ಆಪ್ಯಾಯಮಾನ
ಆತ ಇಪ್ಪತ್ತರ ತರುಣ. ಇನ್ನೂ ಟೆಕ್ಕಿ ಪ್ರಪಂಚಕ್ಕೆ ತೆರೆದುಕೊಂಡಿರದವನು. ಆದರೆ ಸೋಷಿಯಲ್ ನೆಟ್ವರ್ಕ್ಗಳ ಬಗೆಗಿನ ಮಾತು, ರೋಚಕ ಕತೆಗಳನ್ನು ಕೇಳಿ ಕುತೂಹಲಿಯಾದವನು. ತಾನು ಕೂಡಿಟ್ಟ ಹಣಕ್ಕೊಂದಿಷ್ಟು ಗೆಳೆಯನಿಂದ ಪಡೆದ ಕೈಸಾಲ ಸೇರಿಸಿಕೊಂಡು ಸೀದಾ ಮೊಬೈಲ್ ಅಂಗಡಿಗೆ ಧಾವಿಸಿದ್ದಾನೆ. ಒಂದು 'ವಾಟ್ಸಪ್ ಫೋನ್ ಬೇಕು. ಎಷ್ಟಾಗತ್ತೆ?' ಅಂತ ಕೇಳಿದ್ದಾನೆ. ಅಂಗಡಿಯವರು ತಮ್ಮ ನಗು ತಡೆಹಿಡಿದು, ಅವನಿಗೆ ವಾಟ್ಸಪ್ ಫೋನ್ ಅಂತ್ಯಾವುದೂ ಇಲ್ಲವೆಂದು ಹೇಳಿ, ವಾಟ್ಸ್ಆ್ಯಪ್ ಅಂದರೇನು ಎತ್ತ ಎಂಬುದನ್ನು ತಿಳಿಸಿಕೊಟ್ಟು ಅವನ ಆಸೆ ಅಗತ್ಯಗಳಿಗೆ ಅಗತ್ಯವಾದ ಫೋನ್ ಸೂಚಿಸಿದ್ದಾರೆ. ಇದು ನಿಜ ಘಟನೆ.
ಯಾಕೀ ಘಟನೆಯ ಪ್ರಸ್ತಾಪ ಅಂದರೆ, ಸ್ಮಾರ್ಟ್ಫೋನ್ಗಳು ಪ್ರಪಂಚಾದ್ಯಂತ ವೈರಲ್ ಆಗುತ್ತಿದೆ. ಅದರಲ್ಲೂ ಹದಿಹರೆಯದವರನ್ನು ಸ್ಮಾರ್ಟ್ಫೋನ್ಗಳು ಅಡಿಕ್ಷನ್ನಿನೆಡೆಗೆ ಕರೆದೊಯ್ಯುತ್ತಿವೆ. ಸರಿ..ಸ್ಮಾರ್ಟ್ಫೋನ್ ಯಾಕೆ ಹೀಗೆ ಸೆಳೆಯುತ್ತಿದೆ?
ಗಮನಿಸಿ ನೋಡಿ. ಸ್ಮಾರ್ಟ್ಫೋನ್ನಲ್ಲಿ ಕ್ಯಾಮೆರಾ, ಮ್ಯೂಸಿಕ್ಪ್ಲೇಯರ್, ವೀಡಿಯೋಪ್ಲೇಯರ್ ಮುಂತಾಗಿ ಸಾವಿರಾರು ರಂಜನೀಯ ಹಾಗೂ ಉಪಯುಕ್ತ ಅಪ್ಲಿಕೇಶನ್ಗಳು ಲಭ್ಯವಿದ್ದರೂ ಸ್ಮಾರ್ಟ್ಫೋನ್ ತಗೊಳ್ಳುವ ಪ್ರತಿಯೊಬ್ಬನೂ ಎಲ್ಲಕ್ಕಿಂತ ಮೊದಲು ಪ್ಲೇಸ್ಟೋರ್ಗೆ ಹೋಗಿ ಫೇಸ್ಬುಕ್, ಟ್ವಿಟ್ಟರ್, ವಾಟ್ಸ್ ಆ್ಯಪ್, ಟೆಲಿಗ್ರಾಂ, ಹೈಕ್, ವೀ ಚಾಟ್, ಲೈನ್ ಥರದ ಅಪ್ಲಿಕೇಶನ್ಗಳನ್ನೇ ಮೊದಲು ಬಸಿದುಕೊಳ್ಳುತ್ತಾನೆ! ಸಾಮಾಜಿಕ ತಾಣ ಎಂಬ ರಂಗೀನ್ ಹುಸಿಪ್ರಪಂಚದ ಮಾಯೆ ಇದು. ಇಲ್ಲಿ ಗೆಳೆತನಗಳು ಸಲೀಸು. ಸಂಬಂಧಗಳು ಸಲೀಸು. ಅಪರಿಚಿತರೊಂದಿಗೆ ಮಾತುಕತೆ ಸಲೀಸು. ಸುಳ್ಳಿನ ಸರಮಾಲೆ ಹೆಣೆಯುವುದು ಸಲೀಸು. ಎಲ್ಲವೂ ಸಲೀಸು ಸಲೀಸು! ಫೇಸ್ಬುಕ್ಕಲ್ಲಿ ಕಾಣುವ ಫೋಟೋ ಅಥವಾ ತಮ್ಮ ಬಗ್ಗೆ ಅವರು ನೀಡಿರುವ ವಿವರವೊಂದನ್ನೇ ನಂಬಿಕೊಂಡು ತಮ್ಮ ಸುಳ್ಳುಗಳನ್ನ ನಂಬಿಸಲು ಇನ್ನೊಬ್ಬರಿಗೆ ಫ್ರೆಂಡ್ ಆಗುತ್ತಾರೆ ಇಲ್ಲಿ. ಅಲ್ಲಿಂದ ಶುರುವಾಗುವ ಸುಳ್ಳಿನ ಸರಮಾಲೆ, ಕೆಲವೊಮ್ಮೆ ವಾರದೊಳಗೆ, ಒಂದೇ ದಿನದಲ್ಲಿ, ಅಥವಾ ಕೆಲವೇ ನಿಮಿಷಗಳಲ್ಲಿ ತಮ್ಮ ಫೋನ್ ನಂಬರ್ ವಿನಿಮಯದ ತನಕ ಮುಟ್ಟುತ್ತದೆ. ಅದು ವಾಟ್ಸ್ಆ್ಯಪ್ ಥರದ ಖಾಸಗಿ ತಾಣಗಳಿಗೆ ಪ್ರವೇಶ ನೀಡುತ್ತದೆ. ಆಗ ಶುರುವಾಗುತ್ತದೆ ಸಂಬಂಧ ಕಟ್ಟಿಕೊಳ್ಳುವ ಹುಕಿ!
ಹಾಗಾದರೆ ಸಂಬಂಧ ಕುದುರಿಸೋದು ಇಷ್ಟೊಂದು ಸುಲಭವಾ? ಹೌದು. ನೋಡದೆಯೇ ಪ್ರೀತಿಸಿಕೊಳ್ಳುವ ಅಥವಾ ಹಾಗಂತ ನಂಬಿಕೊಳ್ಳುವ ಲೋಕ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚು. ಭಾವನಾತ್ಮಕವಾಗಿ ನಿಜಕ್ಕೂ ಅದೊಂದು ಅದ್ಭುತಪ್ರೇಮ ಕಾವ್ಯ. ಆದರೆ ಒಮ್ಮೆ ಯೋಚಿಸಿ, ಅದೆಷ್ಟು ಸೇಫ್? ಹೀಗೆ ಹುಟ್ಟಲು ಹಪಹಪಿಸುವ ಪ್ರತಿ ಸಂಬಂಧವೂ ಅಷ್ಟೊಂದು ಪ್ರಾಮಾಣಿಕವಾಗಿ ಇರುತ್ತದೆಯೇ?
ಅಲ್ಲೊಂದು ಇಲ್ಲೊಂದು ಇಂಟರ್ನೆಟ್ ಲವ್ಸ್ಟೋರಿಗಳು ನೆಟ್ಟಗಿರೋದನ್ನು ಹೊರತು ಪಡಿಸಿದರೆ ನಾವು ಪ್ರತಿ ದಿನ ನೋಡುವುದು ಸಾಮಾಜಿಕ ತಾಣದ ಸಂಬಂಧಗಳು ಮಾಡುತ್ತಿರುವ ಅನಾಹುತಗಳನ್ನೇ! ಇದು ಕೊಲೆ, ವಂಚನೆ, ಅನೈತಿಕ ಸಂಬಂಧ, ಆರ್ಥಿಕ ವಂಚನೆಗಳಿಗೆ ಮೂಲವಾಗುತ್ತಿರುವ ಉದಾಹರಣೆಗಳೇ ಹೆಚ್ಚು. ಆ್ಯಪ್ ಸಂಬಂಧಗಳು ಮನುಷ್ಯನನ್ನು ಭಾವನಾತ್ಮಕವಾಗಿಯೂ ಮಾನಸಿಕವಾಗಿಯೂ ಕೊನೆಗೆ ಆರ್ಥಿಕವಾಗಿಯೂ ಘಾಸಿಗೊಳಿಸುತ್ತಿವೆ. ಆದರೆ ಅದಕ್ಕೆ ಅಡಿಕ್ಟ್ ಆಗಿ ಹೋಗಿರೋ ವ್ಯಸನಿಗಳು ಅದರಿಂದ ಆಚೆ ಬರೋ ಬದಲು ಕಳಕೊಂಡಲ್ಲೇ ಹುಡುಕಬೇಕು ಎಂಬಂತೆ ಮತ್ತೆ ಮತ್ತೆ ಅಲ್ಲೇ ಹೊಸ ಸಂಬಂಧಕ್ಕೆ ಹೊಸ ಮೋಸಕ್ಕೆ ಅಣಿಯಾಗುತ್ತಿದ್ದಾರೆ.
ಜಾಹೀರಾತು ಸಂಸ್ಥೆಯೊಂದರ 2013ರ ಸಮೀಕ್ಷೆಯ ಪ್ರಕಾರ ಆ್ಯಪ್ ಉಪಯೋಗಿಸೋವ್ರ ಸಂಖ್ಯೆಯಲ್ಲಿ ಭಾರತವೇ ಮೊದಲ ಸ್ಥಾನ ಗಳಿಸಿದೆ. ಅದರಲ್ಲಿ ಶೇ.52ರಷ್ಟು ಮಂದಿ ಹದಿನೆಂಟರಿಂದ ಇಪ್ಪತ್ನಾಲ್ಕರ ನಡುವಿನವರೇ. ಫೆಬ್ರವರಿಗೆ ಹತ್ತು ವರ್ಷ ಪೂರೈಸಿದ ಫೇಸ್ಬುಕ್ ಸ್ವತಃ ಗಮನಿಸಿರೋ ಹಾಗೆ, ಜನ ಫೇಸ್ಬುಕ್ನಿಂದ ಇನ್ಸ್ಟಾಗ್ರಾಮ್, ವಾಟ್ಸ್ ಆ್ಯಪ್, ವೀಚಾಟ್ ಹೀಗೆ ಬರೀ ಚಾಟ್ ಮಾಡುವ, ಫೋಟೋ ಶೇರ್ ಮಾಡುವ ಅಪ್ಲಿಕೇಶನ್ಗಳತ್ತ ವಲಸೆ ಹೋಗುತ್ತಿದ್ದಾರೆ.
ಅಪರಿಚಿತರನ್ನು ಭಾವನಾತ್ಮಕವಾಗಿ ಸೋಲಿಸಿ ಸೆಳೆಯುವುದು ಇಲ್ಲಿ ಅತಿ ಸುಲಭ. ಇಲ್ಲಿ ನಂಬಿಸುವುದು ಬಹಳ ಆಸಾನು. ನೀವು ಹಾಕಿದ ಇನ್ಯಾರದೋ ಫೋಟೋವನ್ನು ನಿಮ್ಮದೆಂದು ನಂಬಿಸಬಹುದು. ನಿಮ್ಮ ಆರ್ಥಿಕ ಸ್ಥಾನಮಾನ, ವ್ಯವಹಾರ, ವಿದ್ಯೆ, ನೀವಿರುವ ಊರು, ಮನೆ ಎಲ್ಲದರ ಬಗ್ಗೆ ಸುಳ್ಳು ಹೇಳಿ ನಂಬಿಸಬಹುದು. ಹೀರೋ ಆಗಿ ಬಿಂಬಿಸಿಕೊಂಡು ದೋಚಿ, ಮರುಕ್ಷಣದಲ್ಲಿ ಆ ಆ್ಯಪ್ನಿಂದ ಹೊರಬಂದುಬಿಟ್ಟರೆ ಮುಗಿದೇ ಹೋಯ್ತು. ನೀವ್ಯಾರೋ ಮೋಸ ಹೋದ ಅವರ್ಯಾರೋ!
ಅಪಾಯಕ್ಕೆ ಮುನ್ನ ಉಪಾಯ
ಹಾಗಾದರೆ ಈ ಥರ ಆ್ಯಪ್ ಸಂಬಂಧಗಳು ತಂದೊಡ್ಡುವ ಅಪಾಯಗಳಿಗೆ ಪರಿಹಾರ ಏನು? ಒಂದಷ್ಟು ಎಚ್ಚರಿಕೆಗಳು ಅಗತ್ಯ.
= ತಕ್ಷಣಕ್ಕೆ ಆನ್ಲೈನ್ ಗೆಳೆತನವನ್ನು ಮದುವೆಗೋ-ದೈಹಿಕ ಸಂಬಂಧದ ಲೆವೆಲ್ಲಿಗೋ ತಂದುಕೊಳ್ಳಬೇಡಿ. ಮಾತಿನಲ್ಲಿ ಆದಷ್ಟೂ ಅಂತರ ಕಾಯ್ದುಕೊಳ್ಳಿ.
= ಆನ್ಲೈನಲ್ಲಿ ಕಾಣುವ ವ್ಯಕ್ತಿಯ ಫೋಟೋಗಳನ್ನು ನೋಡಿ ಮಾರುಹೋಗಬೇಡಿ. ಅದು ಫೋಟೋಶಾಪ್ ಕೈಚಳಕವಿರಬಹುದು. ಫೋಟೋ ಇನ್ಯಾರದ್ದೋ ಆಗಿರಬಹುದು. ಫೋಟೋದಲ್ಲಿ ಆತನ ದೈಹಿಕ ನ್ಯೂನತೆಗಳೂ ಗೊತ್ತಾಗುವುದಿಲ್ಲ.
= ಆನ್ಲೈನ್ನಲ್ಲಿ ಗೆಳೆಯರಾದ ವ್ಯಕ್ತಿಯನ್ನು ಭೇಟಿಯಾಗಲು ಒಬ್ಬರೇ ಹೋಗದಿರುವುದು ಸೂಕ್ತ. ಹೋಗುವ ಮೊದಲು ಮನೆಯವರಿಗೆ ಮಾಹಿತಿ ನೀಡುವುದು ಬೆಟರ್. ಜೊತೆಯಲ್ಲಿ ಹತ್ತಿರದ ಗೆಳೆಯರನ್ನು ಕರೆದುಕೊಂಡು ಹೋಗುವುದು ಉತ್ತಮ.
= ಇತ್ತೀಚೆಗೆ ವಿಚ್ಛೇದಿತನಾದೆ ಅಥವಾ ಹೆಂಡತಿಯನ್ನು ಕಳೆದುಕೊಂಡೆ ಅಥವಾ ಪ್ರೀತಿಯಲ್ಲಿ ಮೋಸ ಹೋದೆ ಎನ್ನುವ ಗಂಡಸರನ್ನು ಭೇಟಿಯಾಗುವುದೇ ಆದಲ್ಲಿ ಅತಿ ಎಚ್ಚರ ಮುಖ್ಯ. ಅಲ್ಲಿ ಅಪಾಯದ ಸಾಧ್ಯತೆ ಹೆಚ್ಚು.
= ಮೊಬೈಲಲ್ಲಿ ಬರುವ ಹಲವು ಆ್ಯಪ್ಗಳು ಕೇವಲ ತಾತ್ಕಾಲಿಕ ಸಂಬಂಧ ಕಲ್ಪಿಸುತ್ತವೆ. ನಿಮ್ಮ ಮಾಹಿತಿಗಳು ಹಲವರ ನಡುವೆ ಹಂಚಿ ಹೋಗುವ ಸಾಧ್ಯತೆಗಳಿವೆ. ಅಂಥ ಆ್ಯಪ್ಗಳಿಂದ ದೂರವಿರಿ. ಎಲ್ಲ ಥರದ ಆ್ಯಪ್ಗಳಲ್ಲಿ ನಿಮ್ಮ ಫೋನ್ ನಂಬರ್ ಹಾಗೂ ಇತರ ಮಾಹಿತಿ ಹಂಚಿಕೊಂಡಾಗ ದುರುಪಯೋಗ ಆಗುವ ಸಾಧ್ಯತೆ ಇದೆ.
= ನವೀನ್ ಸಾಗರ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.