕೌತುಕವನ್ನು ಈ ಮಕ್ಕಳು ಹೊಂದಿರುತ್ತಾರೆ. ಕೆಲ ನಿಯಂತ್ರಣಗಳು ಗೊತ್ತಿರುವ ಕಾರಣದಿಂದ ವಯಸ್ಸನ್ನು ಇವರು ಗೊತ್ತು ಮಾಡುವುದಿಲ್ಲ. ದೊಡ್ಡವರ ಹಾಗೆ ಚಾಟ್ ಮಾಡಲು ಪ್ರಯತ್ನಿಸುತ್ತಾರೆ, ಇದರೊಟ್ಟಿಗೆ ಆ ವಯಸ್ಸಿನಲ್ಲಿ ಮನಸ್ಸನ್ನು ಕೆರಳಿಸುವ ವಿಚಾರದ ಬಗ್ಗೆ ಫೇಸ್‌ಬುಕ್‌ನ ಗೆಳೆಯ, ಗೆಳತಿಯರಿಂದ ವಿಷಯ ತಿಳಿಯುವ ಉತ್ಸಾಹ ತೋರಿಸುತ್ತಾರಂತೆ.
ಈ ಆಘಾತಕಾರಿ ವಿಚಾರವನ್ನು ಫೇಸ್‌ಬುಕ್‌ನ ಗಮನಕ್ಕೆ ತಂದಾಗ ತನ್ನಿಂದ ನಿಯಂತ್ರಣ ಸಾಧ್ಯವಿಲ್ಲ ಎಂದು ಫೇಸ್‌ಬುಕ್ ಆಡಳಿತ ಮಂಡಳಿ ಕೈ ಎತ್ತಿದೆ. ವಯಸ್ಸನ್ನು ಸುಳ್ಳಾಗಿ ದಾಖಲಿಸಿ ಮಕ್ಕಳು ಅಕೌಂಟ್ ರಚಿಸಿಕೊಂಡರೆ ಸಂಸ್ಥೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಸ್ಪಷ್ಟಪಡಿಸಿದೆ.
ರ್ಯಾಂಡಮ್ ಪರೀಕ್ಷೆ
ಭಾರತ, ಅಮೆರಿಕ ಸೇರಿದಂತೆ ವಿಶ್ವದ ನಾನಾ ದೇಶಗಳಲ್ಲಿ ಇದೊಂದು ಸಮಸ್ಯೆಯಾಗಿ ಪರಿಣಮಿಸುತ್ತಿರುವ ಬೆನ್ನಲ್ಲೇ ಇಂತಹ ಅಕೌಂಟ್‌ಗಳನ್ನು ದುರ್ಬೀನು ಹಾಕಿ ಹುಡುಕಿ ಡಿಲೀಟ್ ಅಥವಾ ಡಿಆ್ಯಕ್ಟಿವೇಟ್ ಮಾಡುವ ಕೆಲಸವನ್ನು ಫೇಸ್‌ಬುಕ್ ಮಾಡುತ್ತಿದೆಯಂತೆ. ಸುಮಾರು 8 ಲಕ್ಷ ಈ ರೀತಿಯ ಕಾನೂನು ಬಾಹಿರ ಅಕೌಂಟ್‌ಗಳನ್ನು ಫೇಸ್‌ಬುಕ್ ಕಂಡುಹಿಡಿದು, ಡಿಲೀಟ್ ಮಾಡಿದೆಯಂತೆ. ಆದರೆ ಇದನ್ನು ಹೇಗೆ ಕಂಡುಹಿಡಿಯಲಾಗುತ್ತಿದೆ ಎಂಬ ಗುಟ್ಟನ್ನು ಫೇಸ್‌ಬುಕ್ ಬಿಟ್ಟುಕೊಟ್ಟಿಲ್ಲ. ಅಂತಿಮವಾಗಿ ಕಂಡುಹಿಡಿಯಲಿರುವ ಒಂದು ಮಾರ್ಗದ ಗುಟ್ಟನ್ನು ಹೇಳಿಬಿಟ್ಟರೆ ಕಂಪನಿ ಅಸಹಾಯಕರಾಗಬೇಕಾಗುತ್ತದೆ ಎನ್ನುವುದು ಫೇಸ್‌ಬುಕ್‌ನ ಅಭಿಪ್ರಾಯವಾಗಿದೆ.

ಪಾಲಕರೇ ಎಚ್ಚರ, ಇತ್ತ ಗಮನ ನೀಡಿ!
=     ನಿಮ್ಮ ಮಕ್ಕಳು ಶೈಕ್ಷಣಿಕ ಮತ್ತು ಗೇಮಿಂಗ್ ಕಾರಣಕ್ಕಾಗಿ ಮಾತ್ರ ಕಂಪ್ಯೂಟರ್, ಲ್ಯಾಪ್‌ಟಾಪ್ ಅಥವಾ ಮೊಬೈಲ್ ಬಳಸುತ್ತಿದ್ದಾರೆಯೇ ಎಂಬುದನ್ನು ಪದೇಪದೆ ಖಾತ್ರಿ ಮಾಡಿಕೊಳ್ಳಿ.
=     ಮಕ್ಕಳು ಈ ಗೆಜೆಟ್‌ಗಳನ್ನು ಬಳಸುತ್ತಿದ್ದಾಗ ಆಗಾಗ ಕಣ್ಣು ಹಾಕುತ್ತಿರಿ.
=     ಯಾವುದೇ ಕಾರಣಕ್ಕೂ ಸಣ್ಣ ವಯಸ್ಸಿನಲ್ಲಿ ಸಾಮಾಜಿಕ ತಾಣಗಳ ನಂಟು ಬೆಳೆಯದಂತೆ ನೋಡಿಕೊಳ್ಳಿ.
=     ಯಾವುದೇ ಪ್ರೀತಿ ಅಥವಾ ಕನಿಕರದಿಂದ ಸಾಮಾಜಿಕ ತಾಣಕ್ಕೆ ಪ್ರವೇಶಿಸಲು ಅವಕಾಶ ನೀಡಿದರೆ ಅದರಿಂದ ಹೊರತರಲು ನಿಮ್ಮಿಂದಲೂ ಸಾಧ್ಯವಿಲ್ಲ.
=     ಸಾಮಾಜಿಕ ತಾಣಗಳು ಮಕ್ಕಳ ಮುಗ್ಧ ಮನಸನ್ನು ಕೆಡಿಸುವ ಸಾಧ್ಯತೆಯಿರುತ್ತದೆ.
=     ಆನ್‌ಲೈನ್ ಪ್ರಪಂಚದಲ್ಲಿ ಮಕ್ಕಳ ಮನಸ್ಸು ಕೆಡಿಸುವ ಲಕ್ಷಾಂತರ ಕಿಡಿಗೇಡಿಗಳಿದ್ದಾರೆ.
=     ಯಾವುದೇ ಕಾರಣಕ್ಕಾಗಿಯೂ ಮಕ್ಕಳಿಗೆ ಸಾಮಾಜಿಕ ತಾಣಗಳ ಅಗತ್ಯವಿಲ್ಲ ಎನ್ನುವುದನ್ನು ತಿಳಿ ಹೇಳಿ.
=     ಕೆಲವೊಮ್ಮೆ ದೊಡ್ಡವರ ಹೆಸರಿನಲ್ಲಿ ಅಕೌಂಟ್ ರಚಿಸಿ ನಿರ್ವಹಿಸುತ್ತಿರುವ ಸಾಧ್ಯತೆಯಿರುತ್ತದೆ, ಇದರ ಬಗ್ಗೆ ಎಚ್ಚರ ವಹಿಸಿ.
=     ಮಕ್ಕಳ ಕಂಪ್ಯೂಟರ್ ಅಥವಾ ಅಂತರ್ಜಾಲ ಬಳಕೆಯನ್ನು ಆದಷ್ಟು ಓಪನ್ ಸ್ಪೇಸ್‌ನಲ್ಲಿಯೇ ವ್ಯವಸ್ಥೆ ಮಾಡಿಕೊಡಿ, ಇದರಿಂದ ಸಾಮಾಜಿಕ ತಾಣಗಳ ಬಳಕೆಯಿಂದ ದೂರವಿಡಬಹುದು.
=     ಕೆಲ ಮಕ್ಕಳು ಗೇಮಿಂಗ್‌ಗಾಗಿ ಫೇಸ್‌ಬುಕ್ ಬೇಕೆಂಬ ಹಠ ಹಿಡಿಯುತ್ತಾರೆ, ಇದೇ ಗೇಮ್‌ಗಳು ಬೇರೆ ವೇದಿಕೆಯಲ್ಲಿ ಏಲ್ಲಿ ಸಿಗುತ್ತವೆ ಎನ್ನುವುದನ್ನು ಹುಡುಕಿಕೊಡಿ, ಹೊರತಾಗಿ ಫೇಸ್‌ಬುಕ್ ಸಹವಾಸ ಮಾಡಿಸಬೇಡಿ.
=     ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಮಕ್ಕಳೊಂದಿಗೆ ರಾಜಿ ಮಾಡಿಕೊಳ್ಳಬೇಡಿ.


= ರಾಜೀವ್ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments