ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಗಂಡಾಂತರ

Mainashree
Updated On : 13 May 2014, 12:51 pm

ಅವಳು...
ನನಗಾಗ 10 ವರ್ಷ. ಅವನ ಪಕ್ಕದಲ್ಲಿ ಮಂಟಪದಲ್ಲಿ ನನ್ನನ್ನು ಕೂರಿಸುವಾಗ ಅಪ್ಪನ ಪಕ್ಕ ಕುಳಿತಿದ್ದೀನೋ ಎಂದೊಮ್ಮೆ ಓರೆಗಣ್ಣು ಹಾಯಿಸಿದ್ದೆ. ಗಂಡನನ್ನು ಹಾಗೆಲ್ಲ ತಲೆ ಎತ್ತಿ ನೋಡುವ ಹಾಗಿಲ್ಲ ಎಂದು ಅಮ್ಮ ಎಚ್ಚರಿಸಿದ್ದಳು. ಮುಖ ಕಾಣಲಿಲ್ಲ. ಆದರೆ ಆಟಕ್ಕೊಬ್ಬ ಸಿಗುವನೆಂದು ಕನಸು ಕಾಣುತ್ತಿದ್ದ ನನಗೆ ಬೊಚ್ಚು ಬಾಯಿಯ ತಾತನೊಬ್ಬ ಗಂಡನಾದಾಗ ಅಪ್ಪನಿಗೆ ವರದಕ್ಷಿಣೆ ಖರ್ಚು ಉಳಿದ ಸಂತೋಷವಿತ್ತು. ಕೇಳುವ ಧೈರ್ಯ, ಬುದ್ಧಿ ಯಾರಿಗಿತ್ತು? ಕೇಳಿದ್ದರೂ ಬರುತ್ತಿದ್ದ ಉತ್ತರ, 'ಇಶ್ಶೀ, ಹುಡುಗಿಯಾಗಿ ನಾಚಿಕೆ ಬಿಟ್ಟು ಪ್ರಶ್ನಿಸುತ್ತೀಯಾ? ಗಂಡಲ್ಲವೇ ಅವನು?'
ನಾನು ದೊಡ್ಡವಳಾದೆ. ಕಾಯುತ್ತಿದ್ದಂತೆ ಕರೆದುಕೊಂಡು ಹೋದ. ಹೇಗೆ ಸಹಿಸಿಕೊಂಡೆನೋ ದೇವರೇ ಬಲ್ಲ. ಅವನ ಹೊಗೆಸೊಪ್ಪು ತುಂಬಿದ, ಹಲ್ಲುದುರಿದ ಬಾಯಿ ಎಂದರೆ ವಿಚಿತ್ರ ಅಸಹ್ಯ ಹುಟ್ಟುತ್ತಿತ್ತು. ಇನ್ನು ಆ ನೆರಿಗೆಗಟ್ಟಿದ ಮುಖ, ನಡುಗತೊಡಗಿದ್ದ ಕೈಗಳು, ನನ್ನ ವಯಸ್ಸಿಗೆ ಅರ್ಥವಾಗದ ಮಾತು... ಏನು ತಾನೇ ಪ್ರತಿಕ್ರಿಯೆ ನೀಡುವ ಅನುಭವವಿತ್ತು ನನಗೆ? ಹೀಗಾಗಿ ಕೆಲವೇ ದಿನಗಳಲ್ಲಿ ಊಟ ಬಡಿಸು, ಪಲ್ಯ ಮಾಡು, ಇವತ್ತು ಮನೆಗೆ ಬರಲ್ಲ ಇಷ್ಟೇ ಮಾತುಗಳು ಬಿಟ್ಟರೆ ನನ್ನೊಳಗಿನ ದುಃಖ, ಕಣ್ಣೀರಿಗೆ ಮನೆಯ ಗೋಡೆಗಳು ಸಾಕ್ಷಿಯಾಗತೊಡಗಿದವು. ಆದರೆ ಅವೂ ಮೌನ ವಹಿಸಿದವು. ಹುಡುಗಿಗೂ ಮನಸ್ಸಿದೆ, ಅವಳೂ ಮಾತನಾಡಲಿ ಎಂದು ಬಯಸುವ ಸಮಾಜ ಆಗಿರಲಿಲ್ಲವಾದರೂ ವಯಸ್ಸು ಮಾತನಾಡದೇ ಇರುವುದೇ? ಸುಂದರಿ ನಾನು. ಸುಮ್ಮನೇ ಹೊರಗೆ ಓಡಾಡುವಾಗ ಯಾರಾದರೂ ಹುಡುಗ ನನ್ನತ್ತ ನೋಡಿದರೂ ಈ ಮುದುಕನಿಗೇನೋ ಅನುಮಾನ. ಅವನ ಮೇಲೆ ತೀರಿಸಲಾಗದ ಪೌರುಷಕ್ಕೆ ನನಗೆ ಹೊಡೆತಗಳು. ಉತ್ತರನ ಪೌರುಷ ಒಲೆ ಮುಂದೆ! ಆದರೆ ಈ ಮುದುಕನಿಗಾಗಿ ನಿಷ್ಠೆ ಕಟ್ಟಿಟ್ಟು ಎಷ್ಟು ಸಮಯ, ಯಾಕಾದರೂ ಪತಿವ್ರತೆ ಅನ್ನಿಸಿಕೊಳ್ಳಬೇಕಿತ್ತು? ಅಂಥ ಹಪಹಪಿ ಯಾವ ಹೆಣ್ಣಿಗೂ ಇರುವುದಿಲ್ಲ. ಸಮಾಜ ಹೇರುತ್ತದೆ, ಅವಳು ಅನಿವಾರ್ಯವಾಗಿ ನಟಿಸುತ್ತಾಳೆ ಅಷ್ಟೆ. ನಾನೂ ಅವನತ್ತ ನೋಡತೊಡಗಿದೆ. ಮಕ್ಕಳಾದವು. ಇವನು ಮಾತಾಡಲಿಲ್ಲ. ಹೇಗೆ ಮಾತಾಡುತ್ತಾನೆ? ಮಾತಾಡಿದರೆ ಇವನ ಷಂಡತನ ಪ್ರಪಂಚಕ್ಕೆ ತಿಳಿಯುತ್ತಿತ್ತಲ್ಲವೇ? ನನ್ನದು ಈ ಸ್ಥಿತಿಯಾದರೆ ಪಕ್ಕದ ಮನೆಯ 16 ವರ್ಷದ ಸರಸು ಆ ವಯಸ್ಸಿಗೇ ಮೂರನೆಯದನ್ನು ಹೆರುವಾಗ ಕೊನೆಯುಸಿರೆಳೆದಳು. ಅವಳ ಕಷ್ಟ ಅವಳಿಗೆ. ಅವಳ 40 ವರ್ಷದ ಗಂಡ ಮಾತ್ರ ನನ್ನದೇ ವಯಸ್ಸಿನ ಪುಟ್ಟ ಹುಡುಗಿಯನ್ನು ಎರಡನೇ ಮದುವೆಯಾಗಿ ಆಕೆಗೂ ಸರಣಿಯಲ್ಲಿ ಎಂಟ್ಹತ್ತು ಮಕ್ಕಳನ್ನು ಕರುಣಿಸಿದ. ಈ ಸಮಾಜದಲ್ಲಿ ಒಂದೇ ಅವಳು ಬೆಳೆದಿರದ ಗರ್ಭಕೋಶದಲ್ಲಿ ಮಕ್ಕಳನ್ನು ಹೆತ್ತು ಸಾಯಬೇಕಿತ್ತು. ಇಲ್ಲವೇ ಅವನು ಮುದಿಯನಾಗಿ 20-25ಕ್ಕೆ ಅವಳಿಗೆ ವೈಧವ್ಯ ಪ್ರಾಪ್ತಿಸುತ್ತಾನೆ. ನನಗೂ 20ರಲ್ಲೇ ಒಲಿದು ಬಂತು ವೈಧವ್ಯದ ಪಟ್ಟ. ಆಮೇಲಿನದು ಬೋಳುತಲೆ, ಕೆಂಪುಸೀರೆ, ಮಡಿ, ಆಭರಣರಹಿತ ದೇಹದೊಳಗೆ ಛಿದ್ರಗೊಂಡ ಮನಸ್ಸು...
ಇವಳು...
ಅವನನ್ನು ಮದುವೆಯಾಗುವಾಗ ಮುಂದುವರೆದ ಸಮಾಜದ ಅತಿ ಮುಂದುವರೆದ ಮನಸ್ಥಿತಿಯವಳು ನಾನು ಎಂಬ ಬಗ್ಗೆ ಒಳಗೊಳಗೇ ಬೀಗುತ್ತಿದ್ದೆ. ನನಗಿಂತಲೂ 14 ವರ್ಷ ಚಿಕ್ಕವನಾದ ಆತ ನನ್ನನ್ನಿಷ್ಟ ಪಟ್ಟಾಗ ನನ್ನ ಸೌಂದರ್ಯದ ಬಗ್ಗೆ ಹೆಮ್ಮೆ ಮೂಡಿತ್ತು. ಆದರೆ ಈಗ ಈ ಐವತ್ತರ ವಯಸ್ಸಿನಲ್ಲಿ ಪ್ರತಿದಿನ ವ್ಯಾಯಾಮ, ಧ್ಯಾನ ಎಂದೆಲ್ಲ ಮಾಡಿ ಚಿಕ್ಕವಳಂತೆ ಕಾಣಲು ಹೋದರೂ, ಅವನೊಂದಿಗೆ ಹೊರ ಹೋಗುವಾಗ, ಜೊತೆಗಿರುವಾಗ ಅದೆಷ್ಟು ಲೇಯರ್ ಬಣ್ಣ ಬಳಿದುಕೊಂಡರೂ ವಯಸ್ಸಿನ ಬಣ್ಣ ತಾನೇ ಹೆಚ್ಚು ಎನ್ನುತ್ತದೆ. ಅವನ ಕಣ್ಣು ಸೆಕೆಂಡುಗಳ ಕಾಲ ಬೇರೆ ಹುಡುಗಿಯತ್ತ ಹರಿದರೂ ವಿಪರೀತ ಕಸಿವಿಸಿಯಾಗುತ್ತದೆ. ಎರಡನೇ ಮಗುವಿಗೆ ಅವನು ಆಸೆ ಪಟ್ಟಾಗ, ಹೆರಲು ನನ್ನ ವಯಸ್ಸು ಭಾರವಾಗಿದೆ ಎಂದು ವೈದ್ಯರೆಂದಾಗ ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡಲೂ ಸಾಧ್ಯವಾಗಿರಲಿಲ್ಲ ನನಗೆ. ಮೊದಲೆಲ್ಲ ಹೇಳುತ್ತಿದ್ದ, 'ನನಗಿಂತಾ ಚಿಕ್ಕ ವಯಸ್ಸಿನ ಹುಡುಗಿಯರೊಂದಿಗೆ ಡೇಟ್ ಮಾಡುವಾಗ ಮಾತಾಡಲು ವಿಷಯಗಳೇ ಇರುವುದಿಲ್ಲ. ನಿನಗಾದರೆ ಅದೆಷ್ಟು ಅನುಭವಗಳೇ ಇವೆ ಮಾತನಾಡಲು..' ಇಂದು ನಾನು ಮಾತನಾಡಿದರೆ, 'ಸಾಕು ನಿನ್ನ ಬೋಧನೆ' ಎನ್ನುತ್ತಾನೆ! ನೀ ದೊಡ್ಡವಳೆಂದ ಮಾತ್ರಕ್ಕೆ ಎಲ್ಲಕ್ಕೂ ನಿನ್ನ ಮಾತೇ ಕೇಳಬೇಕಾ? ಡಾಮಿನೇಟ್ ಮಾಡಬೇಡ ಎಂದು ಸಿಡುಕುತ್ತಾನೆ. ನಾನು ದೊಡ್ಡವಳಾದ ತಪ್ಪಿಗೆ ಎಂದಿಗೂ ನನಗೆ ಮಕ್ಕಳಂತೆ ಹಟ ಮಾಡಿ ಮುದ್ದಿಸಿಕೊಳ್ಳುವ ಅವಕಾಶವೇ ಇಲ್ಲವಾಯ್ತು. ಪ್ರತಿ ಬಾರಿಯೂ ಆತ ಇನ್ನೂ ಚಿಕ್ಕ ಹುಡುಗನೆಂಬ ಕಾರಣಕ್ಕೆ ನಾನೇ ಸೋಲಬೇಕಾಗುತ್ತಿತ್ತು. ವಾದಿಸಿದರೆ ಕೇಳಲೇಬೇಕಲ್ಲ, ಡಾಮಿನೇಷನ್ ಮಂತ್ರ.
ಮೊನ್ನೆ ಇಬ್ಬರೂ 'ನಾಯಿನೆರಳು' ಚಿತ್ರ ನೋಡುತ್ತಿದ್ದೆವು. ಮಗನ ವಯಸ್ಸಿನವನೊಡನೆ ಜೀವನ ನಡೆಸುವ ನಾಯಕಿ. ಕಡೆಕಡೆಗೆ ನಾಯಕ ನಾಯಕಿಯ ತಲೆಯಿಂದ ಬಿಳಿಕೂದಲನ್ನು ತೆಗೆದುಕೊಡುವಾಗ ಅವಳ ಕಸಿವಿಸಿ ಹೇಳತೀರದು. ಇದೇ ಸಮಯಕ್ಕೆ ಇವನು ನನ್ನ ಮುಖ ನೋಡಿದ್ದು ಇನ್ನೂ ನನ್ನನ್ನು ಚುಚ್ಚುತ್ತಲೇ ಇದೆ.
ಮದುವೆಯಾದ ದಿನದಿಂದ ಇಂದಿನವರೆಗೂ ನೆಂಟರು ಇಷ್ಟರೆನಿಸಿಕೊಂಡವರೆಲ್ಲ ಪರೀಕ್ಷಾತ್ಮಕ ದೃಷ್ಟಿಯಿಂದ ನಮ್ಮೆಡೆಗೆ ನೋಡುವವರೇ. ಮೊದಮೊದಲು ಚಟ, ಇರಲಿ ಎಂದುಕೊಂಡರೂ ಇತ್ತೀಚೆಗೆ ಕಿರಿಕಿರಿಯಾಗುತ್ತಿದೆ. ಇವನು ಮೊನ್ನೆ ಆಫೀಸಿನ ಚಿಕ್ಕ ವಯಸ್ಸಿನ ಹುಡುಗಿಯೊಂದಿಗೆ ಅದಾವುದೋ ಫಿಲ್ಮ್ ನೋಡಲು ಹೋಗಿದ್ದನಂತೆ. ವಿಷಯ ತಿಳಿದ ನೆಂಟರು ಇಷ್ಟರೆಲ್ಲ ಇವನ ಪರವೇ. ಅವನದೇನು ತಪ್ಪಿದೆ? ವಯಸ್ಸಾದವಳೊಂದಿಗೆ ಅವನಿಗೆ ತಾನೆ ಏನು ಸುಖ ಸಿಕ್ಕೀತು ಎಂದದ್ದು ನನ್ನ ಕಿವಿಗೆ ಬಿದ್ದಾಗ ಕಾದ ಕಬ್ಬಿಣ ಹೊಯ್ದ ಹಾಗಾಯಿತು. ಪ್ರತಿದಿನ ಇವತ್ತೇ ನನ್ನ ಇವನು ತೊರೆದು ಹೋಗುತ್ತಾನೇನೋ, ಯಾವಾಗ ಡೈವೋರ್ಸ್ ಪೇಪರ್ ಹಿಡಿದುಬರುತ್ತಾನೋ ಎಂಬ ಭಯದಲ್ಲೇ ಬದುಕುತ್ತಿದ್ದೇನೆ...

ಅವಳು ದೊಡ್ಡವಳು
ನಟ ಸೈಫ್ ಅಲಿ ಖಾನ್‌ಗಿಂತ ಆಕೆಯ ಮೊದಲನೆ ಹೆಂಡತಿ ಅವೃತಾ ಸಿಂಗ್ 12 ವರ್ಷ ದೊಡ್ಡವಳಾಗಿದ್ದಳು. ಆದರೆ ಈ ದಾಂಪತ್ಯ 12 ವರ್ಷವಷ್ಟೇ ಬಾಳಿತು. ಈಗ ಸೈಫ್ ತನಗಿಂತಾ 22 ವರ್ಷಕ್ಕೆ ಚಿಕ್ಕವಳಾದ ಕರೀನಾ ಕಪೂರ್‌ಳನ್ನು ಮದುವೆಯಾಗಿರುವುದು ವಿಪರ್ಯಾಸವಷ್ಟೆ. ಪಾಪ್ ಗಾಯಕಿ ಮಡೋನ್ನ ತನಗಿಂತ ಹತ್ತು ವರ್ಷಕ್ಕೆ ಚಿಕ್ಕವನಾದ ರಿಚ್ಚಿಯನ್ನು ಮದುವೆಯಾದಳು. ಈ ದಾಂಪತ್ಯವೂ ಅತಿ ಬೇಗ ಡೈವೋರ್ಸ್ ಪಡೆಯುವುದರೊಂದಿಗೆ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತು. ಬಾಲಿವುಡ್ ನಟಿ ಮನೀಶಾ ಕೊಯಿರಾಲ ತನಗಿಂತಾ 7 ವರ್ಷಕ್ಕೆ ಚಿಕ್ಕವನಾದ ಸಾಮ್ರಾಟ್‌ನನ್ನು ಮದುವೆಯಾದಳು. ಅವರ ವಿವಾಹವೂ ಹೆಚ್ಚು ಕಾಲ ನಿಲ್ಲಲಿಲ್ಲ.  ಆದರೆ ತನಗಿಂತ 5 ವರ್ಷ ದೊಡ್ಡವಳಾದ ಅಂಜಲಿಯನ್ನು ಮದುವೆಯಾದ ಸಚಿನ್ ತೆಂಡೂಲ್ಕರ್, ನಿರ್ದೇಶಕ ಶಿರೀಶ್ ಕುಂದರ್‌ನನ್ನು ಮದುವೆಯಾದ ಅವನಿಗಿಂತಲೂ 8 ವರ್ಷ ದೊಡ್ಡವಳಾದ ಫರ್ರಾಖಾನ್, 2 ವರ್ಷದ ಅಂತರದಲ್ಲಿ ಹೆಂಡತಿಯೇ ದೊಡ್ಡವಳಿರುವ ಐಶ್ವರ್ಯಾ ರೈ- ಅಭಿಷೇಕ್ ಬಚ್ಚನ್, ಶಿಲ್ಪಾ ಶೆಟ್ಟಿ- ರಾಜ್ ಕುಂದ್ರ ಜೋಡಿ ಸಂತೋಷವಾಗಿಯೇ ಜೀವಿಸುತ್ತಿದ್ದಾರೆ.

3ರಿಂದ ನಾಲ್ಕು ವರ್ಷ
ಬಾಲ್ಯವಿವಾಹ ಮಾಡಿದಲ್ಲಿ ಪೋಷಕರು ಮಜಾ ಮಾಡುತ್ತಾರೆ. ಸರಿ ವಯಸ್ಸಿನಲ್ಲಿ ಮದುವೆ ಮಾಡಿದರೆ ವಧುವರರು ಮಜಾ ಮಾಡುತ್ತಾರೆ. ವಯಸ್ಸಾದ ನಂತರ ಮದುವೆಯಾದರೆ ಅಕ್ಕಪಕ್ಕದ ಮನೆಯವರು ಮಜಾ ತೆಗೆದುಕೊಳ್ಳುತ್ತಾರಂತೆ!
ಇಬ್ಬರ ನಡುವೆ 3ರಿಂದ ನಾಲ್ಕು ವರ್ಷದ ಅಂತರವನ್ನು ಇಂದಿಗೂ ವಿಜ್ಞಾನ ಐಡಿಯಲ್ ಎನ್ನುತ್ತದೆ. ಅದರಲ್ಲೂ ಹುಡುಗರು ಹುಡುಗಿಯರಿಗಿಂತ ತಡವಾಗಿ ಮೆಚ್ಯೂರ್ ಆಗುವ ಕಾರಣಕ್ಕೆ ಜವಾಬ್ದಾರಿ ಹೊರುವ ಮನಸ್ಸು ಬರುವುದೂ ತಡವಾಗಿ. ಹಾಗಾಗಿ ಹುಡುಗನ ವಯಸ್ಸೇ ಹೆಚ್ಚಾಗಿರುವುದು ಉತ್ತಮ. ಅದರಲ್ಲೂ 22ರಿಂದ 32 ವಯಸ್ಸಿನಲ್ಲಿ ಮದುವೆಯಾಗುವುದು ಉತ್ತಮ. ಈ ಸಮಯದಲ್ಲಿ ಇಬ್ಬರಲ್ಲೂ ಲೈಂಗಿಕಾಸಕ್ತಿ, ಎನರ್ಜಿ, ಆಸಕ್ತಿ, ಮಾನಸಿಕ ಸ್ತಿಮಿತತೆ ಎಲ್ಲವೂ ಹೆಚ್ಚಿರುತ್ತದೆ. ಅಲ್ಲದೆ ಮಹಿಳೆಯರು ಆರೋಗ್ಯಯುತ ಮಗು ಹೆರಲು ಸೂಕ್ತ ವಯಸ್ಸು ಕೂಡಾ ಎನ್ನುತ್ತದೆ ವಿಜ್ಞಾನ.


= ರೇಶ್ಮಾರಾವ್ ಸೊನ್ಲೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments