ಕುರುಕ್ಷೇತ್ರಕ್ಕೆ ಕಿರುಕ್ಷೇತ್ರ ಸಜ್ಜು
ಅಂತೂ ಇಂತೂ ಕುಂತಿ ಮಕ್ಕಳ ವನವಾಸ ಮುಗಿದಿದೆ. ಹಾಗಂತ ಕುಂತಿ ಮಕ್ಕಳು ನಿಟ್ಟುಸಿರು ಬಿಡೋ ಹಾಗಿಲ್ಲ. ಯಾಕಂದ್ರೆ ಅಜ್ಞಾತವಾಸ ಇನ್ನೂ ಬಾಕಿ ಉಂಟಲ್ಲ.
ನಾವಿಲ್ಲಿ ಕುಂತಿ ಮಕ್ಕಳು ಅಂತ ಯಾವುದಕ್ಕೂ ಉಪಮೆಯಾಗಿ ಹೇಳ್ತಾ ಇಲ್ಲ. ಇದು ನಿಜಕ್ಕೂ ಮಹಾಭಾರತದ ಸುದ್ದಿಯೇ!
ಉದಯ ಟಿವಿಯಲ್ಲಿ ಕಳೆದೆರಡು ವರ್ಷದಿಂದ ಪ್ರತಿಸಂಜೆ ಆರುಗಂಟೆಗೆ ಮಹಾಭಾರತ ಪ್ರಸಾರವಾಗುತ್ತಿರುವುದು ಗೊತ್ತಿರೋ ವಿಷಯವೇ. ಕನ್ನಡದ ಈ ಮಹಾಭಾರತ ಇದೀಗ ಒಂದು ಮಹತ್ವದ ಘಟ್ಟ ತಲುಪಿದೆ. ಪಾಂಡವರು ಇನ್ನು ಕೆಲವೇ ದಿನಗಳಲ್ಲಿ ಅಜ್ಞಾತವಾಸವನ್ನು ಆರಂಭಿಸಲಿದ್ದಾರೆ. ಹಾಗಾಗಿ ಪೌರಾಣಿಕ ಧಾರಾವಾಹಿಯ ಪ್ರೇಮಿಗಳಿಗೆ ವಿರಾಟನ ಅರಮನೆಯಲ್ಲಿ ಭರಪೂರ ಮನರಂಜನೆ ದೊರಕಲಿದೆ. ಉತ್ತರಕುಮಾರನ ಪೌರುಷಗಳು, ಪಾಂಡವರ ಮಾರುವೇಷಗಳು, ಅಲ್ಲಿ ನಡೆಯುವ ಕಚಗುಳಿ ಸನ್ನಿವೇಶಗಳು ಯಾವ ಸಾಮಾಜಿಕ ಧಾರಾವಾಹಿಗೂ ಕಮ್ಮಿ ಇಲ್ಲ ಎಂಬಂತೆ ನೋಡುಗರಿಗೆ ಕಚಗುಳಿ ನೀಡಲಿವೆ. ಆನಂತರ ಕುರುಕ್ಷೇತ್ರ ಯುದ್ಧಕ್ಕೆ ಸಿದ್ಧತೆ!
ಕಿಶನ್ ಸೇಥಿ ನಿರ್ದೇಶಿಸುತ್ತಿರುವ ಕನ್ನಡದ ಈ ರಿಯಲ್ ಮೆಗಾಧಾರಾವಾಹಿ ಸ್ಟಾರ್ ಪ್ಲಸ್ನಲ್ಲಿ ಬರುತ್ತಿರುವ ಹೈಟೆಕ್ ಹಿಂದಿ ಮಹಾಭಾರತದ ನಡುವೆಯೂ ತನ್ನ ಛಾಪು ಉಳಿಸಿಕೊಂಡು, ವೀಕ್ಷಕರನ್ನು ಹಿಡಿದಿಟ್ಟುಕೊಂಡಿರುವುದು ಸಾಧನೆಯೇ ಸರಿ.
ಅರ್ಜುನ ಅಜ್ಞಾತವಾಸದ ಪ್ರಯುಕ್ತ ಬೃಹನ್ನಳೆಯ ವೇಷದಲ್ಲಿ ಬಂದು ವಿರಾಟನ ರಾಜಕುಮಾರಿಗೆ ನೃತ್ಯ ಕಲಿಸುವ ದೃಶ್ಯಗಳು ಇದೀಗ ಚಿತ್ರೀಕರಣಗೊಳ್ಳುತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ ವೀಕ್ಷಕರು ಬೃಹನ್ನಳೆ ಅವತಾರವನ್ನು ನೋಡಬಹುದಾಗಿದೆ. ಬೃಹನ್ನಳೆ ಗೆಟಪ್ಪಿನಲ್ಲಿ ಅರ್ಜುನ ಪಾತ್ರಧಾರಿ ನಟ ಅಂಬರೀಶ್ ಸಾರಂಗಿ ಕಾಣಿಸಿಕೊಂಡಿದ್ದು ಆ ಫೋಟೋಗಳು ಈಗಾಗಲೇ ಸಾಮಾಜಿಕ ತಾಣದಲ್ಲಿ ಸಖತ್ತಾಗಿ ಮೆಚ್ಚುಗೆ ಪಡೆದುಕೊಂಡಿದೆ.
ಈ ಬಗ್ಗೆ ಮಾತನಾಡಿಸಿದಾಗ ಅಂಬರೀಶ್ ಸಾರಂಗಿ ಅಂದದ್ದು:
ಕನ್ನಡದ ಸದ್ಯದ ಏಕೈಕ ಪೌರಾಣಿಕ ಧಾರಾವಾಹಿ ಮಹಾಭಾರತ. ಈ ಕಾಲದಲ್ಲೂ ಇದಕ್ಕೆ ವೀಕ್ಷಕರಿದ್ದಾರಾ?
ಯಾಕಿಲ್ಲ? ಪೌರಾಣಿಕ ಧಾರಾವಾಹಿ ಯಾವತ್ತಿಗೂ ವೀಕ್ಷಕರ ಬರ ಅನುಭವಿಸಿದ ಉದಾಹರಣೆಯೇ ಇಲ್ಲ. ಇನ್ನೂ ಹತ್ತು ಬಾರಿ ಮಹಾಭಾರತ ಧಾರಾವಾಹಿ ಬಂದರೂ ವೀಕ್ಷಕರು ಇದ್ದೇ ಇರ್ತಾರೆ.
ದಶಕದ ಹಿಂದೆ ದೂರದರ್ಶನದಲ್ಲಿ ಬಂದ ಮಹಾಭಾರತವೇ ಬೆಸ್ಟ್ ಅಂತ ಎಲ್ಲರೂ ಹೇಳ್ತಾರೆ. ಈ ಮಧ್ಯೆ ಹಿಂದಿಯಲ್ಲಿ ಇನ್ನೊಂದು ಅದ್ದೂರಿ ಮಹಾಭಾರತ ಬರ್ತಿದೆ. ಹಾಗಿದ್ದೂ ಇದನ್ನು ನೋಡ್ತಾರಾ?
ನಿಜ. ಫಸ್ಟ್ ಈಸ್ ಬೆಸ್ಟ್. ನನಗೂ ಆ ಮಹಾಭಾರತವೇ ಅಚ್ಚುಮೆಚ್ಚು. ಅದು ಟೀವಿಯೇ ದೊಡ್ಡ ಅಚ್ಚರಿ ಎಂಬಂತಿದ್ದ ಕಾಲ. ಅದರಲ್ಲಿನ ನಟರು ನಮಗೆ ಪರಿಚಯವಾಗಿದ್ದೇ ಆ ಪಾತ್ರಗಳಿಂದ. ಹಾಗಾಗಿ ನಮ್ಮ ಪಾಲಿಗೆ ಅವರೆಲ್ಲ ನಿಜಕ್ಕೂ ಮಹಾಭಾರತದ ವ್ಯಕ್ತಿಗಳೇ ಆಗಿಹೋಗಿದ್ದರು. ಈಗಲೂ ನಾನು ಅರ್ಜುನನ ಪಾತ್ರ ಮಾಡ್ತಾ ಇದ್ರೂ ನನ್ನ ಕಣ್ಮುಂದೆ ಬರೋದು ಆ ಮಹಾಭಾರತದ ಅರ್ಜುನನೇ. ಆದರೂ ಈ ಕಾಲಘಟ್ಟದ ಜನರಿಗೆ ಈ ಮಹಾಭಾರತವೇ ಫಸ್ಟ್. ಹಾಗಾಗಿ ಇದನ್ನು ಒಪ್ಪಿಕೊಂಡಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಭಾಷೆ. ಕನ್ನಡದಲ್ಲಿ ಅವರ ಪುರಾಣ ಗ್ರಂಥವನ್ನು ವಿಸ್ತೃತವಾಗಿ ತಿಳಿದುಕೊಳ್ಳುವ ಅವಕಾಶ. ಅದನ್ನು ಅವರು ಸವಿಯುತ್ತಿದ್ದಾರೆ. ತಾಂತ್ರಿಕವಾಗಿಯೂ ನಮ್ಮ ಧಾರಾವಾಹಿ ತುಂಬಾನೇ ಅಪ್ಡೇಟೆಡ್ ಇದೆ.
ಸಾಮಾಜಿಕ ಧಾರಾವಾಹಿಗಿಂತ ಪೌರಾಣಿಕ ಧಾರಾವಾಹಿಯಲ್ಲಿ ಕೆಲಸ ಮಾಡಲು ಸ್ವಲ್ಪ ಕಿರಿಕಿರಿ ಅಲ್ಲವೇ ?
ಖಂಡಿತ ಇಲ್ಲ. ನನಗೆ ಇದು ಸಂಪೂರ್ಣ ತೃಪ್ತಿ ಕೊಟ್ಟಿದೆ. ಇದರಲ್ಲಿ ರಂಗಭೂಮಿಯ ಕಲಿಕೆಯ ಪುನರಾವರ್ತನೆ ಇದೆ. ನಮ್ಮ ಭಾಷೆಗೆ ಸಾಣೆ ಹಿಡಿಯಲು ಸಾಧ್ಯವಿರುವುದು ಪೌರಾಣಿಕ ಧಾರಾವಾಹಿಯಲ್ಲೇ. ಭಾರದ ಉಡುಪುಗಳು, ವೇಷಭೂಷಣಗಳು ಇವನ್ನೆಲ್ಲ ಧರಿಸಿ ಇಡೀ ದಿನ ನಟಿಸುವುದು ಸುಲಭದ ಮಾತಲ್ಲ. ಅದೆಲ್ಲ ಧರಿಸಿದಾಗ ಹಲವು ಬಾರಿ ವೀಕ್ಷಕರಿಗೆ ಗುರುತು ಸಿಗದೇ ಇರುವುದೂ ಉಂಟು. ಆದರೂ ಈ ಪಾತ್ರ ಕೊಡುವ ಸಮಾಧಾನವೇ ಬೇರೆ.
ಬೃಹನ್ನಳೆ ಪಾತ್ರಕ್ಕಾಗಿ ಯಾವ ರೀತಿ ಸಿದ್ಧತೆ ಮಾಡಿಕೊಂಡಿದ್ದೀರಿ ?
ಮೆಗಾಧಾರಾವಾಹಿ ಆಗಿರೋದರಿಂದ ಹಾಗೂ ಬೇರೆ ಬೇರೆ ಧಾರಾವಾಹಿಗಳಲ್ಲಿ ತೊಡಗಿಕೊಂಡಿರೋದರಿಂದ , ಈ ಪಾತ್ರದ ಸಿದ್ಧತೆಗೆ ಹೆಚ್ಚು ಸಮಯ ಕೊಡಲು ಆಗುತ್ತಿಲ್ಲ. ಆದರೂ ಪಾತ್ರದ ಆಶಯಕ್ಕೆ ಚ್ಯುತಿ ಬರದಂತೆ ನೃತ್ಯ, ಆಂಗಿಕ ಹಾವಭಾವ, ವಾಚಿಕಗಳನ್ನು ಶ್ರದ್ಧೆಯಿಂದ ಮೈಗೂಡಿಸಿಕೊಂಡು ಮಾಡುತ್ತಿದ್ದೇನೆ.