ಪೂರ್ಣಚಂದಿರ ಬಂದಾಗ
ಹಿಂದಿನ ಕಾಲದಲ್ಲಿ ಕವಿತ್ವ ಎಂಬುದು ಸುಶಿಕ್ಷಿತರ ಗುಣಗಳಲ್ಲಿ ಒಂದಾಗಿತ್ತು. ಕವಿತೆ ಕಟ್ಟುವುದನ್ನು ಕವಿಗಳಿಗಷ್ಟೇ ಬಿಟ್ಟುಕೊಟ್ಟರೆ ಅಪಾಯ. ಎಲ್ಲರೂ ಕವಿತೆ ಕಟ್ಟುವವರೇ ಆದರೆ ಅದರ ಸ್ವಾದ, ನಾದಮಯತೆ ಕೊಂಚವಾದರೂ ನಮ್ಮ ಹೃದಯಗಳನ್ನು ಆರ್ದ್ರಗೊಳಿಸದಿರದೆ?
ಇರಲಿ, ಇದು ಅಂಥ ಒಂದು ಜೋಡಿಯ ಕತೆ. ಅವರಿಗೆ ಇದೀಗಷ್ಟೇ ಮದುವೆಯಾಗಿತ್ತು. ವರನಿಗೋ, ರಾಜರ ಆಸ್ಥಾನದಲ್ಲಿ ಕೆಲಸ, ಹೊತ್ತುಗೊತ್ತು ಇಲ್ಲ. ನಲ್ಲೆ ರಾತ್ರಿ ಕಾಯುತ್ತಿದ್ದಾಳೆ. ಯಾವುದೋ ನೆನಪಿನಲ್ಲಿ ಕವಿತೆ ಕಟ್ಟುತ್ತಿದ್ದಾಳೆ:
ವ್ರೀಡಾವೇಲಾರುದ್ಧಂ ಸಾಗರಸಲಿಲಮಿವ
ಯೋಷಿತಾಂ ಹೃದಯಮ್
'ತರುಣಿಯರ ಮನಸ್ಸು ಸಮುದ್ರದ ಜಲವಿದ್ದಂತೆ. ನಾಚಿಕೆಯೇ ಅದಕ್ಕೆ ದಡದಂತೆ.' ಇಷ್ಟು ಸಾಲು ಕಟ್ಟಿದ ಮೇಲೆ ಆಕೆಗೆ ಮುಂದಿನ ಸಾಲು ಹೊಸೆಯಲು ಸಾಧ್ಯವಾಗಲಿಲ್ಲ. ಆ ಎರಡು ಸಾಲುಗಳನ್ನೇ ಪುನರುಚ್ಚರಿಸುತ್ತಾ ಇದ್ದಾಳೆ. ಅಷ್ಟರಲ್ಲಿ ಅಲ್ಲಿಗೆ ಬಂದ ಆಕೆಯ ನಲ್ಲ, ಆಕೆಯ ಗುನುಗು ಕೇಳಿ ಆ ಸಾಲುಗಳನ್ನು ಪೂರ್ತಿ ಮಾಡಿದ.
ರಾಗೇಂದುರುದಯಮಾನೋ
ಭೂಯೋ ಭೂಯಸ್ತರಂಗಯತಿ
'ಅನುರಾಗವೆಂಬ ಪೂರ್ಣಚಂದ್ರಮನು ಆಗಸದಲ್ಲಿ ಬಂದಾಗ, ಆ ಸಾಗರವೂ ಬೃಹತ್ ತೆರೆಗಳ ಮೂಲಕ ಉಕ್ಕಿ ಉಕ್ಕಿ ಬರುತ್ತದೆ.'
ಆಕಸ್ಮಿಕವಾಗಿ ಆತನನ್ನು ನೋಡಿ ಆಕೆಯ ಮನೋಭೀಷ್ಟ ಭರ್ತಿಯಾಯಿತು. ಸಮುದ್ರ ಉಕ್ಕಿರಬೇಕು. ಇಬ್ಬರ ಕವಿತ್ವದ ಜುಗಲ್‌ಬಂದಿ ನೋಡಿ ಆಗಸದಲ್ಲಿದ್ದ ಪೂರ್ಣಚಂದಿರ ನಕ್ಕಿರಬೇಕು.
= ಹರಿಹರ